ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮೇ 12, 2018ರಂದು ಚುನಾವಣೆ ನಡೆಯಿತು. ಬಿಜೆಪಿ, ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾಗಿದ್ದವು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಪಡೆದುಕೊಂಡು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ಗೆ 9 ಸೀಟುಗಳು ಬೇಕಾಗಿತ್ತು. ಕಾಂಗ್ರೆಸ್ 80 ಸೀಟುಗಳು, ಜೆಡಿಎಸ್ ಪಕ್ಷ 37 ಸೀಟುಗಳನ್ನು ಪಡೆಯಿತು. ಜೆಡಿಎಸ್ ಮತ್ತು ಕಾಂಗ್ರೆಸ್ ತಕ್ಷಣ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿತು.
ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿಯ ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಸ್ವೀಕಾರ ಮಾಡಲು ಆಹ್ವಾನ ಕೊಟ್ಟರು. ಯಡಿಯೂರಪ್ಪ ಮೇ 17, 2018ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ವಿಧಾನಸಭೆಯಲ್ಲಿ ವಿಶ್ವಾಸಮತಗಳಿಸಲು ವಿಫಲವಾದ ಯಡಿಯೂರಪ್ಪ ಮೇ 19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು. ಎಚ್. ಡಿ. ಕುಮಾರಸ್ವಾಮಿ 2ನೇ ರಾಜ್ಯದ ಮುಖ್ಯಮಂತ್ರಿಯಾದರು. ಜೆಡಿಎಸ್ ಮತ್ತು ಕಾಂಗ್ರೆಸ್ನ 17 ಶಾಸಕರು ರಾಜೀನಾಮೆ ನೀಡಿದ ಕಾರಣ, ಬಹುಮತ ಕಳೆದುಕೊಂಡು ಸರ್ಕಾರ ಪತನಗೊಂಡಿತು. ಜುಲೈ 26, 2019 ರಂದು ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಪುನಃ ಮುಖ್ಯಮಂತ್ರಿಯಾದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಶಾಸಕ ಬಿ. ಎಸ್. ಯಡಿಯೂರಪ್ಪ 4ನೇ ಬಾರಿಗೆ, ಈ ವಿಧಾನಸಭೆಯ ಅವಧಿಯಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.