ಮಾಯಾವತಿ ಇವರು ಭಾರತದ ಪ್ರಶ್ನಾತೀತ ಮಹಿಳಾ ರಾಜಕೀಯ ನಾಯಕಿಯರಲ್ಲೊಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯವಾಗಿ ಅತಿ ಪ್ರಮುಖ ಹಾಗೂ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೂಲಕ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಮಾಯಾವತಿಯವರದ್ದಾಗಿದೆ. ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿರುವ ದಲಿತ ಸಮುದಾಯದ ನಾಯಕಿ ಮಾಯಾವತಿಯವರು 2012 ರ ವಿಧಾನಸಭಾ ಚುನಾವಣೆಯಲ್ಲಿ ದಾರುಣವಾಗಿ ಸೋತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇವರು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಮೂಲತಃ ಶಿಕ್ಷಕಿಯಾಗಿದ್ದ ಮಾಯಾವತಿಯವರು ದಲಿತ ನಾಯಕ ಕಾನ್ಷಿರಾಮ ಅವರ ಸಂಪರ್ಕಕ್ಕೆ ಬಂದ ನಂತರ ಯಶಸ್ವಿಯಾಗಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಾನ್ಷಿರಾಮ ಅವರು 1995 ರಲ್ಲಿ ಮಾಯಾವತಿಯವರಿಗೆ ಬಿಎಸ್ಪಿಯಲ್ಲಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು ರಾಜಕೀಯಕ್ಕೆ ಕರೆತಂದರು.
ಮುಖ್ಯಮಂತ್ರಿಯಾಗಿ ಮಾಯಾವತಿಯವರು ನೀಡಿದ ಪರಿಣಾಮಕಾರಿ ಆಡಳಿತ ಹಾಗೂ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮರುಕಳಿಸುವಂತೆ ಮಾಡಿದ ಕ್ರಮಗಳಿಂದ ಸರ್ವತ್ರ ಮೆಚ್ಚುಗೆಗೆ ಪಾತ್ರರಾದರು. ಇವರ ಪ್ರಥಮ ಹಾಗೂ ದ್ವಿತೀಯ ಮುಖ್ಯಮಂತ್ರಿ ಅವಧಿಗಳು ಅತಿ ಕಡಿಮೆ ಸಮಯದ್ದಾಗಿದ್ದವು. ವಿವಿಧ ಕಾರಣಗಳಿಗಾಗಿ ಎರಡೂ ಬಾರಿ ಮುಖ್ಯಮಂತ್ರಿಯಾದ ಕೆಲವೇ ತಿಂಗಳುಗಳಲ್ಲಿ ರಾಜಿನಾಮೆ ಸಲ್ಲಿಸಬೇಕಾಯಿತು. ನಂತರ ಮೂರನೇ ಬಾರಿ ಒಂದು ವರ್ಷದವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ತದನಂತರ ನಾಲ್ಕನೇ ಬಾರಿ ತಮ್ಮ ಸಂಪೂರ್ಣ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಾಲ್ಕನೇ ಬಾರಿ ಮುಖ್ಯಮಂತ್ರಿಯಾದ ನಂತರ ಹಿಂದಿನ ಮುಲಾಯಂ ಸಿಂಗ್ ಆಡಳಿತದಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಗಳ ನೇಮಕದಲ್ಲಿ ನಡೆದ ಅಕ್ರಮಗಳ ನಿವಾರಣೆಗೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡರು.
1989ರಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಸಂಸದರಾಗಿ ಚುನಾಯಿತರಾದರು. 1994 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ತದನಂತರ 1998 ರಿಂದ 2004 ರವರೆಗೆ ಅಕ್ಬರಪುರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿದರು. ಆದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು ಹಾಗೂ ಬಿಎಸ್ಪಿ ಒಂದೇ ಒಂದು ಸ್ಥಾನವನ್ನು ಸಹ ಗೆಲ್ಲಲಾಗಲಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಮತ್ತೆ ಮಾಯಾವತಿಯವರ ಬಿಎಸ್ಪಿಗೆ ಜನಪ್ರಿಯತೆ ಸಿಗುತ್ತಿದ್ದು ನಿಧಾನವಾಗಿಯಾದರೂ ಪಕ್ಷ ಚೇತರಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಗೆಳೆತನ ಸಾಧಿಸಿ ಅಲಿಗಢ ಹಾಗೂ ಮೀರತ್ ಮೇಯರ್ ಸ್ಥಾನಗಳನ್ನು ಪಡೆದುಕೊಂಡಿದ್ದು ಬದಲಾಗುತ್ತಿರುವ ರಾಜಕೀಯ ಸನ್ನಿವೇಶಕ್ಕೆ ದಿಕ್ಸೂಚಿಯಾಗಿದೆ.
| ಪೂರ್ಣ ಹೆಸರು | ಮಾಯಾವತಿ |
| ಜನ್ಮ ದಿನಾಂಕ | 15 Jan 1956 (ವಯಸ್ಸು 70) |
| ಹುಟ್ಟಿದ ಸ್ಥಳ | ದೆಹಲಿ |
| ಪಕ್ಷದ ಹೆಸರು | Bahujan Samaj Party |
| ವಿದ್ಯಾರ್ಹತೆ | NULL |
| ಉದ್ಯೋಗ | ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿ |
| ತಂದೆಯ ಹೆಸರು | ಶ್ರೀ ಪ್ರಭು ದಾಸ |
| ತಾಯಿಯ ಹೆಸರು | ಶ್ರೀಮತಿ ರಾಮ ರತಿ |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.