ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ರಾತ್ರಿ ಸುಬ್ಬು ಏನ್ ಮಾಡಿದ ಗೊತ್ತಾ?

By * ಶ್ರೀನಾಥ್ ಭಲ್ಲೆ
|
Google Oneindia Kannada News

Subbu's first night
ಹಾಸ್ಯಪ್ರವೃತ್ತಿ ಎಂದುಕೊಂಡಿದ್ದ ರಾಯರಿಗೆ ತಮ್ಮ ಅಳಿಯ ಹಾಸ್ಯಾಸ್ಪದ ಎಂದು ತಿಳಿಯಲು ಹೆಚ್ಚು ದಿನಗಳು ಬೇಕಿರಲಿಲ್ಲ. ಮದುವೆ ದಿನ ಕಳೆದು ಬೆಳಿಗ್ಗೆ ಸೀದ ತನ್ನತ್ತೆಯತ್ತ ನಡೆದು "ನಿನ್ನೆ ರಾತ್ರಿ ರಾಧಾ ಹಾಲಿನ ಲೋಟ ಹಿಡಿದುಕೊಂಡು ಬಂದಳು. ಪೂರ್ತಿ ನಾನೇ ಕುಡಿದುಬಿಟ್ಟೆ. ಪಾಪ ಅವಳಿಗೊಂದು ಲೋಟ ಹಾಲು ಬಿಸಿ ಮಾಡಿಕೊಡಿ" ಎಂದು ಹಲ್ಲು ಕಿಸಿಯುತ್ತ ನಿಂತ. ರಾಯರ ಪತ್ನಿಗೆ ಛತ್ರದಲ್ಲೇ ಭೂಮಿ ಬಾಯಿಬಿಡಬಾರದೇ ಅನ್ನಿಸಿದ್ದು ಸುಳ್ಳಲ್ಲ. ಅಳಿಯ ಇನ್ನೇನಾದರೂ ಹೇಳುವ ಮುನ್ನ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ಮದುವೆಯಾಗಿ ವರ್ಷವೆರಡು ಕಳೆದಿದ್ದರೂ, ಅವರು ಹಾಗೇಕೆ ಜಾಗ ಖಾಲಿ ಮಾಡಿದರು ಎಂದು ಸುಬ್ಬನಿಗೆ ತಿಳಿಯದು!

ಇಂತಹ ಘನಂಧಾರಿ ಸುಬ್ಬ, ಮಾವನ ಮನೆಗೆ ಬರುತ್ತಿರುವ ವಿಷಯ ಟೆಲಿಪತಿಯಂತೆ ಮನೆಯಲ್ಲಿನ ಎಲ್ಲರಿಗೂ ಅರಿವಾಗಿತ್ತು. ಅಳಿಯ ವಾಸನೆ... ಎರಡನೇ ದೀಪಾವಳಿಗೆ ಬರುತ್ತಿರುವುದೇನೋ ನಿಜ ಆದರೆ ಇನ್ನೂ ಹಬ್ಬ ಎಲ್ಲೋ ಇದೆ, ಈಗಲೇ ಬಂದರೆ ಸುಧಾರಿಸುವುದೆಂತು? ಎಡವಿದ್ದೆಲ್ಲಿ? ತಾಯಿ-ಮಗಳು ರಾಯರ ಕಡೆ ನೋಡಿದರು. ಇವರು ಕಾಗದ ಬರೆಯುತ್ತೇನೆ ಎಂದು ತಿಳಿಸಿದ್ದರು, ಅಷ್ಟೆ.

ಕಾಗದ ಎಂದ ಮೇಲೆ ನೆನಪಿಗೆ ಬಂತು ನೋಡಿ ಮಾವ-ಅಳಿಯ ಪ್ರಸಂಗ. ಹಿಂದೊಮ್ಮೆ ಕಾಗದದ ಬಗ್ಗೆ ವಿಷಯ ಬಂದಾಗ ಸುಬ್ಬ ಮಾವನಿಗೆ ಹೇಳಿದ್ದ "ನೀವು ಕಾಗದ ಅಂತ ಬರೆದು ಹಾಕಬೇಡಿ. ಸುಮ್ಮನೆ ಯಾರ್ಯಾರೋ ಮುಟ್ಟಿ ಎಂಜಲು ಕೈಯಲ್ಲೇ ತಂದುಕೊಡ್ತಾರೆ. ಯಾರೂ ಕೈಯಿಂದ ಮುಟ್ಟದೆ ಮಡಿ ಮಡಿಯಾಗಿ ನನಗೆ ವಿಷಯ ಈಮೈಲ್ ಮಾಡಿ" ಎಂದಿದ್ದ!

ಕೆಲವು ವಿಷಯದಲ್ಲಂತೂ ನಮ್ ಸುಬ್ಬ ಅತೀ ಜಾಣ. ಈಮೈಲ್ ಸಂದೇಶ ಶುದ್ದ ಮಡಿ ಅಂತ ರಾಯರಿಗೆ ಆಗಲೇ ಮನವರಿಕೆಯಾಗಿದ್ದು. ಅದಕ್ಕಿಂತಲೂ, ಸುಬ್ಬನಿಗೆ ಈಮೈಲ್ ಹೇಗೆ ಓದಬೇಕೂ ಅಂತ ಅರಿವಿದೆಯೋ ಇಲ್ಲವೋ ಎಂದೇ ಅವರು ಕಾಗದ ಎಂದು ಅಂದುಕೊಂಡಿದ್ದರು ಎಂಬುದು, ಎಲ್ಲರಿಗೂ ಅರಿವಿದ್ದ ಸಿಕ್ಕಾಪಟ್ಟೆ ರಹಸ್ಯವಾದ ಮಾತು.

ಇಷ್ಟಕ್ಕೂ ಈಮೈಲ್ ನಲ್ಲಿ ಸುಬ್ಬನಿಗೆ ಕನ್ಫ಼್ಯೂಸ್ ಆಗುವಂಥದ್ದೇನಿತ್ತೋ ಗೊತ್ತಿಲ್ಲ, ಇಷ್ಟು ಬೇಗ ಬಂದು ವಕ್ಕರಿಸಲು. ಕಳೆದ ವರ್ಷ ಹೀಗೇ ಆಯ್ತು. ಅಳಿಯ-ಮಗಳನ್ನು ಹಬ್ಬಕ್ಕೆ ಆಹ್ವಾನಿಸುವ ಸಲುವಾಗಿ ರಾಯರು ಮೈಲ್ ಬರೆದು ಕಡೆಯಲ್ಲಿ "ನಿಮ್ಮಗಳ ಕ್ಷೇಮಕ್ಕೆ ಕರೆ ಅಥವಾ ಈಮೈಲ್ ಮಾಡಿ" ಎಂದು ಸಾಂಪ್ರದಾಯಿಕವಾಗಿ ಬರೆದಿದ್ದರು.

ದೀಪಾವಳಿಗೆ ಬಂದ ಸುಬ್ಬ "ಮಾವಾ, ನಿಮಗೆ ಇಷ್ಟು ಬೇಗ ಅರುಳು-ಮರಳು ಆದ ಹಾಗಿದೆ. ನಿಮ್ಮಗಳು ಅಂತ ಬರೆದಿದ್ದೀರಿ ಈಮೈಲ್ ನಲ್ಲಿ. ಇವಳು ನನ್ನ ಮಗಳಲ್ಲ, ನನ್ ಹೆಂಡತಿ. ಇವಳು ನಿಮ್ಮ ಮಗಳು" ಅಂತ ಪೆಕರು ಪೆಕರಾಗಿ ನಕ್ಕಿದ್ದ. ರಾಯರಿಗೆ ಆಗ ಅರಿವಾಗಿತ್ತು "ನಿಮ್ಮಗಳ" ಅನ್ನೋದನ್ನು ಸುಬ್ಬ "ನಿಮ್ಮ ಮಗಳ" ಅಂತ ಅರ್ಥೈಸಿಕೊಂಡಿದ್ದ. ಅಂದಿನಿಂದ ರಾಯರು ತಮ್ಮ ಅರ್ಥಕೋಶದಿಂದ ಆ ಪದವನ್ನೇ ತೆಗೆದುಹಾಕಿದ್ದರು.

ರಾಮುವಿಗೆ ಜೀವನದಲ್ಲೇ ಪ್ರಥಮ ಬಾರಿ ಭಯಂಕರ ಅನುಭವವಾಗಿದ್ದೂ ಕಳೆದ ದೀಪಾವಳಿಯಲ್ಲೇ. ಭಾವನನ್ನು ಸ್ವಾಗತಿಸಲು ಬಾಗಿಲಿಗೆ ಬಂದವನಿಗೆ "ಏನೋ ರಾಮೂ, ಕುಳ್ಳಗಾಗಿ ಬಿಟ್ಟಿದ್ದೀಯಾ" ಅನ್ನೋದೇ? ರಾಮುವಿಗೆ ತಬ್ಬಿಬ್ಬು. ಅದಕ್ಕೆ ರಾಧಾ "ಹಾಗೇನಿಲ್ಲಾರೀ, ನಮ್ ರಾಮೂ ದಪ್ಪ ಆಗಿರೋದ್ರಿಂದ ಎತ್ತರ ಕಡಿಮೆ ಕಾಣ್ತಿದ್ದಾನೆ ಅಷ್ಟೇ" ನುಡಿದ್ದಳು. ರಾಮೂ ಸೈಲೆಂಟಾಗಿ ಜಾಗ ಖಾಲಿ ಮಾಡಿದ್ದ.

English summary
Diwali 2011 special edition. Humor by Srinath Bhalle, USA. It is an age old tradition to invite daughter and son-in-law during Deepavali festival. But why father-in-law, mother-in-law and even daughter fearing arrival of son-in-law? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X