ಮೈಸೂರಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷವೇ ದೀಪಾವಳಿ ಮಾಲಿನ್ಯ ಹೆಚ್ಚು
ಮೈಸೂರು, ನವೆಂಬರ್ 22: ಮೈಸೂರಿನಲ್ಲಿ ದೀಪಾವಳಿ ಸಮಯದಲ್ಲಿ ಉಂಟಾಗುವ ಮಾಲಿನ್ಯ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಮಾಹಿತಿಯು ಮೂರು ದಿನಗಳ ಆಚರಣೆಯ ಸಮಯದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬಿಡುಗಡೆ ಮಾಡಿದ್ದು, ಈ ಪ್ರಕಾರ ಮೈಸೂರಿನಲ್ಲಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಮಾಲಿನ್ಯದ ಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚು ಎಂದು ವರದಿ ತಿಳಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಈ ವರ್ಷ ಹಸಿರು ಪಟಾಕಿಗೆ ನಗರದಲ್ಲಿ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ,ಹಸಿರು ಪಟಾಕಿ ಸಿಡಿಸಿದರೂ ಮೈಸೂರಿನಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಾದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ದೀಪಾವಳಿಯ 3 ದಿನ ನವೆಂಬರ್ 14ರವರೆಗೆ ಸತತ ಮೂರು ದಿನ 3 ಕಡೆ ವಾಯು ಗುಣಮಟ್ಟದ ಮಾಪನ ಕೆಆರ್ ವೃತ್ತ, ಕುವೆಂಪು ನಗರ, ಹೆಬ್ಬಾಳು ರಿಂಗ್ ರಸ್ತೆಯಲ್ಲಿ ಅಧಿಕ ಮಟ್ಟದಲ್ಲಿ ಕಂಡು ಬಂದಿದೆ.
ಎಷ್ಟಿದೆ:
ಈ ವರ್ಷ ಮೊದಲನೇ ದಿನ 66.1 ಡೆಸಿಬಲ್ ಇದ್ದರೆ ಎರಡನೇ ದಿನ 70.7ರಷ್ಟು ಹೆಚ್ಚಾಗಿದೆ. ಮೂರನೇ ದಿನ 70.3 ಡೆಸಿಬಲ್‌ನಷ್ಟು ದಾಖಲಾಗಿದೆ. ಕಳೆದ ವರ್ಷ ದೀಪಾವಳಿಯ ಮೊದಲ ಮತ್ತು ಎರಡನೇ ದಿನ ಪಟಾಕಿ ಸಿಡಿತದಿಂದ ನಗರದಲ್ಲಿ ಶಬ್ದ ಪ್ರಮಾಣ 65.0 ಡೆಸಿಬಲ್ ಇದ್ದರೆ, ಮೂರನೇ ದಿನ 74 ಡೆಸಿಬಲ್‌ಗೆ ಏರಿಕೆಯಾಗಿತ್ತು.
ಯಾವ ಬಡಾವಣೆಯಲ್ಲಿ ಎಷ್ಟು:
ನಗರದ ಕೆ.ಆರ್.ವೃತ್ತದಲ್ಲಿ ಹಬ್ಬದ ಎರಡನೇ ದಿನ 102ರಷ್ಟಿದ್ದರೆ ಮೂರನೇ ದಿನ 140 ಇದೆ. ಮತ್ತೆ ಹೆಬ್ಬಾಳು ರಿಂಗ್ ರಸ್ತೆಯಲ್ಲಿನ ಕೇಂದ್ರದಲ್ಲಿ ಎರಡನೇ ದಿನ 100 ಇದ್ದರೆ, ಮೂರನೇ ದಿನ 118ಕ್ಕೆ ಏರಿದೆ. ಕುವೆಂಪು ನಗರದ ಕೇಂದ್ರದಲ್ಲಿ ಮೊದಲ ದಿನ 43, ಎರಡನೇ ದಿನ 53 ಮತ್ತು ಮೂರನೇ ದಿನ 57 ಏರಿಕೆಯಾಗಿದ್ದು, ವಾಯುವಿನ ಗುಣಮಟ್ಟ ಹಾಳಾಗಿರುವುದು ಕಂಡು ಬಂದಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡಲು ಪಟಾಕಿಗಳ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ. 2022 ರಲ್ಲಿ ದೀಪಾವಳಿ ದಿನಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳ ಪರಿಚಯವು ಮಾಲಿನ್ಯವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ. ಬೆಂಗಳೂರು, ಮೈಸೂರಿನಂತಹ ನಗರದಲ್ಲಿ ನೈಜ ಮಾಲಿನ್ಯದ ಮಟ್ಟಗಳ ಮೇಲೆ ಬೆಳಕು ಚೆಲ್ಲಲು ಹೆಚ್ಚಿನ ಪ್ರದೇಶಗಳಲ್ಲಿ ಮಾನಿಟರಿಂಗ್ ಅಗತ್ಯವಿದೆ ಎಂದು ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications