ರೈತರ ಭೂಮಿ ಮಾರಾಟಕ್ಕಿಲ್ಲ: Bidadi Township ವಿರೋಧಿಸಿ ಜುಲೈ 17ಕ್ಕೆ ಬೆಂಗಳೂರಲ್ಲಿ ಬಿಜಿಪಿ ಬೃಹತ್ ಪ್ರತಿಭಟನೆ
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತಿರುವುದನ್ನು ವಿರೋಧಿಸಿ ಜುಲೈ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಆಕ್ರೋಶ ಹೊರಹಾಕಿರುವ ಅವರು, ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ತಲೆಮಾರುಗಳಿಂದ ರೈತ ಕುಟುಂಬಗಳನ್ನು ಸಲಹುತ್ತಿದ್ದ ಫಲವತ್ತಾದ ಕೃಷಿ ಭೂಮಿಯನ್ನು, ಕೇವಲ ರಿಯಲ್ ಎಸ್ಟೇಟ್ ದಂಧೆಗಾಗಿ ಕಾಂಗ್ರೆಸ್ ಸರ್ಕಾರ ಬಲವಂತವಾಗಿ ಕಿತ್ತುಕೊಳ್ಳುತ್ತಿದೆ ಎಂದು ಗುಡುಗಿದ್ದಾರೆ.
ಈ ಜನವಿರೋಧಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣವೇ ಸಂಪೂರ್ಣವಾಗಿ ಹಿಂಪಡೆಯಬೇಕು. ತಮ್ಮ ಭೂಮಿ, ಜೀವನೋಪಾಯ ಮತ್ತು ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ಅನ್ನದಾತರ ವಿರುದ್ಧವೇ ಸರ್ಕಾರ ಸುಳ್ಳು ಕೇಸ್ ದಾಖಲಿಸಿದೆ. ಇದು ಸರ್ಕಾರದ ಅಹಂಕಾರದ ಪರಮಾವಧಿ ಹಾಗೂ ರೈತರ ಮೇಲಿನ ನೇರ ದಾಳಿ ಎಂದು ಖಂಡಿಸಿದ್ದಾರೆ. ತಕ್ಷಣವೇ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು ಮತ್ತು ಹೋರಾಟಗಾರ ರೈತರ ಮೇಲೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಯಾವುದೇ ಷರತ್ತಿಲ್ಲದೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಜುಲೈ 17ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ
ರೈತರ ಹಕ್ಕುಗಳ ರಕ್ಷಣೆಗಾಗಿ ಮತ್ತು ಸರ್ಕಾರದ ಈ ಅನ್ಯಾಯದ ವಿರುದ್ಧ ಹೋರಾಡಲು ಬಿಜೆಪಿ ನಿರ್ಧರಿಸಿದೆ. ಜುಲೈ 17ರ ಶುಕ್ರವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಪಕ್ಷದ ಎಲ್ಲ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು (MLCs) ಭಾಗವಹಿಸಲಿದ್ದಾರೆ. ನಮ್ಮ ಅನ್ನದಾತರ ಭೂಮಿ ಮಾರಾಟಕ್ಕಿಲ್ಲ, ಅವರ ಜೀವನೋಪಾಯದ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ, ಅವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ತಲುಪಿಸಬೇಕಿದೆ. ಈ ನ್ಯಾಯದ ಹೋರಾಟದಲ್ಲಿ ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ವಿಜಯೇಂದ್ರ ಕರೆ ನೀಡಿದ್ದಾರೆ.
2028ಕ್ಕೆ ಡಿಕೆಗೆ ರಾಜಕೀಯ ಹೊಡೆತ?ಬಿಡದಿ ಟೌನ್‌ಶಿಪ್ ಯೋಜನೆ: ರೈತರು ಎತ್ತುತ್ತಿರುವ ಪ್ರಶ್ನೆಗಳು ಏನು?
ಹಿಂಬಾಗಿಲಿನಿಂದ ಭೂಸ್ವಾಧೀನ: ನಿಖಿಲ್ ಕೆಂಡಾಮಂಡಲ
ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಬಿಡದಿ ಬಳಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡುತ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ. ಮಾಧ್ಯಮಗಳ ಮುಂದೆ ಕೈಯಲ್ಲಿ ಪೆನ್ನು-ಪೇಪರ್ ಹಿಡಿದು, ಜಿಬಿಐಟಿ ಯೋಜನೆ ಮರುಪರಿಶೀಲನೆಗೆ ಸಮಿತಿ ರಚಿಸುತ್ತೇವೆ ಎಂದು ಹೇಳುತ್ತಿರುವುದು ಕೇವಲ ಸಾರ್ವಜನಿಕರ ಹಾದಿ ತಪ್ಪಿಸುವ ಕಣ್ಣೊರೆಸುವ ತಂತ್ರ ಎಂದು ದೂರಿದ್ದಾರೆ.
ಒಂದೆಡೆ ಸಮಿತಿ ರಚನೆಯ ನಾಟಕವಾಡುತ್ತಾ, ಇನ್ನೊಂದೆಡೆ ಸದ್ದಿಲ್ಲದೆ ಹಿಂಬಾಗಿಲಿನಿಂದ ಬನ್ನಿಗಿರಿ, ಅಲ್ಲಾಸಂದ್ರ ಹಾಗೂ ಕೆ.ಜಿ.ಗೊಲ್ಲರಪಾಳ್ಯ ಗ್ರಾಮಗಳ ರೈತರ ಜಮೀನುಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮುಗ್ಧ ರೈತರ ಮೇಲೆ ಒಂದೆಡೆ ಮೊಸಳೆ ಕಣ್ಣೀರು ಸುರಿಸುತ್ತಾ, ಮತ್ತೊಂದೆಡೆ ಅವರ ಬದುಕಿಗೆ ಕೊಳ್ಳಿ ಇಡುತ್ತಿರುವ ಸರ್ಕಾರದ ಈ ವಂಚನೆಯ ನಾಟಕವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ. ಜೆಡಿಎಸ್ ಪಕ್ಷವು ಸದಾ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ. ಅನ್ನದಾತರ ಹೊಟ್ಟೆಗೆ ಹೊಡೆಯುತ್ತಿರುವ ಸರ್ಕಾರದ ಈ ದ್ರೋಹದ ವಿರುದ್ಧ ನಾವು ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications