US Vs Iran Tensions: ಅಮೆರಿಕ - ಇರಾನ್ ಮೇಲೆ ಮತ್ತೆ ಯುದ್ಧದ ಕಾರ್ಮೋಡ, ಈಗ ಇರುವ ಆತಂಕವೇನು ?

US Vs Iran Tensions: ಅಮೆರಿಕ - ಇರಾನ್ ಮೇಲೆ ಮತ್ತೆ ಯುದ್ಧದ ಕಾರ್ಮೋಡ ಮೂಡಿದೆ. ಈ ಸುದೀರ್ಘ ಅವಧಿಯಿಂದ ಇರಾನ್ Vs ಅಮೆರಿಕ, ಇಸ್ರೇಲ್ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧವು ಇದೀಗ ತಾರ್ಕಿಕ ಅಂತ್ಯವನ್ನು ಕಾಣುತ್ತಲ್ಲೇ ಇಲ್ಲ. ಈ ಬಗ್ಗೆ ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.

ಅಮೆರಿಕ ಮತ್ತು ಇರಾನ್ ನಡುವೆ ಮತ್ತೊಮ್ಮೆ ಯುದ್ಧದ ಅಪಾಯ ಹೆಚ್ಚಾಗತೊಡಗಿದೆ. ಆದರೆ, ಈ ಬಾರಿ ಯಾರೋ ಶಾಂತಿಯ ಮಾತು ತಪ್ಪಿದರು ಎನ್ನುವ ಕಾರಣಕ್ಕೆ ಉದ್ವಿಗ್ನತೆ ಆರಂಭಗೊಂಡಿಲ್ಲ. ಬದಲಿಗೆ, ಈ ಹಿಂದೆ ಉಭಯ ದೇಶಗಳು ಸಹಿ ಹಾಕಿದ ಶಾಂತಿ ಒಪ್ಪಂದದ ಒಳಗೆ ಅವಿತಿದ್ದ ಲೋಪಗಳೇ ನೈಜ ಸಮಸ್ಯೆಯಾಗಿವೆ. ಈಗ ಆ ಸಮಸ್ಯೆಗಳು ದೊಡ್ಡದಾಗಿಯೇ ಬಯಲಿಗೆ ಬರುತ್ತಿವೆ.

US Vs Iran Tensions

ಹಿಂದಿನ ಶಾಂತಿ ಒಪ್ಪಂದದಲ್ಲಿನ ಬಹುದೊಡ್ಡ ತಪ್ಪೆಂದರೆ ಒಂದು ತಪ್ಪಾದ ಗ್ರಹಿಕೆ ಆಗಿತ್ತು. ಉಭಯ ದೇಶಗಳೂ ತಾವು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ತಮ್ಮ ಮಿಲಿಟರಿ ಸಾಮರ್ಥ್ಯ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಭಾವಿಸಿದ್ದವು. ಅಮೆರಿಕ ನಿಧಾನವಾಗಿ ಇನ್ನಷ್ಟು ಶಕ್ತಿಶಾಲಿಯಾಗಲು ಬಯಸಿದ್ದರೆ, ಇರಾನ್ ಹಿಂದಿದ್ದ ಸ್ಥಿತಿಯನ್ನೇ ಉಳಿಸಿಕೊಂಡು, ತನ್ನ ಮೇಲುಗೈಯನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿತ್ತು. ಇವೆರಡೂ ಶಕ್ತಿಶಾಲಿ ದೇಶಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸಿದಾಗ, ಶಾಂತಿ ದೀರ್ಘಕಾಲ ಉಳಿಯುವುದು ಕಷ್ಟಕರ.

ಈಗ ನಡೆಯುತ್ತಿರುವುದು ಏನು ಎಂದು ಅರ್ಥ ಮಾಡಿಕೊಳ್ಳಲು ನಾವು ಮೊದಲಿಗೆ ನಡೆದದ್ದೇನು ಎನ್ನುವುದನ್ನು ಒಮ್ಮೆ ಗಮನಿಸೋಣ.

ಅಮೆರಿಕ ಫೆಬ್ರವರಿ ತಿಂಗಳಲ್ಲಿ ಇರಾನ್ ಮೇಲೆ ದಾಳಿ ನಡೆಸಿದಾಗ ಈ ಯುದ್ಧ ಆರಂಭಗೊಂಡಿತು. ಅಮೆರಿಕದ ಮೊದಲ ಗುರಿ ಇರಾನಿನ ಇಸ್ಲಾಮಿಕ್ ಸರ್ಕಾರವನ್ನು ತೆಗೆದುಹಾಕುವುದಾಗಿತ್ತು. ಒಂದು ವೇಳೆ ಆ ಲೆಕ್ಕಾಚಾರ ವಿಫಲವಾದರೆ, ಇರಾನ್ ಮೇಲೆ ಅತ್ಯಧಿಕ ಒತ್ತಡ ಸೃಷ್ಟಿಸಿ, ಅದು ಅಮೆರಿಕದ ಕಠಿಣ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ, ಅದರಲ್ಲೂ ಪರಮಾಣು ಯೋಜನೆಗಳನ್ನು ಕಡಿತಗೊಳಿಸಲು ಮತ್ತು ಮಧ್ಯ ಪೂರ್ವದ ಮೇಲಿನ ಪ್ರಭಾವವನ್ನು ತಗ್ಗಿಸಲು ಒಪ್ಪಿಕೊಳ್ಳುವಂತೆ ಮಾಡುವುದಾಗಿತ್ತು.

ಆದರೆ, ಯುದ್ಧಗಳು ನಿರೀಕ್ಷಿಸದಂತೆಯೇ ಸಾಗುವುದು ಬಹಳ ಅಪರೂಪವಲ್ಲವೇ? ಇರಾನನ್ನು ದುರ್ಬಲಗೊಳಿಸಲು ಆರಂಭಿಸಿದ ಈ ಯುದ್ಧ, ಟೆಹರಾನ್‌ಗೆ ಒಂದು ಅನಿರೀಕ್ಷಿತ ಮೇಲುಗೈ ಒದಗಿಸಿತ್ತು. ಇರಾನ್ ಇದ್ದಕ್ಕಿದ್ದಂತೆ ಜಗತ್ತಿನ ಬಹುಪಾಲು ತೈಲ ಮತ್ತು ಅನಿಲ ಪ್ರತಿದಿನವೂ ಹಾದುಹೋಗುವ ಕಿರಿದಾದ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿಯ ಮೇಲೆ ಬಲವಾದ ಹಿಡಿತ ಸಾಧಿಸಿತ್ತು. ಇದು ಅಮೆರಿಕಕ್ಕೆ ಮುಖಭಂಗ ಉಂಟುಮಾಡಿದ್ದು, ವಾಷಿಂಗ್ಟನ್ ತರಾತುರಿಯಲ್ಲಿ ಒಂದು ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕುವುದು ಅನಿವಾರ್ಯವಾಗಿಸಿತ್ತು. ಈ ಎಂಒಯು ಮೂಲತಃ ಯುದ್ಧವನ್ನು ಸ್ಥಗಿತಗೊಳಿಸುವ ಲಿಖಿತ ಒಪ್ಪಂದವಾಗಿತ್ತು.

ಇರಾನಿನ ನಾಯಕರು ಎಂದೂ ಈ ಒಪ್ಪಂದದ ಮೇಲೆ ಪೂರ್ಣ ವಿಶ್ವಾಸ ಇರಿಸಿರಲಿಲ್ಲ. ಅವರಿಗೆ ಈ ಎಂಒಯು ಕೇವಲ ಕೊಂಚ ಉಸಿರಾಡುವ ಸಮಯ ಒದಗಿಸುತ್ತದೆ ಎಂದಷ್ಟೇ ಅನಿಸಿತ್ತು. ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ಸರಿಯಾದ ಸಮಯ ಬಂದಾಗ ಮೌನವಾಗಿಯೇ ಮುಂದಿನ ಸುತ್ತಿನ ಯುದ್ಧ ಆರಂಭಿಸಲು ಸಿದ್ಧತೆ ನಡೆಸುವ ಸಲುವಾಗಿ ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನುವುದು ಇರಾನ್ ನಾಯಕರ ಭಾವನೆಯಾಗಿತ್ತು.

ಹಾಗೆಂದು ಇರಾನ್ ನಾಯಕರ ಅನುಮಾನಗಳೇನೂ ಆಧಾರ ರಹಿತವಾಗಿರಲಿಲ್ಲ. ಫೈನಾನ್ಸಿಯಲ್ ಟೈಮ್ಸ್ ವರದಿಯ ಪ್ರಕಾರ, ಅಮೆರಿಕದ ತುರ್ತು ಇಂಧನ ಸಂಗ್ರಹವನ್ನು ತುಂಬಿಸುವ ಸಲುವಾಗಿಯಷ್ಟೇ ಡೊನಾಲ್ಡ್ ಟ್ರಂಪ್ ಈ ಒಪ್ಪಂದಕ್ಕೆ ಬೆಂಬಲ ನೀಡಿದ್ದರು ಎಂದು ಸ್ವತಃ ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಹೇಳಿದ್ದರು. ಇಂತಹ ಬಹಿರಂಗ ಹೇಳಿಕೆಗಳು ಇರಾನ್ ಅಮೆರಿಕದ ಕುರಿತು ಇನ್ನಷ್ಟು ಅನುಮಾನ ಹೊಂದುವಂತೆ ಮಾಡಿತು.

ಟೆಹರಾನ್ ಒಂದಷ್ಟು ಎಚ್ಚರಿಕೆಯ ಸಂಕೇತಗಳನ್ನು ಗಮನಿಸುತ್ತು. ಅವೆಂದರೆ:

* ವಿದೇಶೀ ಬ್ಯಾಂಕುಗಳಲ್ಲಿ ಮುಟ್ಟುಗೋಲಾಗಿದ್ದ ಇರಾನಿನ ಹಣ ಬಿಡುಗಡೆ ಆಗಿರಲಿಲ್ಲ.

~ ಇಸ್ರೇಲ್ ಮತ್ತು ಲೆಬನಾನ್ ನಡುವೆ ಅಮೆರಿಕ ಬೆಂಬಲಿತ ಒಪ್ಪಂದ ಕದನ ವಿರಾಮಕ್ಕೆ ಇರಾನಿನ ಬೇಡಿಕೆಯನ್ನು ಪರಿಗಣಿಸಿರಲಿಲ್ಲ.

* ಅಮೆರಿಕ ಸದ್ದಿಲ್ಲದೆ ಇನ್ನಷ್ಟು ಪಡೆಗಳನ್ನು ಕೊಲ್ಲಿ ಪ್ರದೇಶಕ್ಕೆ ರವಾನಿಸಿತ್ತು.

* ಅಮೆರಿಕನ್ ಅಧಿಕಾರಿಗಳು ಹೊರ್ಮುಸ್ ಜಲಸಂಧಿಯಲ್ಲಿ ಇರಾನಿನ ಸೂಚನೆಗಳನ್ನು ಕಡೆಗಣಿಸಿ, ಒಮಾನ್ ಕರಾವಳಿಗೆ ಸನಿಹದಿಂದ ಸಾಗುವಂತೆ ಉತ್ತೇಜನ ನೀಡತೊಡಗಿದರು.

ಇವೆಲ್ಲ ಸಣ್ಣಪುಟ್ಟ ನಡೆಗಳಾದರೂ, ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿಯ ಮೇಲೆ ನಿಧಾನವಾಗಿ ಇರಾನಿನ ಹಿಡಿತ ಸಡಿಲಿಸಲು ಅಮೆರಿಕ ನಡೆಸುತ್ತಿದ್ದ ಬುದ್ಧಿವಂತಿಕೆಯ ಆಟದಂತೆ ಇರಾನ್ ಭಾವಿಸಿತ್ತು.

ಇರಾನಿನ ನಾಯಕರಿಗೆ ಇದರ ಸಂದೇಶ ಸ್ಪಷ್ಟವಾಗಿತ್ತು. ಒಂದು ವೇಳೆ ನಾವು ಮೌನವಾಗಿ ಕುಳಿತರೆ, ಅಥವಾ ಹೆಜ್ಜೆ ಹಿಂದಿಟ್ಟರೆ, ಅಮೆರಿಕ ನಮ್ಮನ್ನು ಇನ್ನಷ್ಟು ತುಳಿಯಲಿದೆ. ನಾವು ದುರ್ಬಲರಾಗಿದ್ದೇವೆ ಎಂದು ತೋರಿಸಿದರೆ, ಆಗ ಇನ್ನಷ್ಟು ಹೆಚ್ಚಿನ ಒತ್ತಡವನ್ನು ನಾವೇ ಆಹ್ವಾನಿಸಿದಂತಾಗುತ್ತದೆ ಎನ್ನುವುದು ಇರಾನ್ ಲೆಕ್ಕಾಚಾರವಾಗಿತ್ತು. ಆದ್ದರಿಂದಲೇ ಇರಾನ್ ದಿಟ್ಟವಾಗಿ ಹೆಜ್ಜೆಯಿಡಲು ನಿರ್ಧರಿಸಿ, ತನ್ನದೇ ಲೆಕ್ಕಾಚಾರದಲ್ಲಿ ಚಕಮಕಿಯನ್ನು ಪುನರಾರಂಭಿಸಿ, ಅಮೆರಿಕವನ್ನು ಇರಾನ್ ಜೊತೆ ಹೆಚ್ಚು ಗಂಭೀರವಾದ, ದೀರ್ಘಾವಧಿಯ ಮಾತುಕತೆಗೆ ಇಳಿದು, ಇರಾನ್‌ಗೆ ಭದ್ರತಾ ಮತ್ತು ಆರ್ಥಿಕ ಅನುಕೂಲ ಕೊಡುವಂತೆ ಒತ್ತಾಯಿಸಲು ಮುಂದಾಯಿತು.

ಈ ಬಿಕ್ಕಟ್ಟಿನ ಕೇಂದ್ರದಲ್ಲಿರುವುದು ಹೊರ್ಮುಸ್ ಜಲಸಂಧಿ. ಇರಾನ್ ಇದನ್ನು ತನ್ನ ಬಹುದೊಡ್ಡ ಚೌಕಾಸಿಯ ವಿಚಾರವಾಗಿ ಪರಿಗಣಿಸಿದೆ. ಆದ್ದರಿಂದಲೇ ಹೊರ್ಮುಸ್ ಮೇಲಿನ ತನ್ನ ಹಿಡಿತವನ್ನು ಸಡಿಲಿಸಲು ಇರಾನ್ ಸಿದ್ಧವಿಲ್ಲ. ಇತ್ತೀಚೆಗೆ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಅಂತ್ಯ ಸಂಸ್ಕಾರದ ವೇಳೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು ಇರಾನಿನ ನಾಯಕರಿಗೆ ಈ ವಿಚಾರದಲ್ಲಿ ಜನರು ತಮಗೆ ಇನ್ನೂ ಬೆಂಬಲವಾಗಿದ್ದಾರೆ ಎನ್ನುವ ನಂಬಿಕೆ ಮೂಡಿಸಿತು. ಈಗ ಹೊರ್ಮುಸ್ ಜಲಸಂಧಿ ಇರಾನಿಗೆ ರಾಷ್ಟ್ರೀಯ ಹೆಮ್ಮೆಯ ವಿಚಾರವಾಗಿದೆ.

ಈ ಆತ್ಮವಿಶ್ವಾಸದಿಂದ ಹೆಜ್ಜೆ ಮುಂದಿಟ್ಟ ಇರಾನ್, ಇತ್ತೀಚೆಗೆ ಒಮಾನ್ ಕರಾವಳಿಯ ಬಳಿಯಿಂದ ಸಾಗುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಅಮೆರಿಕ ಗಲ್ಫ್ ಪ್ರದೇಶದಾದ್ಯಂತ ಇರಾನಿನ ಡ್ರೋನ್ ಮತ್ತು ಕ್ಷಿಪಣಿ ನೆಲೆಗಳ ಮೇಲೆ ತೀವ್ರ ವಾಯು ದಾಳಿ ನಡೆಸಿತು.

ಆದರೆ, ಇರಾನ್ ಇದಕ್ಕೂ ಸಿದ್ಧವಾಗಿತ್ತು. ಯುದ್ಧ ತಾನು ಅಂದುಕೊಂಡದ್ದಕ್ಕಿಂತಲೂ ಬೇಗ ಪುನರಾರಂಭಗೊಂಡರೂ, ಸಮಯ ಇನ್ನೂ ತನ್ನ ಪರವಾಗಿಯೇ ಇದೆ ಎಂದು ಟೆಹರಾನ್ ವಿಶ್ವಾಸ ಹೊಂದಿದೆ. ಇರಾನಿನ ಯೋಚನೆ ಸರಳವಾಗಿದೆ. ಹೇಗಾದರೂ ಯುದ್ಧ ಅನಿವಾರ್ಯವಾದರೆ, ಅದನ್ನು ಅಮೆರಿಕ ಸಂಪೂರ್ಣವಾಗಿ ಮರಳಿ ಸಜ್ಜಾಗುವ ಮುನ್ನ, ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳುವ ಮುನ್ನ, ಈಗಲೇ ನಡೆಸುವುದು ಒಳ್ಳೆಯದು ಎನ್ನುವುದು ಇರಾನ್ ಯೋಚನೆ. ಇರಾನ್ ಈ ಯುದ್ಧ ತನ್ನ ಅಳಿವು ಉಳಿವಿನ ಪ್ರಶ್ನೆ ಎಂದೇ ಭಾವಿಸಿದ್ದು, ಎಂತಹ ಸಂಕಷ್ಟವನ್ನಾದರೂ ಸಹಿಸುವ ಅದರ ಸಾಮರ್ಥ್ಯವೇ ಇರಾನಿನ ಬಹುದೊಡ್ಡ ಆಯುಧವಾಗಿದೆ.

ಗಿರೀಶ್ ಲಿಂಗಣ್ಣ ಹಿನ್ನೆಲೆ

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+