Oil: ತೈಲ ಬಿಕ್ಕಟ್ಟಿನ ಬಿರುಗಾಳಿಯಲ್ಲೂ ಅಚಲ ಭಾರತ! ಮಧ್ಯಪ್ರಾಚ್ಯ ಯುದ್ಧದ ನಡುವೆಯೂ ಗೆದ್ದ ದೇಶ
Global Oil Crisis: ಗಲ್ಫ್ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಒಂದು ಯುದ್ಧ ಆರಂಭಗೊಂಡಾಗ, ಇದ್ದಕ್ಕಿದ್ದಂತೆ ಜಗತ್ತಿನ ಐದನೇ ಒಂದರಷ್ಟು ತೈಲ ಮತ್ತು ಅನಿಲ ಪೂರೈಕೆ ರಾತ್ರೋರಾತ್ರಿ ಸ್ಥಗಿತಗೊಂಡಿತು. ಎಲ್ಲೆಡೆಯೂ ಆತಂಕ ಹರಡಿತ್ತು. ಏಷ್ಯಾದಾದ್ಯಂತ ಒಂದರ ನಂತರ ಒಂದು ದೇಶಗಳು ತಮ್ಮ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಪರದಾಡತೊಡಗಿದವು. ಯುದ್ಧದ ಆರಂಭದ ದಿನಗಳಲ್ಲಿ, ಭಾರತವೂ ಅತ್ಯಂತ ದೌರ್ಬಲ್ಯ ಹೊಂದಿರುವ ದೇಶದಂತೆ ಕಾಣುತ್ತಿತ್ತು.
ಹಾಗೆಂದು ಈ ಆತಂಕ ನಿಜವೂ ಆಗಿತ್ತು. ಭಾರತ ತನ್ನ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಭಾರತದ ಅರ್ಧಕ್ಕಿಂತಲೂ ಹೆಚ್ಚು ನೈಸರ್ಗಿಕ ಅನಿಲವೂ ವಿದೇಶಗಳಿಂದ ಬರುತ್ತದೆ. ಈ ಆಮದಿನ ಬಹುದೊಡ್ಡ ಪಾಲು ಈಗ ಯುದ್ಧದ ಬೆಂಕಿಗೆ ಬಿದ್ದ ಮಧ್ಯ ಪೂರ್ವ ದೇಶಗಳಿಂದಲೇ ಬರುತ್ತಿತ್ತು. ಪರಿಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಒಯ್ಯುವಂತೆ, ಭಾರತದ ತೈಲ ಸಂಗ್ರಹ ಕೇವಲ ಒಂದು ವಾರದಲ್ಲಿ ಖಾಲಿಯಾಗುವ ಆತಂಕವಿತ್ತು. ಸುದೀರ್ಘ ಬಿಕ್ಕಟ್ಟಿನ ಆತಂಕವಿರುವಾಗ, ಈ ಸಂಗ್ರಹ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿತ್ತು. ಇದು ಸಾಲದೆಂಬಂತೆ, ರೂಪಾಯಿಯೂ ಕುಸಿತ ಕಾಣತೊಡಗಿತು. ಇನ್ನು ತೈಲ ದರ ಡಾಲರ್‌ಗಳಲ್ಲಿ ನಿಗದಿಯಾಗುವುದರಿಂದ, ಪ್ರತಿಯೊಂದು ಬ್ಯಾರಲ್ ತೈಲವೂ ದುಬಾರಿಯಾಗತೊಡಗಿತು.

ಗಟ್ಟಿಯಾಗಿ ನಿಂತಿದ್ದ ಭಾರತ
ಇದೆಲ್ಲದರ ನಡುವೆ ಒಂದು ಅನಿರೀಕ್ಷಿತ, ಅಚ್ಚರಿಯ ಬೆಳವಣಿಗೆ ನಡೆಯಿತು. ಅಮೆರಿಕ ಮತ್ತು ಇರಾನ್‌ಗಳು ತಾತ್ಕಾಲಿಕವಾಗಿಯಾದರೂ ತಮ್ಮ ಕ್ಷಿಪಣಿ ದಾಳಿಗಳನ್ನು ನಿಲುಗಡೆಗೊಳಿಸಿದಾಗ, ಭಾರತ ಯಾರೂ ನಿರೀಕ್ಷಿಸಿರದಷ್ಟು ಗಟ್ಟಿಯಾಗಿ ನಿಂತಿತ್ತು.
ಮದ್ದುಗುಂಡುಗಳ ಸದ್ದು ಮೌನವಾದಾಗ ಭಾರತದ ಆರ್ಥಿಕತೆಯತ್ತ ಗಮನ ಹರಿಸಿದ ತಜ್ಞರು ಭಾರತದ ಅರ್ಥ ವ್ಯವಸ್ಥೆಗೆ ಯುದ್ಧದಿಂದ ಅತ್ಯಂತ ಕನಿಷ್ಠ ಪ್ರಮಾಣದ ಹಾನಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಇಂಧನ ಬೆಲೆಗಳು ಏರಿದ್ದವಾದರೂ, ಅದು ಬಹಳ ಕಡಿಮೆ ಪ್ರಮಾಣದ ಏರಿಕೆಯಾಗಿತ್ತು. ಹಣದುಬ್ಬರ ಶಾಂತವಾಗಿತ್ತು. ರೂಪಾಯಿ ಮತ್ತೆ ತನ್ನ ಕಾಲ ಮೇಲೆ ನಿಂತಿತ್ತು. ಇದೇ ವೇಳೆ, ಇತರ ಏಷ್ಯನ್ ದೇಶಗಳು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದವು. ಕೆಲವು ದೇಶಗಳಲ್ಲಿ ಇಂಧನ ಬೆಲೆ ಗಗನಕ್ಕೇರಿದರೆ, ಕೆಲವು ದೇಶಗಳು ಇಂಧನ ಉಳಿಸಲು ತಮ್ಮ ನಾಗರಿಕರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದವು. ಫಿಲಿಪೈನ್ಸ್ ಅಂತೂ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನೇ ಘೋಷಿಸಿತು. ಆದರೆ, ಬಹುತೇಕ ಭಾರತೀಯ ಕುಟುಂಬಗಳು ಈ ಆಘಾತವನ್ನು ದಿಟ್ಟವಾಗಿಯೇ ಎದುರಿಸಿದವು. ಭಾರತ ಈ ಪರಿಸ್ಥಿತಿಯನ್ನು ನಿರ್ವಹಿಸಿದ್ದಾದರೂ ಹೇಗೆ?.
2 ತಿಂಗಳು ದೇಶದಲ್ಲಿ ಇಂಧನ ದರ ಸ್ಥಿರ
ಇದಕ್ಕೆ ಉತ್ತರದ ಒಂದು ಭಾಗವೆಂದರೆ, ಭಾರತದ ಅದೃಷ್ಟ ಚೆನ್ನಾಗಿತ್ತು. ಭಾರತ ಆರಂಭದಲ್ಲೇ ಈ ಯುದ್ಧ ಬಹಳ ದೀರ್ಘಕಾಲ ಮುಂದುವರಿಯುವುದಿಲ್ಲ ಎಂದು ನಿರೀಕ್ಷಿಸಿತ್ತು. ಆದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಎರಡು ತಿಂಗಳ ಕಾಲ ಸ್ಥಿರವಾಗಿ ಇರಿಸಿತ್ತು. ಇದೇ ವೇಳೆ, ಶ್ರೀಮಂತ ದೇಶಗಳು ತಮ್ಮ ತುರ್ತು ತೈಲ ಸಂಗ್ರಹವನ್ನು ತೆರೆದು, ಅಪಾರ ಪ್ರಮಾಣದ ತೈಲವನ್ನು ಮಾರುಕಟ್ಟೆಗೆ ಸುರಿದವು. ಈ ಹೆಚ್ಚುವರಿ ಪೂರೈಕೆ ತೈಲ ಬೆಲೆ ಅತಿಯಾಗಿ ಏರದಂತೆ ತಡೆಯಲು ನೆರವಾಯಿತು. ಎಕನಾಮಿಸ್ಟ್ ಪತ್ರಿಕೆ ವರದಿ ಮಾಡಿರುವಂತೆ, ಚೀನಾ ಇದ್ದಕ್ಕಿದ್ದಂತೆ ತನ್ನ ತೈಲ ಆಮದು ಕಡಿತಗೊಳಿಸಬಹುದು ಎಂದಾಗಲಿ, ಡೊನಾಲ್ಡ್ ಟ್ರಂಪ್ ಯುದ್ಧದಿಂದ ಇದೇ ಸಮಯದಲ್ಲಿ ಹಿಂದೆ ಸರಿಯಬಹುದು ಎಂದಾಗಲಿ ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಇವೆಲ್ಲ ಅನಿರೀಕ್ಷಿತ ಬೆಳವಣಿಗೆಗಳು ಭಾರತಕ್ಕೆ ನೆರವಾದವು.
ಆದರೆ, ನಾವು ಅದೃಷ್ಟ ಭಾರತಕ್ಕೆ ನೆರವಾಯಿತು ಎಂದುಬಿಟ್ಟರೆ ಅರ್ಧ ಕಥೆಯನ್ನಷ್ಟೇ ಹೇಳಿದಂತಾಗುತ್ತದೆ. ಇಂಧನ ಬೆಲೆಯನ್ನು ಸ್ಥಿರವಾಗಿಡುವುದಕ್ಕೆ ದೊಡ್ಡ ಕಾರಣವೆಂದರೆ ಸರಳ ರಾಜಕಾರಣ. ಭಾರತದ ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಪ್ರಚಾರಗಳು ಆರಂಭಗೊಳ್ಳುವ ಕೆಲವು ವಾರಗಳ ಮುನ್ನವಷ್ಟೇ ಇರಾನ್ ಮೇಲೆ ಮೊದಲ ಕ್ಷಿಪಣಿ ಬಿತ್ತು. ಚುನಾವಣೆ ಎದುರಿಸುತ್ತಿದ್ದ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳವೂ ಒಂದಾಗಿದ್ದು, ಈ ರಾಜ್ಯವನ್ನು ಗೆಲ್ಲಲು ಬಿಜೆಪಿ ಹಲವಾರು ವರ್ಷಗಳಿಂದ ಸತತವಾಗಿ ಪ್ರಯತ್ನ ನಡೆಸುತ್ತಿತ್ತು. ಇಂಧನ ಬೆಲೆ ಏರಿಕೆಯಾದರೆ, ಮತದಾರರು ಆಕ್ರೋಶಗೊಂಡು ಪಕ್ಷದ ಗೆಲುವಿನ ಸಾಧ್ಯತೆಗಳಿಗೆ ತೊಂದರೆಯಾಗಬಹುದು ಎನ್ನುವುದು ಲೆಕ್ಕಾಚಾರವಾಗಿತ್ತು. ಆದ್ದರಿಂದ, ಮಾರುಕಟ್ಟೆ ದರವನ್ನು ಆಧರಿಸಿ ಪೆಟ್ರೋಲ್ ಡೀಸೆಲ್ ದರಗಳು ಬದಲಾಗಬೇಕಿದ್ದರೂ, ಸರ್ಕಾರದ ಹಸ್ತಕ್ಷೇಪ ದರಗಳನ್ನು ಸ್ಥಿರವಾಗಿ ಇರಿಸಿತ್ತು.
ಆದರೆ, ಈ ಶಾಂತಿಗೆ ಅಪಾರ ಬೆಲೆ ತೆರಬೇಕಾಗಿ ಬಂದಿತ್ತು. ಬಹುತೇಕ ಪೆಟ್ರೋಲ್ ಪಂಪ್‌ಗಳನ್ನು ಕಾರ್ಯಾಚರಿಸುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬಹಳಷ್ಟು ನಷ್ಟ ಎದುರಿಸಿದವು. ಸರ್ಕಾರ ಇಂಧನ ತೆರಿಗೆಯನ್ನು ಕಡಿತಗೊಳಿಸಿದ ಬಳಿಕ, ಪ್ರತಿ ತಿಂಗಳು ಅಂದಾಜು 1.5 ಬಿಲಿಯನ್ ಡಾಲರ್ ನಷ್ಟ ಎದುರಿಸಬೇಕಾಗಿ ಬಂದಿತ್ತು. ಆದರೆ, ಬಿಜೆಪಿ ತಾನು ಗೆಲ್ಲಬೇಕೆಂದು ಶತ ಪ್ರಯತ್ನ ನಡೆಸಿದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲ ದಿನಗಳ ಬಳಿಕ, ಇಂಧನ ದರಗಳು ನಿಧಾನವಾಗಿ ಹೆಚ್ಚಾಗತೊಡಗಿದವು.
ಜಾಗತಿಕ ತೈಲ ಬೆಲೆಗಳು ಇಳಿಕೆ ಕಂಡ ಬಳಿಕವೂ ಭಾರತ ತನ್ನ ಇಂಧನ ಬೆಲೆಯನ್ನು ಹೆಚ್ಚೇ ಇರಿಸಿದೆ. ಇದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ತಮ್ಮ ನಷ್ಟವನ್ನು ಪರಿಹರಿಸಲು ನೆರವಾಯಿತು. ನಾವು ಪೆಟ್ರೋಲ್ ಪಂಪುಗಳಲ್ಲಿ ನೀಡುವ ಅರ್ಧ ಹಣ ತೆರಿಗೆಯೇ ಆಗಿರುವುದರಿಂದ, ಸರ್ಕಾರವೂ ತನ್ನ ಸ್ವಂತ ಖಜಾನೆಯನ್ನು ತುಂಬಿಸಲಾರಂಭಿಸಿ, ಕಷ್ಟಕರ ಸಮಯಗಳಿಗೆ ಸಜ್ಜಾಗತೊಡಗಿತು. ಆದರೆ, ಚುನಾವಣೆಗಳು ಹತ್ತಿರ ಇರದಿದ್ದರೂ ಮೋದಿ ಇಂಧನ ದರ ಏರಿಸದಿರುವ ನಿರ್ಧಾರ ಕೈಗೊಳ್ಳುತ್ತಿದ್ದರೇ? ಇದಕ್ಕೆ ಖಚಿತವಾಗಿ ಉತ್ತರಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರದ ನಡೆ ಕೆಲಸ ಮಾಡಿತು. ಇದು ಜನರಲ್ಲಿ ಆತಂಕವನ್ನು ತಡೆದು, ಹಣದುಬ್ಬರವನ್ನು ನಿಯಂತ್ರಿಸಿ, ಜನರು ಖರ್ಚು ಮಾಡುವುದನ್ನು ಮುಂದುವರಿಸುವಂತೆ ಮಾಡಿತು. ಜನರು ತಮ್ಮ ಹಣವನ್ನು ವೆಚ್ಚ ಮಾಡುವುದು ಅತ್ಯಂತ ಮುಖ್ಯವಾಗಿದ್ದು, ಗ್ರಾಹಕರ ಖರ್ಚೇ ಭಾರತದ ಆರ್ಥಿಕತೆಯ ಶೇ.60ರಷ್ಟು ಪಾಲು ಹೊಂದಿದೆ.
ಅಡುಗೆ ಅನಿಲ ಉತ್ಪಾದನೆ ಹೆಚ್ಚಳ
ಅದೃಷ್ಟ ಮತ್ತು ರಾಜಕಾರಣಗಳ ಆಚೆಗೆ, ಭಾರತ ಈ ಬಿಕ್ಕಟ್ಟನ್ನು ನೈಜ ಕೌಶಲಗಳ ಮೂಲಕ ನಿಭಾಯಿಸಿತು. ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಮೊದಲ ತಿಂಗಳಲ್ಲೇ ಎಲ್‌ಪಿಜಿ ಅಡುಗೆ ಅನಿಲ ಉತ್ಪಾದನೆಯನ್ನು ಶೇ.30 ಹೆಚ್ಚಿಸಿದವು. ಇದರ ಪರಿಣಾಮವಾಗಿ, ದೇಶಾದ್ಯಂತ ಅಡುಗೆ ಮನೆಗಳು ಸಮಸ್ಯೆಗೆ ಸಿಲುಕದೆ ಕಾರ್ಯಾಚರಿಸಿದವು. ಅಮೆರಿಕದ ನಿರ್ಬಂಧಗಳ ನಡುವೆಯೂ ರಷ್ಯನ್ ತೈಲ ಆಮದು ಮಾಡಿಕೊಳ್ಳಲು ಭಾರತಕ್ಕೆ ಇದ್ದ ವಿಶೇಷ ಅನುಮತಿಯ ಗಡುವು ಮುಕ್ತಾಯಗೊಳ್ಳುತ್ತಾ ಬಂತು. ಭಾರತೀಯ ರಾಜತಾಂತ್ರಿಕರು ಕ್ಷಿಪ್ರವಾಗಿ ಇದನ್ನು ವಿಸ್ತರಿಸಿದರು.
ಭಾರತದ ನೈಜ ಸಾಮರ್ಥ್ಯ ಇರುವುದು ಕಳೆದ ಹಲವಾರು ವರ್ಷಗಳಿಂದ ಮೌನವಾಗಿಯೇ ವೃದ್ಧಿಸುತ್ತಾ ಬಂದ ಶಕ್ತಿಯಲ್ಲಿ. ಕಳೆದ ಒಂದು ದಶಕದ ಅವಧಿಯಲ್ಲಿ, ಭಾರತ 27 ದೇಶಗಳಿಂದ ನಡೆಯುತ್ತಿದ್ದ ತನ್ನ ತೈಲ ಆಮದನ್ನು 41 ದೇಶಗಳಿಗೆ ಹೆಚ್ಚಿಸಿದೆ. ಪರಸ್ಪರ ಎದುರಾಳಿ ದೇಶಗಳೊಡನೆಯೂ ತಾನು ಸ್ನೇಹದಿಂದಿರುವ ಭಾರತದ ಹಳೆಯ ಅಭ್ಯಾಸ ಇಂದು ಉತ್ತಮ ಫಲ ನೀಡಿದೆ. ಭಾರತ ಅಮೆರಿಕ ಮತ್ತು ವೆನೆಜುವೆಲಾಗಳಿಂದ ತೈಲ ಖರೀದಿಸಿದೆ. ತನಗೆ ಸಾಧ್ಯವಾದಾಗಲೆಲ್ಲ ರಷ್ಯಾ ಮತ್ತು ಇರಾನ್‌ಗಳಿಂದಲೂ ತೈಲ ಖರೀದಿಸಿದೆ. ಹಲವಾರು ರೀತಿಯ ಕಚ್ಚಾ ತೈಲಗಳನ್ನು ಸಂಸ್ಕರಿಸಬಲ್ಲ ಸಮರ್ಥ ಸಂಸ್ಕರಣಾಗಾರಗಳನ್ನೂ ಭಾರತ ನಿರ್ಮಿಸಿದೆ. ತನ್ನ 70,000 ಕಿಲೋಮೀಟರ್ ವ್ಯಾಪ್ತಿಯ ಸಂಪೂರ್ಣ ರೈಲ್ವೇ ಮಾರ್ಗವನ್ನು ಭಾರತ ವಿದ್ಯುದೀಕರಿಸಿದೆ. 2030ರಲ್ಲಿ ಪೆಟ್ರೋಲ್‌ನಲ್ಲಿ ಶೇ.20 ಎಥೆನಾಲ್ ಬೆರೆಸುವ ಗುರಿಯನ್ನು ಭಾರತ ಐದು ವರ್ಷಗಳ ಮುಂಚಿತವಾಗಿ, 2025ರಲ್ಲೇ ಸಾಧಿಸಿದೆ.
ಜೂನ್ 17ರಂದು, ಅಮೆರಿಕ ಮತ್ತು ಇರಾನ್ ಕದನ ವಿರಾಮ ಘೋಷಿಸುವ ವೇಳೆಗಾಗಲೇ ಭಾರತ ತನ್ನ ಆರ್ಥಿಕತೆ ಮತ್ತು ಪ್ರಜೆಗಳನ್ನು ಉತ್ತಮ ರೀತಿಯಲ್ಲೇ ಕಾಪಾಡಿಕೊಂಡಿತ್ತು. ಆದರೆ ಈ ಕಥೆ ಇಲ್ಲಿಗೇ ಮುಗಿದಿಲ್ಲ. ಯುದ್ಧ ಪುನರಾರಂಭ ಆದ ಬೆನ್ನಲ್ಲೇ ಹೊರ್ಮುಸ್ ಜಲಸಂಧಿ ಮತ್ತೆ ಮುಚ್ಚಲ್ಪಟ್ಟಿದೆ. ತೈಲ ಬೆಲೆಗಳು ನಿಧಾನವಾಗಿ ಹೆಚ್ಚುತ್ತಿವೆ. ಭಾರತೀಯ ರೂಪಾಯಿ ಮತ್ತೊಮ್ಮೆ ಒತ್ತಡಕ್ಕೆ ಸಿಲುಕಿದೆ.
ಭಾರತ ಪ್ರತಿಯೊಂದು ಹೊಡೆತವನ್ನೂ ಹಗುರಗೊಳಿಸುವ ಸಲುವಾಗಿ ನಿರಂತರವಾಗಿ ಖರ್ಚು ಮಾಡುತ್ತಲೇ ಇರಲು ಸಾಧ್ಯವಿಲ್ಲ. ಇಲ್ಲಿನ ನೈಜ ಪಾಠ ಸರಳವಾಗಿದೆ. ಅದೃಷ್ಟವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಜಾಗರೂಕತೆಯಿಂದ ಯೋಜನೆ ರೂಪಿಸಿದರೆ ಅಪಾಯವನ್ನು ಎದುರಿಸಬಹುದು. ಇದೆಲ್ಲದರ ನಡುವೆ, ಮುಂದಿನ ಯುದ್ಧದ ಕಾರ್ಮೋಡ ಈಗಾಗಲೇ ದಿಗಂತದ ಅಂಚಿನಲ್ಲಿ ಗೋಚರಿಸುತ್ತಿದೆ.
ಗಿರೀಶ್ ಲಿಂಗಣ್ಣ ಹಿನ್ನೆಲೆ..
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣಾ ವಿಶ್ಲೇಷಕ, ಬಾಹ್ಯಾಕಾಶ, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])


Click it and Unblock the Notifications
