India vs England ODI: ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಏಕದಿನ ಸರಣಿ ಸೋಲಿಗೆ ಪ್ರಮುಖ ಕಾರಣ ಇವರೇ ನೋಡಿ
India vs England 3rd ODI: ಲಾರ್ಡ್ಸ್ ಮೈದಾನದಲ್ಲಿ ಭಾನುವಾರ (ಜುಲೈ 20) ನಡೆದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 27 ರನ್‌ಗಳಿಂದ ಸೋಲಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು. ರೋಹಿತ್ ಶರ್ಮಾ ಸಿಡಿಸಿದ ಶತಕ, ಕೊಹ್ಲಿ, ನಾಯಕ ಶುಭ್‌ಮನ್ ಗಿಲ್ ಅವರ ಭರ್ಜರಿ ಅರ್ಧಶತಕಗಳು ವ್ಯರ್ಥವಾದಂತಾಗಿವೆ. ಹಾಗಾದ್ರೆ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್ ಅವರ ಆಕ್ರಮಣಕಾರಿ ಆಟದಿಂದ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 387 ರನ್‌ಗಳನ್ನು ಕಲೆಹಾಕಿತು. ಬಳಿಕ ಭಾರತ ಇಂಗ್ಲೆಂಡ್ ನೀಡಿದ ಈ ಬೃಹತ್ ಗುರಿ ಹತ್ತಿರ ಬಂದರೂ ಗೆಲ್ಲಲು ಸಾಧ್ಯವಾಗದೆ ಸರಣಿ ಕೈಚೆಲ್ಲಿತು.

ರೋಹಿತ್, ಕೊಹ್ಲಿ, ಗಿಲ್ ಸ್ಫೋಟಕ ಆಟ ವ್ಯರ್ಥ
ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಈ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಈ ಸಮರದಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ 138 ರನ್ ಹಾಗೂ ವಿರಾಟ್ ಕೊಹ್ಲಿ (74) ಮತ್ತು ಶುಭ್‌ಮನ್ ಗಿಲ್ (77) ಅವರ ಅರ್ಧಶತಕಗಳ ಹೋರಾಟ ವ್ಯರ್ಥವಾಯಿತು.
138 ರನ್ ಚಚ್ಚಿದ ರೋಹಿತ್ ಶರ್ಮಾ
ಇಂಗ್ಲೆಂಡ್ ನೀಡಿದ್ದ 388 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ರೋಹಿತ್ ಶರ್ಮಾ ಕೇವಲ 110 ಎಸೆತಗಳಲ್ಲಿ 16 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 138 ರನ್ ಚಚ್ಚಿ ಏಕಾಂಗಿ ಹೋರಾಟ ನಡೆಸಿದರು. ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 74 ರನ್ ಗಳಿಸಿದರೆ, ನಾಯಕ ಗಿಲ್ 77 (84) ರನ್‌ಗಳ ಕಾಣಿಕೆ ನೀಡಿದರು. ಇನ್ನುಳಿದವರು 20 ರನ್‌ಗಳ ಗಡಿ ದಾಟಲಿಲ್ಲ.
ಸ್ಯಾಮ್ ಕರನ್ ಮಾರಕ ಬೌಲಿಂಗ್ ದಾಳಿ
ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಸ್ಯಾಮ್ ಕರನ್ 75 ರನ್ ನೀಡಿ 4 ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಜೋಫ್ರಾ ಆರ್ಚರ್, ಆದಿಲ್ ರಶಿದ್, ಜೇಕಬ್ ಬೆಥೆಲ್ ತಲಾ ಒಂದು ವಿಕೆಟ್ ಕಬಳಿಸಿ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಮಿಂಚಿದ ಡಕೆಟ್, ಬೆಥೆಲ್, ರೂಟ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು ಬೆನ್ ಡಕೆಟ್ ಆಕರ್ಷಕ (141 ರನ್) ಶತಕ ಮತ್ತು ಜೇಕಬ್ ಬೆಥೆಲ್ ಸ್ಫೋಟಕ (91 ರನ್), ಜೋ ರೂಟ್ (ಅಜೇಯ 74) ಅವರ ಅರ್ಧಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 387 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಮಿಂಚಿದ ಬೆಥೆಲ್ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಾರೆ. ಇವರ ಸ್ಪೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ಪ್ರದರ್ಶನ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.
ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು?
ಇನ್ನೂ ಟೀಮ್ ಇಂಡಿಯಾ ಪರ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾದರು. ಗುರ್ನೂರ್ ಬ್ರಾರ್ 10 ಓವರ್ ಬೌಲಿಂಗ್ ಎಸೆದು ಬರೋಬ್ಬರಿ 97 ರನ್ ಬಿಟ್ಟುಕೊಟ್ಟು ಟೀಮ್ ಇಂಡಿಯಾ ಪರ ದುಬಾರಿ ಬೌಲರ್ ಎನಿಸಿಕೊಂಡರು. ಉಳಿದಂತೆ ಪ್ರಿನ್ಸ್ ಯಾದವ್ 79/1, ಅರ್ಷದೀಪ್ ಸಿಂಗ್ 72, ಪ್ರಸಿದ್ಧ್ ಕೃಷ್ಣ 69/2, ಅಕ್ಷರ್ ಪಟೇಲ್ 61 ರನ್ ಬಿಟ್ಟುಕೊಟ್ಟರು. ಹೀಗೆ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟು ತಂಡದ ಸೋಲಿಗೆ ಕಾರಣರಾದರು.


Click it and Unblock the Notifications
