ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನಾಕಾರರಿಗೆ ಉಚಿತ ತೆಂಗಿನಕಾಯಿ ಹೋಳು ಹಂಚಿದ ವ್ಯಕ್ತಿ: ಮಾನವೀಯತೆಗೆ ನೆಟ್ಟಿಗರ ಸಲಾಂ
ಮಾನವೀಯ ನೆಲೆಯಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳು ಕೆಲವೊಮ್ಮೆ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇತರರಿಗೆ ಸಹಾಯ ಮಾಡಬೇಕೆಂದು ನಿಸ್ವಾರ್ಥ ಮನಸ್ಸಿನಿಂದ ಮಾಡುವ ಸಣ್ಣ ಕೆಲಸವಾದ್ರೂ ಕೂಡ ಅದು ಯಾವಾಗಲೂ ಜನರ ಹೃದಯವನ್ನ ಗೆಲ್ಲುತ್ತದೆ. ಪ್ರಸ್ತುತ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಪ್ರತಿಭಟನಾ ತೊಡಗಿದ ಜನರಿಗೆ ಸಾಮಾನ್ಯ ವ್ಯಕ್ತಿಯೊಬ್ಬರು ತಮ್ಮ ಕೈಲಾದ ಸಹಾಯ ಮಾಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ದೆಹಲಿಯ ಜಂತರ್ ಮಂತರ್ ಅನೇಕ ಹೋರಾಟಗಳಿಗೆ, ಪ್ರತಿಭಟನೆಗಳಿಗೆ ಮತ್ತು ಧರಣಿಗಳಿಗೆ ಸಾಕ್ಷಿಯಾಗಿದೆ. ಪ್ರಸ್ತುತ ಅಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನಾ ಸ್ಥಳದಲ್ಲಿ ನೆರೆದಿದ್ದ ನೂರಾರು ಪ್ರತಿಭಟನಾಕಾರರಿಗೆ ವ್ಯಕ್ತಿಯೊಬ್ಬರು ತೆಂಗಿನಕಾಯಿ ಹೋಳುಗಳನ್ನು ನೀಡುತ್ತಿರುವ ವಿಡಿಯೋದಲ್ಲಿ ಕಂಡುಬಂದಿದೆ. ಜಮಾಲ್ ಅಶ್ರಫ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

"ಬಡವರ ಹೃದಯ ನಿಜಕ್ಕೂ ತುಂಬಾ ದೊಡ್ಡದಾಗಿರುತ್ತದೆ" (ಗರೀಬ್ ಇನ್ಸಾನ್ ಕಾ ದಿಲ್ ವಾಕೇ ಹಿ ಬಹುತ್ ಬಡಾ ಹೋತಾ ಹೈ) ಎಂಬ ಕ್ಯಾಪ್ಷನ್ ನೀಡಿ ಈ ವಿಡಿಯೋ ಒಂದನ್ನಾ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಇದು ಭಾರತದ ನಿಜವಾದ ಸೌಂದರ್ಯ ಮತ್ತು ಮಾನವೀಯತೆಯನ್ನ ಇಡೀ ಜಗತ್ತಿಗೆ ಪರಿಚಯಿಸುತ್ತಿದೆ. ಊಟ, ನೀರಿಲ್ಲದೆ, ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಜನರಿಗೆ ಆ ಅಪರಿಚಿತ ವ್ಯಕ್ತಿ ತನ್ನ ಸ್ವಂತ ಖರ್ಚಿನಲ್ಲಿ ನಿಸ್ವಾರ್ಥ ಭಾವನೆಯಿಂದ ಆಹಾರ ನೀಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ವೈರಲ್ ವಿಡಿಯೋ
ಈ ವೈರಲ್ ವಿಡಿಯೋದಲ್ಲಿ, ಆ ವ್ಯಕ್ತಿ ಜನದಟ್ಟಣೆಯ ನಡುವೆ ನಡೆದಾಡುತ್ತಾ, ಅಲ್ಲಿ ಸೇರಿದ್ದ ಪ್ರತಿಯೊಬ್ಬರಿಗೂ ಒಂದೊಂದು ತೆಂಗಿನಕಾಯಿಯ ತುಂಡುಗಳನ್ನು ನೀಡುತ್ತಿರುವುದನ್ನು ನೋಡಬಹುದು. ಆತ ಯಾರು, ಎಲ್ಲಿಂದ ಬಂದಿದ್ದಾರೆ ಅಥವಾ ಈ ರೀತಿ ಉಚಿತವಾಗಿ ಆಹಾರ ಹಂಚಲು ಕಾರಣವೇನು ಎಂಬ ಬಗ್ಗೆ ಯಾವುದೇ ಮಾಹಿತಿಗಳು ವಿಡಿಯೋದಲ್ಲಿ ಲಭ್ಯವಿಲ್ಲ. ಆದರೆ, ಅವರ ಈ ಕೆಲಸ ಆನ್‌ಲೈನ್‌ನಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಕಷ್ಟದಲ್ಲಿರುವವರಿಗೆ ನೆರವಾಗಲು ಶ್ರೀಮಂತಿಕೆಯೇ ಬೇಕಿಲ್ಲ, ಇತರರ ಬಗ್ಗೆ ಕಾಳಜಿ ವಹಿಸುವ ದೊಡ್ಡ ಮನಸ್ಸು ಇದ್ದರೆ ಸಾಕು ಎಂಬುದನ್ನು ಈ ವ್ಯಕ್ತಿ ತಮ್ಮ ನಡೆಯ ಮೂಲಕ ನಿರೂಪಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಆತನ ದಯೆ, ಕರುಣೆ ಮತ್ತು ಉದಾರತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. "ಇದೇ ನಮ್ಮ ಭಾರತದ ನಿಜವಾದ ಸೌಂದರ್ಯ" ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು "ಬಡವರ ಮನಸ್ಸು ಯಾವಾಗಲೂ ದೊಡ್ಡದು" ಎಂದು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು, "ನಿಮಗೆ ನನ್ನದೊಂದು ಸಲಾಂ ಸರ್, ಇದು ನಿಜಕ್ಕೂ ಒಳ್ಳೆಯ ಕೆಲಸ" ಎಂದು ಶ್ಲಾಘಿಸಿದ್ದಾರೆ. ಇನ್ನು ಕೆಲವರು, ದಯೆ ಮತ್ತು ಕರುಣೆ ಎಂಬುದು ನಾವು ಎಂದಿಗೂ ನಿರೀಕ್ಷಿಸದ ಸ್ಥಳಗಳಿಂದಲೇ ಒಲಿದು ಬರುತ್ತದೆ ಎಂಬುದಕ್ಕೆ ಈ ಘಟನೆ ಒಂದು ಒಳ್ಳೆಯ ಉದಾಹರಣೆ ಎಂದಿದ್ದಾರೆ. "ಎಲ್ಲರ ಹೃದಯವೂ ಇಷ್ಟೊಂದು ವಿಶಾಲವಾಗಿರಲು ಸಾಧ್ಯವಿಲ್ಲ, ಇದೆ ನಮ್ಮ ಯೆಹೀ ತೋ ಹೈ ಯಾರ್ ಹಮಾರಾ ಇಂಡಿಯಾ" ಎಂದು ಮತ್ತೊಬ್ಬರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸಮಾಜದಲ್ಲಿ ನಾವು ಎಷ್ಟೇ ಮುಂದುವರಿದಿದ್ದರೂ, ಇಂತಹ ಸಣ್ಣ ಸಹಾಯಗಳು ಮತ್ತು ಮಾನವೀಯತೆಯ ಕೆಲಸಗಳು ಮನುಷ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಪ್ರತಿಭಟನೆಯಂತಹ ಉದ್ವಿಗ್ನ ಪರಿಸ್ಥಿತಿಯಲ್ಲೂ, ಒಬ್ಬರನ್ನೊಬ್ಬರು ನೋಡಿಕೊಳ್ಳುವ, ಆರೈಕೆ ಮಾಡುವ ಇಂತಹ ಪ್ರವೃತ್ತಿ ನಿಜಕ್ಕೂ ಒಳ್ಳೆದು.


Click it and Unblock the Notifications
