ವೈಭವ್ ಸೂರ್ಯವಂಶಿ ವಿಚಾರದಲ್ಲಿ ಕಳ್ಳ ನೆಪಗಳನ್ನ ಬಿಡಿ: ಟೀಮ್ ಇಂಡಿಯಾ ಹೆಡ್ ಕೋಚ್ ಗಂಭೀರ್‌ಗೆ ಮಾಜಿ ಕ್ರಿಕೆಟರ್ ಕ್ಲಾಸ್
ಇತ್ತೀಚೆಗಷ್ಟೇ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತದ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದ ಮೂಲಕ ಇಡೀ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗುವಂತೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚುವ ಮೂಲಕ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗಿಸಿದ್ದಾರೆ. ಈ ಐತಿಹಾಸಿಕ ಇನ್ನಿಂಗ್ಸ್ ಬೆನ್ನಲ್ಲೇ ವೈಭವ್ ಅವರಿಗೆ ಭಾರತ ಸೀನಿಯರ್ ತಂಡದಲ್ಲಿ (ವಿಶೇಷವಾಗಿ ಏಕದಿನ ಹಾಗೂ ಟಿ20 ತಂಡಗಳಲ್ಲಿ) ಖಾಯಂ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿದೆ.

ಇದೀಗ 1983ರ ವಿಶ್ವಕಪ್ ವಿಜೇತ ಕೃಷ್ಣಮಾಚಾರಿ ಶ್ರೀಕಾಂತ್ ಅವರು ವೈಭವ್ ಸೂರ್ಯವಂಶಿ ವಿಷಯದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕೋಚ್ ಗೌತಮ್ ಗಂಭೀರ್ ವಿರುದ್ಧ ಶ್ರೀಕಾಂತ್ ಆಕ್ರೋಶ
ಸದ್ಯ ಭಾರತ ಸೀನಿಯರ್ ಟಿ20 ತಂಡದಲ್ಲಿ 10 ಪಂದ್ಯಗಳನ್ನಾಡಿರುವ ವೈಭವ್, ತಂಡದ ಒಳಗೆ-ಹೊರಗೆ ಓಡಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ತಂಡ ಲಭ್ಯವಿದ್ದಾಗ ಟೀಮ್ ಮ್ಯಾನೇಜ್‌ಮೆಂಟ್ ಅಗ್ರಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶ್ರೀಕಾಂತ್, ಗಂಭೀರ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
'ನಾವು ಈಗ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ವೈಭವ್ ಅವರನ್ನು ತಕ್ಷಣವೇ ಬಿಹಾರ ತಂಡದ ನಾಯಕರನ್ನಾಗಿ ಮಾಡಲಾಯಿತು. ದುಲೀಪ್ ಟ್ರೋಫಿಯಲ್ಲಿ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿತ್ತು ಮತ್ತು ಇಶಾನ್ ಕಿಶನ್ ಜೊತೆಗೂಡಿ ಅವರು ಪ್ರಶಸ್ತಿಯನ್ನೂ ಗೆದ್ದರು. ದೇಶೀಯ ಮಟ್ಟದಲ್ಲಿ ಅವರಿಗೆ ಅಂತಹ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಆದರೆ ಗೌತಮ್ ಗಂಭೀರ್ ಮಾತ್ರ ಈ ವಿಚಾರದಲ್ಲಿ ಕಿವುಡರಂತೆ ವರ್ತಿಸುತ್ತಿದ್ದಾರೆ.' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ತಯಾರಿ ಮಾಡುತ್ತಿದ್ದೇವೆ ಎಂಬ ನೆಪ ಬಿಡಿ ಸಾಕು'
ಆಟಗಾರನನ್ನು ಇನ್ನೂ ಪಳಗಿಸಬೇಕು ಎಂಬ ನೆಪವೊಡ್ಡಿ ಅವಕಾಶ ನಿರಾಕರಿಸುತ್ತಿರುವ ಮ್ಯಾನೇಜ್‌ಮೆಂಟ್ ಧೋರಣೆ ವಿರುದ್ಧ ಕೆಂಡಕಾರಿದ್ದಾರೆ. 'ಟೀಮ್ ಮ್ಯಾನೇಜ್‌ಮೆಂಟ್ ಅವನನ್ನು ತಯಾರಿ ಮಾಡಬೇಕು ಎಂದು ಹೇಳುತ್ತಾ ಒಂದು ಆಟ ಆಡುತ್ತಿದ್ದರೆ, ವೈಭವ್ ಮೈದಾನದಲ್ಲಿ ತನ್ನದೇ ಆದ ವಿಭಿನ್ನ ಆಟ ಆಡುತ್ತಿದ್ದಾನೆ. ಆಯ್ಕೆ ನಮ್ಮ ಕೈಯಲ್ಲಿಲ್ಲ ಎಂದು ನೀವು ಜಾರಿಕೊಳ್ಳುವಂತಿಲ್ಲ. ಗೌತಮ್ ಗಂಭೀರ್ ಅವರೇ, ಆತ ಚೆಂಡನ್ನು ಬಾರಿಸುತ್ತಿರುವ ರೀತಿಯನ್ನು ಒಮ್ಮೆ ನೋಡಿ. ಈ ರೀತಿ ಯಾರಿಂದಲೂ ಬ್ಯಾಟ್ ಬೀಸಲು ಸಾಧ್ಯವಿಲ್ಲ,' ಎಂದು ಶ್ರೀಕಾಂತ್ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
'ಡಿವಿಲಿಯರ್ಸ್, ಗೇಲ್ ಕೂಡ ಹೀಗೆ ಆಡಿರಲಿಲ್ಲ'
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ ಶ್ರೀಕಾಂತ್, 'ಇದು ಎಂತಹ ಆಟ? ಯಾರಾದರೂ ಚೆಂಡನ್ನು ಈ ರೀತಿ ಬಾರಿಸುವುದನ್ನು ನೀವು ನೋಡಿದ್ದೀರಾ? ಮೈದಾನದ ಎಲ್ಲಾ ಮೂಲೆಗಳಿಗೂ ಆತ ಶಾಟ್‌ಗಳನ್ನು ಹೊಡೆಯುತ್ತಾನೆ. ಇವನು ಯಾವ ತಲೆಮಾರಿನ ಆಟಗಾರ? ಇಷ್ಟೊಂದು ಶಕ್ತಿ ಮತ್ತು ಟೈಮಿಂಗ್ ಎಲ್ಲಿಂದ ಬರುತ್ತದೆ? ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಕೂಡ ಈ ರೀತಿ ಬ್ಯಾಟ್ ಬೀಸಿದ್ದನ್ನು ನಾನು ನೋಡಿಲ್ಲ,' ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾದರೂ ವೈಭವ್‌ಗೆ ಸೀನಿಯರ್ ತಂಡದಲ್ಲಿ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications
