₹6 ಕೋಟಿ ಬಿಸಿನೆಸ್, ₹2 ಕೋಟಿ ವಿಮೆ ಮೇಲೆ ಕಣ್ಣು: ಗಂಡ, ಮಗನಿಗೆ ವರ್ಷವಿಡೀ ಸ್ಲೋ ಪಾಯ್ಸನ್ ಕೊಟ್ಟ ಪತ್ನಿ
ಗಾಜಿಯಾಬಾದ್: ಹಣ ಮತ್ತು ಆಸ್ತಿಯ ವ್ಯಾಮೋಹ ಮನುಷ್ಯನನ್ನ ಎಷ್ಟು ಕ್ರೂರಿಯನ್ನಾಗಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಆಘಾತಕಾರಿ ಈ ಘಟನೆಯೇ ಉದಾಹರಣೆ. ಪತಿಯ ವಾರ್ಷಿಕ 6 ಕೋಟಿ ರೂಪಾಯಿ ವಹಿವಾಟಿನ ಸಾರಿಗೆ ಉದ್ಯಮ ಹಾಗೂ 2 ಕೋಟಿ ರೂಪಾಯಿ ಜೀವ ವಿಮೆ ಹಣವನ್ನ ತನ್ನದಾಗಿಸಿಕೊಳ್ಳುವ ಸಲುವಾಗಿ, ಪತ್ನಿಯೇ ಕಳೆದ ಒಂದು ವರ್ಷದಿಂದ ಪತಿ, ಸ್ವಂತ ಮಗ ಹಾಗೂ ಸೋದರಳಿಯನ ಆಹಾರದಲ್ಲಿ ಸ್ಲೋ ಪಾಯಿಸನ್ ಬೆರೆಸಿ ಕೊಲ್ಲಲು ಯತ್ನಿಸಿದ್ದಾಳೆ.
ಈ ಪ್ರಕರಣದ ಪ್ರಮುಖ ಆರೋಪಿ ಪತ್ನಿ ರೇಣು (42) ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದಾರೆ.

ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ!
ಗಾಜಿಯಾಬಾದ್‌ನ ವಸುಂಧರಾ ನಿವಾಸಿಯಾದ ಉದ್ಯಮಿ ಸುಶೀಲ್ ಭಟ್ನಾಗರ್ (45) ಕಳೆದ ವರ್ಷ ತೀವ್ರ ಅಸ್ವಸ್ಥಗೊಂಡು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರ ರಕ್ತ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಸೀಸದ ವಿಷ ಇರುವುದು ಪತ್ತೆಯಾಗಿತ್ತು. ಚೇತರಿಸಿಕೊಂಡು ಮನೆಗೆ ಮರಳಿದ ಬಳಿಕವೂ ಅವರ ಆರೋಗ್ಯ ಮತ್ತೆ ಹದಗೆಟ್ಟು ಎರಡನೇ ಬಾರಿ ಆಸ್ಪತ್ರೆ ಸೇರಬೇಕಾಯಿತು.
ಇದರ ಬೆನ್ನಲ್ಲೇ ಸುಶೀಲ್ ಅವರ 16 ವರ್ಷದ ಪುತ್ರ ವಂಶ್ ಭಟ್ನಾಗರ್ ಹಾಗೂ 21 ವರ್ಷದ ಸೋದರಳಿಯ ದೇವ್ ಭಟ್ನಾಗರ್ ಕೂಡ ಇದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ವೈದ್ಯಕೀಯ ವರದಿಯಲ್ಲೂ ಸೀಸದ ಅಂಶ ಅಧಿಕವಾಗಿರುವುದು ದೃಢಪಟ್ಟಿತು. ಅಷ್ಟೇ ಅಲ್ಲ, ಸುಶೀಲ್ ಅವರ 12 ವರ್ಷದ ಪುತ್ರಿ ಕೂಡ ತಾಯಿ ಆಹಾರದ ಮೇಲೆ ಏನೋ ಸಿಂಪಡಿಸುವುದನ್ನ ನೋಡಿದ್ದಾಗಿ ಹೇಳಿದ್ದಳು. ಇದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದರು.
₹6 ಕೋಟಿ ಉದ್ಯಮ ಮತ್ತು ₹2 ಕೋಟಿ ವಿಮೆಗಾಗಿ ಭಯಾನಕ ಸಂಚು!
ಪತಿ ಸುಶೀಲ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ನವೆಂಬರ್ 23ರಂದು ದೆಹಲಿಯ ಜಿಲ್ಮಿಲ್ ಕಾಲೋನಿಯಲ್ಲಿರುವ ಆಕೆಯ ಸಹೋದರಿಯ ಮನೆಯಿಂದ ಆರೋಪಿ ರೇಣುವನ್ನ ಬಂಧಿಸಿದ್ದಾರೆ. ಇಂದಿರಾಪುರಂ ಎಸಿಪಿ ಅಭಯ್ ರಾಜೇಂದ್ರ ದಾಗಾ ಹಾಗೂ ಡಿಸಿಪಿ ರಿಜುಲ್ ಅವರ ಮಾಹಿತಿಯಂತೆ, ವಿಚಾರಣೆ ವೇಳೆ ರೇಣು ತನ್ನ ಕೃತ್ಯವನ್ನ ಒಪ್ಪಿಕೊಂಡಿದ್ದಾಳೆ.
ಪತಿಯ ಟ್ರಾವೆಲ್ ಏಜೆನ್ಸಿಯನ್ನ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯುವುದು ಹಾಗೂ ಪತಿಯ ಹೆಸರಿನಲ್ಲಿದ್ದ 2 ಕೋಟಿ ರೂ. ಜೀವ ವಿಮೆ ಹಣವನ್ನ ಪಡೆಯುವುದು ಆಕೆಯ ಮುಖ್ಯ ಉದ್ದೇಶವಾಗಿತ್ತು. ಇದಕ್ಕೆ ನಾಮಿನಿ ಕೂಡ ಆಕೆಯೇ ಆಗಿದ್ದಳು. ಉದ್ಯಮದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಕಾರಣ ಸೋದರಳಿಯ ದೇವ್‌ನನ್ನ ಹಾಗೂ ಜಗಳವಾದಾಗಲೆಲ್ಲಾ ತಂದೆಯ ಪರ ನಿಲ್ಲುತ್ತಿದ್ದ ಕಾರಣ ಸ್ವಂತ ಮಗ ವಂಶ್‌ನನ್ನೂ ಮುಗಿಸಲು ಆಕೆ ಆಹಾರದಲ್ಲಿ ಸೀಸ ಬೆರೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇತರರ ಪಾತ್ರದ ಬಗ್ಗೆ ತನಿಖೆ
ಸದ್ಯ ಈ ಉತ್ತರ ಪ್ರದೇಶ ಕ್ರೈಂ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಆರೋಪಿ ರೇಣುವನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆಗೆ ಸೀಸದ ವಿಷ ಎಲ್ಲಿಂದ ಸಿಕ್ಕಿತು ಹಾಗೂ ಈ ಸಂಚಿನಲ್ಲಿ ಆಕೆಯ ಜಿಮ್ ಟ್ರೈನರ್ ಬಬ್ಲು ಮತ್ತು ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಕುಟುಂಬಸ್ಥರ ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.




Click it and Unblock the Notifications
