ಚಲಿಸುತ್ತಿದ್ದ ಬೈಕ್‌ನಲ್ಲೇ ಕುಳಿತು ಒಂದೇ ಕೈಯಲ್ಲಿ ಕ್ಯಾಚ್; ರಾತ್ರೋರಾತ್ರಿ ಸ್ಟಾರ್ ಆದ ಯುವಕನಿಗೆ ಸಿಕ್ತು ಭರ್ಜರಿ ಗಿಫ್ಟ್
ಕ್ರಿಕೆಟ್ ಮೈದಾನದಲ್ಲಿ ಫೀಲ್ಡರ್‌ಗಳು ಡೈವ್ ಮಾಡಿ ಕ್ಯಾಚ್ ಹಿಡಿಯುವುದನ್ನು ನಾವು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಆದರೆ ಮೈದಾನದ ಹೊರಗೆ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್‌ನ ಹಿಂಬದಿ ಸವಾರನೊಬ್ಬ, ಸಿಕ್ಸರ್‌ಗೆ ಹೋದ ಚೆಂಡನ್ನು ಒಂದೇ ಕೈಯಲ್ಲಿ ಸಲೀಸಾಗಿ ಹಿಡಿದು ಇಡೀ ವಿಶ್ವವನ್ನೇ ಬೆರಗುಗೊಳಿಸಿದ್ದಾನೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಸ್ವಾತ್ ಪ್ರೀಮಿಯರ್ ಲೀಗ್ (Swat Premier League) ಟೂರ್ನಿಯ ವೇಳೆ ನಡೆದ ಈ ಅಪರೂಪದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಹರಡಿದೆ. ಇದನ್ನು ನೋಡಿದ ನೆಟ್ಟಿಗರು 'ಕ್ಯಾಚ್ ಆಫ್ ದಿ ಸೆಂಚುರಿ' ಎಂದು ಬಣ್ಣಿಸುತ್ತಿದ್ದಾರೆ.

ಬೈಕ್ ಮೇಲೇ ಕುಳಿತುಕೊಂಡೇ ಕ್ಯಾಚ್ ಹಿಡಿದ ಮೆಹ್ರಾನ್ ಖಾನ್..
ಈ ಸಾಹಸ ಮಾಡಿದ ಯುವಕನ ಹೆಸರು ಮೆಹ್ರಾನ್ ಖಾನ್. ಪಾಕಿಸ್ತಾನದ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಯ ಉದ್ಯೋಗಿಯಾಗಿರುವ ಮರ್ಘಜಾರ್ ನಿವಾಸಿ ಮೆಹ್ರಾನ್, ಕೆಲಸ ಮುಗಿಸಿ ಸ್ನೇಹಿತನ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ಮಿಂಗೋರಾದ ಗ್ರಾಸಿ ಮೈದಾನದ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದಾಗ, ಸ್ವಾತ್ ಸ್ಟ್ರೈಕರ್ಸ್ ಮತ್ತು ಜಿಕೆಆರ್ ದಿರ್ ತಂಡಗಳ ನಡುವೆ ಟೇಪ್-ಬಾಲ್ ಪಂದ್ಯ ನಡೆಯುತ್ತಿತ್ತು.
ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಬ್ಯಾಟರ್ ಅಬ್ರಾರ್ ಲಾಲಾ ಬಾರಿಸಿದ ಭರ್ಜರಿ ಸಿಕ್ಸರ್ ಮೈದಾನದ ಬೌಂಡರಿ ದಾಟಿ ರಸ್ತೆಯತ್ತ ಬಂತು. ತಾನೂ ಕ್ರಿಕೆಟ್ ಪ್ರೇಮಿಯಾಗಿರುವ ಮೆಹ್ರಾನ್, ಚೆಂಡು ತಮ್ಮತ್ತಲೇ ಬರುತ್ತಿರುವುದನ್ನು ನೋಡಿದರು. ಕೂಡಲೇ ಬೈಕ್ ಚಲಾಯಿಸುತ್ತಿದ್ದ ಸ್ನೇಹಿತನಿಗೆ, 'ತಲೆ ತಗ್ಗಿಸು, ನಾನು ಆ ಚೆಂಡನ್ನು ಹಿಡಿಯುತ್ತೇನೆ' ಎಂದು ಕೂಗಿ ಹೇಳಿ, ಚಲಿಸುತ್ತಿರುವ ಬೈಕ್‌ನಲ್ಲೇ ಒಂದೇ ಕೈ ಚಾಚಿ ಚೆಂಡನ್ನು ಹಿಡಿದೇಬಿಟ್ಟರು. 'ನಾನು ಕ್ಯಾಚ್ ಹಿಡಿಯಲು ಪ್ರಯತ್ನಿಸಿದೆನಾದರೂ ಅದು ಕೈಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ದೇವರ ದಯೆಯಿಂದ ಸಾಧ್ಯವಾಯಿತು,' ಎಂದು ಮೆಹ್ರಾನ್ ಸಂತಸ ಹಂಚಿಕೊಂಡಿದ್ದಾರೆ.
ರಾತ್ರೋರಾತ್ರಿ ವೈರಲ್ ವಿಡಿಯೋ; 10,000 ರೂಪಾಯಿ ಬಹುಮಾನ
ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಸೇರಿದಂತೆ ಹಲವು ದಿಗ್ಗಜರು ಈ ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ವಿಡಿಯೋ ವೈರಲ್ ಆಗಿ ತಾವು ಇಷ್ಟೊಂದು ಪ್ರಸಿದ್ಧಿಯಾಗುತ್ತೇನೆಂದು ಮೆಹ್ರಾನ್ ಊಹಿಸಿರಲಿಲ್ಲವಂತೆ.
ಈ ಅದ್ಭುತ ಕ್ಯಾಚ್‌ಗೆ ಮೆಚ್ಚುಗೆ ಸೂಚಿಸಿರುವ ಸ್ವಾತ್ ಪ್ರೀಮಿಯರ್ ಲೀಗ್ ಆಯೋಜಕರು, ಪಾಕಿಸ್ತಾನ ಸೇನೆಯ ನೆರವಿನೊಂದಿಗೆ ಮೆಹ್ರಾನ್ ಖಾನ್ ಅವರಿಗೆ ಸ್ಥಳದಲ್ಲೇ 10,000 ಪಾಕಿಸ್ತಾನಿ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಚೆಂಡನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ: ಮೆಹ್ರಾನ್ ಸ್ಪಷ್ಟನೆ
ವಿಡಿಯೋ ನೋಡಿದ ಕೆಲವು ನೆಟ್ಟಿಗರು, ಮೆಹ್ರಾನ್ ಕ್ಯಾಚ್ ಹಿಡಿದ ಬಳಿಕ ಬಾಲ್ ಸಮೇತ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, 'ನಾನು ಚೆಂಡನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ, ತಕ್ಷಣವೇ ಮೈದಾನದೊಳಗೆ ಹೋಗಿ ಆಯೋಜಕರಿಗೆ ಕೊಟ್ಟಿದ್ದೇನೆ,' ಎಂದು ತಿಳಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಸ್ವಾತ್ ಸ್ಟ್ರೈಕರ್ಸ್ ತಂಡವು ಜಿಕೆಆರ್ ದಿರ್ ವಿರುದ್ಧ 34 ರನ್‌ಗಳ ಜಯ ಸಾಧಿಸಿತು.
I have watched this half a dozen times already. What timing from the deep 'on-the-bike' fielder!!!Truly one-in-a-billion catch!!!! #Cricket https://t.co/QaHdeJxmiA
— Rizwan Rehmat (@dohagames) November 25, 2026


Click it and Unblock the Notifications
