ಆಫೀಸ್ ಮುಗಿಸಿ ತೆಂಗಿನಕಾಯಿ ಮಾರಾಟ, ₹1.17 ಕೋಟಿ ಗಳಿಕೆ! ಐಟಿ ನೋಟಿಸ್ ವಿರುದ್ಧ ಮಹಿಳಾ ಉದ್ಯೋಗಿಗೆ ಸಿಕ್ತು ಬಿಗ್ ರಿಲೀಫ್!
ಚೆನ್ನೈ: ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ತೆಂಗಿನಕಾಯಿ ವ್ಯಾಪಾರ ನಡೆಸಿ ಬರೋಬ್ಬರಿ 1.17 ಕೋಟಿ ರೂ. ನಗದು ಗಳಿಸಿದ್ದ ತಮಿಳುನಾಡಿನ ಮಹಿಳಾ ಉದ್ಯೋಗಿಯೊಬ್ಬರಿಗೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ದೊಡ್ಡ ರಿಲೀಫ್ ನೀಡಿದೆ.
ಬ್ಯಾಂಕ್ ಖಾತೆಯಲ್ಲಿ ಜಮೆಯಾಗಿದ್ದ ಇಷ್ಟು ದೊಡ್ಡ ಮೊತ್ತವನ್ನ ಲೆಕ್ಕವಿಲ್ಲದ ಹಣ ಎಂದು ಪರಿಗಣಿಸಿ ತೆರಿಗೆ ವಿಧಿಸಿದ್ದ ಆದಾಯ ತೆರಿಗೆ ಇಲಾಖೆಯ ಕ್ರಮವನ್ನ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಉದ್ಯೋಗಿಗೆ ಭಾಗಶಃ ಗೆಲುವು ಸಿಕ್ಕಿದೆ. ಈ ಪ್ರಕರಣವು ಸೈಡ್ ಬಿಸಿನೆಸ್ ಮಾಡುವ ಸಂಬಳದಾರರಿಗೆ ಮಹತ್ವದ ಪಾಠವಾಗಿದೆ.

ಆಫೀಸ್ ಕೆಲಸದ ಬಳಿಕ ತೆಂಗಿನಕಾಯಿ ವ್ಯಾಪಾರ
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ನಿವಾಸಿಯಾದ ಅನಿತಾ ಅವರು ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಯೊಂದರಲ್ಲಿ ವಾರ್ಷಿಕ 25 ಲಕ್ಷ ರೂಪಾಯಿ ಸ್ಯಾಲರಿಗೆ ಕೆಲಸ ಮಾಡುತ್ತಿದ್ದರು. ಆಫೀಸ್ ಅವಧಿ ಮುಗಿದ ಬಳಿಕ ಸಮಯವನ್ನ ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದ ಅವರು ತೆಂಗಿನಕಾಯಿ ಮಾರಲು ಆರಂಭಿಸಿದರು.
ರೈತರಿಂದ ತೆಂಗಿನ ತೋಟಗಳನ್ನ ಗುತ್ತಿಗೆಗೆ ಪಡೆದು, ಕೂಲಿ ಕಾರ್ಮಿಕರ ಮೂಲಕ ಕಾಯಿ ಕೀಳಿಸುವುದು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಂದ ನೇರವಾಗಿ ತೆಂಗಿನಕಾಯಿ ಖರೀದಿಸಿ, ಸಿಪ್ಪೆ ಸುಲಿದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.
2020-21ರ ಮೌಲ್ಯಮಾಪನ ವರ್ಷದಲ್ಲಿ ಅವರು ತಮ್ಮ ಬ್ಯಾಂಕ್ ಖಾತೆಗೆ ಒಟ್ಟು 1.177 ಕೋಟಿ ರೂಪಾಯಿ ನಗದು ಠೇವಣಿ ಮಾಡಿದ್ದರು. ವಾರ್ಷಿಕ 25 ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗಿಯ ಖಾತೆಗೆ ಇಷ್ಟು ದೊಡ್ಡ ಮೊತ್ತದ ಹಣ ಜಮೆಯಾಗಿದ್ದನ್ನ ಗಮನಿಸಿದ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆಗೆ ನೋಟಿಸ್ ಜಾರಿ ಮಾಡಿದರು.
ಆರಂಭದಲ್ಲಿ ಇದನ್ನ ಕೃಷಿ ಆದಾಯವೆಂದು ಭಾವಿಸಿದ್ದ ಅನಿತಾ, ನಂತರ 2023ರ ಮಾರ್ಚ್ 16ರಂದು ಪರಿಷ್ಕೃತ ಐಟಿಆರ್ ಸಲ್ಲಿಸಿ, 1.277 ಕೋಟಿ ರೂಪಾಯಿ ವಹಿವಾಟು ಹಾಗೂ ಸೆಕ್ಷನ್ 44ಎಡಿ ಅಡಿಯಲ್ಲಿ ಶೇ. 8ರಂತೆ 10.216 ಲಕ್ಷ ರೂಪಾಯಿ ವ್ಯಾಪಾರದ ಆದಾಯವನ್ನ ಘೋಷಿಸಿದ್ದರು.
ಆದರೆ, ಸರಿಯಾದ ಲೆಕ್ಕಪತ್ರ ಹಾಗೂ ಬಿಲ್‌ಗಳಿಲ್ಲ ಎಂಬ ಕಾರಣ ನೀಡಿ ಐಟಿ ಅಧಿಕಾರಿಗಳು ಇಡೀ 1.177 ಕೋಟಿ ರೂ.ಗಳನ್ನು ಸೆಕ್ಷನ್ 69ಎ ಅಡಿಯಲ್ಲಿ ಲೆಕ್ಕವಿಲ್ಲದ ಹಣ ಎಂದು ಪರಿಗಣಿಸಿ ಭಾರಿ ತೆರಿಗೆ ವಿಧಿಸಿದ್ದರು.
ಮಹಿಳಾ ಉದ್ಯೋಗಿಗೆ ರಿಲೀಫ್ ಸಿಕ್ಕಿದ್ದು ಹೇಗೆ?
ಐಟಿ ಅಧಿಕಾರಿಗಳ ಆದೇಶವನ್ನ ಪ್ರಶ್ನಿಸಿ ಅನಿತಾ ಅವರು ಚೆನ್ನೈ ಐಟಿಎಟಿ ಮೆಟ್ಟಿಲೇರಿದ್ದರು. ನವೆಂಬರ್ 16, 2026ರಂದು ಹೊರಬಿದ್ದ ತೀರ್ಪಿನಲ್ಲಿ ಅನಿತಾ ಅವರಿಗೆ ದೊಡ್ಡ ನೆಮ್ಮದಿ ಸಿಕ್ಕಿದೆ. ನ್ಯಾಯಮಂಡಳಿ ಈ ಕೆಳಗಿನ ಅಂಶಗಳನ್ನ ಪರಿಗಣಿಸಿ ಇದು ನಿಜವಾದ ತೆಂಗಿನಕಾಯಿ ವ್ಯಾಪಾರ ಎಂದು ಒಪ್ಪಿಕೊಂಡಿತು:
1. ನಗದು ಹಣವನ್ನ ವ್ಯಾಪಾರಕ್ಕೆ ಸಾಮಾನ್ಯವಾಗಿ ಬಳಸುವ ಓವರ್‌ಡ್ರಾಫ್ಟ್ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು ಹಾಗೂ ಅದರಲ್ಲಿ ನಿರಂತರ ವ್ಯವಹಾರ ನಡೆದಿತ್ತು.
2. ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ರೌಂಡ್ ಫಿಗರ್ (ಪೂರ್ಣಾಂಕ) ಮೊತ್ತಗಳನ್ನ ಠೇವಣಿ ಇಡುವುದು ಸಹಜ.
3. ಅನಿತಾ ಅವರಿಗೆ ತೆಂಗಿನಕಾಯಿ ಪೂರೈಸಿದ ರೈತರು ನೀಡಿದ ದೃಢೀಕರಣ ಪತ್ರಗಳನ್ನ ಆದಾಯ ತೆರಿಗೆ ಇಲಾಖೆ ಸುಳ್ಳು ಎಂದು ಸಾಬೀತುಪಡಿಸಿರಲಿಲ್ಲ.
4. ಅವರು ಈಗಾಗಲೇ ಐಟಿಆರ್-ಯು ಮೂಲಕ 1.277 ಕೋಟಿ ರೂ. ವಹಿವಾಟನ್ನ ಘೋಷಿಸಿದ್ದರು.
ಆದರೆ, ಅನಿತಾ ಅವರು ಖರೀದಿ ಬಿಲ್, ಮಾರಾಟದ ರಸೀದಿ ಮತ್ತು ಸ್ಟಾಕ್ ರಿಜಿಸ್ಟರ್ ನಿರ್ವಹಿಸದ ಕಾರಣ, ಸಂಪೂರ್ಣ 1.177 ಕೋಟಿ ರೂ.ಗೆ ತೆರಿಗೆ ವಿಧಿಸುವ ಬದಲು, ಅದರ ಶೇ. 8ರಷ್ಟು ಅಂದರೆ 9.416 ಲಕ್ಷ ರೂಪಾಯಿಗಳನ್ನ ಹೆಚ್ಚುವರಿ ವ್ಯಾಪಾರದ ಆದಾಯವೆಂದು ಪರಿಗಣಿಸಿ ಅಂದರೆ ಈಗಾಗಲೇ ಘೋಷಿಸಿದ 10.216 ಲಕ್ಷ ರೂಪಾಯಿಗೆ ಹೆಚ್ಚುವರಿಯಾಗಿ ತೆರಿಗೆ ವಿಧಿಸುವಂತೆ ನ್ಯಾಯಮಂಡಳಿ ಆದೇಶಿಸಿತು.
ಸೈಡ್ ಬಿಸಿನೆಸ್ ಮಾಡುವ ಸಂಬಳ ಪಡೆಯುವ ಉದ್ಯೋಗಿಗಳು ಏನು ಮಾಡಬೇಕು?
ಈ ಪ್ರಕರಣದ ಕುರಿತು ತೆರಿಗೆ ತಜ್ಞ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸುರೇಶ್ ಸುರಾನಾ ಮಹತ್ವದ ಸಲಹೆ ನೀಡಿದ್ದಾರೆ. ಆಫೀಸ್ ಕೆಲಸದ ಜೊತೆಗೆ ಕೃಷಿ ಅಥವಾ ಕೃಷಿ ಆಧಾರಿತ ವ್ಯಾಪಾರ ಮಾಡುವ ಸಂಬಳ ಪಡೆಯುವ ಉದ್ಯೋಗಿಗಳು ಕೃಷಿ ಆದಾಯ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರದ ನಡುವಿನ ವ್ಯತ್ಯಾಸವನ್ನ ತಿಳಿದಿರಬೇಕು.
ಸ್ವಂತ ಕೃಷಿಯಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ರೈತರಿಂದ ಖರೀದಿಸಿ ಮಾರಾಟ ಮಾಡುವುದು ವ್ಯಾಪಾರದ ಆದಾಯವಾಗುತ್ತದೆ. ಹೀಗಾಗಿ, ಯಾವುದೇ ಸೈಡ್ ಬಿಸಿನೆಸ್ ಮಾಡುವವರು ಅದಕ್ಕೆ ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗೂ ಕನಿಷ್ಠ ಪ್ರಮಾಣದ ನಗದು ವಹಿವಾಟಿನ ದಾಖಲೆಗಳನ್ನ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.




Click it and Unblock the Notifications
