ಯುವರಾಜ್ ಸಿಂಗ್‌ಗೆ ದುಃಸ್ವಪ್ನವಾದ ಆ ಪಿಂಕ್ ಚಪ್ಪಲಿ! ದೀಪಿಕಾ ಪಡುಕೋಣೆಯಿಂದ ಮುಜುಗರ ಅನುಭವಿಸಿದ್ರಾ ಕ್ರಿಕೆಟಿಗ?
ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು ಎದುರಾಳಿ ತಂಡದ ನಿದ್ದೆಗೆಡಿಸುತ್ತಿದ್ದ ಯುವರಾಜ್ ಸಿಂಗ್‌ಗೆ ಒಂದು ಕಾಲದಲ್ಲಿ ಪ್ರೀತಿಯ ವಿಚಾರವೇ ದೊಡ್ಡ ಟೆನ್ಷನ್ ಆಗಿತ್ತು ಅಂದರೆ ನಂಬ್ತೀರಾ! ಆಸ್ಟ್ರೇಲಿಯಾ ಪ್ರವಾಸದ ನಡುವೆಯೇ ಈ ನಟಿಯ ಕಾರಣ ಈ ಕ್ರಿಕೆಟಿಗ ಪಿಂಕ್ ಚಪ್ಪಲಿ ತೊಟ್ಟು ಬಸ್ ಏರಬೇಕಾಯ್ತಂತೆ! ಅಷ್ಟಕ್ಕೂ ಆ ನಟಿ ಯಾರು? ಅವರ ಜೊತೆ ಯುವರಾಜ್ ಸಿಂಗ್ ಈಗಲೂ ರಿಲೇಶನ್‌ಶಿಪ್‌ನಲ್ಲಿದ್ದಾರ.
Yuvraj Singh ಲೈಫ್‌ನ ಇಂಟರೆಸ್ಟಿಂಗ್ ಕಹಾನಿ
ಒಂದು ಕಾಲದಲ್ಲಿ ಅದ್ಭುತ ಸಿಕ್ಸರ್‌ಗಳಿಗೆ ಹೆಸರಾಗಿ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್. ಆ ಬಳಿಕ ಕ್ಯಾನ್ಸರ್ ಕಾರಣಕ್ಕೂ ಇವರು ಸುದ್ದಿಯಲ್ಲಿದ್ದರು. ಅದೃಷ್ಟವಶಾತ್ ಅದರಿಂದ ಪಾರಾಗಿ ಹೊಸ ಜೀವನ ಕಂಡುಕೊಂಡರು. ಈ ವಿಚಾರ ಎಲ್ಲರಿಗೂ ಗೊತ್ತಿರೋದೇ. ಆದರೆ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಅವರು ಪಾಡ್‌ಕಾಸ್ಟ್ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಏನಾಗಿತ್ತು ಆ ದಿನ!
ಆಟದ ಕಡೆ ಗಮನ ಕೊಡಬೇಕು, ಸದ್ಯಕ್ಕೆ ಭೇಟಿಯಾಗುವುದು ಬೇಡ ಎಂದು ಹೇಳಿದರೂ ಕೇಳದೆ ಆ ನಟಿ ಯುವರಾಜ್ ಅವರನ್ನು ಹುಡುಕಿಕೊಂಡು ಬಂದಿದ್ದರಂತೆ. ಅಷ್ಟೇ ಆಗಿದ್ದರೆ ಓಕೆ, ಆದರೆ, ಮರುದಿನ ಬೆಳಗ್ಗೆ ಆ ನಟಿ ಮಾಡಿದ ಒಂದು ಸಣ್ಣ ಕೆಲಸದಿಂದ ಯುವರಾಜ್ ಸಿಂಗ್ ಇಡೀ ಟೀಮ್ ಮುಂದೆ ಮುಜುಗರ ಅನುಭವಿಸುವಂತಾಗಿತ್ತು. ಕೊನೆಗೆ ಬೇರೆ ದಾರಿಯೇ ಇಲ್ಲದೆ ಆಕೆಯ ಪಿಂಕ್ ಬಣ್ಣದ ಚಪ್ಪಲಿಗಳನ್ನು ಹಾಕಿಕೊಂಡು ಟೀಮ್ ಬಸ್ ಹತ್ತಬೇಕಾಯಿತು! ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆ. ಈ ಸ್ವಾರಸ್ಯಕರ ಪ್ರೇಮಕಥೆಯನ್ನು ಸ್ವತಃ ಯುವರಾಜ್ ಸಿಂಗ್ ಬಿಚ್ಚಿಟ್ಟಿದ್ದಾರೆ.
ಆ ನಟಿ ಯಾರು?
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು bollywood ನಟಿ ದೀಪಿಕಾ ಪಡುಕೋಣೆ ನಡುವೆ ಒಂದು ಕಾಲದಲ್ಲಿ ಪ್ರೇಮ ಸಂಬಂಧವಿತ್ತು ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೋಗಳು, ಡೇಟಿಂಗ್ ಕುರಿತ ಸುದ್ದಿಗಳು ಆಗಾಗ ಚರ್ಚೆಯಾಗುತ್ತಿದ್ದವು. ಇದೀಗ ಯುವರಾಜ್ ಹೇಳಿರುವ ಈ ಹಳೆಯ ಘಟನೆಯೂ ಮತ್ತೆ ಆ ಚರ್ಚೆಗೆ ಜೀವ ನೀಡಿದೆ. ಆದರೆ ಇಲ್ಲಿ ಒಂದು ಮುಖ್ಯ ವಿಚಾರವಿದೆ. ಯುವರಾಜ್ ತಮ್ಮ ಮಾತಿನಲ್ಲಿ ಆ ನಟಿಯ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಇದು ದೀಪಿಕಾ ಅವರ ಕುರಿತೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.
ಆಸ್ಟ್ರೇಲಿಯಾ ಪ್ರವಾಸದ ನಡುವೆಯೇ ಶುರುವಾಗಿತ್ತು ಪ್ರೇಮದ ಟೆನ್ಷನ್!
2007-08ರ ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸದ ಸಮಯದಲ್ಲಿ ನಡೆದ ಘಟನೆಯನ್ನು ಯುವರಾಜ್ ಸಿಂಗ್ 'ಕ್ಲಬ್ ಪ್ರೈರೀ ಫೈರ್' ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆಗ ತಾವು ಒಬ್ಬ ನಟಿಯ ಜೊತೆ ಡೇಟಿಂಗ್ ಮಾಡುತ್ತಿದ್ದುದಾಗಿ ಹೇಳಿರುವ ಯುವರಾಜ್, ಆಕೆ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿದ್ದರು ಎಂದಿದ್ದಾರೆ.
ಒತ್ತಡದಲ್ಲಿದ್ದ ಯುವರಾಜ್
ಆ ಸಮಯದಲ್ಲಿ ಯುವರಾಜ್‌ಗೆ ಕ್ರಿಕೆಟ್ ಮೇಲೆ ಹೆಚ್ಚು ಗಮನ ಕೊಡಬೇಕಾದ ಅನಿವಾರ್ಯತೆ ಇತ್ತು. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಟದ ಬಗ್ಗೆ ಸಾಕಷ್ಟು ಒತ್ತಡದಲ್ಲಿದ್ದರಂತೆ. ಇದೇ ಕಾರಣಕ್ಕೆ ಆ ನಟಿಗೆ ಸ್ವಲ್ಪ ದಿನ ಭೇಟಿಯಾಗುವುದು ಬೇಡ, ಪ್ರವಾಸ ಮುಗಿಯುವವರೆಗೆ ತಮ್ಮ ತಮ್ಮ ಕೆಲಸದ ಕಡೆ ಗಮನ ಕೊಡೋಣ ಎಂದು ಹೇಳಿದ್ದರಂತೆ.
ಕ್ಯಾರೇ ಅನ್ನದ ನಟಿ
ಯುವರಾಜ್ ಹೇಳಿದ ಮಾತಿಗೆ ಕ್ಯಾರೇ ಅನ್ನದ ನಟಿ ಸೀದ ಈ ಕ್ರಿಕೆಟಿಗನನ್ನು ಹುಡುಕಿಕೊಂಡು ಬಂದಿದ್ದಾರೆ. ಅಡಿಲೇಡ್‌ನಿಂದ ನೇರವಾಗಿ ಕ್ಯಾನ್‌ಬೆರಾಗೆ ಬಸ್‌ನಲ್ಲಿ ಪ್ರಯಾಣಿಸಿ ಯುವರಾಜ್‌ರನ್ನು ಭೇಟಿಯಾಗಲು ಬಂದಿದ್ದರಂತೆ. ಆಕೆಯನ್ನು ಅಲ್ಲಿ ನೋಡಿದ ಯುವರಾಜ್‌ಗೆ ಒಂದು ಕ್ಷಣ ಅಚ್ಚರಿಯಾಗಿತ್ತು. 'ನೀನು ಇಲ್ಲೇನು ಮಾಡುತ್ತಿದ್ದೀಯಾ?' ಎಂದು ಕೇಳಿದಾಗ, 'ನಿನ್ನ ಜೊತೆ ಸ್ವಲ್ಪ ಸಮಯ ಕಳೆಯಬೇಕು' ಎಂದು ಆಕೆ ಹೇಳಿದ್ದರಂತೆ. ನಂತರ ಇಬ್ಬರೂ ಭೇಟಿಯಾಗಿ ಮಾತನಾಡಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ವೃತ್ತಿಜೀವನದ ಕಡೆ ಗಮನ ಕೊಡಬೇಕು ಎಂದು ಯುವರಾಜ್ ಹೇಳಿದ್ದರಂತೆ.
ಪ್ರೇಮದ ನೆನಪಾಗಿ ಉಳಿದಿದ್ದು ಮಾತ್ರ ಪಿಂಕ್ ಚಪ್ಪಲಿ!
ಈ ಕಥೆಯಲ್ಲಿ ನಿಜವಾದ ಹೈಲೈಟ್ ಮರುದಿನ ಬೆಳಗ್ಗೆ ನಡೆದ ಘಟನೆಯಂತೆ. ಕ್ಯಾನ್‌ಬೆರಾದಿಂದ ಮತ್ತೆ ಅಡಿಲೇಡ್‌ಗೆ ಪ್ರಯಾಣ ಬೆಳೆಸಬೇಕಿತ್ತು. ಹಿಂದಿನ ರಾತ್ರಿಯೇ ಯುವರಾಜ್ ಅವರ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿದ್ದ ನಟಿ, ಸೂಟ್‌ಕೇಸ್ ಕೂಡ ಸಿದ್ಧಪಡಿಸಿದ್ದರು. ಆದರೆ ಅದರಲ್ಲಿ ಯುವರಾಜ್ ಅವರ ಶೂಗಳೂ ಸೇರಿಕೊಂಡಿದ್ದವು!
ಶೂಗಳೇ ನಾಪತ್ತೆ
ಮರುದಿನ ಬೆಳಗ್ಗೆ ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದ ಯುವರಾಜ್‌ಗೆ ತನ್ನ ಶೂಗಳು ಕಾಣಿಸಲೇ ಇಲ್ಲ. ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಆಗ ನಟಿಯನ್ನು ಕೇಳಿದಾಗ, 'ನಾನು ಅವುಗಳನ್ನು ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿದ್ದೀನಿ ಅನಿಸುತ್ತೆ' ಎಂದಿದ್ದಾರೆ. ಇನ್ನೇನು ಟೀಮ್ ಬಸ್ ಹತ್ತಲು ಕೇವಲ ಹತ್ತು ನಿಮಿಷಗಳಷ್ಟೇ ಬಾಕಿ ಇತ್ತು. ಶೂಗಳಿಲ್ಲದೆ ಹೇಗೆ ಪ್ರಯಾಣ ಮಾಡುವುದು ಎಂದು ಯುವರಾಜ್ ತಲೆಕೆಡಿಸಿಕೊಂಡಿದ್ದರು.
ಆ ಪಿಂಕ್ ಚಪ್ಪಲಿ
ಆ ಸಂದರ್ಭ ನಟಿ ಕೊಟ್ಟ ಸಲಹೆ ಯವರಾಜ್‌ಗೆ ಮತ್ತಷ್ಟು ಮುಜುಗರ ತಂದಿತ್ತು. 'ನನ್ನ ಚಪ್ಪಲಿ ಹಾಕಿಕೊಂಡು ಹೋಗಬಾರದೇ?' ಅಂತ ಆ ನಟಿ ಕೇಳಿದ್ದರಂತೆ. ಆದರೆ ಆಕೆಯ ಬಳಿ ಇದ್ದಿದ್ದು ಪಿಂಕ್ ಬಣ್ಣದ ಸ್ಲಿಪ್-ಆನ್ ಚಪ್ಪಲಿ!
'ಅಯ್ಯೋ ದೇವರೇ, ನಾನೀಗ ಇದನ್ನು ಹಾಕಿಕೊಂಡು ಹೋಗಬೇಕಾ?' ಎಂದುಕೊಂಡ ಯುವರಾಜ್, ಬೇರೆ ದಾರಿ ಕಾಣದೆ ಅದನ್ನೇ ಧರಿಸಿ ಟೀಮ್ ಬಸ್ ಹತ್ತಿದ್ದರಂತೆ. ಅಷ್ಟೇ ಅಲ್ಲ, ತಮ್ಮ ಕಾಲಿನಲ್ಲಿದ್ದ ಪಿಂಕ್ ಚಪ್ಪಲಿಗಳು ಯಾರ ಕಣ್ಣಿಗೂ ಬೀಳಬಾರದು ಎಂದು ಬ್ಯಾಗ್ ಅನ್ನು ಕಾಲುಗಳ ಮುಂದೆ ಹಿಡಿದುಕೊಂಡು ಕುಳಿತಿದ್ದರಂತೆ.
ಚಪ್ಪಾಳೆ ತಟ್ಟಿ ಕಾಲೆಳೆದ ಕ್ರಿಕೆಟಿಗರು
ನಮ್ಮ ಕ್ರಿಕೆಟಿಗರ ಕಣ್ಣಿನಿಂದ ಇಂತಹ ವಿಚಾರ ತಪ್ಪಿಸಿಕೊಳ್ಳಲು ಸಾಧ್ಯವೇ? ಯುವರಾಜ್ ಅವರನ್ನು ಪಿಂಕ್ ಚಪ್ಪಲಿಯಲ್ಲಿ ನೋಡಿದ ಸಹ ಆಟಗಾರರು ಸುಮ್ಮನಿರಲಿಲ್ಲ. ಅವರನ್ನು ನೋಡಿ ಚಪ್ಪಾಳೆ ತಟ್ಟಿ ತಮಾಷೆ ಮಾಡಿದ್ದರಂತೆ. ಕೊನೆಗೆ ವಿಮಾನ ನಿಲ್ದಾಣ ತಲುಪುವವರೆಗೂ ಅದೇ ಚಪ್ಪಲಿಗಳನ್ನು ಹಾಕಿಕೊಂಡು ಹೋಗಬೇಕಾಯಿತು. ಅಲ್ಲಿ ಫ್ಲಿಪ್-ಫ್ಲಾಪ್ ಚಪ್ಪಲಿ ಖರೀದಿಸಿದ ನಂತರವಷ್ಟೇ ಅವರಿಗೆ ಮುಕ್ತಿ ಸಿಕ್ಕಿದ್ದು ಎಂದು ನಗುತ್ತಾ ನೆನಪಿಸಿಕೊಂಡಿದ್ದಾರೆ.
ಆ ನಟಿ ದೀಪಿಕಾ ಪಡುಕೋಣೆಯೇ?
ಯುವರಾಜ್ ಸಿಂಗ್ ಈ ಘಟನೆಯನ್ನು ಹೇಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಹಳೆಯ ಪ್ರೇಮದ ಚರ್ಚೆ ಶುರುವಾಗಿದೆ. ಆ ನಟಿ ಯಾರು ಎಂಬ ಪ್ರಶ್ನೆಗೆ ಹಲವರು ದೀಪಿಕಾ ಪಡುಕೋಣೆ ಹೆಸರು ಹೇಳುತ್ತಿದ್ದಾರೆ. 2007ರಲ್ಲಿ 'ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದ ದೀಪಿಕಾ, ಆ ಸಮಯದಲ್ಲಿ ಯುವರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಯುವರಾಜ್ ಈ ಪಾಡ್‌ಕಾಸ್ಟ್‌ನಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲ, ಆ ಕಾಲದಲ್ಲಿ ಯುವರಾಜ್ ಹೆಸರು ನಟಿ ಕಿಮ್ ಶರ್ಮಾ ಜೊತೆಗೂ ಕೇಳಿಬಂದಿತ್ತು. 2008ರಲ್ಲಿ ಅವರಿಬ್ಬರ ಸಂಬಂಧ ಮುರಿದುಬಿದ್ದಿರುವ ಬಗ್ಗೆ ವರದಿಗಳಿದ್ದವು.
“Despite my request, she followed me to Canberra. I was under a lot of stress at that time!” ~ Yuvraj Singh opens up about his relationship with Deepika.Yuvraj Singh: "I was actually dating an actress. I won't take her name. She's doing really well now and has a lot of experience. She was shooting in Adelaide, and I told her, 'Listen, let's not meet for a while because I have the Australian tour to focus on.'But she actually followed me to Canberra on a bus. It was in the middle of a Test tour, and I hadn't scored many runs in the first two Tests. I was like, 'What are you doing here?' She said, 'I want to spend time with you.' We were leaving Canberra for Adelaide the next morning. She had packed my suitcase, but the bags had already been sent the previous night.The next morning, I was looking for my shoes, and she said, 'I think I packed them.' We had just ten minutes before getting on the bus. I was wondering how I was supposed to travel without shoes. Then she said, 'Why don't you wear mine?'And she had these pink slip-ons!" 😭
— Kshitij (@Kshitij45__) November 25, 2026
ಮತ್ತೊಬ್ಬ ನಟಿಯ ಜೊತೆಗೆ ಯುವರಾಜ್
ಇನ್ನು ಯುವರಾಜ್ ಸಿಂಗ್ 2016ರಲ್ಲಿ ನಟಿ ಹೇಜಲ್ ಕೀಚ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಂದಿನ ಪ್ರೇಮದ ದಿನಗಳನ್ನು ಇಂದು ನೆನಪಿಸಿಕೊಂಡು ನಗುತ್ತಿರುವ ಯುವರಾಜ್‌ಗೆ ಅಂದು ಆ ಪಿಂಕ್ ಚಪ್ಪಲಿಗಳು ದುಃಸ್ವಪ್ನದಂತೆ ಕಾಡಿದ್ದವು.





Click it and Unblock the Notifications
