RCB: ಕೇವಲ ಸ್ವಿಂಗ್ ಇದ್ರೆ ಸಾಲದು: ಆರ್‌ಸಿಬಿಯ ಸಹ ಆಟಗಾರ ಭುವಿಗೆ ಟಾಂಟ್ ಕೊಟ್ರಾ ರಸಿಖ್ ಸಲಾಂ ದಾರ್
ಐಪಿಎಲ್ 2027 ಮಿನಿ ಹರಾಜಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಯುವ ವೇಗಿ ರಸಿಖ್ ಸಲಾಂ ದಾರ್ ಅವರು ತಮ್ಮ ಹೊಸ ಜವಾಬ್ದಾರಿ ಹಾಗೂ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿರುವ ಯುವ ವೇಗಿ ರಸಿಖ್ ಸಲಾಮ್ ದಾರ್, ಆಧುನಿಕ ಟಿ20 ಕ್ರಿಕೆಟ್‌ನ ಸವಾಲುಗಳು ಮತ್ತು ತಂಡದಲ್ಲಿ ತಮ್ಮ ಬದಲಾದ ಪಾತ್ರದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಜೋಶ್ ಹೇಜಲ್‌ವುಡ್ (15 ವಿಕೆಟ್) ಅವರಿಗಿಂತಲೂ ಹೆಚ್ಚು ಅಂದರೆ ಬರೋಬ್ಬರಿ 19 ವಿಕೆಟ್ ಕಬಳಿಸಿ ಮಿಂಚಿದ್ದ ಅವರು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

'ಕೇವಲ ಸ್ವಿಂಗ್ ಇದ್ದರೆ ಸಾಲದು'
ಕ್ರಿಕ್‌ಇನ್ಫೋಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ರಸಿಖ್ ಸಲಾಂ ದಾರ್ ಅವರು, ಕಳೆದ ಎರಡು ವರ್ಷಗಳಲ್ಲಿ ತಾವು ಬೌಲಿಂಗ್ ಶೈಲಿಯನ್ನು ಹೇಗೆ ಸುಧಾರಿಸಿಕೊಂಡರು ಎಂಬುದನ್ನು ವಿವರಿಸಿದ್ದಾರೆ. 'ವರ್ಷಗಳು ಕಳೆದಂತೆ ತಂಡದಲ್ಲಿ ನನ್ನ ಜವಾಬ್ದಾರಿ ಬದಲಾಗಿದೆ. ಆರ್‌ಸಿಬಿ ತಂಡದಲ್ಲಿ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ದಿಗ್ಗಜ ಬೌಲರ್‌ಗಳಿದ್ದಾರೆ (ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್). ಹೀಗಾಗಿ ನನಗೆ ವಿಭಿನ್ನ ಪಾತ್ರ ನೀಡಲಾಗಿತ್ತು,' ಎಂದು ಹೇಳಿದ್ದಾರೆ.
'ಯಾವುದೇ ಹಂತದಲ್ಲಾದ್ರೂ ಬೌಲಿಂಗ್ ಮಾಡಲು ಸಿದ್ಧನಿದ್ದೇನೆ'
'ಇಂದಿನ ಟಿ20 ಕ್ರಿಕೆಟ್‌ನಲ್ಲಿ ಕೇವಲ ಚೆಂಡನ್ನು ಸ್ವಿಂಗ್ ಮಾಡಿದರೆ ಸಾಲದು, ಎಲ್ಲಾ ಹಂತದಲ್ಲೂ ಬೌಲಿಂಗ್ ಮಾಡುವ ಆಲ್-ರೌಂಡ್ ಬೌಲರ್ ಆಗಿರಬೇಕು. ತಂಡ ಬಯಸಿದರೆ ನಾನು ಮೊದಲ ಓವರ್ ಕೂಡ ಎಸೆಯಬಲ್ಲೆ, ಆದರೆ ತಂಡದ ಅಗತ್ಯಕ್ಕೆ ತಕ್ಕಂತೆ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡಲು ನಾನು ಸದಾ ಸಿದ್ಧನಿದ್ದೇನೆ,' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಪವರ್‌ಪ್ಲೇ, ಡೆತ್ ಓವರ್ ಬೌಲಿಂಗ್ ಅಂದ್ರೆ ತುಂಬಾ ಇಷ್ಟ'
ಪ್ರಸ್ತುತ ಟಿ20 ಬ್ಯಾಟರ್‌ಗಳ ಆಕ್ರಮಣಕಾರಿ ಆಟವನ್ನು ಎದುರಿಸುವ ತಂತ್ರದ ಬಗ್ಗೆ ಮಾತನಾಡಿದ ರಸಿಖ್, ಕಠಿಣ ಅಭ್ಯಾಸವೇ ತಮ್ಮ ಯಶಸ್ಸಿನ ಮೂಲ ಎಂದಿದ್ದಾರೆ. 'ನಾವು ಪ್ರತಿಯೊಂದು ಸನ್ನಿವೇಶಕ್ಕೂ ಅಭ್ಯಾಸ ಮಾಡಬೇಕು. ಪ್ರತಿ ಬಾರಿಯೂ ನಾವು ಅಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಾಗದಿರಬಹುದು. ಆದರೆ ನಿಖರತೆಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕು,' ಎಂದು ಅವರು ಹೇಳಿದ್ದಾರೆ.
ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಬೌಲಿಂಗ್ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, 'ಪವರ್‌ಪ್ಲೇ ಅಂತ್ಯದಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ. ಆದರೆ ಒತ್ತಡವೇ ಒಂದು ಸೌಭಾಗ್ಯ ಎಂಬ ಮಾತಿನಂತೆ, ನಾನು ಆ ಒತ್ತಡವನ್ನು ತುಂಬಾ ಆನಂದಿಸುತ್ತೇನೆ. ಅಂತಹ ಸಂದರ್ಭಗಳಲ್ಲಿ ಸ್ವಲ್ಪ ಆತಂಕವಿರುತ್ತದೆ. ಆದರೂ ಅದರಲ್ಲಿ ಮಜಾ ಇರುತ್ತದೆ. ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕೆ ಯಶಸ್ಸು ತಂದುಕೊಟ್ಟಾಗ ಸಿಗುವ ತೃಪ್ತಿಯೇ ಬೇರೆ. ನಮ್ಮ ಕಠಿಣ ಪರಿಶ್ರಮದ ಮೇಲೆ ನಮಗೆ ನಂಬಿಕೆ ಇರಬೇಕು,' ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಕೇವಲ ಹೊಸ ಚೆಂಡಿಗೆ ಸೀಮಿತವಾಗದೆ, ಪಂದ್ಯದ ಯಾವುದೇ ಹಂತದಲ್ಲೂ ವಿಕೆಟ್ ಪಡೆಯುವ ಸಾಮರ್ಥ್ಯ ಬೆಳೆಸಿಕೊಂಡಿರುವ ರಸಿಖ್ ಸಲಾಮ್ ದಾರ್, ಮುಂಬರುವ ಐಪಿಎಲ್ ಆವೃತ್ತಿಯಲ್ಲೂ ಆರ್‌ಸಿಬಿ ಬೌಲಿಂಗ್ ಪಡೆಯ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ. ಆಕ್ರಮಣಕಾರಿ ಬ್ಯಾಟರ್ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಆದರೆ, ರಸಿಖ್ ಅವರು ನೀಡಿರುವ ಈ ಭರವಸೆ ಮೇಲೆ ಅಭಿಮಾನಿಗಳು ನಂಬಿಕೆ ಇಟ್ಟಿದ್ದು, ಇದನ್ನು ನನಸು ಮಾಡಲಿದ್ದಾರೆಯಾ ಎಂದು ಕಾದುನೋಡಬೇಕಿದೆ.


Click it and Unblock the Notifications
