ವಂದೇ ಭಾರತ್ ಸ್ಲೀಪರ್ vs ಸಾಮಾನ್ಯ ಫಸ್ಟ್ ಎಸಿ: ಯಾವುದು ಬೆಸ್ಟ್? ಈ ವೈರಲ್ ವಿಡಿಯೋ ನೋಡಿ ಪ್ರಯಾಣಿಕರು ಫಿದಾ!
ನವದೆಹಲಿ: ಭಾರತೀಯ ರೈಲ್ವೆ ಇತ್ತೀಚಿನ ವರ್ಷಗಳಲ್ಲಿ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ಭಾರಿ ಬದಲಾವಣೆಗಳನ್ನ ತರುತ್ತಿದೆ. ದೂರದ ಪ್ರಯಾಣದಲ್ಲಿ ಖಾಸಗಿತನ ಹಾಗೂ ಆರಾಮದಾಯಕತೆ ಬಯಸುವವರಿಗೆ ಇದುವರೆಗೆ ಸಾಮಾನ್ಯ ಫಸ್ಟ್ ಎಸಿ ಬೋಗಿಗಳು ಮೊದಲ ಆಯ್ಕೆಯಾಗಿದ್ದವು. ಆದರೆ, ಇದೀಗ ಹೊಸದಾಗಿ ಪರಿಚಯಿಸಲಾಗಿರುವ ವಂದೇ ಭಾರತ್ ಸ್ಲೀಪರ್ ಫಸ್ಟ್ ಎಸಿ ಬೋಗಿಯು ರೈಲು ಪ್ರಯಾಣದ ಅನುಭವವನ್ನೇ ಸಂಪೂರ್ಣವಾಗಿ ಬದಲಿಸುವ ಭರವಸೆ ನೀಡಿದೆ.
ಹೌದು, ನೋಡಿ ಇವೆರಡರ ನಡುವೆ ನಿಜಕ್ಕೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅಖಿಲೇಶ್ವರ್ ಸಿಂಗ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ತೋರಿಸಿದ್ದು, ಈ ವಿಡಿಯೋ ಸದ್ಯ ಭಾರಿ ವೈರಲ್ ಆಗಿದೆ.

ಒಳಾಂಗಣ ವಿನ್ಯಾಸ ಮತ್ತು ಮೃದುವಾದ ಬರ್ತ್: ಪ್ರಯಾಣದ ಅನುಭವ ಹೇಗಿದೆ?
ಅಖಿಲೇಶ್ವರ್ ಸಿಂಗ್ ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡೂ ಬೋಗಿಗಳ ಒಳಾಂಗಣ ವಿನ್ಯಾಸವನ್ನ ಅಕ್ಕಪಕ್ಕದಲ್ಲೇ ಹೋಲಿಸಿ ತೋರಿಸಲಾಗಿದೆ. ಸಾಮಾನ್ಯ ಫಸ್ಟ್ ಎಸಿ ಬೋಗಿಯು ಹಳೆಯ ಕ್ಲಾಸಿಕ್ ಶೈಲಿಯ ಒಳಾಂಗಣವನ್ನ ಹೊಂದಿದ್ದರೆ, ವಂದೇ ಭಾರತ್ ಸ್ಲೀಪರ್ ಫಸ್ಟ್ ಎಸಿ ಬೋಗಿಯು ಸಂಪೂರ್ಣ ಆಧುನಿಕ ಹಾಗೂ ಪ್ರೀಮಿಯಂ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
ಮಲಗುವ ವ್ಯವಸ್ಥೆಯ ವಿಚಾರಕ್ಕೆ ಬಂದರೆ, ಸಾಮಾನ್ಯ ಫಸ್ಟ್ ಎಸಿಯಲ್ಲೂ ಆರಾಮದಾಯಕ ಸೀಟುಗಳಿವೆ. ಆದರೆ, ವಂದೇ ಭಾರತ್ ಸ್ಲೀಪರ್‌ನಲ್ಲಿರುವ ಮೃದುವಾದ ಬರ್ತ್ ಹಾಗೂ ಕುಷನಿಂಗ್ ಗುಣಮಟ್ಟ ಅತ್ಯುತ್ತಮವಾಗಿದೆ. ವಿಡಿಯೋದಲ್ಲಿ ಕ್ರಿಯೇಟರ್ ಸೀಟನ್ನ ಒತ್ತಿ ತೋರಿಸುವ ಮೂಲಕ ಅದು ಎಷ್ಟು ಮೃದುವಾಗಿದೆ ಎಂಬುದನ್ನ ವಿವರಿಸಿದ್ದಾರೆ.
ಬಿಸಿ ನೀರಿನ ಶವರ್ ಮತ್ತು ಆಟೋಮ್ಯಾಟಿಕ್ ಡೋರ್: ಶೌಚಾಲಯದ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ!
ಪ್ರಯಾಣಿಕರಿಗೆ ಅತ್ಯಂತ ಮುಖ್ಯವಾದ ಶೌಚಾಲಯ ಹಾಗೂ ಬೋಗಿಯ ಪ್ರವೇಶ ದ್ವಾರಗಳಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬಂದಿದೆ:
1. ಶೌಚಾಲಯದ ಸೌಲಭ್ಯ: ಸಾಮಾನ್ಯ ಫಸ್ಟ್ ಎಸಿ ಬೋಗಿಯಲ್ಲಿ ಸಾಮಾನ್ಯ ಶವರ್ ವ್ಯವಸ್ಥೆ ಮಾತ್ರ ಇರುತ್ತದೆ. ಆದರೆ ವಂದೇ ಭಾರತ್ ಸ್ಲೀಪರ್‌ನಲ್ಲಿ ಬಿಸಿ ನೀರಿನ ಶವರ್ ಜೊತೆಗೆ ವಿಮಾನಗಳಲ್ಲಿರುವಂತಹ ಆಧುನಿಕ ವ್ಯಾಕ್ಯೂಮ್ ಆಧಾರಿತ ಶೌಚಾಲಯ ಅಳವಡಿಸಲಾಗಿದೆ.
2. ಪ್ರವೇಶ ದ್ವಾರ: ಹಳೆಯ ಫಸ್ಟ್ ಎಸಿ ಬೋಗಿಗಳಲ್ಲಿ ಪ್ರಯಾಣಿಕರು ಕೈಯಿಂದ ತಳ್ಳಿ ಅಥವಾ ಎಳೆದು ತೆರೆಯುವ ಮ್ಯಾನುವಲ್ ಬಾಗಿಲುಗಳಿವೆ. ಆದ್ರೆ ಈ, ವಂದೇ ಭಾರತ್ ಸ್ಲೀಪರ್‌ನಲ್ಲಿ ಕೇವಲ ಒಂದು ಟ್ಯಾಪ್ ಮಾಡಿದರೆ ಸಾಕು ತಾನಾಗಿಯೇ ತೆರೆಯುವ ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್‌ಗಳಿವೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಇಂದಿನ ಡಿಜಿಟಲ್ ಯುಗದಲ್ಲಿ ಪ್ರಯಾಣದ ವೇಳೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜ್ ಮಾಡುವುದು ಅತಿ ಮುಖ್ಯ. ಸಾಮಾನ್ಯ ಫಸ್ಟ್ ಎಸಿ ಬೋಗಿಯಲ್ಲಿ ಕೇವಲ ಸಾಧಾರಣ ಚಾರ್ಜಿಂಗ್ ಪಾಯಿಂಟ್‌ಗಳಿರುತ್ತವೆ. ಆದರೆ, ವಂದೇ ಭಾರತ್ ಸ್ಲೀಪರ್‌ನಲ್ಲಿ ಚಾರ್ಜಿಂಗ್ ಸೌಲಭ್ಯವನ್ನ ಮೇಲ್ದರ್ಜೆಗೇರಿಸಲಾಗಿದ್ದು, ಪ್ರತ್ಯೇಕ ರೀಡಿಂಗ್ ಲೈಟ್, ತ್ರೀ-ಪಿನ್ ಸಾಕೆಟ್, ಯುಎಸ್‌ಬಿ-ಎ ಪೋರ್ಟ್ ಹಾಗೂ ಆಧುನಿಕ ಯುಎಸ್‌ಬಿ-ಸಿ ಪೋರ್ಟ್ ನೀಡಲಾಗಿದೆ.
ಈ ಎರಡೂ ಬೋಗಿಗಳ ಅಕ್ಕಪಕ್ಕದ ಹೋಲಿಕೆಯ ವಿಡಿಯೋ ಇನ್‌ಸ್ಟಾಗ್ರಾಮ್ ಬಳಕೆದಾರರ ಗಮನ ಸೆಳೆದಿದೆ. ವಂದೇ ಭಾರತ್ ಸ್ಲೀಪರ್‌ನ ಪ್ರೀಮಿಯಂ ಸೌಲಭ್ಯಗಳನ್ನು ಕಂಡು ಅನೇಕ ನೆಟ್ಟಿಗರು ಫೈರ್ ಹಾಗೂ ಹಾರ್ಟ್ ಎಮೋಜಿಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತೀಯ ರೈಲ್ವೆಯ ಈ ಆಧುನಿಕ ಹೆಜ್ಜೆಯನ್ನ ಶ್ಲಾಘಿಸಿದ್ದಾರೆ.




Click it and Unblock the Notifications
