ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಆರ್‌ಸಿಬಿ ನೋಡಿ ಕಲಿಯುವುದು ತುಂಬಾ ಇದೆ: ಸಿಎಸ್‌ಕೆಗೆ ಅಂಬಟಿ ರಾಯುಡು ಟಾಂಗ್
Ambati Rayudu: ಯಾವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಸಾಕು ಮೂಗು ಮುರಿಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಟಿ ರಾಯುಡು ಇದೀಗ ಉಲ್ಟಾ ಹೊಡೆದಿದ್ದು, ಆರ್‌ಸಿಬಿಯನ್ನೇ ಕೊಂಡಾಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಸಾಮಾನ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸದಾ ಟೀಕಿಸುತ್ತಿದ್ದ ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಟಿ ರಾಯುಡು, ಇದೀಗ ಉಲ್ಟಾ ಹೊಡೆದಿದ್ದಾರೆ. ಸತತ ಎರಡು ಐಪಿಎಲ್ ಟ್ರೋಫಿಗಳನ್ನು ಗೆದ್ದು ಬೀಗುತ್ತಿರುವ ಆರ್‌ಸಿಬಿಯನ್ನು ರಾಯುಡು ಮನಸಾರೆ ಕೊಂಡಾಡಿದ್ದಾರೆ. ಆಧುನಿಕ ಟಿ20 ಕ್ರಿಕೆಟ್‌ಗೆ ತಕ್ಕಂತೆ ಬೆಂಗಳೂರು ಟೀಮ್ ಬದಲಾಗಿದೆ ಎಂದು ಶ್ಲಾಘಿಸಿರುವುದಲ್ಲದೆ, ತನ್ನ ಹಳೆಯ ಫ್ರಾಂಚೈಸಿ ಚೆನ್ನೈ ತಂಡದ ಕಾರ್ಯವೈಖರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಆರ್‌ಸಿಬಿ ಗೆಲುವಿನ ಗುಟ್ಟು ಬಿಚ್ಚಿಟ್ಟ ಅಂಬಟಿ ರಾಯುಡು
ಪಾಡ್‌ಕಾಸ್ಟ್‌ವೊಂದಲ್ಲಿ ಮಾತನಾಡಿದ ಅಂಬಟಿ ರಾಯುಡು ಅವರು, ಎರಡು ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ಆರ್‌ಸಿಬಿಯನ್ನು ಟೀಕಿಸಿದ್ದನ್ನು ಸ್ಮರಿಸಿದರು. 'ಆರ್‌ಸಿಬಿ ಅದ್ಭುತ ಕೆಲಸ ಮಾಡಿದೆ. ಅವರು ಸತತವಾಗಿ ಎರಡು ಬಾರಿ ಚಾಂಪಿಯನ್ ಆಗಿರುವುದು ನನಗೆ ಅತೀವ ಸಂತಸ ತಂದಿದೆ. ಈ ಹಿಂದೆ ನಾವು ಇಂಗ್ಲಿಷ್ ಶೋಗಳಲ್ಲಿ ಮಾತನಾಡುವಾಗ, ಕೇವಲ ಒಬ್ಬಿಬ್ಬರು ಸೂಪರ್ ಸ್ಟಾರ್ ಆಟಗಾರರನ್ನು ನಂಬಿಕೊಂಡು ಮೊದಲ 10 ಓವರ್ ಮಾತ್ರ ಆಡಿದರೆ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ, ಇಡೀ ತಂಡವಾಗಿ ಆಡಬೇಕು ಎಂದು ಹೇಳುತ್ತಿದ್ದೆವು,' ಎಂದರು.
ಮುಂದುವರೆದು ಮಾತನಾಡಿದ ಅಂಬಟಿ ರಾಯುಡು, 'ಪಂದ್ಯಗಳನ್ನು ಗೆಲ್ಲಲು ಒಂದು ನಿರ್ದಿಷ್ಟ ಪದ್ಧತಿ ಇರುತ್ತದೆ ಎಂಬುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್ ಅರ್ಥಮಾಡಿಕೊಂಡಿತು. ತಂಡದಲ್ಲಿ ಅಗತ್ಯ ಬದಲಾವಣೆಗಳನ್ನು ತಂದಿತು. ಆರ್‌ಸಿಬಿ ಅಭಿಮಾನಿಗಳಿಗೂ ಈ ಬದಲಾವಣೆಯ ಮಹತ್ವ ಅರಿವಾಗಿದೆ,' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
'ಆರ್‌ಸಿಬಿ ಆಟದ ಶೈಲಿ ಬಗ್ಗೆ ಪುಸ್ತಕವನ್ನೇ ಬರೆಯಬಹುದು'
ಆರ್‌ಸಿಬಿ ತಂಡವು ಈಗ ಐಪಿಎಲ್‌ನ ಇತರ ತಂಡಗಳಿಗೆ ಮಾದರಿಯಾಗಿದೆ ಎಂದು ರಾಯುಡು ಬಣ್ಣಿಸಿದ್ದಾರೆ. 'ಪ್ರಸ್ತುತ ಆರ್‌ಸಿಬಿ ಇತರ ಫ್ರಾಂಚೈಸಿಗಳಿಗೆ ಸ್ಫೂರ್ತಿಯಾಗಿದೆ. ಅವರ ಆಟದ ಶೈಲಿಯನ್ನು ಆಧರಿಸಿ ಒಂದು ಮಾರ್ಗದರ್ಶಿ ಪುಸ್ತಕವನ್ನೇ ಬರೆಯಬಹುದು. ಕ್ರಿಕೆಟ್ ಹೇಗೆ ಆಧುನಿಕಗೊಳ್ಳುತ್ತಿದೆಯೋ, ಅದಕ್ಕೆ ತಕ್ಕಂತೆ ಬೆಂಗಳೂರು ತಂಡವು ತನ್ನನ್ನು ತಾನು ಬದಲಾಯಿಸಿಕೊಂಡಿದೆ. ಅವರು 'ನ್ಯೂ ವರ್ಷನ್ ಟಿ20 ಮ್ಯಾನೇಜ್‌ಮೆಂಟ್' ತಂತ್ರವನ್ನು ಅಳವಡಿಸಿಕೊಂಡಿದ್ದಾರೆ,' ಎಂದು ಹೇಳಿದರು.
ಸಿಎಸ್‌ಕೆ ತಂಡಕ್ಕೆ ಟಾಂಗ್ ಕೊಟ್ಟ ಅಂಬಟಿ ರಾಯುಡು
ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಂಪ್ರದಾಯಿಕ ಶೈಲಿಯನ್ನು ಅಂಬಟಿ ರಾಯುಡು ಟೀಕಿಸಿದ್ದಾರೆ. 'ಈಗಿನ ಕಾಲದಲ್ಲಿ ಆರ್‌ಸಿಬಿಯಂತೆ ಪೂರ್ವಸಿದ್ಧತೆಯೊಂದಿಗೆ ಆಡಬೇಕೇ ಹೊರತು, ಸಿಎಸ್‌ಕೆ ತಂಡದಂತೆ ಪಂದ್ಯ ಮುಗಿದ ಮೇಲೆ ಕುಳಿತು ಮಾತನಾಡುತ್ತೇವೆ, ಮುಂದಿನ ಪಂದ್ಯಕ್ಕೆ ಆಗ ನೋಡಿಕೊಳ್ಳೋಣ ಎಂದರೆ ನಡೆಯುವುದಿಲ್ಲ. ಪ್ರತಿ ಪಂದ್ಯದಲ್ಲೂ ವಿಭಿನ್ನ ಸವಾಲುಗಳಿರುತ್ತವೆ ಮತ್ತು ಅವುಗಳನ್ನು ತಕ್ಷಣವೇ ಎದುರಿಸಬೇಕು. ಆಗ ಮಾಡದೆ ಮುಂದೆ ಮಾಡುತ್ತೇವೆ ಎಂದರೆ ಫಲಿತಾಂಶ ಸಿಗುವುದಿಲ್ಲ,' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಆರ್‌ಸಿಬಿಯು ಹೊಸ ಮಾನದಂಡವನ್ನು ಸೃಷ್ಟಿಸಿದ್ದು, ಈಗ ಉಳಿದ ತಂಡಗಳು ಬೆಂಗಳೂರು ತಂಡವನ್ನು ಹಿಂಬಾಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂಬಟಿ ರಾಯುಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ತಮ್ಮ ಹಳೆಯ ಟೀಮ್ ಸಿಎಸ್‌ಕೆಗೂ ಮಹತ್ವದ ಸಲಹೆ ನೀಡುವುದರೊಂದಿಗೆ ಟಾಂಗ್ ಕೊಟ್ಟಿದ್ದಾರೆ.


Click it and Unblock the Notifications
