24 ಗಂಟೆಯೂ ವಿದ್ಯುತ್ ಪೂರೈಕೆಗೆ ಮಹಾರಾಷ್ಟ್ರ ಹೊಸ ಪ್ಲ್ಯಾನ್; ಪ್ರತಿ ಯೂನಿಟ್‌ಗೆ ದರ ಎಷ್ಟು? ಇಲ್ಲಿದೆ ವಿವರ
ಹಗಲಿನಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಸೌರಶಕ್ತಿಯನ್ನು ದಿನದ 24 ಗಂಟೆಯೂ ಲಭ್ಯವಾಗುವ ನಿರಂತರ ವಿದ್ಯುತ್ ಆಗಿ ಪರಿವರ್ತಿಸುವ ವಿನೂತನ ಮಾದರಿಯೊಂದನ್ನು ಮಹಾರಾಷ್ಟ್ರ ಜಾರಿಗೆ ತಂದಿದೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (MSEDCL), 25 ವರ್ಷಗಳ ದೀರ್ಘಾವಧಿಯ ಒಪ್ಪಂದದ ಅಡಿಯಲ್ಲಿ 2,500 ಮೆಗಾವ್ಯಾಟ್ 'ರೌಂಡ್-ದಿ-ಕ್ಲಾಕ್' (RTC) ನವೀಕರಿಸಬಹುದಾದ ವಿದ್ಯುತ್ ಖರೀದಿಸಲು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು 5,000 ಮೆಗಾವ್ಯಾಟ್ ಸೌರಶಕ್ತಿಯನ್ನು 2,500 ಮೆಗಾವ್ಯಾಟ್ ನಿರಂತರ ವಿದ್ಯುತ್ ಆಗಿ ಬದಲಾಯಿಸಲಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಹಾಗೂ ಇ-ರಿವರ್ಸ್ ಹರಾಜಿನ ಮೂಲಕ ನಡೆದ ಈ ಪ್ರಕ್ರಿಯೆಯಲ್ಲಿ ಅದಾನಿ ಪವರ್ (Adani Power) ಮುಂಚೂಣಿಯಲ್ಲಿದೆ. ಈ ಒಪ್ಪಂದಕ್ಕೆ ಮಹಾರಾಷ್ಟ್ರ ವಿದ್ಯುತ್ ನಿಯಂತ್ರಣ ಆಯೋಗ ಅನುಮೋದನೆ ನೀಡಿದ್ದು, ಪ್ರತಿ ಯೂನಿಟ್ ವಿದ್ಯುತ್‌ಗೆ ₹5.90 ಸ್ಥಿರ ದರವನ್ನು ನಿಗದಿಪಡಿಸಲಾಗಿದೆ.

ಇತ್ತೀಚಿನ ದೀರ್ಘಾವಧಿಯ ಉಷ್ಣ ವಿದ್ಯುತ್ ಖರೀದಿ ದರಗಳಿಗೆ (ಪ್ರತಿ ಯೂನಿಟ್‌ಗೆ ₹6.31 ರಿಂದ ₹8.90) ಹೋಲಿಸಿದರೆ, ಈ ದರವು ಗ್ರಾಹಕರಿಗೆ ಅತ್ಯಂತ ಕೈಗೆಟುಕುವಂತಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಮುಂದಿನ 25 ವರ್ಷಗಳವರೆಗೆ ಈ ದರವು ಸ್ಥಿರವಾಗಿರಲಿದ್ದು, ವಿದ್ಯುತ್ ಉತ್ಪಾದನಾ ವೆಚ್ಚದ ಏರಿಳಿತದ ಹೊರೆಯನ್ನು ಪೂರೈಕೆದಾರರೇ ಭರಿಸಬೇಕಾಗುತ್ತದೆ.
ಪ್ರತ್ಯೇಕ ಉತ್ಪಾದನಾ ಘಟಕಗಳ ಅಗತ್ಯವಿಲ್ಲ, ಕಠಿಣ ನಿಯಮಗಳ ಜಾರಿ
ಈ ಮಾದರಿಯನ್ನು ವಿಶಿಷ್ಟ ಮತ್ತು ವಿಶೇಷ ಎಂದು ಬಣ್ಣಿಸಿರುವ MERC, ಇದರ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ. ಪೂರೈಕೆಯಾಗುವ ವಿದ್ಯುತ್‌ನಲ್ಲಿ ಕನಿಷ್ಠ ಶೇಕಡ 51 ರಷ್ಟು ನವೀಕರಿಸಬಹುದಾದ ಇಂಧನದ ಪಾಲು ಕಡ್ಡಾಯವಾಗಿರಬೇಕು. ಬಿಡ್‌ದಾರರು ಪ್ರತ್ಯೇಕ ಉತ್ಪಾದನಾ ಘಟಕಗಳನ್ನು ಹೊಂದಿರಬೇಕಾದ ಅಗತ್ಯವಿಲ್ಲ. ಆದರೆ ವಿದ್ಯುತ್ ಸಂಗ್ರಹಣೆ, ವೇಳಾಪಟ್ಟಿ ಮತ್ತು ಸಮತೋಲನ ಕಾಯ್ದುಕೊಳ್ಳುವ ಸಂಪೂರ್ಣ ಜವಾಬ್ದಾರಿ ಪೂರೈಕೆದಾರರದ್ದಾಗಿರುತ್ತದೆ. ಒಪ್ಪಂದದಂತೆ ನಿರಂತರ ವಿದ್ಯುತ್ ಪೂರೈಸಲು ವಿಫಲವಾದಲ್ಲಿ, ನಿಗದಿತ ದರದ ಶೇಕಡ 400ರಷ್ಟು ಭಾರಿ ದಂಡವನ್ನು ವಿಧಿಸುವ ಕಠಿಣ ಷರತ್ತನ್ನು ಈ ಟೆಂಡರ್‌ನಲ್ಲಿ ಸೇರಿಸಲಾಗಿದೆ.
ಇತರ ರಾಜ್ಯಗಳಿಗೂ ಮಾದರಿಯಾದ ಯೋಜನೆ
ಹಗಲಿನಲ್ಲಿ ಹೆಚ್ಚುವರಿ ಸೌರಶಕ್ತಿ ಉತ್ಪಾದನೆಯಾಗಿ ಅದು ವ್ಯರ್ಥವಾಗುವುದನ್ನು ತಡೆಯಲು, ಪ್ರಸರಣ ಜಾಲವನ್ನು (Transmission Network) ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಯೋಜನೆ ನೆರವಾಗಲಿದೆ. ಈಗಾಗಲೇ ಪಶ್ಚಿಮ ಬಂಗಾಳ ಕೂಡ ಇದೇ ಮಾದರಿಯ ವಿದ್ಯುತ್ ಖರೀದಿಗೆ ಮುಂದಾಗಿದ್ದು, ದೇಶದ ಇತರ ರಾಜ್ಯಗಳಿಗೂ ಹಸಿರು ಇಂಧನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಹಾರಾಷ್ಟ್ರದ ಈ ಮಾದರಿ ಹೊಸ ದಿಕ್ಸೂಚಿಯಾಗಿದೆ ಎಂದು ಹೇಳಬಹುದು.


Click it and Unblock the Notifications
