ಭಾರತದ ಏಕದಿನ ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್‌ಗಿಲ್ಲ ಸ್ಥಾನ: ಯುವರಾಜ್ ಸಿಂಗ್ ಹೇಳಿದ್ದೇನು?
Yuvraj Singh: ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಯುವ ಆಟಗಾರರಾದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರಿಗೆ ಭಾರತೀಯ ಏಕದಿನ ತಂಡದಲ್ಲಿ ನಿಯಮಿತವಾಗಿ ಅವಕಾಶ ಸಿಗದಿರುವ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಮೂವರನ್ನು 50 ಓವರ್‌ಗಳ ಕ್ರಿಕೆಟ್‌ಗೆ ಆಯ್ಕೆ ಮಾಡದಿರುವುದು ಅವರ ಅಪಾರ ಕೌಶಲಕ್ಕೆ ಮಾಡುವ ಅನ್ಯಾಯ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯುವರಾಜ್ ಸಿಂಗ್, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಅವರಂತಹ ಆಟಗಾರರು ಏಕದಿನ ಕ್ರಿಕೆಟ್‌ಗೆ ಅರ್ಹರು ಎಂದು ಹೇಳುವ ಮೂಲ ಗಮನ ಸೆಳೆದಿದ್ದಾರೆ.

ಯುವರಾಜ್ ಸಿಂಗ್ ಹೇಳಿದ್ದೇನು?
'ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಪ್ರತಿಭಾವಂತ ಆಟಗಾರರನ್ನು ಏಕದಿನ ಕ್ರಿಕೆಟ್‌ಗೆ ಆಯ್ಕೆ ಮಾಡದಿದ್ದರೆ, ಅವರ ಪ್ರತಿಭೆಗೆ ನಾವು ನ್ಯಾಯ ಒದಗಿಸುತ್ತಿಲ್ಲ ಎಂದರ್ಥ. ಅಭಿಷೇಕ್ ಏಕದಿನ ಮಾದರಿಯಲ್ಲೂ ಭಾರತವನ್ನು ಪ್ರತಿನಿಧಿಸುವುದನ್ನು ನೋಡಲು ನಾನು ಬಯಸುತ್ತೇನೆ,' ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವ ಆಟಗಾರರಿಗೆ ತಕ್ಷಣ ಅವಕಾಶ ಸಿಗಲ್ಲ ಯಾಕೆ?
ಹಿರಿಯ ಆಟಗಾರರ ಉಪಸ್ಥಿತಿಯಿಂದಾಗಿ ಯುವ ಆಟಗಾರರಿಗೆ ತಕ್ಷಣವೇ ಸ್ಥಾನ ಸಿಗುವುದು ಸುಲಭವಲ್ಲ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. 'ನಮ್ಮ ತಂಡದಲ್ಲಿ ಈಗಾಗಲೇ ಹಲವು ದಿಗ್ಗಜ ಆಟಗಾರರಿದ್ದಾರೆ. ಹಾಗಾಗಿ ಯುವಕರಿಗೆ ಸ್ಥಾನ ಕಲ್ಪಿಸುವುದು ಸವಾಲಿನ ಕೆಲಸ. ಆದರೆ ಇತ್ತೀಚಿನ ದಿನಗಳಲ್ಲಿ ಈ ಯುವ ಬ್ಯಾಟರ್‌ಗಳು ಪ್ರದರ್ಶಿಸುತ್ತಿರುವ ಅದ್ಭುತ ಆಟವನ್ನು ನೋಡಿದರೆ, ಶೀಘ್ರದಲ್ಲೇ ಅವರಿಗೆ ಏಕದಿನ ತಂಡದಲ್ಲಿ ಅವಕಾಶ ಸಿಗಲಿದೆ ಎಂಬ ಭರವಸೆ ಇದೆ,' ಎಂದು ತಿಳಿಸಿದ್ದಾರೆ.
ಅಭಿಷೇಕ್ ಶರ್ಮಾ ಶ್ರಮಕ್ಕೆ ಯುವಿ ಮೆಚ್ಚುಗೆ
ಯುವರಾಜ್ ಸಿಂಗ್ ಅವರು ಅಭಿಷೇಕ್ ಶರ್ಮಾ ಅವರ ದೀರ್ಘಕಾಲದ ಮಾರ್ಗದರ್ಶಕರಾಗಿದ್ದಾರೆ. ಅಭಿಷೇಕ್ ಇಂದು ಗಳಿಸಿರುವ ಎಲ್ಲಾ ಯಶಸ್ಸಿಗೆ ಅವರ ಕಠಿಣ ಪರಿಶ್ರಮವೇ ಕಾರಣ ಎಂದು ಯುವರಾಜ್ ಶ್ಲಾಘಿಸಿದರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ, 35 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸೃಷ್ಟಿಸಿದ್ದ ದಾಖಲೆಯನ್ನು ಮುರಿಯಲು ಸಲ್ಪದರಲ್ಲಿ ತಪ್ಪಿಸಿಕೊಂಡಿದ್ದರು.
ಅಭಿಷೇಕ್ ಶರ್ಮಾ ಕಾಲೆಳೆದ ಯುವರಾಜ್ ಸಿಂಗ್
ಇನ್ನೂ ಈ ಪಂದ್ಯದ ನಂತರ ಯುವರಾಜ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಭಿಷೇಕ್ ಅವರನ್ನು ಕಾಳೆದಿದ್ದು, 'ನೀನು ಇನ್ನೂ 12 ಎಸೆತಗಳಲ್ಲಿ 50 ರನ್ ಹೊಡೆಯಲು ಸಾಧ್ಯವಿಲ್ಲ ಅಲ್ಲವೇ?,' ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಇದಕ್ಕೆ ಉತ್ತರಿಸಿದ ಶಿಶ್ಯ ಅಭಿಷೇಕ್ ಶರ್ಮಾ, 'ಯುವಿ ಬಾಯ್ ಆ ಸಮಯದಲ್ಲಿ ಯಾವ ರೀತಿಯ ಕ್ರಿಕೆಟ್ ಆಡುತ್ತಿದ್ದರೆಂದು ನನಗೆ ಗೊತ್ತಿಲ್ಲ. ಆದರೆ 12 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಯಾವುದೇ ಬ್ಯಾಟರ್ ಮೈದಾನಕ್ಕೆ ಇಳಿದ ತಕ್ಷಣ ಅಂತಹ ದಾಖಲೆಗಳನ್ನು ಮಾಡಲು ಸಾಧ್ಯವಿಲ್ಲ. ಅದು ಅಪರೂಪಕ್ಕೊಮ್ಮೆ ಮಾತ್ರ ನಡೆಯುತ್ತದೆ,' ಎಂದು ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಯುವ ಆಟಗಾರರ ಸ್ಪೋಟಕ ಆಟದ ಶೈಲಿ ಮತ್ತು ಸತತ ಶ್ರೇಷ್ಠ ಪ್ರದರ್ಶನವು ಬಿಸಿಸಿಐ ಆಯ್ಕೆ ಮಂಡಳಿಗೆ ಧನಾತ್ಮಕ ಒತ್ತಡ ಹೇರುತ್ತಿದ್ದು, ಶೀಘ್ರದಲ್ಲೇ ಇವರಿಗೆ ಏಕದಿನ ತಂಡದಲ್ಲೂ ಅವಕಾಶ ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಯುವರಾಜ್ ಸಿಂಗ್ ಅವರ ಆಸೆಯಂತೆ ತಮ್ಮ ಶಿಶ್ಯ ಅಭಿಷೇಕ್ ಸೇರಿದಂತೆ ವೈಭವ್, ಇಶಾನ್ ಕಿಶನ್‌ಗೆ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಅವಕಾಶ ಸಿಗುತ್ತದೆಯಾ ಎಂದು ಕಾದುನೋಡಬೇಕಿದೆ.


Click it and Unblock the Notifications
