Bengaluru Metro New Record: ಅಕ್ಟೋಬರ್‌ನಲ್ಲಿ ಒಂದೇ ದಿನ 11.91 ಲಕ್ಷ ಮಂದಿ ಪ್ರಯಾಣ, 306.90 ಲಕ್ಷ ಒಟ್ಟು ಓಡಾಟ! ವರದಿ
ಬೆಂಗಳೂರು: ರಾಜಧಾನಿ ಬೆಂಗಳೂರಿಗರ ಜೀವನಾಡಿ ' ನಮ್ಮ ಮೆಟ್ರೋ' ಸಾರಿಗೆಯು ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ಬರೆದಿದೆ. ಒಂದೇ ದಿನ ಸುಮಾರು 11.91 ಲಕ್ಷ ಮಂದಿ ಸಂಚಾರ ಮಾಡಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಇನ್ನೂ ಒಟ್ಟಾರೆ ತಿಂಗಳ ಓಡಾಡಿದವರ ಸಂಖ್ಯೆ 306.90 ಲಕ್ಷ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.
ಇಂದು ಬುಧವಾರ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 2026ರ ಅಕ್ಟೋಬರ್ ತಿಂಗಳ ಮೂರು ಮಾರ್ಗಗಳಲ್ಲಿನ ಸಂಪೂರ್ಣ ಮೆಟ್ರೋ ಕಾರ್ಯಾಚರಣೆ, ಕಾರ್ಯಕ್ಷಮತೆ ವಿವರ ನೀಡಿದೆ. ಘಲ್ಲಘಟ್ಟ-ವೈಟ್‌ಫಿಲ್ಡ್ ವರೆಗಿನ ನೇರಳೆ ಮಾರ್ಗ, ಮಾದಾವರ-ರೇಷ್ಮೆ ಸಂಸ್ಥೆ ವರೆಗಿನ ಹಸಿರು ಮಾರ್ಗ ಹಾಗೂ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗಗಳಲ್ಲಿ ಒಟ್ಟು 96.1 ಕಿಲೋ ಮೀಟರ್ ಮೆಟ್ರೋ ಜಾಲದಲ್ಲಿ ಅಕ್ಟೋಬರ್ ಒಂದೇ ತಿಂಗಳಲ್ಲಿ 306.90 ಲಕ್ಷ ಮಂದಿ ಓಡಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ದಿನ 11.91 ಲಕ್ಷ ಮಂದಿ ಓಡಾಟ, ಸಾರ್ವಕಾಲಿಕ ದಾಖಲೆ
ಬೆಂಗಳೂರಿನಲ್ಲಿ ಈವರೆಗೆ ಒಂದೇ ದಿನ 10-11 ಲಕ್ಷ ಒಳಗೆ ಸಂಚಾರ ಮಾಡಿದ ದಾಖಲೆಯನ್ನು ಕಳೆದ ಅಕ್ಟೋಬರ್ 16ರಂದು ಬ್ರೇಕ್ ಆಗಿದೆ. ಅಂದು ಒಂದೇ ದಿನ 11,91744 ಲಕ್ಷ ಪ್ರಯಾಣಿಕರು ಮೂರು ಲೈನ್‌ನಲ್ಲಿ ಓಡಾಡುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿದ್ದಾರೆ.
ಒಂದು ತಿಂಗಳಲ್ಲಿ ಒಟ್ಟಾರೆ ಸರಾಸರಿ ದೈನಂದಿನ ಓಡಾಟದ ಸಂಖ್ಯೆ ಬರೋಬ್ಬರಿ 10.23 ಲಕ್ಷ ಎಂದು ಅಧಿಕಾರಿಗಳ ಅಧಿಕೃತ ಅಂಕಿ ಸಂಖ್ಯೆ ನೀಡಿದ್ದಾರೆ. ಈ ಮೂಲಕ ದರ ಏರಿಕೆ ನಡುವೆಯು ಟ್ರಾಫಿಕ್‌ನಿಂದ ಮುಕ್ತಿ ಪಡೆಯಲು ಜನರು ಹೆಚ್ಚಾಗಿ ವೇಗದ ಮತ್ತು ಸುರಕ್ಷಿತ ನಮ್ಮ ಮೆಟ್ರೋ ಸಾರಿಗೆ ಬಳಸುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಇತ್ತೀಚೆಗೆ ನವೆಂಬರ್ 13ರಂದು ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ ಆಗಿದ್ದು, ಮುಂದಿನ ದಿನಗಳಲ್ಲಿ ದೈನಂದಿನ ಪ್ರಯಾಣಿಕರ ಸರಾಸರಿ ಓಡಾಟವು ಇನ್ನಷ್ಟು ಹೆಚ್ಚಲಿದೆ.
ರೈಲುಗಳ ಆರ್ವತನ ಸಮಯ
ನಮ್ಮ ಮೆಟ್ರೋ ರೈಲ್ವೆ ಅಧಿಕಾರಿಗಳು ಹೇಳಿರುವ ಪ್ರಕಾರ, ಅಕ್ಟೋಬರ್ ನಲ್ಲಿ ಶೇ.99.71ರಷ್ಟು ಸಮಯಪಾಲನೆ ಆಗಿದೆ. ಇನ್ನೂ ಪೀಕ್ ಸಮಯದಲ್ಲಿ (ಬೆಳಗ್ಗೆ-ಸಂಜೆ ) ನೇರಳೆ ಮಾರ್ಗದಲ್ಲಿ ಪ್ರತಿ 3.3 ನಿಮಿಷಕ್ಕೆ ಒಂದು ರೈಲು ನಿಲ್ದಾಣಕ್ಕೆ ಆಗಮಿಸಿದರೆ, ಹಸಿರು ಮಾರ್ಗದಲ್ಲಿ ಪ್ರತಿ 5ನಿಮಿಷ ಮತ್ತು ಹಳದಿ ಮಾರ್ಗದಲ್ಲಿ ಪ್ರತಿ 6 ನಿಮಷಕ್ಕೆ ಒಂದರಂತೆ ರೈಲುಗಳ ಆವರ್ತನವಾಗಿದೆ. ಎಲ್ಲಿ, ಯಾವುದಕ್ಕೂ ಅಡಚಣೆ ಆಗಿಲ್ಲ ಎಂದು ಹೇಳಿಕೊಂಡಿದೆ.
ಮೆಟ್ರೋ ಸೇವೆ ಅಡಚಣೆ ಆಗಿತ್ತು..!
ಆದರೆ ವರದಿಗಳ ಪ್ರಕಾರ, ಅಕ್ಟೋಬರ್ 12ರಂದು ನೇರಳೇ ಮಾರ್ಗದ ವಿಜಯನಗರ-ದೀಪಾಂಜಲಿ ನಗರದಲ್ಲಿ ಹಳಿಗೆ ವ್ಯಕ್ತಿಯೊಬ್ಬರು ಇಳಿದ ಪರಿಣಾಮ ಸುಮಾರು 15 ನಿಮಿಷಗಳ ಕಾಲ ಸಂಚಾರ ಅಡಚಣೆ ಉಂಟಾಗಿತ್ತು. ಇನ್ನೂ ಅಕ್ಟೋಬರ್ 30ರಂದು ಇಂದಿರಾನಗರ ಬಳಿ ಪ್ರಯಾಣಿಕರೊಬ್ಬರು ಹಳಿಗೆ ಇಳಿದ ಪರಿಣಾಮ ಬೆಳಗ್ಗೆ ಹಲವು ನಿಮಿಷಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ಎಲ್ಲ ಮೆಟ್ರೋಗಳು ಎಂದಿನಂತೆ ಸಂಚಾರ ಮಾಡಿದ್ದವು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಈ ನಡುವೆ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ನಮ್ಮ ಮೆಟ್ರೋ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಹೊಸ ಮೆಟ್ರೋ ಮಾರ್ಗಗಳಲ್ಲಿ ಟ್ರಯಲ್ ರನ್
ನಮ್ಮ ಮೆಟ್ರೋ ಗುಲಾಬಿ ಮಾರ್ಗ 7.5 ಕಿಲೋ ಮೀಟರ್ ಕಾರಿಡಾರ್ (ಕಾಳೇನ ಅಗ್ರಹಾರ-ಎಸ್.ಜಿ.ಪಾಳ್ಯ) ನವೆಂಬರ್ 2ನೇ ವಾರ ಲೋಕಾರ್ಪಣೆ ಆಗಿದ್ದು, ಮೊದಲ ದಿನವೇ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಸಂಚರಿಸಿದ್ದಾರೆ. ಇದೇ ಗುಲಾಬಿ ಮಾರ್ಗದ 13.5 ಕಿಲೋ ಮೀಟರ್ ಟನಲ್ ಲೈನ್ ತೆರೆಯಲು ಸರ್ಕಾರ ಸಜ್ಜಾಗಿದೆ. ಎಲ್ಲ ಕಾಮಗಾರಿಗಳು ಮುಗಿದಿದ್ದು, ಕೆಲವೇ ದಿನಗಳಲ್ಲಿ ಟ್ರಯಲ್ ರನ್ ನಡೆಸಲಿದೆ.
ಏರ್ ಪೋರ್ಟ್ ನೀಲಿ ಮಾರ್ಗ
ಸಿಲ್ಕ್ ಬೋರ್ಡ್-ಕೆ.ಆರ್.ಪುರಂವರೆಗಿನ 2ಎ ಹಂತದ ಸುಮಾರು 19 ಕಿಲೋ ಮೀಟರ್ ನೀಲಿ ಮಾರ್ಗದಲ್ಲಿ ಟ್ರಯಲ್ ರನ್ ಶುರುವಾಗಿದೆ. ಪರೀಕ್ಷಾರ್ಥವಾಗಿ ಕೆ.ಆರ್.ಪುರಂನಿಂದ ಮಾರತ್ತಹಳ್ಳಿವರೆಗಿನ ನಾಲ್ಕು ನಿಲ್ದಾಣಗಳ ಮಧ್ಯೆ ಮಾತ್ರವೇ ಟ್ರಯಲ್ ರನ್ ನಡೆದಿದ್ದು, ಶೀಘ್ರವೇ ಇತರ ಮುಂದಿನ ನಾಲ್ಕು ನಿಲ್ದಾಣಗಳ (ಒಟ್ಟು 8) ನಡುವೆ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ. 2027ರ ಮಧ್ಯೆ ಭಾಗದಲ್ಲಿ ನೀಲಿ ಮತ್ತು ಟನಲ್ ಪಿಂಕ್ ಲೈನ್ ತೆರೆಯುವ ಸಾಧ್ಯತೆ ಇದೆ.




Click it and Unblock the Notifications
