Namma Metro: ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಯಶಸ್ವಿ 'ಹೃದಯ' ಸಾಗಣೆ! 70 ನಿಮಿಷಗಳ ಜರ್ನಿ ಹೇಗಿತ್ತು?
ಬೆಂಗಳೂರು: ರಾಜಧಾನಿಯ ನಾಗರಿಕರಿಗೆ ನಿತ್ಯ ಅತ್ಯುತ್ತಮ ಸೇವೆ ನೀಡುವ ನಮ್ಮ ಮೆಟ್ರೋ ಮತ್ತೊಮ್ಮೆ 5ನೇ ಬಾರಿಗೆ ಮಾನವನ ಪ್ರಮುಖ ಅಂಗಾಗ 'ಹೃದಯ' ಸಾಗಣೆಗೆ ಸಾಕ್ಷಿಯಾಗಿದೆ. ಬಹುದೂರದ ಆಸ್ಪತ್ರೆಗೆ ನಮ್ಮ ಮೆಟ್ರೋ ರೈಲಿನಲ್ಲಿ ಯಶಸ್ವಿಯಾಗಿ 'ಜೀವಂತ ಹೃದಯ' ಸಾಗಿಸಲು ಸಹಕಾರಿಯಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ( BMRCL) ನೀಡಿರುವ ಮಾಹಿತಿ ಪ್ರಕಾರ, ದಾನಿಯ ಹೃದಯದ ಸುರಕ್ಷಿತ ಸಾಗಣೆಗೆ ನಮ್ಮ ಮೆಟ್ರೋ ಮೂಲಕ ಬಿಎಂಆರ್‌ಸಿಎಲ್ ನೆರವಾಗಿದೆ. ತುಮಕೂರು ರಸ್ತೆಯ ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ತಮಿಳುನಾಡು ಗಡಿ ಪ್ರದೇಶದಲ್ಲಿರುವ ಹಳದಿ ಮಾರ್ಗದ ಕೊನೆಯ ನಿಲ್ದಾಣ 'ಬೊಮ್ಮಸಂದ್ರ' ಮೆಟ್ರೋ ನಿಲ್ದಾಣದವರೆಗೆ ದಾನಿಯ ಹೃದಯ ಸುರಕ್ಷಿತವಾಗಿ ಇಂದು ಮಂಗಳವಾರ ಸಾಗಿಸಲಾಯಿತು.

ಹೃದಯ ಸಾಗಣೆ "1 ಗಂಟೆ 10' ಜರ್ನಿ ಹೇಗಿತ್ತು?
ಮಧ್ಯಾಹ್ನ 12:20 ಗಂಟೆಗೆ, ಸ್ಪರ್ಶ್ ಆಸ್ಪತ್ರೆಯವರು ವೈದ್ಯಕೀಯ ಸಿಬ್ಬಂದಿ ಹೃದಯ ಸಾಗಣೆ ಪೆಟ್ಟಿಗೆಯಲ್ಲಿ ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದರು. ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ತಂಡವು ಮಧ್ಯಾಹ್ನ 12:23 ಗಂಟೆಗೆ ರೈಲನ್ನು ಹತ್ತಿತು. ಹೃದಯದ ಸುರಕ್ಷಿತ ಸಾಗಣೆಗೆ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ವೈದ್ಯಕೀಯ ತಂಡದೊಂದಿಗೆ ತೆರಳಿದರು.
ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಪ್ರಯಾಣವು ಮಧ್ಯಾಹ್ನ 13:24 ಗಂಟೆಗೆ ("1 ಗಂಟೆ 10 ನಿಮಿಷ") ಯಶಸ್ವಿಯಾಗಿ ಪೂರ್ಣಗೊಂಡಿತು. ಬಳಿಕ ಹೃದಯವನ್ನು ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ಗೆ ಕೊಂಡೊಯ್ಯಲಾಯಿತು.
8ನೇ ಸಲಹ ಅಂಗಾಂಗ,5ನೇ ಬಾರಿಯ ಹೃದಯ ಸಾಗಣೆ
ಈ ಹಿಂದೆಯು ಬೆಂಗಳೂರು ನಮ್ಮ ಮೆಟ್ರೋ ಅಥವಾ ಬಿಎಂಆರ್‌ಸಿಎಲ್ ನೆರವು ನೀಡಿದ ಮಾನವ ಅಂಗಾಂಗ ಸಾಗಣೆಯ 8ನೇ ಸಂದರ್ಭ ಇದಾಗಿದೆ. ಹೃದಯ ಸಾಗಣೆಯ 5ನೇ ಸಂದರ್ಭ ಇದಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಂಸ್ಥೆಗಳೊಂದಿಗೆ ಇಂತಹ ಸಮಯಸಂವೇದಿ ವೈದ್ಯಕೀಯ ತುರ್ತು ಸಹಾಯವನ್ನು ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸದಾ ಬದ್ಧವಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋದಲ್ಲಿ ಈಗಷ್ಟೇ ಅಲ್ಲ ಈ ಹಿಂದೆಯು ಕೆಲವು ಬಾರಿ ಅಂಗಾಂಗ ಯಶಸ್ವಿ ಸಾಗಣೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತೆಯೊಂದಿಗೆ ಅಧಿಕಾರಿಗಳು ಗ್ರೀನ್ ಕಾರಿಡಾರ್ ಮೂಲಕ ಸಾಗಣೆ ಮಾಡಿದ್ದಾರೆ. ಇದರಿಂದ ರೋಗಿಗಳಿಗೆ ಸಕಾಲಕ್ಕೆ ಶಸ್ತ್ರ ಚಿಕಿತ್ಸೆ ದೊರೆಯುವಂತಾಗಿದೆ. ಸಾರಿಗೆ ಸೇವೆ ಜೊತೆಗೆ ಜೀವ ಉಳಿಸುವ ಅಮೂಲ್ಯ ಕೆಲಸಗಳಲ್ಲಿ ನಮ್ಮ ಮೆಟ್ರೋ ಮಹತ್ವದ ಪಾತ್ರ ವಹಿಸಿದೆ.




Click it and Unblock the Notifications
