ಪ್ರೇಯಸಿಗೆ ಪ್ರಪೋಸ್ ಮಾಡಿದ ಕೆಲವೇ ಸೆಕೆಂಡ್‌ಗಳಲ್ಲಿ ಸಮುದ್ರಪಾಲಾದ ವಜ್ರದ ಉಂಗುರ: ವಿಡಿಯೋ ವೈರಲ್!
ಕ್ಯಾಲಿಫೋರ್ನಿಯಾ: ಸಮುದ್ರದ ತೀರದಲ್ಲಿ ಸೂರ್ಯಾಸ್ತವಾಗುವ ಸುಂದರ ಸಮಯದಲ್ಲಿ ಪ್ರೇಯಸಿಗೆ ಪ್ರಪೋಸ್ ಮಾಡುವ ಕನಸು ಕಂಡಿದ್ದ ಅಮೆರಿಕದ ಯುವಕನೊಬ್ಬನಿಗೆ, ಸಂಭ್ರಮದ ಕ್ಷಣವೇ ಜೀವನದ ಅತ್ಯಂತ ಆಘಾತಕಾರಿ ಘಟನೆಯಾಗಿ ಬದಲಾಗಿದೆ. ಪ್ರೇಯಸಿಗೆ ಪ್ರಪೋಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೊಡ್ಡ ಅಲೆಯೊಂದು ಅಪ್ಪಳಿಸಿ, ಆಕೆಯ ಕೈಸೇರಬೇಕಿದ್ದ ದುಬಾರಿ ವಜ್ರದ ಉಂಗುರ ಸಮುದ್ರಪಾಲಾಗಿದೆ.
ಹೌದು, ಕ್ಯಾಲಿಫೋರ್ನಿಯಾದ ಸ್ಯಾನ್ ಕ್ಲೆಮೆಂಟೆಯಲ್ಲಿರುವ ಕ್ಯಾಲಾಫಿಯಾ ಸ್ಟೇಟ್ ಬೀಚ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಸದ್ಯ ಸೋಶೀಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರೇಯಸಿಯನ್ನ ರಕ್ಷಿಸಲು ಹೋಗಿ ಕೈಜಾರಿದ ವಜ್ರದ ಉಂಗುರ
ಜೇಸ್ ಹ್ಯಾರಿಕ್ ಎಂಬ ಯುವಕ ತನ್ನ ಪ್ರೇಯಸಿ ಜೋಯಿ ಮ್ಯಾಟಿನ್ಸನ್ ಅವರಿಗೆ ಸೂರ್ಯಾಸ್ತದ ವೇಳೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಮರಾಲ್ಡ್-ಕಟ್ ಡಿಸೈನ್‌ನ 4 ಕ್ಯಾರೆಟ್ ವಜ್ರದ ಉಂಗುರ ನೀಡಿ ಪ್ರಪೋಸ್ ಮಾಡಿದ್ದ. ಪ್ರೇಯಸಿ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಜೋಡಿ ಸಂಭ್ರಮಿಸುತ್ತಿದ್ದಾಗ, ಸಮುದ್ರದ ಎದ್ದ ದೊಡ್ಡ ಅಲೆಯೊಂದು ರಭಸವಾಗಿ ಇವರತ್ತ ಬಂದಿತ್ತು.
ಅಲೆಯ ಹೊಡೆತದಿಂದ ಪ್ರೇಯಸಿ ಕೊಚ್ಚಿ ಹೋಗದಂತೆ ರಕ್ಷಿಸಲು ಜೇಸ್ ತಕ್ಷಣವೇ ಆಕೆಯನ್ನ ಎತ್ತಿಕೊಳ್ಳಲು ಮುಂದಾದ. ಆ ವೇಳೆ ಆತನ ಜೇಬಿನಲ್ಲಿ ಇಬ್ಬರ ಮೊಬೈಲ್, ಪರ್ಸ್ ಹಾಗೂ ಕೀಗಳಿದ್ದ ಕಾರಣ, ಉಂಗುರದ ಬಾಕ್ಸ್ ಅನ್ನಾ ಆತ ಕೈಯಲ್ಲೇ ಹಿಡಿದುಕೊಂಡಿದ್ದ. ಪ್ರೇಯಸಿಯನ್ನ ಎತ್ತಿಕೊಳ್ಳುವ ಭರದಲ್ಲಿ ಕೈಯಲ್ಲಿದ್ದ ಉಂಗುರದ ಬಾಕ್ಸ್ ಜಾರಿ ಮೊಣಕಾಲು ಮಟ್ಟದ ನೀರಿನಲ್ಲಿ ಕೊಚ್ಚಿ ಹೋಯಿತು.
ಮೆಟಲ್ ಡಿಟೆಕ್ಟರ್, ಡೈವರ್ಸ್ ಬಳಸಿ ಶೋಧ: ಜನರ ನೆರವು
ಉಂಗುರ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಬೀಚ್‌ನಲ್ಲಿದ್ದ ಪ್ರವಾಸಿಗರು ಹಾಗೂ ಕುಟುಂಬಸ್ಥರು ತಕ್ಷಣವೇ ನೀರು ಮತ್ತು ಮರಳಿನಲ್ಲಿ ಹುಡುಕಾಟ ಆರಂಭಿಸಿದರು. ಸ್ಥಳದಲ್ಲಿದ್ದ ಜೆಸ್ಸಿಕಾ ಲಿಕಾನ್ ಎಂಬುವವರು ಮಾತನಾಡಿ, "ಮೊದಲು ಇವರು ಪ್ರಪೋಸಲ್ ಸಂಭ್ರಮಿಸುತ್ತಿದ್ದಾರೆ ಎಂದು ನನ್ನ ಪತಿ ಭಾವಿಸಿದ್ದರು. ಆದರೆ ಹತ್ತಿರ ಹೋದಾಗಲೇ ಉಂಗುರ ಕಳೆದುಹೋಗಿರುವುದು ತಿಳಿಯಿತು" ಎಂದಿದ್ದಾರೆ.
ಮೆಟಲ್ ಡಿಟೆಕ್ಟರ್‌ಗಳನ್ನ ಹಿಡಿದು ಬಂದ ಕೆಲವು ಟ್ರೆಷರ್ ಹಂಟರ್ಸ್ ಕೂಡ ಇಡೀ ಸಮುದ್ರ ತೀರವನ್ನ ಜಾಲಾಡಿದರು. ಆದರೆ, ಉಂಗುರ ಮಾತ್ರ ಪತ್ತೆಯಾಗಲಿಲ್ಲ. ಇದೀಗ ಸ್ವಯಂಸೇವಕ ಡೈವರ್ ಒಬ್ಬರು ಸಮುದ್ರದ ಆಳದಲ್ಲಿ ಉಂಗುರ ಹುಡುಕಿಕೊಡಲು ಮುಂದೆ ಬಂದಿದ್ದಾರೆ. ಅಲ್ಲದೆ, ಉಂಗುರವನ್ನ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಜೇಸ್ ಘೋಷಿಸಿದ್ದಾರೆ.
'ಆಕೆ ಸುರಕ್ಷಿತವಾಗಿರುವುದೇ ಮುಖ್ಯ': ವಿಡಿಯೋ ಹಂಚಿಕೊಂಡ ಜೇಸ್!
ಈ ಘಟನೆಯ ವಿಡಿಯೋವನ್ನಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಜೇಸ್, "ಇದು ನನ್ನ ಜೀವನದ ಅತ್ಯುತ್ತಮ ಹಾಗೂ ಅಷ್ಟೇ ಕ್ರೂರ ಕ್ಷಣ. ಪ್ರಕೃತಿ ಮಾತೆಯೇ, ದಯವಿಟ್ಟು ನಮ್ಮ ಉಂಗುರವನ್ನ ವಾಪಸ್ ಕೊಡು" ಎಂದು ಬರೆದುಕೊಂಡಿದ್ದಾರೆ.
ಇಷ್ಟೆಲ್ಲಾ ನಷ್ಟವಾದರೂ ಸಕಾರಾತ್ಮಕವಾಗಿಯೇ ಮಾತನಾಡಿರುವ ಜೇಸ್, "ನಾನು ಬೇರೆ ಉಂಗುರ ಕೊಡಿಸಲು ಸಿದ್ಧನಿದ್ದೇನೆ. ನನ್ನ ಭಾವಿ ಪತ್ನಿ ಸುರಕ್ಷಿತವಾಗಿರುವುದೇ ನನಗೆ ಅತಿ ಮುಖ್ಯ" ಎಂದು ಹೇಳುವ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ.
ಮುಂಬರುವ ಫೆಬ್ರವರಿಯಲ್ಲಿ ಈ ಜೋಡಿಯ ವಿವಾಹ ನಿಗದಿಯಾಗಿದ್ದು, ನ್ಯೂಯಾರ್ಕ್‌ನ ಆಭರಣ ಮಳಿಗೆಯೊಂದು ಇವರಿಗೆ ಹೊಸ ಉಂಗುರ ತಯಾರಿಸಿಕೊಡಲು ಮುಂದೆ ಬಂದಿದೆ.




Click it and Unblock the Notifications
