ಸಚಿನ್, ಕೊಹ್ಲಿ ಬಳಿಕ ವೈಭವ್ ದೇವರ ಮಗ.. 2027ರ ವಿಶ್ವಕಪ್‌ನಲ್ಲೂ ಸೂರ್ಯವಂಶಿಗೆ ಸ್ಥಾನ ನೀಡುವಂತೆ BCCIಗೆ ಮನವಿ
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ಟೀಮ್ ಇಂಡಿಯಾ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಇದರ ಬೆನ್ನಲ್ಲೇ ಅವರಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಇದೀಗ ಮಾಜಿ ಕ್ರಿಕೆಟರ್ ಆಯ್ಕೆ ಸಮಿತಿ ಹಾಗೂ ಬಿಸಿಸಿಐಗೆ ಮಹತ್ವದ ಮನವಿ ಮಾಡಿದ್ದಾರೆ.
ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚಿ ವಿಶ್ವದಾಖಲೆ ಬರೆದಿರುವ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಟೀಮ್ ಇಂಡಿಯಾದ ಎಲ್ಲಾ ಮೂರು ಮಾದರಿಗಳಿಗೂ ಪರಿಗಣಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ವರ್ಷ ನಡೆಯಲಿರುವ 2027ರ ಏಕದಿನ ವಿಶ್ವಕಪ್ ತಂಡದಲ್ಲೂ ಈ ಯುವ ಪ್ರತಿಭೆಗೆ ಸ್ಥಾನ ನೀಡಬೇಕು ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ.

ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಮಹತ್ವದ ಶ್ರೀಕಾಂತ್ ಸಲಹೆ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಶ್ರೀಕಾಂತ್ ಅವರು, ವೈಭವ್ ಸೂರ್ಯವಂಶಿಯನ್ನು ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ 'ಆಲ್-ಫಾರ್ಮ್ಯಾಟ್' (ಎಲ್ಲಾ ಮಾದರಿಯ) ಆಟಗಾರ ಎಂದು ಬಣ್ಣಿಸಿದ್ದಾರೆ. 'ಆತ ಎಲ್ಲಾ ಮಾದರಿಗೂ ಸಲ್ಲುವ ಆಟಗಾರ. ಒಂದು ವೇಳೆ ನಿಮಗೆ ಆತನನ್ನು ಟೆಸ್ಟ್ ಪಂದ್ಯಗಳಲ್ಲಿ ಆಡಿಸಲು ಇಷ್ಟವಿಲ್ಲದಿದ್ದರೆ ಪರವಾಗಿಲ್ಲ. ಆದರೆ ಕನಿಷ್ಠ 15 ಸದಸ್ಯರ ತಂಡದಲ್ಲಾದರೂ ಇರಿಸಿಕೊಳ್ಳಿ,' ಎಂದು ಮನವಿ ಮಾಡಿದ್ದಾರೆ.
2027ರ ವಿಶ್ವಕಪ್‌ಗೆ ವೈಭವ್ ಕರೆದೊಯ್ಯುವಂತೆ ಮನವಿ
'ಶೀಘ್ರದಲ್ಲೇ ಶ್ರೀಲಂಕಾ ತಂಡ ಏಕದಿನ ಸರಣಿಗಾಗಿ ಭಾರತಕ್ಕೆ ಬರುತ್ತಿದೆ, ಆ ಸರಣಿಯಲ್ಲಿ ಆತನಿಗೆ ಅವಕಾಶ ನೀಡಿ. ನಿಮಗೆ ಸೂರ್ಯವಂಶಿಯನ್ನು ನಿಜವಾಗಿಯೂ ಬೆಳೆಸುವ ಮನಸ್ಸಿದ್ದರೆ, 2027ರ ವಿಶ್ವಕಪ್‌ಗೆ ಆತನನ್ನು ಕರೆದೊಯ್ಯಿರಿ. ಮುಂದೊಂದು ದಿನ ಆತ ಏಕಾಂಗಿಯಾಗಿ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾನೆ,' ಎಂದು ಶ್ರೀಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ವೈಭವ್ ಪ್ರತಿಭೆಯನ್ನು ಹಾಳು ಮಾಡಬೇಡಿ'
ವೈಭವ್ ಸೂರ್ಯವಂಶಿ ಕೇವಲ ತೋಳ್ಬಲದಿಂದ ಆಡುತ್ತಾರೆ ಎಂಬ ವಾದವನ್ನು ತಳ್ಳಿಹಾಕಿರುವ ಶ್ರೀಕಾಂತ್, ಆತನ ಬ್ಯಾಟಿಂಗ್‌ನಲ್ಲಿ ಅದ್ಭುತವಾದ ಟೈಮಿಂಗ್ ಮತ್ತು ಆತ್ಮವಿಶ್ವಾಸವಿದೆ ಎಂದಿದ್ದಾರೆ. ಅಲ್ಲದೆ, ವೈಭವ್ ಅವರನ್ನು ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಹೋಲಿಸಿದ್ದಾರೆ.
'ವೈಭವ್ ಬ್ಯಾಟಿಂಗ್ ಮಾಡುವ ಶೈಲಿಯನ್ನು ನೋಡಿದರೆ, ಅದು ಕೇವಲ ಶಕ್ತಿಯಿಂದ ಕೂಡಿಲ್ಲ, ಅದ್ಭುತ ಟೈಮಿಂಗ್ ಕೂಡ ಇದೆ. ಕ್ರೀಸ್‌ನಲ್ಲಿ ಆತ ತುಂಬಾ ಶಾಂತವಾಗಿ ಮತ್ತು ಸ್ಥಿರವಾಗಿ ಕಾಣುತ್ತಾನೆ, ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ. ತಾನು ಏನು ಮಾಡುತ್ತಿದ್ದೇನೆ ಎಂಬ ಸ್ಪಷ್ಟ ಅರಿವು ಆತನಿಗಿದೆ. ಅವರು ಅಸಾಮಾನ್ಯ ಪ್ರತಿಭೆ. ಮೊದಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಂದರು, ನಂತರ 'ಕಿಂಗ್' ವಿರಾಟ್ ಕೊಹ್ಲಿ ಬಂದರು. ಈಗ ಈತ 'ಕ್ರಿಕೆಟ್ ದೇವರ ಮಗ'ನಂತೆ ಬಂದಿದ್ದಾನೆ,' ಎಂದು ಶ್ರೀಕಾಂತ್ ಕೊಂಡಾಡಿದ್ದಾರೆ.
ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್‌ಮೆಂಟ್‌ಗೆ ಎಚ್ಚರಿಕೆ
ಇದೇ ವೇಳೆ ಯುವ ಆಟಗಾರನನ್ನು 'ಇನ್ನೂ ಪಳಗಿಸಬೇಕು' ಎಂಬ ನೆಪವೊಡ್ಡಿ ಅವಕಾಶ ವಂಚಿತನನ್ನಾಗಿ ಮಾಡಬೇಡಿ ಎಂದು ಶ್ರೀಕಾಂತ್ ಎಚ್ಚರಿಸಿದ್ದಾರೆ. 'ನೀವು ಈ ಹುಡುಗನನ್ನು ಪ್ರೋತ್ಸಾಹಿಸದೆ, ಇನ್ನೂ ಪಳಗಿಸಬೇಕು ಎಂದು ಹೇಳುತ್ತಾ ಕಾಲಹರಣ ಮಾಡಿದರೆ ಅದು ಆತನಿಗೆ ಮಾಡುವ ಅನ್ಯಾಯವಾಗುತ್ತದೆ. ಈ ರೀತಿ ಮಾಡುವುದರಿಂದ ಒಬ್ಬ ಅತ್ಯುತ್ತಮ ಕ್ರಿಕೆಟಿಗನನ್ನು ನೀವೇ ಹಾಳು ಮಾಡಿದಂತಾಗುತ್ತದೆ. ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರೇ, ದಯವಿಟ್ಟು ಎಚ್ಚೆತ್ತುಕೊಳ್ಳಿ,' ಎಂದು ಖಡಕ್ ಆಗಿ ಹೇಳಿದ್ದಾರೆ.


Click it and Unblock the Notifications
