ಬಾಹ್ಯಾಕಾಶದಲ್ಲಿ ಪಾಕ್ ಗಗನಯಾತ್ರಿಗೆ ಹಲಾಲ್ ಬಟರ್ ಚಿಕನ್, ಲ್ಯಾಂಬ್ ಕೋರ್ಮಾ, ಬೀಫ್ ನಿಹಾರಿ! ಇದೇನು ಭರ್ಜರಿ ಭೋಜನ?
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಏನು ತಿನ್ನುತ್ತಾರೆ? ಅಲ್ಲಿಗೆ ಹೋದ ಮೇಲೆ ನಮಗೆ ಇಷ್ಟವಾದ ಆಹಾರ ಸಿಗುತ್ತದೆಯೇ? ಭೂಮಿಯಂತೆ ಅಡುಗೆ ಮಾಡಿ ಬಿಸಿ ಬಿಸಿ ಊಟ ಮಾಡಬಹುದೇ? ಇಂತಹ ಪ್ರಶ್ನೆಗಳಿಗೆ ಕುತೂಹಲಕಾರಿ ಉತ್ತರ ನೀಡುವ ಸುದ್ದಿಯೊಂದು ಈಗ ಗಮನ ಸೆಳೆದಿದೆ. ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಪಾಕಿಸ್ತಾನದ ಗಗನಯಾತ್ರಿ ಮುಹಮ್ಮದ್ ಜೀಶಾನ್ ಅಲಿ ಅವರಿಗಾಗಿ 100ಕ್ಕೂ ಹೆಚ್ಚು ಬಗೆಯ ಹಲಾಲ್ ಆಹಾರಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಬಟರ್ ಚಿಕನ್, ಲ್ಯಾಂಬ್ ಕೋರ್ಮಾ, ಬೀಫ್ ನಿಹಾರಿ ಮತ್ತು ಮಸಾಲೆಯುಕ್ತ ಕಡಲೆಕಾಳಿನ ಖಾದ್ಯಗಳೂ ಸೇರಿವೆ!
ಇದನ್ನು ನೋಡಿದರೆ, ಪಾಕಿಸ್ತಾನದಲ್ಲಿ ಸಿಗದ ರುಚಿಕರ ಆಹಾರವನ್ನೆಲ್ಲ ಕಬಳಿಸಲಿಕ್ಕೇ ಈತ ಅಲ್ಲಿಗೆ ಹೋದ ಎಂದು ಭಾವಿಸುವಂತೆ ಇದೆ.
ಬಾಹ್ಯಾಕಾಶದಲ್ಲಿ ತೇಲುತ್ತಾ ಊಟ ಮಾಡುವ ಗಗನಯಾತ್ರಿಗೆ ತಮ್ಮ ದೇಶದ ನೆಚ್ಚಿನ ಆಹಾರ ಸಿಗುವಂತೆ ಮಾಡಲು ಚೀನಾ ವಿಶೇಷ ವ್ಯವಸ್ಥೆ ಮಾಡಿರುವುದು ಈ ಸುದ್ದಿಯ ವಿಶೇಷ. ಆಹಾರ ಸಿದ್ಧಪಡಿಸುವಾಗ ಅವರ ಧಾರ್ಮಿಕ ನಂಬಿಕೆ, ಆಹಾರದ ಅಭಿರುಚಿ, ಪೌಷ್ಟಿಕಾಂಶದ ಅಗತ್ಯ ಮತ್ತು ಆರೋಗ್ಯದ ಬಗ್ಗೆಯೂ ಗಮನ ಹರಿಸಲಾಗಿದೆ.

Pakistani Astronaut ಸ್ಪೇಸಿಗೆ ತಿನ್ನೋಕೆ ಹೋಗಿದ್ದಾ?
40 ವರ್ಷದ ಮುಹಮ್ಮದ್ ಜೀಶಾನ್ ಅಲಿ ಅವರು ನವೆಂಬರ್ 25ರಂದು ಶೆನ್‌ಝೌ-24 ಬಾಹ್ಯಾಕಾಶ ನೌಕೆಯ ಮೂಲಕ ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ. ಈ ಮೂಲಕ ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನದಿಂದ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಗಗನಯಾತ್ರಿಯೂ ಇವರೇ.
ಅವರ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ವಿಶೇಷ ಮೆನುವೊಂದನ್ನು ಸಿದ್ಧಪಡಿಸಿದೆ. ಬೀಫ್ ನಿಹಾರಿ, ಲ್ಯಾಂಬ್ ಕೋರ್ಮಾ, ಬಟರ್ ಚಿಕನ್ ಮತ್ತು ಕರಿದ ಕಡಲೆಕಾಳಿನ ಖಾದ್ಯಗಳು ಈ ಪಟ್ಟಿಯಲ್ಲಿವೆ. ಅರಿಶಿನ, ಕರಿಬೇವು ಸೇರಿದಂತೆ ಪಾಕಿಸ್ತಾನದ ಅಡುಗೆಯಲ್ಲಿ ಬಳಸುವ ಮಸಾಲೆಗಳ ಬಗ್ಗೆಯೂ ಆಹಾರ ತಯಾರಕರು ಗಮನ ನೀಡಿದ್ದಾರೆ.
china ಆಸ್ಟ್ರೋನಾಟ್ ಸೆಂಟರ್‌ನ ಸಂಶೋಧಕಿ ಚೆನ್ ಜುನ್ಲಿ ಅವರ ಪ್ರಕಾರ, ಗಗನಯಾತ್ರಿಗಳಿಗೆ ಅಗತ್ಯವಾದ ಶಕ್ತಿ ಮತ್ತು ಪೌಷ್ಟಿಕಾಂಶ ಒದಗಿಸುವುದರ ಜೊತೆಗೆ ಆಹಾರ ಸುಲಭವಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳಲಾಗಿದೆ. ವಿಶೇಷವಾಗಿ ಬಾಹ್ಯಾಕಾಶಕ್ಕೆ ತೆರಳಿದ ಆರಂಭದ ದಿನಗಳಲ್ಲಿ ಹಗುರವಾದ ಆಹಾರಕ್ಕೆ ಆದ್ಯತೆ ನೀಡಲಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಆಹಾರಗಳ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಹಲಾಲ್ ನಿಯಮಗಳನ್ನು ಪಾಲಿಸಲಾಗಿದೆ. ಅಂದರೆ ಪದಾರ್ಥಗಳ ಆಯ್ಕೆಯಿಂದ ಹಿಡಿದು ಆಹಾರ ಸಂಸ್ಕರಣೆ ಮತ್ತು ಪ್ಯಾಕಿಂಗ್‌ವರೆಗೆ ಇಸ್ಲಾಮಿಕ್ ಆಹಾರ ನಿಯಮಗಳನ್ನು ಅನುಸರಿಸಲಾಗಿದೆ. ಪಾಕಿಸ್ತಾನದ ಗಗನಯಾತ್ರಿಗಳ ಅಭಿಪ್ರಾಯ ಪಡೆದು ಹಲವು ಬಾರಿ ರುಚಿ ಪರೀಕ್ಷೆ ನಡೆಸಿದ ಬಳಿಕ ಅಂತಿಮ ಮೆನು ಸಿದ್ಧಪಡಿಸಲಾಗಿದೆ.
ಆರು ಗಗನಯಾತ್ರಿಗಳಿಗೆ ವಿಶೇಷ ಔತಣಕೂಟ
ಶೆನ್‌ಝೌ-24 ತಂಡದ ಮೂವರು ಗಗನಯಾತ್ರಿಗಳು ಈಗಾಗಲೇ ಟಿಯಾಂಗಾಂಗ್ ನಿಲ್ದಾಣದಲ್ಲಿದ್ದ ಶೆನ್‌ಝೌ-23 ತಂಡದ ಮೂವರನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಒಟ್ಟು ಆರು ಮಂದಿ ಗಗನಯಾತ್ರಿಗಳು ಒಂದೇ ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲವು ದಿನಗಳ ಕಾಲ ಇರಲಿದ್ದಾರೆ.
ಈ ಆರು ಮಂದಿಗಾಗಿ ವಿಶೇಷ ಭೋಜನಕೂಟವನ್ನೂ ಆಯೋಜಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಆಹಾರ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಹೊಂದಿಕೆಯಾಗುವ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಜೀಶಾನ್ ಅಲಿ ಅವರಿಗೆ ತಮ್ಮ ದೇಶದ ನೆಚ್ಚಿನ ಆಹಾರ ಸವಿಯುವ ಅವಕಾಶ ಸಿಕ್ಕರೆ, ಇತರ ಗಗನಯಾತ್ರಿಗಳಿಗೂ ಹೊಸ ರುಚಿಗಳನ್ನು ಪರಿಚಯಿಸಿಕೊಳ್ಳುವ ಅವಕಾಶ ಸಿಗಲಿದೆ.
ಈ ಬಾಹ್ಯಾಕಾಶ ಪ್ರಯಾಣದ ವೇಳೆ ಅಲಿ ಅವರು ಐದರಿಂದ ಹತ್ತು ದಿನಗಳ ಕಾಲ ಅಲ್ಲಿದ್ದು, ಕೆಲವು ವೈಜ್ಞಾನಿಕ ಪ್ರಯೋಗಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
Space Food: ರೊಟ್ಟಿ ತಿನ್ನಲು ಸಾಧ್ಯವಿಲ್ಲವೇ?
ಬಾಹ್ಯಾಕಾಶದಲ್ಲಿ meals ಮಾಡುವುದು ಭೂಮಿಯಲ್ಲಿರುವಷ್ಟು ಸುಲಭವಲ್ಲ. ಅಲ್ಲಿ ಗುರುತ್ವಾಕರ್ಷಣೆಯ ಪರಿಣಾಮ ಬಹಳ ಕಡಿಮೆ ಇರುವುದರಿಂದ ಆಹಾರ, ನೀರು ಮತ್ತು ಸಣ್ಣ ತುಣುಕುಗಳೂ ತೇಲುತ್ತವೆ. ಹೀಗಾಗಿ ಸಾಮಾನ್ಯ ಅಡುಗೆ ಮಾಡುವುದಕ್ಕೂ, ಊಟ ಮಾಡುವುದಕ್ಕೂ ವಿಶೇಷ ವ್ಯವಸ್ಥೆ ಬೇಕಾಗುತ್ತದೆ.
ಉದಾಹರಣೆಗೆ, ಸಾಮಾನ್ಯ ಬ್ರೆಡ್ ಅಥವಾ ಚಪಾತಿಯಂತಹ ಆಹಾರಗಳಿಂದ ಸಣ್ಣ ತುಣುಕುಗಳು ಉದುರಬಹುದು. ಅವು ಗಾಳಿಯಲ್ಲಿ ತೇಲಿ ಗಗನಯಾತ್ರಿಗಳ ಕಣ್ಣು, ಮೂಗು ಸೇರಬಹುದು ಅಥವಾ ಬಾಹ್ಯಾಕಾಶ ನೌಕೆಯ ಸೂಕ್ಷ್ಮ ಉಪಕರಣಗಳಿಗೆ ತೊಂದರೆ ಉಂಟುಮಾಡಬಹುದು. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬ್ರೆಡ್ ಬದಲಿಗೆ ಟೋರ್ಟಿಲ್ಲಾಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅವುಗಳಿಂದ ತುಣುಕುಗಳು ಉದುರುವ ಸಾಧ್ಯತೆ ಕಡಿಮೆ.
ಬಾಹ್ಯಾಕಾಶದಲ್ಲಿ ಆಹಾರದ ರುಚಿಯೇ ಬದಲಾಗುತ್ತದೆಯೇ?
ಇದು ಬಹಳ ಆಸಕ್ತಿದಾಯಕ ಸಂಗತಿ. ಭೂಮಿಯಲ್ಲಿ ಅತ್ಯಂತ ರುಚಿಕರವಾಗಿ ಕಾಣುವ ಆಹಾರವೂ ಬಾಹ್ಯಾಕಾಶದಲ್ಲಿ ಅಷ್ಟೊಂದು ರುಚಿ ನೀಡದಿರಬಹುದು. ಇದಕ್ಕೆ ಒಂದು ವೈಜ್ಞಾನಿಕ ಕಾರಣವಿದೆ.
ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ ಆರಂಭದ ದಿನಗಳಲ್ಲಿ ದೇಹದ ದ್ರವಗಳು ತಲೆಯ ಭಾಗದತ್ತ ಚಲಿಸುತ್ತವೆ. ಇದರಿಂದ ಮೂಗಿನ ಮಾರ್ಗಗಳಲ್ಲಿ ಕಟ್ಟಿಕೊಂಡ ಅನುಭವ ಉಂಟಾಗಬಹುದು. ನೆಗಡಿಯಾದಾಗ ಆಹಾರದ ರುಚಿ ಸರಿಯಾಗಿ ತಿಳಿಯುವುದಿಲ್ಲವಲ್ಲ, ಅದೇ ರೀತಿಯ ಅನುಭವ ಬಾಹ್ಯಾಕಾಶದಲ್ಲೂ ಉಂಟಾಗುತ್ತದೆ.
ಹೀಗಾಗಿ ಅನೇಕ ಗಗನಯಾತ್ರಿಗಳಿಗೆ ಖಾರ ಮತ್ತು ಮಸಾಲೆಯುಕ್ತ ಆಹಾರಗಳು ಹೆಚ್ಚು ಇಷ್ಟವಾಗುತ್ತವೆ. ಹಾಟ್ ಸಾಸ್, ಕರಿ ಮತ್ತು ಇತರ ಮಸಾಲೆ ಪದಾರ್ಥಗಳು ಅವರ ಆಹಾರದಲ್ಲಿ ಸ್ಥಾನ ಪಡೆಯುತ್ತವೆ. ಪಾಕಿಸ್ತಾನದ ಗಗನಯಾತ್ರಿ ಜೀಶಾನ್ ಅಲಿ ಅವರ ಮೆನುವಿನಲ್ಲಿ ಅರಿಶಿನ ಮತ್ತು ಕರಿಯಂತಹ ಮಸಾಲೆಗಳಿಗೆ ಆದ್ಯತೆ ನೀಡಿರುವುದಕ್ಕೂ ಇದು ಒಂದು ಆಸಕ್ತಿದಾಯಕ ಹಿನ್ನೆಲೆ.
ಬಾಹ್ಯಾಕಾಶದಲ್ಲಿ ಆಹಾರ ಹೇಗೆ ತಯಾರಿಸುತ್ತಾರೆ?
ಗಗನಯಾತ್ರಿಗಳು ಅಲ್ಲಿಗೆ ಹೋದ ನಂತರ ಸಾಮಾನ್ಯ ಅಡುಗೆಮನೆಯಂತೆ ಅಡುಗೆ ಮಾಡುವುದಿಲ್ಲ. ಬಹುತೇಕ ಆಹಾರವನ್ನು ಭೂಮಿಯಲ್ಲೇ ಸಿದ್ಧಪಡಿಸಿ, ವಿಶೇಷ ಪ್ಯಾಕೆಟ್‌ಗಳಲ್ಲಿ ತುಂಬಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಬಾಹ್ಯಾಕಾಶದಲ್ಲಿ ಬಳಸುವ ಆಹಾರಗಳಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ.
- ನೀರನ್ನು ಸೇರಿಸಿ ತಯಾರಿಸುವ ಆಹಾರ: ಆಹಾರದಲ್ಲಿರುವ ನೀರನ್ನು ತೆಗೆದು ಒಣಗಿಸಿರುತ್ತಾರೆ. ತಿನ್ನುವ ಮೊದಲು ಅದಕ್ಕೆ ನೀರು ಸೇರಿಸಿ ಮತ್ತೆ ಮೊದಲಿನ ಸ್ಥಿತಿಗೆ ತರುತ್ತಾರೆ. ಸೂಪ್, ಕೆಲವು ತರಕಾರಿಗಳು ಮತ್ತು ಪಾಸ್ತಾ ಇದಕ್ಕೆ ಉದಾಹರಣೆ.
- ವಿಶೇಷವಾಗಿ ಸಂಸ್ಕರಿಸಿದ ಆಹಾರ: ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಿ ಮುಚ್ಚಿದ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಇವು ಹೆಚ್ಚು ಕಾಲ ಕೆಡದಂತೆ ಇರುತ್ತವೆ.
- ನೈಸರ್ಗಿಕ ರೂಪದಲ್ಲಿರುವ ಆಹಾರ: ಬೀಜಗಳು, ಒಣಹಣ್ಣುಗಳು ಮತ್ತು ಕೆಲವು ತಿಂಡಿಗಳನ್ನು ವಿಶೇಷವಾಗಿ ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ.
ಇವೆಲ್ಲವೂ ಗಗನಯಾತ್ರಿಗಳಿಗೆ ಅಗತ್ಯವಾದ ಪೌಷ್ಟಿಕಾಂಶ ಒದಗಿಸುವಂತೆ ಸಿದ್ಧಪಡಿಸಲಾಗುತ್ತದೆ.
ಬಾಹ್ಯಾಕಾಶದಲ್ಲಿ ಮೊದಲಿಗೆ ಆಹಾರ ಹೇಗಿತ್ತು ಗೊತ್ತಾ?
ಇಂದು ಬಾಹ್ಯಾಕಾಶದಲ್ಲಿ ಬಟರ್ ಚಿಕನ್, ನಿಹಾರಿ ಸೇರಿದಂತೆ ನೂರಾರು ಬಗೆಯ ಆಹಾರಗಳನ್ನು ಸವಿಯುವ ವ್ಯವಸ್ಥೆ ಇದೆ. ಆದರೆ ಆರಂಭಿಕ ಬಾಹ್ಯಾಕಾಶ ಪ್ರಯಾಣಗಳಲ್ಲಿ ಗಗನಯಾತ್ರಿಗಳ ಆಹಾರ ಇಷ್ಟು ವೈವಿಧ್ಯಮಯವಾಗಿರಲಿಲ್ಲ.
1960ರ ದಶಕದಲ್ಲಿ ಗಗನಯಾತ್ರಿಗಳು ಅಲ್ಯೂಮಿನಿಯಂ ಟ್ಯೂಬ್‌ಗಳಲ್ಲಿ ತುಂಬಿದ ಪ್ಯೂರಿ ಮಾದರಿಯ ಆಹಾರವನ್ನು ಹಿಂಡಿ ತಿನ್ನುತ್ತಿದ್ದರು. ಕೆಲವು ಆಹಾರಗಳು ಸಣ್ಣ ಒಣ ತುಂಡುಗಳ ರೂಪದಲ್ಲಿದ್ದವು. ರುಚಿ ಮತ್ತು ಆಹಾರದ ವೈವಿಧ್ಯ ಎರಡೂ ಸೀಮಿತವಾಗಿದ್ದವು.
ನಂತರ ಫ್ರೀಜ್ ಡ್ರೈಯಿಂಗ್ ತಂತ್ರಜ್ಞಾನ ಬಳಕೆಗೆ ಬಂತು. ಆಹಾರದಲ್ಲಿರುವ ತೇವಾಂಶವನ್ನು ತೆಗೆದು ಸಂಗ್ರಹಿಸಿ, ತಿನ್ನುವಾಗ ಮತ್ತೆ ನೀರು ಸೇರಿಸುವ ವಿಧಾನ ಇದಾಗಿದೆ. ಇದರಿಂದ ಆಹಾರದ ತೂಕ ಕಡಿಮೆಯಾಯಿತು ಮತ್ತು ಹೆಚ್ಚು ಕಾಲ ಸಂಗ್ರಹಿಸುವುದು ಸಾಧ್ಯವಾಯಿತು.
ಚಂದ್ರನಲ್ಲೂ ಮಂಗಳನಲ್ಲೂ ಅಡುಗೆ ಮಾಡಬೇಕಾದ ದಿನಗಳು ಬರಲಿವೆಯೇ?
ಈಗಾಗಲೇ ಬಾಹ್ಯಾಕಾಶ ನಿಲ್ದಾಣಗಳಲ್ಲಿ ಆಹಾರ ಸಂಗ್ರಹಣೆ, ಪ್ಯಾಕಿಂಗ್ ಮತ್ತು ಪೌಷ್ಟಿಕಾಂಶದ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ. ಆದರೆ ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ದೀರ್ಘಕಾಲ ಉಳಿಯುವ ಮಾನವ ಕಾರ್ಯಾಚರಣೆಗಳು ನಡೆದರೆ ಭೂಮಿಯಿಂದಲೇ ಎಲ್ಲ ಆಹಾರವನ್ನೂ ಕೊಂಡೊಯ್ಯುವುದು ಕಷ್ಟವಾಗಬಹುದು.
ಹೀಗಾಗಿ ಬಾಹ್ಯಾಕಾಶದಲ್ಲೇ ಸಸ್ಯಗಳನ್ನು ಬೆಳೆಸುವುದು, ತಾಜಾ ತರಕಾರಿಗಳನ್ನು ಉತ್ಪಾದಿಸುವುದು ಮತ್ತು ಆಹಾರ ಉತ್ಪಾದನೆಯ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯೋಗಗಳೂ ನಡೆದಿವೆ.
ಒಟ್ಟಿನಲ್ಲಿ, ಬಾಹ್ಯಾಕಾಶ ಪ್ರಯಾಣ ಎಂದರೆ ಕೇವಲ ರಾಕೆಟ್, ಉಪಗ್ರಹ, ವೈಜ್ಞಾನಿಕ ಪ್ರಯೋಗಗಳಷ್ಟೇ ಅಲ್ಲ. ಗಗನಯಾತ್ರಿಗಳು ಏನು ತಿನ್ನುತ್ತಾರೆ, ಹೇಗೆ ನಿದ್ರಿಸುತ್ತಾರೆ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಸಣ್ಣ ಸಂಗತಿಗಳೂ ಅಷ್ಟೇ ಮುಖ್ಯ.
ಒಂದು ಕಾಲದಲ್ಲಿ ಟ್ಯೂಬ್‌ಗಳಲ್ಲಿ ತುಂಬಿದ ಆಹಾರ ತಿನ್ನುತ್ತಿದ್ದ ಗಗನಯಾತ್ರಿಗಳು ಇಂದು ತಮ್ಮ ದೇಶದ ಸಾಂಪ್ರದಾಯಿಕ ಖಾದ್ಯಗಳನ್ನೇ ಬಾಹ್ಯಾಕಾಶದಲ್ಲಿ ಸವಿಯುವ ಹಂತಕ್ಕೆ ತಲುಪಿದ್ದಾರೆ. ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಬೆಳೆದಿರುವುದಕ್ಕೆ ಇದೂ ಒಂದು ಕುತೂಹಲಕಾರಿ






Click it and Unblock the Notifications
