ಬೀದಿ ದೀಪದಡಿ ಓದಿ, ಅರ್ಧ ವಡಾಪಾವ್ ತಿಂತಿದ್ದ ಯುವಕ ಈಗ ನಾಸಾ ವಿಜ್ಞಾನಿ: ಇದು ಸ್ಲಂನಲ್ಲಿ ಬೆಳೆದ ಜಯಕುಮಾರ್ ವೈದ್ಯ ಯಶೋಗಾಥೆ

ಮುಂಬೈ: ಈ ಯಶಸ್ಸು ಮತ್ತು ವಿದ್ಯೆ ಎನ್ನುವುದು ಶ್ರೀಮಂತರ ಅಥವಾ ಹಣವಂತರ ಸ್ವತ್ತು ಎನ್ನುವ ಕಲ್ಪನೆ ಅನೇಕರಿಗೆ ಇರುತ್ತದೆ. ಆದರೆ ಇದೆಲ್ಲ ಜನರಲ್ಲಿರುವ ತಪ್ಪು ಕಲ್ಪನೆ ಎಂಬುದನ್ನಾ ಮುಂಬೈನ ಯುವಕ ಜಯಕುಮಾರ್ ವೈದ್ಯ ಸಾಬೀತುಪಡಿಸಿದ್ದಾರೆ. ಮುಂಬೈನ ಕುರ್ಲಾದ ಕೊಳೆಗೇರಿಯ 8x10 ಅಡಿ ವಿಸ್ತೀರ್ಣದ ಸಣ್ಣ ಕೊಠಡಿಯಿಂದ ಆರಂಭವಾದ ಇವರ ಜೀವನ ಪಯಣ, ಇಂದು ಜಗತ್ತಿನ ಅತಿ ದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ತಲುಪಿದೆ.

ಒಂದು ತುತ್ತು ಕೂಳಿಗೂ ಪರದಾಡುತ್ತಿದ್ದ ಈ ಯುವಕ ಈಗ ನಾಸಾದಲ್ಲಿ ಇಂಜಿನಿಯರಿಂಗ್ ಲೀಡ್ ಆಗಿ ಮಂಗಳ ಹಾಗೂ ಚಂದ್ರನ ಅಂಗಳದ ಅಧ್ಯಯನ ಮಾಡುತ್ತಿದ್ದಾರೆ.

Mumbai Slum to NASA The Inspiring Success Story of Jaykumar Vaidya s Journey to Space Science

ಕಡು ಬಡತನದಲ್ಲಿಯೇ ಜಯಕುಮಾರ್ ಅವರ ಬಾಲ್ಯ ಕಳೆಯಿತು. ತಾಯಿ ನಳಿನಿ ಅವರು ಒಬ್ಬಂಟಿಯಾಗಿ ಮಗನನ್ನ ಸಾಕಿ ಬೆಳೆಸಿದರು. ಮುಂಬೈನ ಕುರ್ಲಾದ ಕೊಳೆಗೇರಿಯ ಸಣ್ಣದೊಂದು ಬಾಡಿಗೆ ಮನೆಯಲ್ಲಿ ಇವರ ವಾಸ. ಮನೆಯಲ್ಲಿ ಊಟಕ್ಕೂ ತುಂಬ ಕಷ್ಟ ಇದ್ದ ಕಾರಣ, ಇಬ್ಬರೂ ಅಂದರೆ ಅಮ್ಮ ಮಗ ಇಬ್ಬರು ಒಂದೇ ವಡಾಪಾವ್ ಅನ್ನು ಹಂಚಿಕೊಂಡು ತಿಂದ ದಿನಗಳೇಷ್ಟೋ ನೆನಪೇಯಿಲ್ಲ. ಗ್ಯಾಸ್ ಉಳಿಸಲು ತಾಯಿ ನಾಲ್ಕು ದಿನಕ್ಕೆ ಆಗುವಷ್ಟು ಚಪಾತಿಯನ್ನ ಒಮ್ಮೆಯೇ ಬೇಯಿಸಿಡುತ್ತಿದ್ದರು.

ಇನ್ನೂ ಕೇವಲ 300 ರೂಪಾಯಿ ಇಲ್ಲದ ಕಾರಣಕ್ಕೆ 700 ರೂಪಾಯಿ ಶಾಲಾ ಶುಲ್ಕ ಕಟ್ಟಲಾಗದೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲ್ಪಟ್ಟ ದಿನಗಳು ಅವರ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬೀದಿ ದೀಪದ ಬೆಳಕಿನಲ್ಲಿಯೇ ಓದುತ್ತಿದ್ದ ಅವರು, 11ನೇ ವಯಸ್ಸಿನಿಂದಲೇ ಸಣ್ಣಪುಟ್ಟ ಕೆಲಸಗಳನ್ನ ಮಾಡಲು ಶುರು ಮಾಡಿದ್ದರು. ಕೆಲವರಂತೂ ಇವರ ಪರಿಸ್ಥಿತಿ ನೋಡಿ, ಡ್ರೈವರ್ ಕೆಲಸಕ್ಕೆ ಸೇರುವಂತೆ ಸಹ ಉಚಿತ ಸಲಹೆ ನೀಡಿದ್ದರಂತೆ.

ಶಿಕ್ಷಣಕ್ಕಾಗಿ ಹೋರಾಟ

ಬಡತನವಿದ್ದರೂ ಜಯಕುಮಾರ್ ಅವರಲ್ಲಿ ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ತೀವ್ರ ಆಸಕ್ತಿ ಇತ್ತು. ವಿದ್ಯಾರ್ಥಿವೇತನ ಹಾಗೂ ಕೆಲವು ದತ್ತಿ ಸಂಸ್ಥೆಗಳ ಸಹಾಯದಿಂದ ಅವರು ಮುಂಬೈನ ಕೆ.ಜೆ. ಸೋಮಯ್ಯ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದರು. ತಮ್ಮ ಶಿಕ್ಷಣದ ಖರ್ಚಿಗಾಗಿ ಆನ್‌ಲೈನ್ ಟ್ಯೂಷನ್ ಸೇರಿದಂತೆ ಹಲವು ಕೆಲಸಗಳನ್ನ ಮಾಡಿದರು. ಶಿಕ್ಷಣದ ಮೇಲಿನ ಅವರ ಆಸಕ್ತಿ ಅವರನ್ನ ಮುಂಬೈನ ಪ್ರತಿಷ್ಠಿತ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ಸೇರುವಂತೆ ಮಾಡಿತು.

2016 ರಿಂದ 2019ರವರೆಗೆ ಅಲ್ಲಿ ಜೂನಿಯರ್ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದ ಅವರ ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು.

ಜಯಕುಮಾರ್ ವೈದ್ಯ ನಾಸಾ ಪಯಣ

ತಮ್ಮ ಸಂಶೋಧನಾ ಸಾಧನೆಯ ಆಧಾರದ ಮೇಲೆ ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದರು. 2021ರಲ್ಲಿ ನಾಸಾದ ಗೊಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಎಕ್ಸ್-ರೇ ಮಿರರ್‌ಗಳ ನಿರ್ಮಾಣದ ಪ್ರಾಜೆಕ್ಟ್‌ಗಾಗಿ ಇಂಟರ್ನ್‌ಶಿಪ್ ಮಾಡುವ ಅವಕಾಶ ಅವರಿಗೆ ಒದಗಿಬಂತು. ಆದರೆ, ಕುಟುಂಬದ ಆರ್ಥಿಕ ಕಷ್ಟಗಳನ್ನು ನೀಗಿಸಲು ಅವರು ಒಮ್ಮೆ ಸಂಶೋಧನೆ ಬಿಟ್ಟು ಹೆಚ್ಚು ಸಂಬಳದ ಕೆಲಸಕ್ಕೆ ಸೇರಲು ನಿರ್ಧರಿಸಿದ್ದರು.

ಆದರೆ, 2022ರಲ್ಲಿ ಅದೃಷ್ಟ ಮತ್ತೆ ಅವರ ಕೈಹಿಡಿಯಿತು. ನಾಸಾದಿಂದಲೇ ಅವರಿಗೆ ದೀರ್ಘಾವಧಿಯ ಉದ್ಯೋಗದ ಆಫರ್ ಬಂತು. ಆ ಮೂಲಕ ಜಯಕುಮಾರ್ ವೈದ್ಯ ನಾಸಾ ವಿಜ್ಞಾನಿಯಾಗುವ ಕನಸು ಕೊನೆಗೂ ನನಸಾಯಿತು.

ಮಂಗಳ ಮತ್ತು ಚಂದ್ರಯಾನ ಯೋಜನೆಗಳಲ್ಲಿ ಮಹತ್ವದ ಪಾತ್ರ

ಇಂದು ಜಯಕುಮಾರ್ ಜೆ. ವೈದ್ಯ ಅವರು ನಾಸಾದ ಗೊಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ 'ಗ್ರೌಂಡ್ ಸಪೋರ್ಟ್ ಎಕ್ವಿಪ್‌ಮೆಂಟ್ ಇಂಜಿನಿಯರಿಂಗ್ ಲೀಡ್' ಹಾಗೂ 'ಗ್ರೌಂಡ್ ಸಿಸ್ಟಮ್ಸ್ ಆಪರೇಷನ್ಸ್ ಲೀಡ್' ಆಗಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಸಾದ ಪ್ರತಿಷ್ಠಿತ 'MAVEN' (ಮಂಗಳ ಗ್ರಹದ ವಾತಾವರಣ ಅಧ್ಯಯನ) ಯೋಜನೆ ಮತ್ತು ಚಂದ್ರನ ಮೇಲ್ಮೈ ಅಧ್ಯಯನ ಮಾಡುವ 'SEAL' ಯೋಜನೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಡ್ರೈವರ್ ಆಗು ಎಂದು ಮೂದಲಿಸಿದವರ ಎದುರು, ಛಲ ಬಿಡದೆ ಬೆಳೆದ ಯುವಕ ಇಂದು ಅಮೆರಿಕದಲ್ಲಿ ಕುಳಿತು ಬಾಹ್ಯಾಕಾಶದ ರಹಸ್ಯಗಳನ್ನು ಭೇದಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+