Shubhanshu Shukla: ಬಾಹ್ಯಾಕಾಶ ಸಾಧನೆಗೆ ಶುಭಾಂಶು ಶುಕ್ಲಾಗೆ 'ಅಶೋಕ್ ಚಕ್ರ' ಗೌರವ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26ರಂದು ಅದ್ಧೂರಿ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ. ಈ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಆಗಿರುವ ಶುಭಾಂಶು ಶುಕ್ಲಾ (Shubhanshu Shukla) ಅವರಿಗೆ ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ 'ಅಶೋಕ ಚಕ್ರ'ವನ್ನು ನೀಡಿ ಗೌರವಿಸಲಾಗುತ್ತದೆ. ಇತ್ತೀಚೆಗೆ ಅವರಿಗೆ ಉತ್ತರ ಪ್ರದೇಶದ ಗೌರವ ಸಮ್ಮಾನ್ ಪ್ರಶಸ್ತಿ ನೀಡಲು ಆ ಸರ್ಕಾರ ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಆಕ್ಸಿಯಮ್-4 ಮಿಷನ್ (Ax-4) ಮೂಲಕ ಹಾರಿದ ಮೊದಲ ಭಾರತೀಯರಾಗಿರುವ ಶುಭಾಂಶು ಶುಕ್ಲಾ ಅವರ ಜೀವನ ಸಾಧನೆ ಸ್ಪೂರ್ತಿಯಾಗಿದೆ. 2025 ಜೂನ್ ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿ ಸುಮಾರು 18 ದಿನಗಳ ಕಾಲ ಐತಿಹಾಸಿಕ ಅಧ್ಯಯನ ನಡೆಸಿ ಜುಲೈ ತಿಂಗಳಲ್ಲಿ ಭೂಮಿಗೆ ಮರಳಿದ್ದರು. ಅವರ ಈ ಬಾಹ್ಯಾಕಾಶದ ಸಾಧನೆಗೆ 'ಅಶೋಕ ಚಕ್ರ' ನೀಡಿ ಗೌರವಿಸಲಾಗುತ್ತದೆ.

ಸೂಕ್ಷ್ಮ ಗುರುತ್ವಾಕರ್ಷಣೆ ಪ್ರಯೋಗ ಮಾಡಿದ್ದ ಶುಕ್ಲಾ
ಆಕ್ಸಿಯಮ್-4 ಸಿಬ್ಬಂದಿಯ ಪ್ರಮುಖ ಸದಸ್ಯರಾಗಿ ಶುಕ್ಲಾ ಅವರು ಕೆಲಸ ಮಾಡಿದ್ದು, ತಂಡ ಮುನ್ನಡೆಸಿದ್ದರು. ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಎರಡನೇ ಭಾರತೀಯ ಮತ್ತು ಐಎಸ್‌ಎಸ್ ಅನ್ನು ಹತ್ತಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಸಾ ಇನ್ನಿತರ ಜಾಗತಿಕ ಪಾಲುದಾರರು ಜಂಟಿಯಾಗಿ ಈ ಕಾರ್ಯಾಚರಣೆ ಮಾಡಿದ್ದರು. ಯಶಸ್ವಿ ಅಧ್ಯಯನವು ಜಾಗತಿಕವಾಗಿ ವಿವಿಧ ರಾಷ್ಟ್ರಗಳ ಸಹಕಾರ ಹೊಂದಿದ್ದರು, ಭಾರತದ ಪಾಲಿಗೆ ಮಹತ್ವದ್ದಾಗಿದೆ. ಅವರು ಕಕ್ಷೆಯಲ್ಲಿದ್ದುಕೊಂಡು ಅತ್ಯಾಧುನಿಕ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದರು.
ಗಗನಯಾನ ಕಾರ್ಯಾಚರಣೆಯಲ್ಲಿ ಭವಿಷ್ಯದ ಗಗನಯಾತ್ರಿಗಳು ಕಡಿಮೆ ಭೂಮಿಯ ಕಕ್ಷೆಯ ಕಠಿಣ ಪರಿಸರವನ್ನು ಬದುಕಲು ಸಹಾಯ ಮಾಡುವಂತಹ ಅಗತ್ಯ ಮಾಹಿತಿ ನೀಡುವ ಪರೀಕ್ಷೆಯನ್ನು ಶುಕ್ಲಾ ನಡೆಸಿದ್ದರು. ಅವರಿಗೆ ಅತ್ಯುನ್ನತ 'ಅಶೋಕ ಚಕ್ರ' ನೀಡುವ ನಿರ್ಧಾರವು 'ರಾಷ್ಟ್ರೀಯ ಸೇವೆಯನ್ನು ನಾವು ನೋಡುವ ಬಗೆ ಹಾಗೂ ಅದರಲ್ಲಿನ ಬದಲಾವಣೆ' ಎತ್ತಿ ತೋರಿಸುತ್ತದೆ. ಭೂಮಿ ಮೇಲಿನ ಶೌರ್ಯ ಸಾಹಸಗಳಿಗೆ ಮೀಸಲಾಗಿರುವ ಪ್ರಶಸ್ತಿಯು ಇದೀಗ ಅಂತರಿಕ್ಷದಲ್ಲಿನ ಸಾಧನೆಗೆ ನೀಡಿರುವುದು ವಿಶೇಷವಾಗಿದೆ.
ಭಾರತದ ಕೀರ್ತಿ ಹೆಚ್ಚಿಸಿದ ಶುಕ್ಲಾ
ಬಹುರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಂಕೀರ್ಣತೆಗಳನ್ನು ದಾಟಿ ಉನ್ನತ ಮಟ್ಟದ ವಿಜ್ಞಾನ ಅಧ್ಯಯನ ಮತ್ತು ನಿರ್ವಹಣೆಯು ಉನ್ನತ ಸಾಧನೆಯಾಗಿದೆ. ವಿಶ್ವದ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಗಂಭೀರ ಸ್ಪರ್ಧಿಯಾಗಿ ಭಾರತದ ಖ್ಯಾತಿಯನ್ನು ಶುಕ್ಲಾ ಅವರು ಗಗದೆತ್ತರಕ್ಕೆ ಏರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಭಾರತದ ವಾಯುಪಡೆಯ ಅಧಿಕಾರಿಯಾಗಿದ್ದುಗೊಂಡು ವೈಜ್ಞಾನಿಕ ಭವಿಷ್ಯಕ್ಕೆ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಭಾರತೀಯ ಬಾಹ್ಯಾಕಾಶ ನಿಲ್ದಾಣದ ಯೋಜನೆಗಳು ಚಾಲನೆಯಲ್ಲಿದ್ದು, ಮುಂದಿನ ಪೀಳಿಗೆಗೆ ಪರಿಶೋಧಕರಿಗೆ ತರಬೇತಿ ನೀಡುವಲ್ಲಿ ಅವರ ಅನುಭವ ಅವಶ್ಯಕವಾಗಿದೆ. ಈ ಬಾರಿ 77ನೇ ಗಣರಾಜ್ಯೋತ್ಸವ ದಲ್ಲಿ ತ್ರಿವರ್ಣ ಧ್ವಜ ಹಾರುವಾಗ ಶುಕ್ಲಾ ಅವರ ಎದೆಯ ಮೇಲಿನ 'ಅಶೋಕ ಚಕ್ರ'ವು ಕೇವಲ ವೈಯಕ್ತಿಕ ಅಲ್ಲದೇ ವಿಶಿಷ್ಟ ಸಾಧನೆಯನ್ನು ಪ್ರತಿನಿಧಿಸುತ್ತದೆ.












Click it and Unblock the Notifications