ಬಿಟ್ಸ್ ಪಿಲಾನಿ ಪದವೀಧರೆಗೆ 30 ಲಕ್ಷದ ಕೆಲಸಕ್ಕಿಂತ 'ಡಾಕ್ಟರ್' ಪಟ್ಟವೇ ಹೆಚ್ಚಾಯ್ತು! 30ನೇ ವಯಸ್ಸಿಗೆ NEET ಪಾಸ್ ಮಾಡಿದ ಆಕೃತಿ
ಸಾಮಾನ್ಯವಾಗಿ 30ನೇ ವಯಸ್ಸಿಗೆ ಕಾಲಿಡುತ್ತಿರುವಾಗ, ಬಹುತೇಕ ಯುವಕ-ಯುವತಿಯರು ತಮ್ಮ ವೃತ್ತಿಜೀವನದಲ್ಲಿ ಬಡ್ತಿ, ಹೆಚ್ಚಿನ ಸಂಬಳ ಮತ್ತು ಸ್ಥಿರತೆಯ ಬಗ್ಗೆ ಯೋಚಿಸುತ್ತಾರೆ. ಆದರೆ, ಆಕೃತಿ ಗೋಯೆಲ್ ಅವರ ಕಥೆ ಸಂಪೂರ್ಣ ಭಿನ್ನವಾಗಿದೆ. ಕೈತುಂಬಾ ಸಂಬಳ ತರುತ್ತಿದ್ದ ಕಾರ್ಪೊರೇಟ್ ಹುದ್ದೆಯನ್ನು ತ್ಯಜಿಸಿ, ತಮ್ಮ ಬಾಲ್ಯದ ಕನಸಾದ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು ಅವರು ತೆಗೆದುಕೊಂಡ ನಿರ್ಧಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು.
ಇದು ಕೇವಲ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸ್ ಮಾಡಿದ ಕಥೆಯಲ್ಲ; ಬದಲಾಗಿ, ಯಶಸ್ಸಿನ ನಿಜವಾದ ಅರ್ಥವೇನು ಮತ್ತು ಹೊಸದಾಗಿ ಎನ್ನನ್ನಾದರೂ ಶುರು ಮಾಡಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ ಸ್ಪೂರ್ತಿದಾಯಕ ಪಯಣ.

ಬಿಟ್ಸ್ ಪಿಲಾನಿ ಪದವೀಧರೆಯ 30 ಲಕ್ಷದ ನೌಕರಿ
ಆಕೃತಿ ಗೋಯೆಲ್ ಅವರು 2015 ರಲ್ಲಿ ಪ್ರಸಿದ್ಧ ಬಿಟ್ಸ್ ಪಿಲಾನಿಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಸಾಂಪ್ರದಾಯಿಕ ಕಾರ್ಪೊರೇಟ್ ಕಂಪನಿಗಳಿಗಿಂತ ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡಲು ಹೆಚ್ಚು ಆಸಕ್ತಿ ತೋರಿದರು. ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ನಾಯಕತ್ವದ ಮಟ್ಟಕ್ಕೆ ಬೆಳೆದರು.
ವಾರ್ಷಿಕ ಸುಮಾರು 30 ಲಕ್ಷ ರೂ. ಪ್ಯಾಕೇಜ್ ಹೊಂದಿದ್ದ ಅವರು, ಹೊರಗಿನ ಪ್ರಪಂಚದ ದೃಷ್ಟಿಯಲ್ಲಿ ಒಬ್ಬ ಯಶಸ್ವಿ ವೃತ್ತಿಪರರಾಗಿದ್ದರು. ಆದರೂ, ಅವರ ಮನಸ್ಸಿನಲ್ಲಿ ಏನೋ ಕೊರತೆ ಕಾಡುತ್ತಿತ್ತು, ಮಾಡುವ ಕೆಲಸದಲ್ಲಿ ಅವರಿಗೆ ಅಷ್ಟೊಂದು ನೆಮ್ಮದಿ ಸಿಗುತ್ತಿರಲಿಲ್ಲ.
ಕೆಲಸದ ಒತ್ತಡ ಮತ್ತು 'ಇಕಿಗೈ' ಮೂಲಕ ಹೊಸ ಗುರಿಯ ಶೋಧ
ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಹೆಲ್ತ್-ಟೆಕ್ ಸ್ಟಾರ್ಟ್‌ಅಪ್ ಒಂದರಲ್ಲಿ ಆಕೃತಿ ದಿನಕ್ಕೆ 14 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು. ಈ ವಿಪರೀತ ಒತ್ತಡದಿಂದಾಗಿ ಅವರಿಗೆ ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾದವು. ಕೋವಿಡ್-19 ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಅವರು ತಮ್ಮ ಕೆಲಸವನ್ನು ತೊರೆದರು. ಆರು ತಿಂಗಳ ಕಾಲ ಯೋಗ, ಪೇಂಟಿಂಗ್ ಮಾಡುತ್ತಾ ಆರೋಗ್ಯವನ್ನು ಸುಧಾರಿಸಿಕೊಂಡರು. ಗುಣಮುಖರಾದ ಬಳಿಕ 'ಮುಂದೇನು?' ಎಂಬ ಪ್ರಶ್ನೆ ಎದುರಾದಾಗ, ಜಪಾನಿನ ಪ್ರಸಿದ್ಧ 'ಇಕಿಗೈ' ತತ್ವವನ್ನು ಅನುಸರಿಸಿದರು. ಇದು ಅವರ ಬಾಲ್ಯದ ವೈದ್ಯಕೀಯ ಕನಸಿಗೆ ಮರುಜೀವ ನೀಡಿತು.
ನೀಟ್ ಸಿದ್ಧತೆ ಮತ್ತು ಯಶಸ್ಸು
ಸುಮಾರು 10 ವರ್ಷಗಳ ಕಾಲ ಪುಸ್ತಕ, ಶಾಲಾ-ಕಾಲೇಜುಗಳ ಅಧ್ಯಯನದಿಂದ ದೂರವಿದ್ದ ಆಕೃತಿಗೆ ಮತ್ತೆ ವಿದ್ಯಾರ್ಥಿ ಜೀವನಕ್ಕೆ ಮರಳುವುದು ಸುಲಭದ ಮಾತಾಗಿರಲಿಲ್ಲ. ಜೀವಶಾಸ್ತ್ರವನ್ನು ಬಹುತೇಕ ಮೊದಲಿನಿಂದ ಕಲಿಯಬೇಕಾಗಿತ್ತು. ಆನ್‌ಲೈನ್ ಕ್ಲಾಸ್‌ಗಳ ಮೂಲಕ ದಿನಕ್ಕೆ 10-12 ಗಂಟೆಗಳ ಕಾಲ ಕಠಿಣ ಅಭ್ಯಾಸ ಶುರು ಮಾಡಿದರು.
ಸತತ ಪ್ರಯತ್ನದಿಂದ 100ಕ್ಕೂ ಹೆಚ್ಚು ಅಣಕು ಪರೀಕ್ಷೆಗಳನ್ನು ಬರೆದರು. ಛಲ ಬಿಡದ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿತು. 2021ರ ನೀಟ್-ಯುಜಿ ಪರೀಕ್ಷೆಯಲ್ಲಿ 720ಕ್ಕೆ 676 ಅಂಕಗಳನ್ನು ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 1118ನೇ ರ‍್ಯಾಂಕ್ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.
ಇದೀಗ ಆಕೃತಿ ದೆಹಲಿಯ ನಾರ್ತ್ ಡಿಎಂಸಿ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಅಂತಿಮ ಹಂತದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಓದು ಮುಗಿಸಿ, ವಿಶೇಷತೆ ಪಡೆದು ವೈದ್ಯರಾಗುವ ಹೊತ್ತಿಗೆ ಬಹಳ ವರ್ಷಗಳೇ ಕಳೆದಿರುತ್ತವೆ ಎಂಬ ಟೀಕೆಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. "ಜೀವನದಲ್ಲಿ ಏನನ್ನಾದರೂ ಸಾಧಿಸಲು ವಯಸ್ಸು ಒಂದು ಅಡ್ಡಿಯಾಗಬಾರದು. ವಯಸ್ಸಾಗಿದೆ, ವೃತ್ತಿಜೀವನವನ್ನು ಮತ್ತೆ ಆರಂಭಿಸಲು ಸಾಧ್ಯವಿಲ್ಲ ಎಂಬೆಲ್ಲಾ ಮಾತುಗಳು ಸುಳ್ಳು" ಎಂದು ಅವರು ದಿಟ್ಟತನದಿಂದ ಹೇಳುತ್ತಾರೆ.
ಆಕೃತಿ ಗೋಯೆಲ್ ಅವರ ಈ ಪಯಣ, ವೃತ್ತಿಜೀವನದಲ್ಲಿ ಕೇವಲ ಹೊರಗಿನ ಯಶಸ್ಸು ಮತ್ತು ಹಣಕ್ಕಿಂತ ಆಂತರಿಕ ತೃಪ್ತಿ ಎಷ್ಟು ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ. ನಿಮ್ಮ ಕನಸಿನ ದಾರಿಯಲ್ಲಿ ಮರುಪ್ರಯಾಣ ಬೆಳೆಸಲು, ಅಥವಾ ಶೂನ್ಯದಿಂದ ಪ್ರಾರಂಭಿಸಲು ಯಾವತ್ತಿಗೂ ತಡವಾಗುವುದಿಲ್ಲ ಎಂಬುದಕ್ಕೆ ಇವರೇ ಜೀವಂತ ಉದಾಹರಣೆ.














Click it and Unblock the Notifications