ಅಜ್ಜಿ ಮೇಲಿನ ಗೌರವಾರ್ಥ ಬೆಂಗಳೂರಿನ ಮನ್ಯಾಳಿಂದ ವಿಶೇಷ ಅಭಿಯಾನ: 2,500 ಸೀರೆಗಳಿಂದ 40,000 ಚೀಲ ತಯಾರಿ!

ಬೆಂಗಳೂರು: ಅಜ್ಜಿಯ ಮೇಲಿನ ಪ್ರೀತಿಯನ್ನು ಬೆಂಗಳೂರಿನ ಯುವತಿಯೊಬ್ಬಳು ವಿಶೇಷ ರೀತಿಯಲ್ಲಿ ತೋರಿಸಿದ್ದು,, ಅದನ್ನೊಂದು ಅಭಿಯಾನವಾಗಿ ಮುಂದುವರಿಸಿಕೊಂಡು ಬಂದಿದ್ದಾಳೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಪರಿಣಾಮಕಾರಿ ಅಭಿಯಾನವಾಗಿ ರೂಪಿಸಿದ್ದಾಳೆ. 16 ವರ್ಷದ ಮನ್ಯಾ ಹರ್ಷ ಅವರು ಅಜ್ಜಿ ಮೇಲಿನ ಪ್ರೀತಿಗಾಗಿ ಆರಂಭಿಸಿದ ಪರಿಸರ ಸ್ನೇಹಿ ಉಪಕ್ರಮ "ಗ್ರ್ಯಾಂಡ್‌ಮಾಸ್ ಗ್ರೀನ್ ವೀವ್" ಮೂರು ವರ್ಷ ಪೂರೈಸಿದೆ.

ಅಭಿಯಾನದಡಿ 2,500 ಹಳೆಯ ಸೀರೆಗಳನ್ನು 40,000ಕ್ಕೂ ಹೆಚ್ಚು ಮರುಬಳಕೆಯ ಬಟ್ಟೆ ಚೀಲಗಳಾಗಿ ಪರಿವರ್ತಿಸಿದ್ದಾರೆ. ಈ ಎಲ್ಲಾ ಚೀಲಗಳನ್ನು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಉಚಿತವಾಗಿ ವಿತರಿಸಲಾಗಿದೆ.

Bengaluru Teen Manyaa Harsha Marks 3 Years of Upcycling 2 500 Old Sarees Into 40 000 Cloth Bags

ಪ್ಲಾಸ್ಟಿಕ್ ನಿಷೇಧಗಳು ಬಿಟ್ಟುಹೋಗುವ ಕಂದಕ

ಏಕಬಳಕೆ ಪ್ಲಾಸ್ಟಿಕ್ ನಿಷೇಧಗಳು ತಳಮಟ್ಟದಲ್ಲಿ ಆಗಾಗ್ಗೆ ಎಡವುತ್ತವೆ, ಏಕೆಂದರೆ ಬೀದಿ ವ್ಯಾಪಾರಿಗಳು ಮತ್ತು ದೈನಂದಿನ ಗ್ರಾಹಕರಿಗೆ ಕೈಗೆಟುಕುವ, ಗಟ್ಟಿಮುಟ್ಟಾದ ಪರ್ಯಾಯಗಳು ಸಿಗುವುದಿಲ್ಲ. "ಗ್ರ್ಯಾಂಡ್‌ಮಾಸ್ ಗ್ರೀನ್ ವೀವ್: ಎ ಸೀರೆ ಟು ಸಸ್ಟೇನ್" ಉಪಕ್ರಮವು ಅತಿ ಸ್ಥಳೀಯ ಮತ್ತು ಚಕ್ರೀಯ ಪರಿಹಾರ ನೀಡುತ್ತದೆ. ಮನೆಗಳಿಂದ ಬಳಸದ ಸೀರೆಗಳನ್ನು ಸಂಗ್ರಹಿಸಿ, ಮರುಬಳಕೆಯ ಮಾರುಕಟ್ಟೆ ಚೀಲಗಳಾಗಿ ಹೊಲಿಯುವ ಮೂಲಕ, ನಿಯಮಗಳು ಮಾತ್ರ ಬಗೆಹರಿಸಲು ಕಷ್ಟಪಟ್ಟ ಸಮಸ್ಯೆಗೆ ಈ ಅಭಿಯಾನ ಉತ್ತರ ನೀಡುತ್ತದೆ. ವಾಣಿಜ್ಯ ಕಾಗದದ ಅಥವಾ ನಾನ್ ವೋವನ್ ಬಟ್ಟೆ ಚೀಲಗಳನ್ನು ಖರೀದಿಸಲಾಗದ ಸಣ್ಣ ವ್ಯಾಪಾರಿಗಳಿಗೆ, ಉಚಿತ ಮತ್ತು ಬಾಳಿಕೆ ಬರುವ ಚೀಲವು ಪರಿಸರದ ಜೊತೆಗೆ ಆರ್ಥಿಕವಾಗಿಯೂ ದೊಡ್ಡ ನೆರವಾಗಿದೆ.

'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ
'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ

ಏಕಬಳಕೆ ಪ್ಲಾಸ್ಟಿಕ್ ಚೀಲಗಳ ನಿರ್ಮೂಲನೆ ಗುರಿ

ಧ್ಯೇಯ ಸರಳ ಮತ್ತು ಸ್ಪಷ್ಟ: ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸುವುದು ಮತ್ತು ಏಕಬಳಕೆಯ ಕ್ಯಾರಿ ಬ್ಯಾಗ್‌ಗಳನ್ನು ಇಲ್ಲವಾಗಿಸುವುದು. ಮೂರು ವರ್ಷಗಳಲ್ಲಿ ಸಾವಿರಾರು ಬೀದಿ ವ್ಯಾಪಾರಿಗಳು ಮತ್ತು ಗ್ರಾಹಕರು ಈ ಸುಸ್ಥಿರ ಚೀಲಗಳಿಂದ ಪ್ರಯೋಜನ ಪಡೆದಿದ್ದಾರೆ. ಜಯನಗರ, ಸಾರಕ್ಕಿ ಮತ್ತು ಮಲ್ಲೇಶ್ವರ ಸೇರಿದಂತೆ ನಗರದ ಅತ್ಯಂತ ಜನನಿಬಿಡ ಮಾರುಕಟ್ಟೆಗಳಿಗೆ ಈ ಚೀಲಗಳು ತಲುಪಿವೆ.

ಶ್ರದ್ಧಾಂಜಲಿಯಿಂದ ಆರಂಭ ಜನಾಂದೋಲನ

ಮನ್ಯಾ ಅವರ ದಿ.ಅಜ್ಜಿ ವಿ. ರುದ್ರಮ್ಮ ಅವರು 2022ರಲ್ಲಿ ಇಹಲೋಕ ತ್ಯಜಿಸಿದರು. 2023ರಲ್ಲಿ ಅಜ್ಜಿಯ ಗೌರವವಾರ್ಥವಾಗಿ ಅಭಿಯಾನ ಆರಂಭಿಸಲಾಯಿತು. ರುದ್ರಮ್ಮ ಅವರು ಮನ್ಯಾ ಅವರಿಗೆ ಸುಸ್ಥಿರ ಜೀವನದ ಗುರುವಾಗಿದ್ದರು. ಪರಿಸರ ಜಾಗೃತಿಗಾಗಿ ಮನ್ಯಾ ಕೈಗೊಂಡ ಪ್ರತಿಯೊಂದು ಪ್ರಯತ್ನದ ಬೆನ್ನೆಲುಬಾಗಿದ್ದರು. ಅಜ್ಜಿಯ ನಿಧನದ ಒಂದು ವರ್ಷದ ನಂತರ ಅವರ ಪರಂಪರೆಯನ್ನು ಮುಂದುವರಿಸಲು ಮನ್ಯಾ "ಗ್ರ್ಯಾಂಡ್‌ಮಾಸ್ ಗ್ರೀನ್ ವೀವ್" ಅನ್ನು ಸ್ಥಾಪಿಸಿದರು.

ಅಜ್ಜಿಯ ಸ್ವಂತ ಹಳೆಯ ಸೀರೆಗಳು. ಆ ಬಟ್ಟೆಯನ್ನು ಬಾಳಿಕೆ ಬರುವ ಚೀಲಗಳಾಗಿ ಅಪ್‌ಸೈಕಲ್ ಮಾಡಿ, ಜಯನಗರ ಮಾರುಕಟ್ಟೆಯ ವ್ಯಾಪಾರಿಗಳಿಗೆ ಸ್ವತಃ ಕೈಯಾರೆ ತಲುಪಿಸಿದರು. ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಕವರ್‌ಗಳಿಗೆ ಪ್ರಾಯೋಗಿಕ ಹಾಗೂ ಉಚಿತ ಪರ್ಯಾಯ ನೀಡುವುದು ಮತ್ತು ಹಳೆಯ ಬಟ್ಟೆಗೆ ಎರಡನೇ ಜೀವ ನೀಡುವುದು ಇದರ ಉದ್ದೇಶವಾಗಿತ್ತು.

ಸೀರೆ ಸಂಗ್ರಹ ಅಭಿಯಾನಗಳೇ ಶಕ್ತಿ

ಇವರ ಸೀರೆ ಚೀಲಗಳಿಗೆ ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ಸಿಕ್ಕ ನಂತರ, ಅದರಿಂದ ಪ್ರೇರಿತರಾದ ಮನ್ಯಾ, ಸಮುದಾಯ ಸೀರೆ ಸಂಗ್ರಹ ಅಭಿಯಾನಗಳ ಮೂಲಕ ಉಪಕ್ರಮ ವಿಸ್ತರಿಸಿದರು. ಇನ್ನು ಬಳಸದ ಸೀರೆಗಳನ್ನು ದಾನ ಮಾಡುವಂತೆ ನಿವಾಸಿಗಳಿಗೆ ಮನವಿ ಮಾಡಿದರು. ಕುಟುಂಬಗಳು, ನೆರೆಹೊರೆಯವರು ಮತ್ತು ಸಮುದಾಯ ಗುಂಪುಗಳು ಸೀರೆಗಳನ್ನು ನೀಡಿವೆ, ಅವುಗಳಲ್ಲಿ ಹಲವು ಮದುವೆ, ಹಬ್ಬ ಮತ್ತು ಕುಟುಂಬ ಕೂಟಗಳ ನೆನಪುಗಳನ್ನು ಹೊತ್ತಿವೆ. ಪ್ರತಿಯೊಂದು ಸೀರೆಯನ್ನು ಸ್ವಚ್ಛಗೊಳಿಸಿ, ಕತ್ತರಿಸಿ, ಗಟ್ಟಿಮುಟ್ಟಾದ ಚೀಲವಾಗಿ ಹೊಲಿಯಲಾಗುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ
ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ

ಮನ್ಯಾ ಅವರ ಈವರೆಗಿನ ಸಾಧನೆ

* 2,500 ಸೀರೆಗಳ ಸಂಗ್ರಹ ಮತ್ತು ಮರುಬಳಕೆ
* 40,000ಕ್ಕೂ ಹೆಚ್ಚು ಸುಸ್ಥಿರ ಬಟ್ಟೆ ಚೀಲಗಳ ಹೊಲಿಗೆ ಮತ್ತು ವಿತರಣೆ
* ಬೆಂಗಳೂರಿನ ಜನನಿಬಿಡ ಮಾರುಕಟ್ಟೆಗಳಲ್ಲಿ ಸಾವಿರಾರು ಬೀದಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಬಲ

ಮೂರು ವರ್ಷಗಳ ತಳಮಟ್ಟ ಪರಿಶ್ರಮ

* ಬೆಂಗಳೂರಿನ ವ್ಯಾಪಾರಿಗಳು ಮತ್ತು ದೈನಂದಿನ ಗ್ರಾಹಕರ ನಡುವೆ ನೇರವಾಗಿ ಚಲಾವಣೆಗೆ ಬಂದ 40,000 ಮರುಬಳಕೆಯ ಚೀಲಗಳು
* 2,500 ಸೀರೆಗಳ ರಕ್ಷಣೆ, ಅಂದಾಜು 1,250 ಕೆಜಿ (1.25 ಟನ್) ಜವಳಿ ತ್ಯಾಜ್ಯ ಭೂಭರ್ತಿಯಿಂದ ಪಾರು
* ಶೂನ್ಯ ತ್ಯಾಜ್ಯ ಕತ್ತರಿಸುವಿಕೆ ಮತ್ತು ಹೊಲಿಗೆಯ ಮೂಲಕ ಪ್ರತಿ ಸೀರೆಯಿಂದ ಸರಾಸರಿ 16 ಚೀಲಗಳು
* ಪ್ರತಿ ಬಟ್ಟೆ ಚೀಲದ 25 ರಿಂದ 50 ಬಳಕೆಯ ಆಧಾರದ ಮೇಲೆ 10 ಲಕ್ಷದಿಂದ 20 ಲಕ್ಷ ಏಕಬಳಕೆ ಪ್ಲಾಸ್ಟಿಕ್ ಚೀಲಗಳ ತಡೆ
* ಭೂಭರ್ತಿಗೆ ಹೋಗುವುದರಿಂದ ಮತ್ತು ನಗರದ ಮಳೆನೀರು ಚರಂಡಿಗಳನ್ನು ಕಟ್ಟಿಹಾಕುವುದರಿಂದ 5.5 ರಿಂದ 11 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯದ ತಡೆ
* ಮುಂದಿನ ಮೈಲಿಗಲ್ಲು: ಒಂದು ಲಕ್ಷ (1,00,000) ಚೀಲಗಳು

ಈ ಸಾಧನೆಯ ವೇಳೆ ಎದುರಾದ ಸವಾಲುಗಳು

ಸೀರೆ ಚೀಲದ ಸಾಧನೆಯ ಪಯಣ ಸುಲಭವಾಗಿರಲಿಲ್ಲ ಎಂದು ಮನ್ಯಾ ಆರಂಭಿಕ ದಿನಗಳನ್ನು ಸ್ಮರಿಸಿದ್ದಾರೆ. ಟೈಲರ್‌ಗಳು ಪದೇ ಪದೇ ಬದಲಾದ ಕಾರಣ ಹೊಲಿಗೆ ಕೆಲಸಕ್ಕೆ ಅಡಚಣೆಯಾಯಿತು. ಹೊಲಿಗೆ ವೆಚ್ಚದಲ್ಲಿ ಏರಿಳಿತವಾಗಿ, ಚೀಲಗಳನ್ನು ಉಚಿತವಾಗಿ ನೀಡುವ ಅಭಿಯಾನದ ಮೇಲೆ ಒತ್ತಡ ಬಿತ್ತು. ಕೆಲವು ವ್ಯಾಪಾರಿಗಳು ಮನಃಪೂರ್ವಕವಾಗಿ ಸ್ವೀಕರಿಸಿದರೆ, ಹಲವರು ಹಳೆಯ ಅಭ್ಯಾಸಗಳನ್ನು ಬಿಡಲು ಹಿಂಜರಿದರು. ಪ್ರತಿ ಹಿನ್ನಡೆಯಲ್ಲೂ ಅಭಿಯಾನದ ಮೇಲಿನ ನಂಬಿಕೆ ಕುಗ್ಗಲಿಲ್ಲ, ತಮ್ಮ ದೃಷ್ಟಿ ಸ್ಪಷ್ಟವಾಗಿಯೇ ಇತ್ತು ಎನ್ನುತ್ತಾರೆ ಮನ್ಯಾ.

ಹಬ್ಬದ ಸೀಸನ್‌ನಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಣಾಮ

ಇತ್ತೀಚಿಗೆ ಈ ಚೀಲಗಳು ಹೆಚ್ಚು ಮುನ್ನೆಲೆಗೆ ಬಂದಿವೆ. ಗಣೇಶ ಹಬ್ಬದಲ್ಲಿ ಸುಮಾರು 8,000 ಚೀಲಗಳನ್ನು ವಿತರಿಸಲಾಯಿತು. ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿ ಪ್ಲಾಸ್ಟಿಕ್ ಬಳಕೆ ಏರುವ ಸಮಯವಿದು. ದಸರಾ ಮತ್ತು ದೀಪಾವಳಿಯಲ್ಲಿ 5,000ಕ್ಕೂ ಹೆಚ್ಚು ಚೀಲಗಳನ್ನು ನೀಡಲಾಗಿದ್ದು, ಇನ್ನಷ್ಟು ವ್ಯಾಪಾರಿಗಳು ಮತ್ತು ಹಬ್ಬದ ಗ್ರಾಹಕರನ್ನು ತಲುಪಿದೆ. ಹಬ್ಬಗಳ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಿ ಪ್ಲಾಸ್ಟಿಕ್ ಬಳಕೆಯೂ ಹೆಚ್ಚುವುದರಿಂದ ಅವು ಅಭಿಯಾನದ ಸಹಜ ಕೇಂದ್ರಬಿಂದುವಾಗಿವೆ. ಹೂವಿನ ಅಂಗಡಿ ಅಥವಾ ತರಕಾರಿ ಗಾಡಿಯಲ್ಲಿ ನೀಡುವ ಪ್ರತಿ ಚೀಲವು, ಬಾಳಿಕೆ ಬರುವ ಮತ್ತು ಮತ್ತೆ ಮತ್ತೆ ಬಳಸಬಹುದಾದ ಕಾರಣ, ತನ್ನ ಜೀವಿತಾವಧಿಯಲ್ಲಿ ಹತ್ತಾರು ಪ್ಲಾಸ್ಟಿಕ್ ಕವರ್‌ಗಳ ಸ್ಥಾನ ತುಂಬಬಲ್ಲದು.

ಒಂದು ಲಕ್ಷ ಸುಸ್ಥಿರ ಚೀಲಗಳ ಗುರಿ!

ಮನ್ಯಾ ಈಗ ಒಂದು ಲಕ್ಷ ಸುಸ್ಥಿರ ಚೀಲಗಳ ದೊಡ್ಡ ಗುರಿಯತ್ತ ದೃಷ್ಟಿ ನೆಟ್ಟಿದ್ದಾರೆ. ಇದು ಇದುವರೆಗಿನ ಸಾಧನೆಯ ಎರಡು ಪಟ್ಟಿಗಿಂತಲೂ ಹೆಚ್ಚು. ಇದನ್ನು ಸಾಧಿಸಲು ಹೆಚ್ಚಿನ ಸೀರೆ ದಾನ, ನಂಬಿಕಸ್ಥ ಹೊಲಿಗೆ ಬೆಂಬಲ ಮತ್ತು ಮರುಬಳಕೆಯ ಚೀಲಗಳನ್ನು ಅಪ್ಪಿಕೊಳ್ಳುವ ವ್ಯಾಪಾರಿಗಳ ನಿರಂತರ ಇಚ್ಛಾಶಕ್ತಿ ಅಗತ್ಯವಿದೆ.

ಜಾಗೃತಿಯನ್ನು ಮೀರಿದ ಅಳೆಯಬಹುದಾದ ಪರಿಣಾಮ

ಈ ಅಂಕಿಅಂಶಗಳು ಅಭಿಯಾನವನ್ನು ಕೇವಲ ಸಾಂಕೇತಿಕ ಜಾಗೃತಿ ಕಾರ್ಯಕ್ರಮಗಳಿಂದ ಮೇಲೆತ್ತಿ, ದಾಖಲಿತ ಮತ್ತು ಪರಿಶೀಲಿಸಬಹುದಾದ ಪರಿಸರ ಪರಿಣಾಮವನ್ನು ತೋರಿಸುತ್ತವೆ. ಜೈವಿಕವಾಗಿ ಕರಗದ ಪ್ಲಾಸ್ಟಿಕ್ ಫಿಲ್ಮ್ ನಗರದ ಮಳೆನೀರು ಚರಂಡಿಗಳ ಸಾಮಾನ್ಯ ತಡೆಗಳಲ್ಲಿ ಒಂದು. ಹತ್ತಾರು ಪ್ಲಾಸ್ಟಿಕ್ ಕವರ್‌ಗಳ ಸ್ಥಾನ ತುಂಬುವ ಪ್ರತಿ ಚೀಲವು ಆ ಹೊರೆಯನ್ನು ಮೂಲದಲ್ಲೇ ಕಡಿಮೆ ಮಾಡುತ್ತದೆ.

ಜವಳಿ ತ್ಯಾಜ್ಯದ ತಡೆ ಎರಡನೇ ಲಾಭ: ಭೂಭರ್ತಿ ಸೇರಬಹುದಾಗಿದ್ದ ಸೀರೆಗಳಿಗೆ ಮಾರುಕಟ್ಟೆಯ ದೈನಂದಿನ ಬಳಕೆಯಲ್ಲಿ ಎರಡನೇ ಜೀವ ಸಿಗುತ್ತದೆ. ವೈಯಕ್ತಿಕ ಪ್ರೀತಿಯನ್ನು ಸಾರ್ವಜನಿಕ ಒಳಿತಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ತೋರಿಸಿದ ಮನ್ಯಾರ ಕಾರ್ಯ ಸ್ಪೂರ್ತಿದಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+