'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯದ ' ಆಶಾ' ಕಾರ್ಯಕರ್ತೆಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಆರೊಗ್ಯ ಇಲಾಖೆ ಸಚಿವ ಯು.ಟಿ. ಖಾದರ್ ಅವರು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಜನ ಕಿಡಿ ಕಾರುತ್ತಿದ್ದಾರೆ. 'ಸಚಿವ ಯುಟಿ ಖಾದರ್ ಅವರೇ ನೀವು ಇಲ್ಲದಿದ್ದರೂ ಆರೋಗ್ಯ ಇಲಾಖೆ ಕಾರ್ಯಚರಣೆ ಮಾಡುತ್ತದೆ. ದಯಮಾಡಿ ರಾಜೀನಾಮೆ ನೀಡಿ' ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಆಶಾ ಕಾರ್ಯಕರ್ತೆಯರು ಚಳಿ ಎನ್ನದೇ ಮಕ್ಕಳನ್ನು ಕಟ್ಟಿಕೊಂಡು ಬಂದು ವಾರಗಳಿಂದಲೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಕೆಗೆ ಸಿಎಂ ಭರವಸೆ ನೀಡಿದ ಬೆನ್ನಲ್ಲೆ ಆರೋಗ್ಯ ಸಚಿವರು 'ಆಶಾ' ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇದೆ ವಿಚಾರ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಕ್ಸ್ ಮೂಲಕ ಸಚಿವರನ್ನು ತರಾಟೆಗೆ ತೆಗೆದುಕೊಮಡಿದ್ದಾರೆ. 'ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಖಾದರ್ ಅವರೇ. ರಾಜೀನಾಮೆ ಕೊಟ್ಟುಬಿಡಿ!. ಆಶಾ ಕಾರ್ಯಕರ್ತೆಯರ ಶ್ರಮ, ತ್ಯಾಗ ಮತ್ತು ಹೋರಾಟವನ್ನು ಹಗುರವಾಗಿ ಕಾಣುವ ಕಾಂಗ್ರೆಸ್ ನಾಯಕರ ಈ ಉದ್ಧಟತನದ ಮಾತುಗಳು ನಾಚಿಕೆಗೇಡು' ಎಂದು ಕಿಡಿ ಕಾರಿದ್ದಾರೆ.
"ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗುವುದಿಲ್ಲ" ಎಂಬ ಉದ್ಧಟತನದ ಮಾತುಗಳನ್ನಾಡಿ ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದ ಸಚಿವ ನರೇಂದ್ರಸ್ವಾಮಿ ಅವರ ಸಾಲಿಗೆ ಈಗ ಮತ್ತೊಬ್ಬ ಸಚಿವರು ಸೇರಿಕೊಂಡಿದ್ದಾರೆ.
'ಆಶಾ' ಸ್ವಾಭಿಮಾನಕ್ಕೆ ಸಚಿವರ ಹೇಳಿಕೆಯಿಂದ ಧಕ್ಕೆ!
'ಹತ್ತು-ಹದಿನೈದು ದಿನ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಏನೂ ನಷ್ಟವಾಗಿಲ್ಲ, ಅವರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎನ್ನುವ ಮೂಲಕ ಆರೋಗ್ಯ ಸಚಿವ ಯುಟಿ ಖಾದರ್ ಅವರು ಹಳ್ಳಿಹಳ್ಳಿಗೂ, ಮನೆಮನೆಗೂ ಓಡಾಡಿ ಗರ್ಭಿಣಿಯರು, ಶಿಶುಗಳು, ವೃದ್ಧರು ಮತ್ತು ರೋಗಿಗಳ ಜೀವ ಉಳಿಸುವ ಲಕ್ಷಾಂತರ ಆಶಾ ಕಾರ್ಯಕರ್ತೆಯರ ಸ್ವಾಭಿಮಾನಕ್ಕೆ ಮತ್ತೊಮ್ಮೆ ಘಾಸಿ ಉಂಟು ಮಾಡಿದ್ದಾರೆ' ಎಂದು ಅವರು ದೂರಿದರು.
'ಕೋವಿಡ್ ಸಮಯದಲ್ಲಿ ಮನೆಯಲ್ಲಿ ಬೆಚ್ಚಗೆ ಅಡಗಿ ಕೂತಿದ್ದ ಕಾಂಗ್ರೆಸ್ ನಾಯಕರಿಗೆ ಪ್ರಾಣದ ಹಂಗು ತೊರೆದು ದುಡಿದ ಈ ತಾಯಂದಿರು, ಸಹೋದರಿಯರ ಶ್ರಮದ ಬೆಲೆ ಹೇಗೆ ತಾನೇ ಗೊತ್ತಾಗಬೇಕು ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುವವರನ್ನು ಕಡೆಗಣಿಸಿ, "ನೀವು ಇಲ್ಲದಿದ್ದರೂ ನಡೆಯುತ್ತದೆ" ಎಂಬ ಅಹಂಕಾರದ ಭಾಷೆ ಬಳಸುವುದು ಕಾಂಗ್ರೆಸ್ ಸರ್ಕಾರದ ಅಧಿಕಾರದ ಮದ ಯಾವ ಪರಾಕಾಷ್ಠೆಗೆ ತಲುಪಿದೆ ಎನ್ನುವುದನ್ನು ತೋರಿಸುತ್ತದೆ' ಎಂದು ಜರಿದಿದ್ದಾರೆ.
'ಆಶಾ' ಹೋರಾಟಕ್ಕೆ ಬೆಲೆ ತೆರಬೇಕಾಗುತ್ತೆ!
'ಆರೋಗ್ಯ ಸಚಿವ ಯುಟಿ ಖಾದರ್ ಅವರೇ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಸ್ವಾಮಿ. ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಆಶಾ ಕಾರ್ಯಕರ್ತೆಯರ ಶ್ರಮವೇ ಬೇಡ ಎನ್ನುವುದಾದರೆ, ಹಾಗಾದರೆ ತಾವೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ' ಎಂದು ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
'ಆಶಾ ಕಾರ್ಯಕರ್ತೆಯರ ಕಣ್ಣೀರು ಮತ್ತು ಹೋರಾಟಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸರ್ಕಾರ ತಕ್ಷಣ ತಮ್ಮ ಉದ್ಧಟತನದ ಮಾತನ್ನು ಹಿಂಪಡೆದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ಕೋರಿದರು.
ಯುಟಿ ಖಾದರ್ 'ಆಶಾ' ಕುರಿತು ಹೇಳಿದ್ದೇನು?
ರಾಜ್ಯದ ಮುಖ್ಯಮಂತ್ರಿಗಳು ಚರ್ಚಿಸಿ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದಾರೆ. ಆದರೂ ಇವರು ಪ್ರತಿಭಟನೆ ಬಿಟ್ಟು ತಮ್ಮ ಕೆಲಸಕ್ಕೆ ಮರಳಿಲ್ಲ. ಹಾಗಾದರೆ ಎರಡು ವಾರದಿಂದ ಇವರು ಇಲ್ಲಿ ಹೋರಾಟ ಮಾಡುತ್ತಿದ್ದಾರೆ. 'ಅಂದ ಮೇಲೆ ಇವರು ಕೆಲಸದಲ್ಲಿ ಇಲ್ಲದಿದ್ದರೂ ಸಮಾಜದಲ್ಲಿ ಹೆರಿಗೆ ಆಗುತ್ತಿವೆ, ಆರೋಗ್ಯ ಸೇವೆ ಸಿಗುತ್ತದೆ ಅಲ್ಲವೇ?' ಎಂದು ಸಚಿವ ಯುಟಿ ಖಾದರ್ ಹೇಳಿದರು.
ತಮಿಳುನಾಡಿನಲ್ಲಿ ನಮಗಿಂತಲೂ ಆರೋಗ್ಯ ಸೇವೆ ಚೆನ್ನಾಗಿಯೇ ಇದೆ ಎಂದು ಸಚಿವರು ಹೇಳುತ್ತಾರೆ. ಇದಕ್ಕೆ ಸುದ್ದಿಗಾರರು 'ಆಶಾ'ಗಳಿಲ್ಲದೇ ಆರೋಗ್ಯ ಸೇವೆ ನಡೆಯುತ್ತದೆ ಎಂಬುವುದು ನಿಮ್ಮ ಅಭಿಪ್ರಾಯ ಎಂದು ಕೇಳಿದರೆ, 'ಒಬ್ಬರಲ್ಲದಿದ್ದರೆ ಮತ್ತೊಬ್ಬರು ಇರುತ್ತಾರೆ 'ಎಂದು ಆಶಾ ಕಾರ್ಯಕರ್ತೆಯರು ಕುರಿತು ಹಗುರ ಹೇಳಿಕೆ ನೀಡಿದ್ದಾರೆ. ಇದಕ್ಕೆ ವ್ಯಾಪಕ ಆಕ್ರೋಶವು ವ್ಯಕ್ತವಾಗುತ್ತಿದೆ.




Click it and Unblock the Notifications
