KEA ಪರೀಕ್ಷೆಗಳಲ್ಲಿ ಇನ್ನು ಮುಂದೆ QR ಕೋಡ್ ಕಡ್ಡಾಯ: 'KEAEV' ಮೊಬೈಲ್ ಆ್ಯಪ್ ಮೂಲಕ ಹಾಜರಾತಿ!
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪ ಕೇಳಿ ಬಂದ ಬೆನ್ನಲ್ಲೆ ಕೆಇಎ ತಾನು ನಡೆಸುವ ಎಲ್ಲ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಕಠಿಣ ನಿಯಮ ಅನುಸರಿಸಿದೆ. ಇನ್ನೂ ಮುಂದೆ ಕೆಇಎ ನೇಮಕಾತಿ ಪರೀಕ್ಷೆಗಳ ಹಾಜರಾತಿಗೆ ಇನ್ನು ಮುಂದೆ ಕ್ಯೂ ಆರ್ ಕೋಡ್ ಮೂಲಕವೇ ಅಭ್ಯರ್ಥಿಗಳ ಹಾಜರಾತಿ ಹಾಗೂ ನೈಜತೆ ಪತ್ತೆಹಚ್ಚಲು ತೀರ್ಮಾನಿಸಲಾಗಿದೆ. ಈ ಸಂಬಂಧ ಹೊಸ ವಿಶೇಷ ಮೊಬೈಲ್ ಆಪ್ (KEAEV APP) ಅನ್ನು ಸಹ ಪರಿಚಯಸಿದೆ. ಅದರ ಕೆಲಸ ಹೇಗೆ, ಕ್ಯೂಆರ್ ಕೋಡ್ ಹಾಜರಾಗಿ ಹೇಗೆ ಎಂಬ ವಿವರ ಇಲ್ಲಿದೆ.
ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಹಾಗೂ ಇತ್ತೀಚೆಗೆ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಕರ್ನಾಟಕ ಪರೀಕ್ಷಾ ಪ್ರಧಿಕಾರವು ನವೆಂಬರ್ 27ರಿಂದ ಕ್ಯೂಆರ್ ಕೋಡ್ ಮೂಲಕ ಪರೀಕ್ಷಾರ್ಥಿಗಳ ಹಾಜರಾತಿ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕರಿಗೆ ತರಬೇತಿ ನೀಡುವ ಸಲುವಾಗಿ ಇಂದು ಗುರುವಾರ ವರ್ಚುವಲ್ ಸಭೆ ಆಯೋಜಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ( ಕೆಇಎ) ಆಡಳಿತಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು. ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದೆಲ್ಲ ತೋರಿಸಿದರು.
ಇದುವರೆಗೂ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಮೊಬೈಲ್ ಆ್ಯಪ್ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲಿಸಲಾಗುತ್ತಿತ್ತು. ಈಗ ಮತ್ತಷ್ಟು ಸುಧಾರಣಾ ಕ್ರಮದ ಭಾಗವಾಗಿ, ಪರೀಕ್ಷಾ ಮೇಲ್ವಿಚಾರಕರ ನೆರವಿಂದ ಕ್ಯೂಆರ್ ಕೋಡ್ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲಿಸಲಾಗುತ್ತದೆ. ತುಂಬಾ ಸರಳವಾಗಿ ಕೆಲವೇ ಸೆಕೆಂಡುಗಳಲ್ಲಿ ಫೋಟೋ ಸಹಿತ ವರಿಫಿಕೇಷನ್ ಮಾಡಲಾಗುತ್ತದೆ.
ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರು
ಪ್ರತಿ ಕೊಠಡಿಗೆ ತಲಾ ಇಬ್ಬರು ಮೇಲ್ವಿಚಾರಕರನ್ನು ನೇಮಿಸಲು ಇತ್ತೀಚೆಗೆ ತೀರ್ಮಾನಿಸಲಾಗಿದೆ. ಅವರಲ್ಲಿ ಒಬ್ಬರನ್ನು ಕ್ಯೂ ಆರ್ ಕೋಡ್ ಮೂಲಕ ತಪಾಸಣೆ ಮಾಡುವುದಕ್ಕೆ ನಿಯೋಜಿಸಲಾಗಿದೆ. ಮೊದಲ ಬೆಲ್ ಆಗುವವರೆಗೆ ಅವರ ನೆರವು ಇರುತ್ತದೆ. ಅದರ ನಂತರ ಪರೀಕ್ಷಾ ವೀಕ್ಷಕರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಮೂಲಕ ಪರೀಕ್ಷೆಗಳಲ್ಲಿ ನಡೆಯುತ್ತಿದ್ದ ಅಕ್ರಮ, ಬೇರೆ ಅಭ್ಯರ್ಥಿಗಳ ಪರೀಕ್ಷೆ ಬರೆಯುವಿಕೆಯಂತಹ ಅಕ್ರಮ ತಡೆಗೆ ಇದು ನೆರವಾಗಲಿದೆ.
KEAEV app ಆಪ್: ಕ್ಯೂಆರ್ ಕೋಡ್ ಹಾಜರಾತಿ ಹೇಗೆ?
ಅಂಡ್ರಾಯ್ಡ್, ಐಓಎಸ್ ಮೊಬೈಲ್‌ಗಳಿಗೆ KEAEV app ಆಪ್ ಸಪೋರ್ಟ್ ಆಗುತ್ತದೆ. ಹಾಜರಾತಿ ಪಡೆಯುವ ವೇಳೆ ಅರ್ಜಿ ಹಾಕಿದ, ಪರೀಕ್ಷೆ ಕೂರುವ ಅಭ್ಯರ್ಥಿಗಳಿಗೆ ಮಾತ್ರವೇ ಎನೇಬಲ್ ಆಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಓಟಿಪಿ ಬರುತ್ತದೆ.
ನೀವು ಒಟಿಪಿ ಭರ್ತಿ ಮಾಡಿದರೆ ನಿಮ್ಮ ಪರೀಕ್ಷಾ ಸಂಖ್ಯೆ, ಪರೀಕ್ಷಾ ಕೇಂದ್ರ, ನಿಮ್ಮ ಹೆಸರು, ವಿಳಾಸ ಎಲ್ಲ ಬರುತ್ತದೆ. ನಂತರ ಕಾಣುವ ಕ್ಯೂಆರ್ ಕೋಡ್ ಸ್ಕಾನ್ ಮಾಡಬೇಕು. ಅಲ್ಲಿರುವ ಫೋಟೋ ಆಯ್ಕೆ ಕ್ಲಿಕ್ ಮಾಡಿದ ಬಳಿಕ, ಕ್ಯಾಮೆರಾ ಮೂಲಕ ನಿಮ್ಮ ಪೋಟೋ ಕ್ಯಾಪ್ಚರ್ ಆಗುತ್ತದೆ. ನಂತರ 'ವೆರಿಫೈ ಇಮೇಜ್' ಎಂದು ಕ್ಲಿಕ್ ಮಾಡಿದರೆ ಕೆಇಎಗೆ ಮೆಸೆಜ್ ಹೋಗುತ್ತದೆ. ಕೆಲವೇ ಸೆಕೆಂಡ್‌ಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಮಾಹಿತಿ ಸರ್ವರ್ ನಲ್ಲಿ ಸೇವ್..
ನಂತರ ಆಪ್ ಸ್ಕ್ರೀನ್ ಮೇಲೆ ನಿಮ್ಮ ಪೋಟೋ, ನೋಂದಣಿ ಸಂಖ್ಯೆ, ಎಕ್ಸಾಮ್ ಸೆಂಟರ್, ಸೆಂಟರ್ ಹೆಸರು, ಹೆಣ್ಣು ಅಥವಾ ಗಂಡು ಎಂದು ತೋರಿಸುತ್ತದೆ. ಹೀಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಅರ್ಹ ಅಭ್ಯರ್ಥಿಗಳ ಪರೀಕ್ಷಾ ಹಾಜರಾತಿ ಪಡೆಯಲು ಕೆಇಎ ನಿರ್ಧರಿಸಿದೆ. ಹಾಜರಾತಿ ವೇಳೆ ಅಭ್ಯರ್ಥಿಗಳ ಮಾಹಿತಿಗಳು ನಮ್ಮ ಸರ್ವರ್ ನಲ್ಲಿ ಸೇವ್ ಆಗುತ್ತದೆ. ಇದೆಲ್ಲ ನೋಡಿಕೊಳ್ಳಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕೆಇಎ ತಿಳಿಸಿದೆ.




Click it and Unblock the Notifications
