Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!
ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇ ಖಾತಾ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕ ಇ-ಖಾತಾ ವಿತರಣೆ ಮಾಡುವುದಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆ(ಮ್ಯುಟೇಷನ್) ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕ ಇ-ಖಾತಾ ವಿತರಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯ ಮತ್ತು ನಿರ್ದೇಶನದಂತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾದ 'ಭೂ-ಗ್ಯಾರಂಟಿ - ನನ್ನ ಖಾತಾ, ನನ್ನ ಹಕ್ಕು' ಅಭಿಯಾನದಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಇ-ಖಾತಾ ಪ್ರಮಾಣಪತ್ರಗಳನ್ನು ಉಚಿತವಾಗಿ ವಾಟ್ಸಾಪ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ.
ಆಸ್ತಿ ಮಾಲೀಕರು ತಮ್ಮ ಇ-ಖಾತಾ ಪ್ರಮಾಣಪತ್ರವನ್ನು PDF ರೂಪದಲ್ಲಿ, ವಿಶಿಷ್ಟ ePID ಸಂಖ್ಯೆಯೊಂದಿಗೆ ವಾಟ್ಸಾಪ್ ಮೂಲಕ ಪಡೆಯಲಿದ್ದಾರೆ. ಇದರಿಂದ ಸಾರ್ವಜನಿಕರು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡದೆ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸದೆ ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
Bengaluru E-Khata: ಇ ಖಾತಾ ವಾಟ್ಸಾಪ್ ಮೂಲಕ ಸಂದೇಶ
ಇನ್ನು ಬೆಂಗಳೂರಿನ ಆಸ್ತಿದಾರರು ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್ ಆದ https://GBAeAasthi.karnataka.gov.in ಲಿಂಕ್ ಅನ್ನು ಸಹ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ePID ಸಂಖ್ಯೆಯನ್ನು ಬಳಸಿ ಆನ್‌ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆ (ಮ್ಯುಟೇಷನ್) ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ಸೇವೆಗಳನ್ನು ನೇರವಾಗಿ ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಈ ಉಪಕ್ರಮವು ಅನಗತ್ಯ ಕಚೇರಿ ಭೇಟಿಗಳನ್ನು ತಪ್ಪಿಸುವುದರ ಜೊತೆಗೆ, ಪಾರದರ್ಶಕ, ಸುಲಭ ಹಾಗೂ ನಾಗರಿಕ ಸ್ನೇಹಿ ಸೇವಾ ವಿತರಣೆಗೆ ಉತ್ತೇಜನ ನೀಡಲಿದೆ ಎಂದೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾಹಿತಿ ನೀಡಿದ್ದಾರೆ.
ಮುಂದುವರಿದು ಆದ್ದರಿಂದ, ಎಲ್ಲಾ ಆಸ್ತಿ ಮಾಲೀಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ, ಇ-ಖಾತಾ PDF ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ಪಾವತಿಸುವ ಅಗತ್ಯವಿರುವುದಿಲ್ಲ. ಭೂ-ಗ್ಯಾರಂಟಿ: ನನ್ನ ಖಾತಾ - ನನ್ನ ಹಕ್ಕು ಮೂಲಕ ಆಸ್ತಿದಾರರಿಗೆ ಅನುಕೂಲವಾಗಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ: ಮಹೇಶ್ವರ್ ರಾವ್
ಜಿಬಿಎ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ. ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭವಾಗಲಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ, ನವೆಂಬರ್ 28ರಂದು ಸಾರ್ವಜನಿಕ ರಜೆ ಇರುವ ಹಿನ್ನೆಲೆಯಲ್ಲಿ ಅಂದು ಜಿಬಿಎ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಇ-ಖಾತಾ ಮೇಳ ಕಾರ್ಯಕ್ರಮವನ್ನು ನಡೆಸಲಾಗುವುದಿಲ್ಲ.
ಇ-ಖಾತಾ ಸಂಬಂಧಿತ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವುದು, ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸುವುದು ಹಾಗೂ ಅರ್ಜಿದಾರರಿಗೆ ಅಗತ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಪ್ರತಿ ಶನಿವಾರ ಇ-ಖಾತಾ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ನವೆಂಬರ್ 28ರ ಕಾರ್ಯಕ್ರಮವನ್ನು ಹೊರತುಪಡಿಸಿ, ಮುಂದಿನ ಡಿಸೆಂಬರ್ 5ರಿಂದ ಇ-ಖಾತಾ ಓಪನ್ ಹೌಸ್ ಕಾರ್ಯಕ್ರಮವು ಜಿಬಿಎ ವ್ಯಾಪ್ತಿಯ 62 ಎಆರ್‌ಒ ಕಚೇರಿಗಳಲ್ಲಿ ಪ್ರತಿ ಶನಿವಾರ ಎಂದಿನಂತೆ ಪುನರಾರಂಭವಾಗಲಿದೆ.ಸಾರ್ವಜನಿಕರು ಡಿಸೆಂಬರ್ 5 ರಿಂದ ತಮ್ಮ ವ್ಯಾಪ್ತಿಯ ಎಆರ್‌ಒ ಕಚೇರಿಗಳಿಗೆ ಭೇಟಿ ನೀಡಿ ಇ-ಖಾತಾ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಹಾಗೂ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ.





Click it and Unblock the Notifications
