ಮಗಳ ಮದುವೆಯ ಸಂಭ್ರಮದಲ್ಲಿ ಕುಣಿಯುತ್ತಿದ್ದ ತಂದೆಗೆ ಹೃದಯಾಘಾತ; ಅಂತ್ಯಕ್ರಿಯೆಗೂ ಮುನ್ನವೇ ಮಗಳ ಮದುವೆ!
ಉದಯಪುರ: ಮನೆಯಲ್ಲಿ ಮಗಳ ಮದುವೆಯ ಸಂಭ್ರಮ. ಬಂಧು-ಬಳಗದ ನಡುವೆ ನಗು, ಕುಣಿತ, ಹಾಡುಗಳ ಸಡಗರ. ಇನ್ನೇನು ಮಗಳನ್ನು ಮದುವೆ ಮಾಡಿಕೊಟ್ಟು ಹೊಸ ಜೀವನಕ್ಕೆ ಕಳುಹಿಸಬೇಕೆಂಬ ಸಂತೋಷ ತಂದೆಯ ಮುಖದಲ್ಲಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮಗಳ ಮದುವೆಯ ಮೆರವಣಿಗೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ತಂದೆ ಏಕಾಏಕಿ ಕುಸಿದುಬಿದ್ದರು. ಕೆಲವೇ ಕ್ಷಣಗಳಲ್ಲಿ ಕುಟುಂಬದ ಸಂಭ್ರಮ ಕಣ್ಣೀರಿನ ಸಾಗರವಾಗಿ ಬದಲಾಯಿತು. ಅಷ್ಟೇ ಅಲ್ಲ, ತಂದೆಯ ಅಂತ್ಯಕ್ರಿಯೆಗೂ ಮುನ್ನವೇ ಮಗಳ ಮದುವೆ ನೆರವೇರಿಸುವ ಅನಿವಾರ್ಯ ಪರಿಸ್ಥಿತಿ ಕುಟುಂಬಕ್ಕೆ ಎದುರಾಯಿತು.
ರಾಜಸ್ಥಾನದ ಉದಯಪುರ ಜಿಲ್ಲೆಯ ರಿಷಭದೇವ್ ಉಪವಿಭಾಗದ ಪಾಟಿಯಾರ್ (ಭೂಧರ್) ಗ್ರಾಮದಲ್ಲಿ ನವೆಂಬರ್ 20ರ ತಡರಾತ್ರಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಶಂಕರಲಾಲ್ ಮೇಘವಾಲ್ (51) ಮೃತಪಟ್ಟ ತಂದೆ. ಇವರು ಅಹಮದಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಏಕಾಏಕಿ ಎದೆನೋವು
ಶಂಕರಲಾಲ್ ಅವರ 26 ವರ್ಷದ ಮಗಳು ಪ್ರಿಯಾಂಕಾ ಅವರ ಮದುವೆಯ ಪೂರ್ವಭಾವಿ ಮೆರವಣಿಗೆ (ಬಿಂದೋಲಿ) ನಡೆಯುತ್ತಿತ್ತು. ಈ ವೇಳೆ ಕುಟುಂಬದವರೊಂದಿಗೆ ಶಂಕರಲಾಲ್ ಕೂಡ ಸಂಭ್ರಮದಿಂದ ನೃತ್ಯ ಮಾಡುತ್ತಿದ್ದರು. ಮಗಳ ಮದುವೆಯ ಖುಷಿಯಲ್ಲಿ ಕುಣಿಯುತ್ತಿದ್ದ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ತಕ್ಷಣವೇ ಪುತ್ರರಾದ ದಿಲೀಪ್ ಮತ್ತು ಉಮೇಶ್ ಸೇರಿದಂತೆ ಕುಟುಂಬದವರು ಅವರನ್ನು ರಿಷಭದೇವ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರದ ಎಂಬಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಶಂಕರಲಾಲ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ತಂದೆಯ ಸಾವಿನ ಸುದ್ದಿ ಮುಚ್ಚಿಟ್ಟ ಮಕ್ಕಳು!
ಮಗಳ ಮದುವೆ ನವೆಂಬರ್ 21ರ ಮಧ್ಯಾಹ್ನ ನಿಗದಿಯಾಗಿತ್ತು. ಒಂದೆಡೆ ಮನೆಯ ಯಜಮಾನನನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಮಗಳ ಮದುವೆಯ ಜವಾಬ್ದಾರಿ. ಕುಟುಂಬದವರು ಅಕ್ಷರಶಃ ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದರು.
ತಂದೆಯ ಸಾವಿನ ಸುದ್ದಿ ತಿಳಿದರೆ ತಾಯಿ ಮತ್ತು ಸಹೋದರಿ ಪ್ರಿಯಾಂಕಾ ತೀವ್ರವಾಗಿ ಕುಗ್ಗಬಹುದು ಎಂಬ ಆತಂಕದಿಂದ ಪುತ್ರರಾದ ದಿಲೀಪ್ ಮತ್ತು ಉಮೇಶ್ ಆರಂಭದಲ್ಲಿ ಸತ್ಯವನ್ನು ಅವರಿಗೆ ತಿಳಿಸದಿರಲು ನಿರ್ಧರಿಸಿದರು. ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.
ಇತ್ತ ಸಮುದಾಯದ ಇಬ್ಬರು ವ್ಯಕ್ತಿಗಳು ವರನ ಮನೆಯವರಿಗೆ ನಡೆದ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ವರ ಸುಮಾರು 15ರಿಂದ 20 ಮಂದಿ ಸಂಬಂಧಿಕರೊಂದಿಗೆ ಚನಾವಾಡ ಗ್ರಾಮದಿಂದ ಸುಮಾರು 25 ಕಿ.ಮೀ. ಪ್ರಯಾಣಿಸಿ ವಧುವಿನ ಮನೆಗೆ ಬಂದಿದ್ದಾರೆ.
ನಸುಕಿನ 3 ಗಂಟೆಗೆ ಮದುವೆ; ಬಳಿಕ ತಂದೆಯ ಅಂತ್ಯಕ್ರಿಯೆ
ನವೆಂಬರ್ 21ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ. ನಿಗದಿತ ಸಮಯಕ್ಕಿಂತ ಮುಂಚೆಯೇ ಪ್ರಿಯಾಂಕಾ ಅವರ ವಿವಾಹ ನೆರವೇರಿದೆ. ಮಗಳನ್ನು ಗಂಡನ ಮನೆಗೆ ಬೀಳ್ಕೊಟ್ಟ ಬಳಿಕ ಕುಟುಂಬದವರು ಶಂಕರಲಾಲ್ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮೂರು ಮಕ್ಕಳನ್ನು ಹೊಂದಿದ್ದ ಶಂಕರಲಾಲ್ ಅವರಿಗೆ ಪ್ರಿಯಾಂಕಾ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಗಳ ಮದುವೆಯನ್ನು ಕಣ್ಣಾರೆ ನೋಡಿ ಆಶೀರ್ವದಿಸಬೇಕಿದ್ದ ತಂದೆ, ಅದೇ ಮದುವೆಯ ಸಂಭ್ರಮದ ನಡುವೆ ಇಹಲೋಕ ತ್ಯಜಿಸಿದ್ದು ಕುಟುಂಬವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.
ಮಗಳ ಮದುವೆಯ ಸಡಗರದಲ್ಲಿ ಕುಣಿದು ನಲಿಯುತ್ತಿದ್ದ ತಂದೆಯೇ ಕೆಲವೇ ಗಂಟೆಗಳಲ್ಲಿ ಇಲ್ಲವಾಗಿದ್ದು, ಒಂದೇ ಮನೆಯಲ್ಲಿ ಮದುವೆಯ ಸಂಭ್ರಮ ಮತ್ತು ಸಾವಿನ ನೋವು ಒಟ್ಟಿಗೆ ಎದುರಾದಂತಾಗಿದೆ. ಮಗಳನ್ನು ಸಂತೋಷದಿಂದ ಬೀಳ್ಕೊಡಬೇಕಿದ್ದ ಕುಟುಂಬ, ಮನೆಯ ಯಜಮಾನನನ್ನು ಕಳೆದುಕೊಂಡ ನೋವಿನಲ್ಲೇ ಆಕೆಯನ್ನು ಹೊಸ ಬದುಕಿಗೆ ಕಳುಹಿಸಿಕೊಟ್ಟಿದೆ. ಈ ಘಟನೆ ಸ್ಥಳೀಯ ಗ್ರಾಮಸ್ಥರು ಮತ್ತು ಕುಟುಂಬದವರನ್ನು ತೀವ್ರ ಆಘಾತಕ್ಕೀಡು ಮಾಡಿದೆ.




Click it and Unblock the Notifications
