ಸರ್ಕಾರದ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ರೈತ; ₹2 ಲಕ್ಷ ಸ್ವಂತ ಹಣ ಖರ್ಚು ಮಾಡಿ 3 ಕಿ.ಮೀ. ರಸ್ತೆ ದುರಸ್ತಿ!

ಮೈಸೂರು: ಸರ್ಕಾರದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರೊಬ್ಬರು ತಮ್ಮ ಸ್ವಂತ ಹಣದಿಂದಲೇ ರಸ್ತೆ ದುರಸ್ತಿ ಮಾಡಿದ್ದಾರೆ. ಸುಮಾರು ಮೂರು ಕಿಲೋಮೀಟರ್ ಉದ್ದದ ರಸ್ತೆಯನ್ನು ಸರಿಪಡಿಸಲು ಬರೋಬ್ಬರಿ ₹2 ಲಕ್ಷ ಹಣ ಖರ್ಚು ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಕೂಡ ಕೈಜೋಡಿಸಿದ್ದು, ಹಣ, ಯಂತ್ರೋಪಕರಣ ಹಾಗೂ ಶ್ರಮದಾನದ ಮೂಲಕ ಸಹಕಾರ ನೀಡಿದ್ದಾರೆ. ಒಬ್ಬ ರೈತನಿಂದ ಆರಂಭವಾದ ಈ ಪ್ರಯತ್ನ ಇದೀಗ ಇಡೀ ಗ್ರಾಮದ ಜನರು ಸಹ ಸಾಥ್‌ ನೀಡಿದ್ದಾರೆ.

ವರ್ಷಗಳಿಂದ ಹದಗೆಟ್ಟಿದ್ದ ಈ ರಸ್ತೆಯಲ್ಲಿ ಕೇವಲ ಮೂರು ಕಿಲೋಮೀಟರ್ ಪ್ರಯಾಣಿಸಲು ಕೆಲವೊಮ್ಮೆ ಮೂರು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿತ್ತು. ರಸ್ತೆ ತುಂಬೆಲ್ಲಾ ದೊಡ್ಡ ಗುಂಡಿಗಳು, ಕಲ್ಲುಗಳು ಹಾಗೂ ಮಳೆಗಾಲದಲ್ಲಿ ಕೆಸರು ತುಂಬಿಕೊಳ್ಳುತ್ತಿದ್ದ ಕಾರಣ ವಾಹನ ಸವಾರರು ಮತ್ತು ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಕೃಷಿ ಚಟುವಟಿಕೆಗಳಿಗೆ ಜಮೀನಿಗೆ ತೆರಳುವ ರೈತರಿಗೆ ಈ ರಸ್ತೆ ದೊಡ್ಡ ಸಮಸ್ಯೆಯಾಗಿತ್ತು. ಕೊನೆಗೆ ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತ ರೈತರೊಬ್ಬರು ತಾವೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಸುಮಾರು ಒಂದು ತಿಂಗಳ ಕಾಲ ನಡೆದ ದುರಸ್ತಿ ಕಾರ್ಯದ ಬಳಿಕ ಮೂರು ಕಿಲೋಮೀಟರ್ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿಸಲಾಗಿದೆ.

Farmer Repairs Road Farmer Spends 2 Lakh to Repair 3 Km Road After Govt Inaction Villagers Join Hands

ಯಾರು ಈ ರೈತ ನಾಗಭೂಷಣ?

ರಾಮನಗರ ಜಿಲ್ಲೆಯ ಜಾಲಮಂಗಲ ಗ್ರಾಮದ ಮೂಲದ ಎಸ್. ನಾಗಭೂಷಣ ಅವರು ಸುಮಾರು ಆರು ತಿಂಗಳ ಹಿಂದೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ನೀರಾವರಿ ಸೌಲಭ್ಯಗಳ ಕೊರತೆಯಿಂದ ತಮ್ಮ ಹಿಂದಿನ ಕೃಷಿ ಜಮೀನನ್ನು ಮಾರಾಟ ಮಾಡಿದ್ದ ಅವರು, ಹೊಸದಾಗಿ ಕೃಷಿ ಆರಂಭಿಸುವ ಉದ್ದೇಶದಿಂದ ಇಲ್ಲಿ ಐದು ಎಕರೆ ಜಮೀನು ಖರೀದಿಸಿದ್ದರು.

ಆದರೆ ಹೊಸ ಜಮೀನಿಗೆ ತೆರಳಲು ಆರಂಭಿಸಿದಾಗಲೇ ಅವರಿಗೆ ರಸ್ತೆಯ ಸಮಸ್ಯೆ ಎದುರಾಯಿತು. ಹಳೆ ಹೈರಿಗೆ ಗ್ರಾಮದಿಂದ ಕಪಿಲಾ ನದಿ ಸಮೀಪದ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂರು ಕಿಲೋಮೀಟರ್ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಹಲವು ವರ್ಷಗಳಿಂದ ಈ ರಸ್ತೆಯ ದುರಸ್ತಿ ಕಾರ್ಯ ನಡೆದಿರಲಿಲ್ಲ. ರಸ್ತೆಯಲ್ಲಿ ದೊಡ್ಡ ಗುಂಡಿಗಳಿದ್ದ ಕಾರಣ ವಾಹನಗಳು ಸಂಚರಿಸಲು ಕಷ್ಟವಾಗುತ್ತಿತ್ತು. ಮಳೆಗಾಲದಲ್ಲಿ ಕೆಸರು ತುಂಬಿಕೊಂಡು ರೈತರು ಜಮೀನಿಗೆ ತೆರಳುವುದೇ ಸವಾಲಾಗಿತ್ತು.

ಬೆಂಗಳೂರು ನಗರದ ರಸ್ತೆ ಕಾಮಗಾರಿಗಳಿಗೆ ಹೊಸ ಡೆಡ್‌ಲೈನ್: ಸಿಲಿಕಾನ್ ಸಿಟಿ ಜನರಿಗೆ ಕೃಷ್ಣಬೈರೇಗೌಡ ಗುಡ್‌ನ್ಯೂಸ್!
ಬೆಂಗಳೂರು ನಗರದ ರಸ್ತೆ ಕಾಮಗಾರಿಗಳಿಗೆ ಹೊಸ ಡೆಡ್‌ಲೈನ್: ಸಿಲಿಕಾನ್ ಸಿಟಿ ಜನರಿಗೆ ಕೃಷ್ಣಬೈರೇಗೌಡ ಗುಡ್‌ನ್ಯೂಸ್!

ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ!

ರಸ್ತೆಯ ದುಸ್ಥಿತಿಯನ್ನು ಕಂಡ ನಾಗಭೂಷಣ ಅವರು ಮೊದಲು ಸ್ಥಳೀಯ ಗ್ರಾಮ ಪಂಚಾಯಿತಿಗೆ ತೆರಳಿ ರಸ್ತೆ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಸುಮಾರು 50 ಅಡಿ ಅಗಲದ ಈ ರಸ್ತೆ ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ (CNNL) ಸೇರಿದೆ ಎಂದು ಅವರಿಗೆ ತಿಳಿಸಲಾಗಿತ್ತು.

ಇದಾದ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಕೋರಿದ್ದರು. ಆದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾಯುವುದರಲ್ಲಿ ಪ್ರಯೋಜನವಿಲ್ಲ ಎಂದು ನಿರ್ಧರಿಸಿದರು. ತಮ್ಮ ಸ್ವಂತ ಹಣದಿಂದಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದರು.

ಹೊಸ ರಸ್ತೆ ಅಗೆದರೆ ಭಾರೀ ದಂಡ ಫಿಕ್ಸ್‌! ಬೆಸ್ಕಾಂ, ಜಲಮಂಡಳಿಗೆ ಪಾಲಿಕೆ ಖಡಕ್ ಎಚ್ಚರಿಕೆ
ಹೊಸ ರಸ್ತೆ ಅಗೆದರೆ ಭಾರೀ ದಂಡ ಫಿಕ್ಸ್‌! ಬೆಸ್ಕಾಂ, ಜಲಮಂಡಳಿಗೆ ಪಾಲಿಕೆ ಖಡಕ್ ಎಚ್ಚರಿಕೆ

₹2 ಲಕ್ಷ ಖರ್ಚು ಮಾಡಿದ ರೈತ; ಗ್ರಾಮಸ್ಥರಿಂದಲೂ ನೆರವು

ಮೊದಲಿಗೆ ನಾಗಭೂಷಣ ಅವರು ಜೆಸಿಬಿ ಯಂತ್ರವನ್ನು ಬಾಡಿಗೆಗೆ ಪಡೆದು ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿಸುವ ಕೆಲಸ ಆರಂಭಿಸಿದರು. ಅವರ ಪ್ರಯತ್ನವನ್ನು ಗಮನಿಸಿದ ಸ್ಥಳೀಯರು ಕೂಡ ಸಹಾಯಕ್ಕೆ ಮುಂದಾದರು. ಸ್ಥಳೀಯ ನಿವಾಸಿ ಬಸವರಾಜು ಅವರು ಮೊದಲಿಗರಾಗಿ ₹10 ಸಾವಿರ ನೆರವು ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನಿಲ್ ಕುಮಾರ್ ₹15 ಸಾವಿರ ಹಣ ನೀಡುವುದರ ಜೊತೆಗೆ ಮಣ್ಣು ಸಾಗಿಸಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿದರು.

ಇದಲ್ಲದೆ, ಸಮೀಪದ ರೆಸಾರ್ಟ್‌ವೊಂದು ₹50 ಸಾವಿರ ಆರ್ಥಿಕ ನೆರವು ನೀಡಿತು. ಇತರ ರೈತರು ಕೂಡ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ ಹಾಗೂ ಸಹಕಾರ ನೀಡಿದರು. ಈ ಕೆಲಸವನ್ನು ವ್ಯವಸ್ಥಿತವಾಗಿ ನಡೆಸಲು ನಾಗಭೂಷಣ ಅವರು 'ಹಳೆ ಹೈರಿಗೆ ರಸ್ತೆ ದುರಸ್ತಿ ತಂಡ' ಎಂಬ ಗುಂಪನ್ನು ರಚಿಸಿದರು. ಈ ತಂಡದ ಮೂಲಕ ಗ್ರಾಮಸ್ಥರಿಂದ ಹಣ ಸಂಗ್ರಹಿಸಿ, ಕೆಲಸದ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.

ನಾಗಭೂಷಣ ಅವರು ತಮ್ಮ ವೈಯಕ್ತಿಕ ಉಳಿತಾಯದಿಂದಲೇ ₹2 ಲಕ್ಷ ಖರ್ಚು ಮಾಡಿದರು. ಗ್ರಾಮಸ್ಥರ ನೆರವಿನೊಂದಿಗೆ ರಸ್ತೆ ದುರಸ್ತಿ ಕಾರ್ಯಕ್ಕೆ ಅಗತ್ಯವಾದ 40 ಲೋಡ್ ಜಲ್ಲಿ ಕಲ್ಲು ಹಾಗೂ 60 ಟಿಪ್ಪರ್ ಲೋಡ್ ಜಲ್ಲಿ ಮರಳನ್ನು ತರಿಸಲಾಯಿತು. ರಸ್ತೆಯನ್ನು ಸಮತಟ್ಟಾಗಿಸಲು ರೋಡ್ ರೋಲರ್ ಬಳಸಲಾಯಿತು. ಸುಮಾರು ಒಂದು ತಿಂಗಳ ಸತತ ಪರಿಶ್ರಮದ ಬಳಿಕ ಮೂರು ಕಿಲೋಮೀಟರ್ ಉದ್ದದ ರಸ್ತೆಯನ್ನು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡಲಾಯಿತು.

ರೈತರ ಕೃಷಿ ಚಟುವಟಿಕೆಗಳಿಗೆ ಹೊಸ ಅನುಕೂಲ

ಈ ರಸ್ತೆಯ ದುಸ್ಥಿತಿಯಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಈ ಭಾಗದಲ್ಲಿ ಭತ್ತ, ತೆಂಗು, ಶುಂಠಿ, ಬಾಳೆ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ.

ಆದರೆ ರಸ್ತೆ ಸರಿಯಾಗಿಲ್ಲದ ಕಾರಣ ಗೊಬ್ಬರ, ಬೀಜ, ಕೃಷಿ ಉಪಕರಣಗಳನ್ನು ಜಮೀನಿಗೆ ಸಾಗಿಸುವುದು ಹಾಗೂ ಬೆಳೆದ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯುವುದು ಕಷ್ಟವಾಗಿತ್ತು. ದೊಡ್ಡ ವಾಹನಗಳು ಜಮೀನಿನ ಸಮೀಪಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈಗ ರಸ್ತೆ ದುರಸ್ತಿಯಾಗಿರುವುದರಿಂದ ರೈತರು ತಮ್ಮ ಜಮೀನಿನ ಸಮೀಪಕ್ಕೆ ದೊಡ್ಡ ವಾಹನಗಳನ್ನು ಕೊಂಡೊಯ್ಯಬಹುದು. ಕೃಷಿ ಉತ್ಪನ್ನಗಳ ಸಾಗಣೆಗೂ ಅನುಕೂಲವಾಗಿದೆ.

ರಸ್ತೆ ಸುಧಾರಣೆಯಿಂದ ಈ ಭಾಗದ ಕೃಷಿ ಜಮೀನುಗಳ ಮೌಲ್ಯದಲ್ಲೂ ಏರಿಕೆಯಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಒಂದು ಎಕರೆ ಜಮೀನಿಗೆ ಸುಮಾರು ₹40 ಲಕ್ಷ ಬೆಲೆ ಇತ್ತು. ಇದೀಗ ಅದರ ಮೌಲ್ಯ ಸುಮಾರು ₹70 ಲಕ್ಷಕ್ಕೆ ಏರಿಕೆಯಾಗಿದೆ ಎಂದು ನಾಗಭೂಷಣ ತಿಳಿಸಿದ್ದಾರೆ.

ರೇಷ್ಮೆ ಕೃಷಿ ಆರಂಭಿಸಿದ ರೈತ ಬಸವರಾಜು

ರಸ್ತೆ ದುರಸ್ತಿಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿರುವುದಲ್ಲದೆ, ಹೊಸ ಕೃಷಿ ಉದ್ಯಮಗಳಿಗೂ ದಾರಿ ತೆರೆದಿದೆ. ಸ್ಥಳೀಯ ರೈತ ಬಸವರಾಜು ಅವರು ಹಲವು ವರ್ಷಗಳಿಂದ ತಮ್ಮ ಜಮೀನಿನಲ್ಲಿ ರೇಷ್ಮೆ ಕೃಷಿ ಆರಂಭಿಸುವ ಆಸಕ್ತಿ ಹೊಂದಿದ್ದರು. ಆದರೆ ರಸ್ತೆ ಸಂಪರ್ಕ ಸರಿಯಾಗಿಲ್ಲದ ಕಾರಣ ಯೋಜನೆಯನ್ನು ಮುಂದೂಡುತ್ತಿದ್ದರು. ಇದೀಗ ರಸ್ತೆ ದುರಸ್ತಿಯಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿ ರೇಷ್ಮೆ ಕೃಷಿ ಆರಂಭಿಸಿದ್ದಾರೆ.

ಈಗ ರೈತನ ಮುಂದಿನ ಗುರಿ ಏನು ಗೊತ್ತಾ?

ಮೂರು ಕಿಲೋಮೀಟರ್ ರಸ್ತೆಯನ್ನು ದುರಸ್ತಿ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿರುವ ನಾಗಭೂಷಣ ಅವರು ಇದೀಗ ಮತ್ತೊಂದು ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ. ಈ ಭಾಗದ ರೈತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅವರ ಮುಂದಿನ ಗುರಿಯಾಗಿದೆ.

ಸುಮಾರು ಮೂರು ದಶಕಗಳ ಹಿಂದೆ ಅಳವಡಿಸಲಾಗಿದ್ದ ಕಾಲುವೆಯ ಪೈಪ್‌ಗಳು ಹಾಳಾಗಿದ್ದು, ಸೂಕ್ತ ನಿರ್ವಹಣೆ ಇಲ್ಲದಿರುವುದು ರೈತರ ಕೃಷಿಗೆ ತೊಂದರೆಯಾಗಿದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ರಸ್ತೆ ಅಗಲೀಕರಣ ಹಾಗೂ ಹಳೆಯ ನೀರಾವರಿ ಕಾಲುವೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ನಾಗಭೂಷಣ ಯೋಜನೆ ರೂಪಿಸಿದ್ದಾರೆ. ಈ ಕಾರ್ಯಕ್ಕೂ ಗ್ರಾಮಸ್ಥರ ಸಹಕಾರ ಪಡೆಯಲು ನಿರ್ಧರಿಸಿದ್ದಾರೆ. ಸರ್ಕಾರದ ನೆರವು ಸಿಗದಿದ್ದರೂ ಜನರ ಸಹಭಾಗಿತ್ವದಲ್ಲಿ ಕೆಲಸ ಮುಂದುವರಿಸುವ ಉದ್ದೇಶ ಹೊಂದಿದ್ದಾರೆ.

ಒಟ್ಟಿನಲ್ಲಿ, ತಮ್ಮ ಜಮೀನಿಗೆ ತೆರಳಲು ಎದುರಾಗಿದ್ದ ರಸ್ತೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಆರಂಭಿಸಿದ ನಾಗಭೂಷಣ ಅವರ ಪ್ರಯತ್ನ ಇಂದು ಹಲವು ಗ್ರಾಮಗಳ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಒಬ್ಬ ವ್ಯಕ್ತಿಯ ಪ್ರಯತ್ನಕ್ಕೆ ಗ್ರಾಮಸ್ಥರು ಕೈಜೋಡಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+