'ವೈಭವ್ ಸೂರ್ಯವಂಶಿ ಸಾಗರಕ್ಕೆ ಸೇರಿದವನು, ಈಗ ಸಣ್ಣ ಕೊಳದಲ್ಲಿದ್ದಾನೆ'
Vaibhav Sooryavanshi: ಇತ್ತೀಚೆಗಷ್ಟೇ ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುಎಇ ವಿರುದ್ಧ ಟೀಮ್ ಇಂಡಿಯಾ ಪರ 15 ವರ್ಷದ ವೈಭವ್ ಸೂರ್ಯವಂಶಿ ದಾಖಲೆಗಳ ಸುರಿಮಳೆಯನ್ನೇ ಮಾಡಿದರು. ಅವರು ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚುವ ಮೂಲಕ ಲಿಸ್ಟ್-ಎ ಕ್ರಿಕೆಟ್‌ನ ಅತಿ ವೇಗದ 100, 150 ಹಾಗೂ 200 ರನ್‌ಗಳು ಹಾಗೂ ಸಿಕ್ಸರ್‌ಗಳ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಚೆಂಡನ್ನು ಮೈದಾನದ ಮೂಲೆ-ಮೂಲೆಗೆ ಅಟ್ಟುವ ಈ ಎಡಗೈ ಬ್ಯಾಟರ್‌ನ ಬ್ಯಾಟಿಂಗ್ ಶೈಲಿ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ವೈಭವ್ ಸೂರ್ಯವಂಶಿಗೆ ಅವರೊಂದಿಗೆ ಆರಂಭದಿಂದಲೂ ಕೆಲಸ ಮಾಡಿರುವ ಬಿಹಾರ ತಂಡದ ಕೋಚ್ ಅಶೋಕ್ ಕುಮಾರ್, ಈ ಯುವ ಪ್ರತಿಭೆಯ ಅಸಲಿ ಸಾಮರ್ಥ್ಯ ಇನ್ನೂ ಹೊರಬರಬೇಕಿದೆ ಎಂದು ಹೇಳಿದ್ದಾರೆ. 'ವೈಭವ್ ಒಂದು ದೊಡ್ಡ ಮೀನು, ಆದರೆ ಆತನಿಗೀಗ ಸಿಕ್ಕಿರುವ ಕೊಳ ಬಹಳ ಚಿಕ್ಕದು. ಅವನು ಹುಟ್ಟಿರುವುದೇ ವಿಶಾಲ ಸಾಗರಕ್ಕಾಗಿ, ಈಗಷ್ಟೇ ಸಣ್ಣ ಕೊಳದಲ್ಲಿ ಆಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಈ ಮೂಲಕ, ವೈಭವ್ ಸೀನಿಯರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಂಪೂರ್ಣ ಸಿದ್ಧನಾಗಿದ್ದಾನೆ ಎಂಬ ಸಂದೇಶ ನೀಡಿದ್ದಾರೆ.

ಬುಮ್ರಾ, ಕಮ್ಮಿನ್ಸ್‌ಗೂ ಭಯಪಡದೆ ನಿರ್ಭೀತ ಆಟ
ಜೂಲಿಯನ್ ವುಡ್ ಅವರು ವೈಭವ್ ಮನಸ್ಥಿತಿಯನ್ನು ವಿಶ್ಲೇಷಿಸುತ್ತಾ, 'ಆಧುನಿಕ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವೇಗವಾಗಿ ಬದಲಾಗುತ್ತಿದೆ. ಈಗ ಬ್ಯಾಟರ್‌ಗಳು ಲೆಂತ್ ಬಾಲ್‌ಗಳನ್ನೂ ಸಿಕ್ಸರ್‌ಗೆ ಅಟ್ಟುತ್ತಿದ್ದಾರೆ. ಐಪಿಎಲ್‌ನಲ್ಲಿ ಆತ ಆಡಿದ ರೀತಿ ನೋಡಿ, ಜಸ್ಪ್ರೀತ್ ಬುಮ್ರಾ ಅವರ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದ ಆತ, ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲೂ ಸಿಕ್ಸರ್ ಸಿಡಿಸಿದ. ಬೌಲರ್ ಸ್ವಲ್ಪ ತಪ್ಪು ಮಾಡಿದರೂ ಚೆಂಡು ಬೌಂಡರಿ ಬದಲು ನೇರವಾಗಿ ಸಿಕ್ಸರ್ ಹೋಗುತ್ತದೆ ಎಂಬ ಆತ್ಮವಿಶ್ವಾಸ ಆತನಲ್ಲಿದೆ,' ಎಂದಿದ್ದಾರೆ. ಅಲ್ಲದೆ, ಬೇಸ್‌ಬಾಲ್ ಆಟಗಾರರಂತೆ ಬ್ಯಾಟ್ ಅನ್ನು ಹೆಚ್ಚು ಹಿಂದಕ್ಕೆ ಕೊಂಡೊಯ್ದು ವೇಗವಾಗಿ ಬೀಸುವುದರಿಂದ ಅವರ ಹೊಡೆತಗಳಿಗೆ ಇಷ್ಟೊಂದು ಶಕ್ತಿ ಬರುತ್ತದೆ ಎಂದು ವಿವರಿಸಿದ್ದಾರೆ.
ಜುಬಿನ್ ಭರೂಚಾ ಹೇಳಿದ್ದೇನು?
ವೈಭವ್ ಸೂರ್ಯವಂಶಿ ಅವರ ಮಾರ್ಗದರ್ಶಕ ಜುಬಿನ್ ಭರೂಚಾ ಅವರು ಈ ಯುವ ಬ್ಯಾಟರ್‌ನ ತಾಂತ್ರಿಕ ಕೌಶಲ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 'ವೈಭವ್ ತನ್ನ ದೇಹದ ತೂಕವನ್ನು ಹೆಚ್ಚಾಗಿ ಹಿಂದಿನ ಕಾಲಿನ ಮೇಲೆ ನಿಲ್ಲಿಸಿ, ಬೆನ್ನನ್ನು ಸ್ವಲ್ಪ ಬಾಗಿಸಿ ಬ್ಯಾಟ್ ಬೀಸುತ್ತಾನೆ. ಇದರಿಂದ ಸೊಂಟ ಮತ್ತು ಭುಜಗಳ ನಡುವೆ ಉತ್ತಮ ವೇಗ ಸೃಷ್ಟಿಯಾಗುತ್ತದೆ,' ಎಂದು ಹೇಳಿದ್ದಾರೆ.
'ಹಿಂದಿನ ಕಾಲದ ದಿಗ್ಗಜರಾದ ಡಾನ್ ಬ್ರಾಡ್ಮನ್ ಮತ್ತು ಗ್ರೇಮ್ ಪೊಲಾಕ್ ಕೂಡ ಇದೇ ರೀತಿ ಸ್ಟಂಪ್‌ಗಳ ಮುಂಭಾಗದಲ್ಲಿ ಬ್ಯಾಟ್ ಬೀಸುತ್ತಿದ್ದರು. ಹಾಗಾಗಿಯೇ ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ 10ಕ್ಕಿಂತ ಕಡಿಮೆ ಬಾರಿ ಎಲ್‌ಬಿಡಬ್ಲ್ಯೂ ಆಗಿದ್ದರು. ಪೊಲಾಕ್ ಒಮ್ಮೆಯೂ ಎಲ್‌ಬಿಡಬ್ಲ್ಯೂ ಆಗಿರಲಿಲ್ಲ. ವೈಭವ್ ತಂತ್ರಗಾರಿಕೆಯೂ ಅಂತಹದ್ದೇ ವಿಶೇಷ ಗುಣ ಹೊಂದಿದೆ,' ಎಂದು ಭರೂಚಾ ಶ್ಲಾಘಿಸಿದ್ದಾರೆ.
ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್ ಎಂದಿದ್ದ ಶುಭ್ಮನ್ ಗಿಲ್
ಈ ವರ್ಷದ ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದ ಬಳಿಕ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್ ಆಟವನ್ನು ಕಂಡು ಶುಭ್ಮನ್ ಗಿಲ್ ಕೂಡ ಬೆರಗಾಗಿದ್ದರು. 'ಆತನ ಬಯೋಮೆಕಾನಿಕ್ಸ್ ಮತ್ತು ಹ್ಯಾಂಡ್ ಸ್ಪೀಡ್ ಅತ್ಯದ್ಭುತವಾಗಿದೆ. ಸದ್ಯದ ಮಟ್ಟಿಗೆ ಟಿ20 ಮಾದರಿಯಲ್ಲಿ ಆತ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬ. ಮುಂಬರುವ ವರ್ಷಗಳಲ್ಲಿ ಎದುರಾಳಿ ತಂಡಗಳಿಗೆ ವೈಭವ್ ದೊಡ್ಡ ತಲೆನೋವಾಗಲಿದ್ದಾನೆ,' ಎಂದು ಗಿಲ್ ಭವಿಷ್ಯ ನುಡಿದಿದ್ದರು. ಸದ್ಯ ಟಿ20 ತಂಡದಲ್ಲಿ ಖಾಯಂ ಸ್ಥಾನ ಪಡೆಯದಿದ್ದರೂ, ವಯಸ್ಸು ಮತ್ತು ಪ್ರತಿಭೆ ಜೊತೆಗಿರುವ ವೈಭವ್ ಮುಂದೆ ಕ್ರಿಕೆಟ್ ಲೋಕದಲ್ಲಿ ಇನ್ನಷ್ಟು ದೊಡ್ಡ ದಾಖಲೆಗಳನ್ನು ನಿರ್ಮಿಸುವುದರಲ್ಲಿ ಅನುಮಾನವಿಲ್ಲ ಅಂತಲೇ ಹೇಳಬಹುದು.


Click it and Unblock the Notifications
