ಬೆಂಗಳೂರು ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳ ಹಾಜರಾತಿ; ಲೈವ್ ಲೊಕೇಶನ್ ಶೇರ್ ಕಡ್ಡಾಯ
ಬೆಂಗಳೂರು: ರಸ್ತೆಗುಂಡಿ, ವೈಟ್ ಟಾಪಿಂಗ್, ಪಾದಾಚಾರಿ ಮಾರ್ಗದ ಕಾಮಗಾರಿ ವೇಳೆ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ, ಪರಿಶೀಲಿಸದೇ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಪಾಲಿಕೆ ಮಹತ್ವದ ಕ್ರಮ ಕೈಗೊಂಡಿದೆ. ಇದರಿಂದ ಜವಾಬ್ದಾರಿಯುತ ಅಧಿಕಾರಿಯನ್ನಾಗಿಸುವ ಜೊತೆಗೆ ಗುಣಮಟ್ಟದ ಮೂಲಸೌಕರ್ಯ ನೀಡಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ "ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳ ಕಡ್ಡಾಯ ಹಾಜರಾತಿ ವ್ಯವಸ್ಥೆ' ಜಾರಿಗೆ ಪಾಲಿಕೆ ಮುಂದಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ಅಭಿವೃದ್ಧಿ ಕಾಮಗಾರಿಗಳು, ಫುಟ್ಪಾತ್ ಸ್ವಚ್ಛತೆ ತ್ಯಾಜ್ಯ ಸಂಗ್ರಹವಾಗುವ ಬ್ಲ್ಯಾಕ್ ಸ್ಪಾಟ್ ಗಳು ರಸ್ತೆ ಬದಿಯಲ್ಲಿನ ಅನಾಥ ವಾಹನಗಳು ಹಾಗೂ ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಇನ್ನಿತರೆ ವಿಷಯಗಳ ಕುರಿತು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ.ಆರ್ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಅಪರ ಆಯುಕ್ತರು ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಮನ್ವಯದಿಂದ ತಂಡವಾಗಿ ಕಾರ್ಯ ನಿರ್ವಹಿಸಬೇಕು. ಕಾಮಗಾರಿಗಳ ಗುಣಮಟ್ಟ ಹಾಗೂ ಪ್ರಗತಿಯ ಮೇಲೆ ನಿರಂತರ ನಿಗಾ ವಹಿಸಿ, ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಕಾಮಗಾರಿ ಸ್ಥಳದಲ್ಲೇ ಅಧಿಕಾರಿಗಳ ಕಡ್ಡಾಯ ಹಾಜರಾತಿ
ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಸ್ಥಳದಲ್ಲಿ ಸಂಬಂಧಪಟ್ಟ ಅಭಿಯಂತರರು ಕಡ್ಡಾಯವಾಗಿ ಹಾಜರಿರಬೇಕು. ಕಾಮಗಾರಿಯ ಪ್ರಗತಿ, ಗುಣಮಟ್ಟ ಹಾಗೂ ಅನುಷ್ಠಾನವನ್ನು ಸ್ಥಳದಲ್ಲಿಯೇ ಪರಿಶೀಲಿಸಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳ ಸ್ಥಳೀಯ ಹಾಜರಾತಿ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಸಂಬಂಧಪಟ್ಟ ಅಭಿಯಂತರರು ತಮ್ಮ ಲೈವ್ ಲೊಕೇಶನ್ ಅನ್ನು ನಿರ್ದಿಷ್ಟ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳುವಂತೆ ಸೂಚಿಸಿದರು.
ಇನ್ನೂ ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ನಿಯಮಿತವಾಗಿ ಸ್ಥಳ ಪರಿಶೀಲನೆ ನಡೆಸಿ, ನಿಗದಿತ ಮಾನದಂಡ ಹಾಗೂ ಸಮಯಮಿತಿಯಂತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸಹಾಯ, ದೂರುಗಳಿಗೆ ತ್ವರಿತ ಪರಿಹಾರ
ಚಿಕ್ಕಪೇಟೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು ತಮ್ಮ ವ್ಯಾಪ್ತಿಯ ವಾರ್ಡ್ ಗಳಲ್ಲಿ ದ್ವಿಚಕ್ರ ವಾಹನ ಅಥವಾ ಕಾಲ್ನಡಿಗೆಯಲ್ಲಿ ನಿಯಮಿತವಾಗಿ ಸ್ಥಳ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಸಮಸ್ಯೆಗಳನ್ನು ಗುರುತಿಸಿ ಸ್ಥಳದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳು ಪುನರಾವರ್ತನೆಯಾಗದಂತೆ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡುವುದರ ಜೊತೆಗೆ, ಪ್ರತಿದಿನ ಬೆಳಿಗ್ಗೆ ಸಹಾಯ ದೂರುಗಳನ್ನು ಪರಿಶೀಲಿಸಿ ಬಾಕಿ ಇರುವ ದೂರುಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಾಗೂ ದೂರುಗಳ ಪರಿಹಾರದಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಹೇಳಿದರು.
ಕಾಮಗಾರಿ: ಛಾಯಾಚಿತ್ರ ದಾಖಲಾತಿಗೆ ಒತ್ತು
ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ, ಬಳಸುತ್ತಿರುವ ಸಾಮಾಗ್ರಿಗಳು ಹಾಗೂ ನಿಗದಿತ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಪ್ರತಿ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭಕ್ಕೂ ಮುನ್ನ, ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕದ ಛಾಯಾಚಿತ್ರಗಳನ್ನು ಸಂಬಂಧಪಟ್ಟ ಅಭಿಯಂತರರು ಹಾಗೂ ಗುತ್ತಿಗೆದಾರರು ಕಡ್ಡಾಯವಾಗಿ ದಾಖಲಿಸಿ ಸಲ್ಲಿಸುವಂತೆ ಸೂಚಿಸಿದರು.
ದೈನಂದಿನ ಕಾರ್ಯಯೋಜನೆ ರೂಪಿಸಿ..
ಪ್ರತಿದಿನ ಕೈಗೊಳ್ಳಬೇಕಾದ ಕಾಮಗಾರಿಗಳು, ಬಾಕಿ ಇರುವ ಕೆಲಸಗಳು ಹಾಗೂ ಸಾರ್ವಜನಿಕರಿಂದ ಸ್ವೀಕರಿಸಲಾದ ದೂರುಗಳ ವಿವರಗಳನ್ನು ಟೇಬಲ್ ಅಥವಾ ಚಾರ್ಟ್ ರೂಪದಲ್ಲಿ ಸಿದ್ಧಪಡಿಸಿಕೊಂಡು, ಆದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಸಮನ್ವಯದಿಂದ ದಿನದ ಕಾರ್ಯಯೋಜನೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ಕಾರ್ಯ ನಿರ್ವಹಣೆ ಸುಗಮವಾಗುವುದರ ಜೊತೆಗೆ ಕಾಮಗಾರಿಗಳ ಪ್ರಗತಿ, ದೂರುಗಳ ವಿಲೇವಾರಿ ಹಾಗೂ ಸಮಯಪಾಲನೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಪಾದಚಾರಿ ಸ್ನೇಹಿ ಪುಟ್ ಪಾತ್ ನಿರ್ಮಾಣಕ್ಕೆ ಕ್ರಮವಹಿಸುವ ಜೊತೆಗೆ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವ ಬ್ಲ್ಯಾಕ್ ಸ್ಪಾಟ್‌ಗಳ ತೆರವು ಮಾಡಬೇಕು. ರಸ್ತೆ ಬದಿಯಲ್ಲಿ ಅನಾಥವಾಗಿ ನಿಲ್ಲಿಸಿರುವ ವಾಹನಗಳ ತೆರವು ಹಾಗೂ ಖಾಲಿ ನಿವೇಶನಗಳ ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಆದ್ಯ ಕರ್ತವ್ಯವಾಗಿದೆ.
ಫುಟ್ ಪಾತ್ ಮೇಲೆ ಬೈಕ್ ರೈಡ್ ತಡೆ
ಕನಕಪಾಳ್ಯ ರಸ್ತೆಗೆ ಭೇಟಿ ನೀಡಿ ಪಾದಚಾರಿ ಹಾಗೂ ರಸ್ತೆ ಪರಿಸ್ಥಿತಿಯನ್ನು ಪರಿಶೀಲಿಸಿದ ಅಭಿವೃದ್ಧಿ ಅಪರ ಆಯುಕ್ತರು ಫುಟ್ ಪಾತ್ ಮೇಲೆ ದ್ವಿಚಕ್ರ ವಾಹನಗಳ ಸಂಚಾರ ಹಾಗೂ ನಿಲುಗಡೆ ತಡೆಯಲು ಅಗತ್ಯ ಸ್ಥಳಗಳಲ್ಲಿ (Traffic Bollards) ಸಂಚಾರ ನಿಯಂತ್ರಣ ಸ್ತಂಭಗಳನ್ನು ಅಳವಡಿಸುವಂತೆ ಸೂಚಿಸಿದರು. ಹಾಳಾಗಿರುವ ಫುಟ್‌ಪಾತ್‌ಗಳನ್ನು ದುರಸ್ತಿ ಮಾಡುವುದರ ಜೊತೆಗೆ, ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಹೇಳಿದರು.


Click it and Unblock the Notifications
