Karnataka weather: ಇಂದು ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ ಎಚ್ಚರಿಕೆ
ಬೆಂಗಳೂರು: ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಗುಡುಗು-ಮಿಂಚಿನ ಅಬ್ಬರದ ಎಚ್ಚರಿಕೆಯನ್ನ ಭಾರತೀಯ ಹವಾಮಾನ ಇಲಾಖೆ ನೀಡಿರುವ ಬೆನ್ನಲ್ಲೇ, ಕರ್ನಾಟಕದ ಹವಾಮಾನದಲ್ಲೂ ಮಹತ್ವದ ಬದಲಾವಣೆ ಕಂಡುಬಂದಿದೆ. ಇಂದಿನ (ನವೆಂಬರ್ 25, 2026) ಕರ್ನಾಟಕ ಹವಾಮಾನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಇದ್ದರೂ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
13 ಜಿಲ್ಲೆಗಳಿಗೆ ಮಳೆ ಮತ್ತು ಗುಡುಗು-ಮಿಂಚಿನ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆಯು ಇಂದು (ನ.25) ಮತ್ತು ನಾಳೆ (ನ.26) ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ಇಂದಿನ ಮಳೆ ಮುನ್ಸೂಚನೆಯಂತೆ ಈ ಕೆಳಗಿನ 13 ಜಿಲ್ಲೆಗಳಲ್ಲಿ ಹಗುರ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ:

*ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ.
*ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಹಾಸನ.
*ತುಮಕೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ.
ಇದೇ ವೇಳೆ ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ನವೆಂಬರ್ 26 ಮತ್ತು 27ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಾತ್ರ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಕರ್ನಾಟಕ ಹವಾಮಾನ
ಕರಾವಳಿ ಕರ್ನಾಟಕ: ಇಂದಿನ ಕರಾವಳಿ ಹವಾಮಾನದ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 26ರಿಂದ 28ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಗುರ ಮಳೆ ಮುಂದುವರಿಯಲಿದ್ದು, ಉತ್ತರ ಕನ್ನಡದಲ್ಲಿ ಬಹುತೇಕ ಒಣಹವೆ ಇರಲಿದೆ. ಕರಾವಳಿ ಭಾಗಕ್ಕೆ ಸದ್ಯ ಯಾವುದೇ ಹವಾಮಾನ ಎಚ್ಚರಿಕೆ ನೀಡಿಲ್ಲ.
ಉತ್ತರ ಒಳನಾಡು: ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದ್ದು, ಇಲ್ಲಿ ಯಾವುದೇ ಮಳೆ ಅಥವಾ ಗುಡುಗು-ಮಿಂಚಿನ ಆತಂಕವಿಲ್ಲ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನವೆಂಬರ್ 29ರವರೆಗೂ ಸಂಪೂರ್ಣ ಒಣಹವೆ ಇರಲಿದೆ.
ಇಂದಿನ ಬೆಂಗಳೂರು ಮಳೆ ಮುನ್ಸೂಚನೆ
ಬೆಂಗಳೂರಲ್ಲಿ ಇಂದು ಮಳೆ ಮುನ್ಸೂಚನೆಯಿದ್ದು, ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ನಗರದ ವಿವಿಧ ಭಾಗಗಳಲ್ಲಿ ಹಗುರ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 26°C ಹಾಗೂ ಕನಿಷ್ಠ ತಾಪಮಾನ 21°C ದಾಖಲಾಗುವ ನಿರೀಕ್ಷೆಯಿದೆ. ಇನ್ನು ರಾಜ್ಯದ ಬಯಲು ಸೀಮೆಯ ಪ್ರದೇಶಗಳ ಪೈಕಿ ಮೈಸೂರಿನಲ್ಲಿ ಅತ್ಯಂತ ಕಡಿಮೆ ಅಂದರೆ 15.8°C ಕನಿಷ್ಠ ತಾಪಮಾನ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.




Click it and Unblock the Notifications
