ಚಳಿಗೆ ತತ್ತರಿಸಿದ ಉತ್ತರ ಕರ್ನಾಟಕ ಮಂದಿ: 6 ಡಿ.ಸೆ.ವರೆಗೆ ಉಷ್ಣಾಂಶ ಕುಸಿತ, ಬೆಂಗಳೂರಲ್ಲಿ ಇಂದು ಮಳೆ ಮುನ್ಸೂಚನೆ!
ಬೆಂಗಳೂರು: ರಾಜ್ಯದಾದ್ಯಂತ ಚಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರಾತ್ರಿ ಹಾಗೂ ಮುಂಜಾನೆಯ ವೇಳೆ ಜನರು ಮೈ ನಡುಗಿಸುವ ಚಳಿಯಿಂದ ತತ್ತರಿಸುವಂತಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಇಂದಿನ (ನವೆಂಬರ್ 24, 2026) ಕರ್ನಾಟಕ ಹವಾಮಾನ ವರದಿಯ ಪ್ರಕಾರ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿತ ಕಂಡಿದೆ.
ಉತ್ತರ ಕರ್ನಾಟಕ ಚಳಿ ಹೆಚ್ಚಳಕ್ಕೆ ಕಾರಣವೇನು?
ರಾಜ್ಯದ ಬಯಲು ಸೀಮೆಯ ಪ್ರದೇಶಗಳ ಪೈಕಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲೇ ಅತ್ಯಂತ ಕಡಿಮೆ ಅಂದರೆ 11.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದ್ದು, ಉತ್ತರ ಕರ್ನಾಟಕದಲ್ಲಿ ಚಳಿ ಜೋರಾಗಿದೆ. ಬೆಳಗಿನ ಜಾವ ದಟ್ಟ ಮಂಜು ಆವರಿಸುತ್ತಿರುವುದರಿಂದ ಹೆದ್ದಾರಿಗಳಲ್ಲಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ , "ಉತ್ತರ ಮತ್ತು ಈಶಾನ್ಯ ದಿಕ್ಕುಗಳಿಂದ ಬೀಸುತ್ತಿರುವ ಒಣ ಹಾಗೂ ಶೀತ ಗಾಳಿಯು ಉತ್ತರ ಕರ್ನಾಟಕದಲ್ಲಿ ವ್ಯಾಪಿಸಿದೆ. ಇದರೊಂದಿಗೆ ಮೋಡ ರಹಿತ ಶುಭ್ರ ಆಕಾಶ ಹಾಗೂ ಚಂಡಮಾರುತದ ಪ್ರಭಾವದಿಂದ ರಾತ್ರಿ ಮತ್ತು ಮುಂಜಾನೆ ತಾಪಮಾನ ದಿಢೀರ್ ಕುಸಿತವಾಗಿದೆ. ಹಗಲು ವೇಳೆ ಭೂಮಿ ಹೀರಿಕೊಂಡಿದ್ದ ಶಾಖವು ಸಂಜೆಯಾಗುತ್ತಿದ್ದಂತೆಯೇ ವಾತಾವರಣಕ್ಕೆ ಬಿಡುಗಡೆಯಾಗುವುದರಿಂದ ಇದ್ದಕ್ಕಿದ್ದಂತೆ ಚಳಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲದೆ ಒಣಹವೆ ಮುಂದುವರಿದಿದೆ" ಎಂದಿದ್ದಾರೆ.
ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಇಂದು ಮಳೆ ಮುನ್ಸೂಚನೆ
ಉತ್ತರ ಕರ್ನಾಟಕದಲ್ಲಿ ಒಣಹವೆ ಹಾಗೂ ಚಳಿ ಇದ್ದರೆ, ಬಂಗಾಳಕೊಲ್ಲಿ ಮತ್ತು ಕೇರಳ-ಕರ್ನಾಟಕ ಕರಾವಳಿಯ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಇಂದು (ನ.24) ಮತ್ತು ನಾಳೆ (ನ.25) ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ:
* ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಹಗುರ ಮಳೆ ಅಥವಾ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.
* ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ನವೆಂಬರ್ 28ರವರೆಗೆ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ.
ಇಂದಿನ ಬೆಂಗಳೂರು ಹವಾಮಾನ ಮತ್ತು ತಾಪಮಾನದ ವಿವರ
ಐಎಂಡಿ ವರದಿಯ ಪ್ರಕಾರ, ಇಂದಿನ ಬೆಂಗಳೂರು ಹವಾಮಾನದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ನಗರದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮುಂಜಾನೆ ವೇಳೆ ಕೆಲವೆಡೆ ಮಂಜು ಆವರಿಸಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕನಿಷ್ಠ ತಾಪಮಾನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.




Click it and Unblock the Notifications
