ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಬಿಗ್ ಟ್ವಿಸ್ಟ್; KRS ಬಗ್ಗೆ ಸಚಿವರ ಮಹತ್ವದ ಸ್ಪಷ್ಟನೆ!
ಮಂಡ್ಯ: ಕೆಆರ್‌ಎಸ್ದಿಂ ಜಲಾಶಯದ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎನ್. ಚಲುವರಾಯಸ್ವಾಮಿ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡಲು ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೀರ್ಮಾನಿಸಿದೆ. ಸದ್ಯ 1.5 ಸಾವಿರ ಕ್ಯೂಸೆಕ್ ನೀರು ಸಾಮಾನ್ಯವಾಗಿ ಹರಿಯುತ್ತಿದೆ. ಹೆಚ್ಚುವರಿ ನೀರಿನ ಹರಿವಿನ ಆರೋಪದ ಬಗ್ಗೆ ಅಧಿಕಾರಿಗಳಿಂದ ಕೂಡಲೇ ಮಾಹಿತಿ ಪಡೆದು ಪರಿಶೀಲಿಸಲಾಗುವುದು. ತಮಿಳುನಾಡಿನ ಬೇಡಿಕೆಗಳನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೊತೆಗೆ ಸಿಡಬ್ಲ್ಯೂಆರ್‌ಸಿ (CWRC) ಹಾಗೂ ಸಿಡಬ್ಲ್ಯೂಎಂಎ (CWMA) ಕಾರ್ಯದರ್ಶಿಗಳು ಹೊಸದಾಗಿ ನೇಮಕಗೊಂಡಿದ್ದು, ನಮ್ಮ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹೆಚ್ಡಿಕೆಯಿಂದ ಜಿಲ್ಲೆಗೆ ಏನು ಪ್ರಯೋಜನವಾಗಿದೆ?
ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಂದ ಜಿಲ್ಲೆಗೆ ಏನು ಪ್ರಯೋಜನವಾಗಿದೆ? ಎಲ್ಲದಕ್ಕೂ ಉಡಾಫೆ ಉತ್ತರ ನೀಡುವ ಅವರಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ನಿಡಘಟ್ಟದಲ್ಲಿ ಎಕ್ಸ್‌ಪ್ರೆಸ್‌ವೇಗೆ ಸರಿಯಾದ ಎಂಟ್ರಿ ಮತ್ತು ಎಕ್ಸಿಟ್ ವ್ಯವಸ್ಥೆ ಇಲ್ಲ. ಅದನ್ನು ಸರಿಪಡಿಸದ ಮೇಲೆ ಇವರು ಸಂಸದರಾಗಿ, ಕೇಂದ್ರ ಸಚಿವರಾಗಿ ಏನು ಪ್ರಯೋಜನ? ಮೂರು ವರ್ಷಗಳ ಹಿಂದೆ ನಾವು ಮಾಡಿಸಿದ್ದ ಎಕ್ಸಿಟ್ ಈಗ ಹಿಂದಕ್ಕೆ ಹೋಗಿದೆ ಎಂದರೆ, ನಮ್ಮ ಕ್ಷೇತ್ರದವರೇ ಕೇಂದ್ರ ಸಚಿವರಾಗಿ ಏನು ಲಾಭ? ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೋಗಿ ಹತ್ತು ನಿಮಿಷದಲ್ಲಿ ಈ ಕೆಲಸ ಮಾಡಿಸಬಹುದು. ಕೈಗಾರಿಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಅವರ ಕೊಡುಗೆಗಳ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಟೀಕಿಸಿದರು.
ಪ್ರತಿಯೊಂದಕ್ಕೂ ಪತ್ರ ಬರೆಯುತ್ತಾರೆ ಅಷ್ಟೇ
ಕೇಂದ್ರ ಸಚಿವರಾದ ಮೇಲೆ 14 ಕೋಟಿ ರೂ., ವೆಚ್ಚದಲ್ಲಿ ಜಿಲ್ಲೆಗೆ ಒಂದು ಸ್ಟೇಡಿಯಂ ನೀಡಿರುವುದನ್ನು ಬಿಟ್ಟರೆ ಇನ್ಯಾವ ಕೆಲಸ ಮಾಡಿದ್ದಾರೆ? ಪ್ರತಿಯೊಂದಕ್ಕೂ ಪತ್ರ ಬರೆಯುತ್ತಾರೆ ಅಷ್ಟೇ. ರಿಂಗ್ ರೋಡ್ ವಿಚಾರಕ್ಕೂ ಪತ್ರ ಬರೆದಿದ್ದಾರೆ. ಅವರೊಂದಿಗೆ ವಾದ ಮಾಡುವುದಕ್ಕಿಂತ ಸುಮ್ಮನಿರುವುದೇ ಒಳ್ಳೆಯದು. ನಾವಿಬ್ಬರು ಹಿಂದೆ ಆತ್ಮೀಯ ಸ್ನೇಹಿತರಾಗಿದ್ದೆವು, ಆದರೆ ಈಗಿಲ್ಲ. ಅವರನ್ನು ಟೀಕೆ ಮಾಡುವುದು ಅಥವಾ ಏಕವಚನದಲ್ಲಿ ಮಾತನಾಡುವುದರಿಂದ ನನಗೆ ಏನೂ ಆಗಬೇಕಿಲ್ಲ. ನಮಗೂ ತಲೆಕೆಟ್ಟಾಗ ಮಾತನಾಡಿರಬಹುದು, ಆದರೆ ಅಂತಹ ಕೆಟ್ಟ ಇತಿಹಾಸ ನಮಗಿಲ್ಲ ಎಂದರು.
ಬರ ಪರಿಹಾರದ ಹೇಳಿಕೆಗೆ ಕಿಡಿ
ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ರೈತರನ್ನು ಭಿಕ್ಷುಕರ ರೀತಿ ನೋಡುತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಎನ್‌ಡಿಆರ್‌ಎಫ್ ತಂಡ ಸರ್ವೆ ನಡೆಸಿ ದೆಹಲಿಗೆ ವಾಪಸಾಗಿ ತಿಂಗಳಾಗಿದೆ. ಅದನ್ನು ಕ್ಲಿಯರ್ ಮಾಡಿಸುವುದನ್ನು ಬಿಟ್ಟು, ಅಲ್ಲಿ ಇಲ್ಲಿ ಬೈದುಕೊಂಡು ತಿರುಗಾಡುವುದೇ ಕುಮಾರಸ್ವಾಮಿ ಅವರ ಕೆಲಸವಾಗಿದೆ. ನಾವು ಅಡ್ವಾನ್ಸ್ ಆಗಿ 2.5 ಸಾವಿರ ರೂ., ನೀಡಿದ್ದೇವೆ.
ಕೇಂದ್ರ ಸರ್ಕಾರ ಬರ ಪರಿಹಾರವನ್ನು ಹೆಚ್ಚಿಸಿದ್ದು, ಅದರ ಪ್ರಕಾರ ಹಣ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಒಂದು ವೇಳೆ ಮಂಜೂರು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರೆ ನಮ್ಮ ಸರ್ಕಾರವೇ ಪರ್ಯಾಯ ಕ್ರಮ ಕೈಗೊಳ್ಳಲಿದೆ. ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯದ ಜನರ ಬಗ್ಗೆ ಕನಿಷ್ಠ ಪ್ರೀತಿಯಿದ್ದರೆ ಕೇಂದ್ರದಿಂದ ಬರ ಪರಿಹಾರ ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.
ಅಕ್ರಮ ಗಣಿಗಾರಿಕೆ ಆರೋಪಕ್ಕೆ ತಿರುಗೇಟು
ನಾಗಮಂಗಲದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, 2019ರಲ್ಲಿ ಗಣಿಗಾರಿಕೆ ನಡೆಸುತ್ತಿದ್ದವನು ನಮ್ಮ ಹುಡುಗನೇ ಆಗಿದ್ದಿರಬಹುದು. ಆದರೆ, ಅಂದು ಶಾಸಕರಾಗಿದ್ದು ಯಾರು? ಅವರಿಗೆ ಅನುಮತಿ ನೀಡಿದ್ದು ಯಾರು? ಈ ಬಗ್ಗೆ ಮಾತನಾಡಿದರೆ ಅದು ಅವರಿಗೇ ತಿರುಗುಬಾಣವಾಗುತ್ತದೆ. ಅವರಿಗೆ ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಯೇ ಇಲ್ಲ.
ಬಾಯಿಗೆ ಬಂದಂತೆ ಮಾತನಾಡಿದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಸಿಗುತ್ತದೆ ಎಂದುಕೊಳ್ಳುವವರಿಗೆ ನಾನೇನು ಮಾಡಲು ಸಾಧ್ಯ? ಈಗ ನಾನೇ ಮಂತ್ರಿಯಾಗಿದ್ದೇನೆ, ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಏನು ಬೇಕಾದರೂ ಮಾಡಬಹುದು. ಆದರೆ, ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿದ ಕೂಡಲೇ ನಾವೇ ಪರವಾನಗಿ (ಲೈಸೆನ್ಸ್) ರದ್ದುಗೊಳಿಸಿ ಗಣಿಗಾರಿಕೆ ನಿಲ್ಲಿಸಿದ್ದೇವೆ. ಇದನ್ನು ಅರ್ಥಮಾಡಿಕೊಂಡು ಮಾತನಾಡಬೇಕು ಎಂದು ಹೆಸರೇಳದೆ ನಾಗಮಂಗಲದ ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು.
ರಾಜಕೀಯ ಭವಿಷ್ಯದ ಬಗ್ಗೆ ವ್ಯಂಗ್ಯ
ಕುಮಾರಸ್ವಾಮಿ ಅವರಿಗೆ ಕಾಲ ಬರಲಿದೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಭವಿಷ್ಯ ನುಡಿಯದಿದ್ದರೆ ಬದುಕುವುದು ಹೇಗೆ? 'ನನ್ನಿಂದಲೇ ಸರ್ಕಾರ ರಚನೆಯಾಗಲಿದೆ' ಎಂದು ಹೇಳಿದರಷ್ಟೇ ಜೆಡಿಎಸ್ ಜೊತೆಗಿರುವವರು ಉಳಿದುಕೊಳ್ಳುತ್ತಾರೆ ಮತ್ತು ಒಂದಷ್ಟು ಮತಗಳು ಬೀಳುತ್ತವೆ. ಹೀಗಾಗಿ ಅವರು ಹೀಗೆಲ್ಲ ಮಾತನಾಡುತ್ತಾರೆ. ಈ ಬಾರಿ ನೂರಕ್ಕೆ ನೂರರಷ್ಟು ನಮ್ಮ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ.
ಡಿ.ಕೆ. ಶಿವಕುಮಾರ್ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಸಮರ್ಥ ನಾಯಕತ್ವವಿಲ್ಲ, ಜೆಡಿಎಸ್ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ. ಅವರು 80 ಸೀಟುಗಳನ್ನು ಪಡೆಯುವುದಿಲ್ಲ ಎಂಬ ವರದಿಯಿದ್ದು, ಆ ವರದಿಯನ್ನು ತಿರುಚುವ (ಮ್ಯಾನಿಪ್ಯುಲೇಟ್) ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.





Click it and Unblock the Notifications
