Vaibhav Sooryavanshi: 28, 4, 14..100*: ಮತ್ತೊಂದು ವಿಶ್ವದಾಖಲೆ ಬರೆದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ
Vaibhav Sooryavanshi: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. 2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಅವರು ವೇಗದ ಶತಕದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಯುಎಇ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟುವ ಭರದಲ್ಲಿ ಕ್ರೀಸ್‌ಗೆ ಇಳಿದ ವೈಭವ್ ಸೂರ್ಯವಂಶಿ, ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮೈದಾನದ ಮೂಲೆ-ಮೂಲೆಗೂ ಚೆಂಡನ್ನು ಅಟ್ಟಿದ ಈ ಯುವ ಎಡಗೈ ಬ್ಯಾಟರ್, ಬರೋಬ್ಬರಿ 14 ಸಿಕ್ಸರ್‌ಗಳು ಹಾಗೂ 4 ಬೌಂಡರಿಗಳ ನೆರವಿನಿಂದ ಕೇವಲ 28 ಎಸೆತಗಳಲ್ಲಿ ಮೂರಂಕಿ ಮುಟ್ಟಿದರು. ಈ ಅದ್ಭು ಇನ್ನಿಂಗ್ಸ್ ಮೂಲಕ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರ ಹೆಸರಿನಲ್ಲಿದ್ದ ಅತ್ಯಂತ ವೇಗದ ಶತಕದ ದಾಖಲೆಯನ್ನು ವೈಭವ್ ಪುಡಿಗಟ್ಟಿದ್ದಾರೆ.

ಯುಎಇ ತಂಡಕ್ಕೆ ಆಸರೆಯಾದ ಹರ್ಪ್ರೀತ್ ಸಿಂಗ್ ಶತಕ
ಇದಕ್ಕೂ ಮುನ್ನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್‌ಗಳ ಮೊತ್ತವನ್ನು ಕಲೆಹಾಕಿತ್ತು. ಯುಎಇ ಪರ ಏಕಾಂಗಿ ಹೋರಾಟ ನಡೆಸಿದ ಹರ್ಪ್ರೀತ್ ಸಿಂಗ್, 144 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 130 ರನ್‌ಗಳ ಅಮೋಘ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಬಾಸಿಲ್ ಹಮೀದ್ 36 ಎಸೆತಗಳಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಸಹಿತ ಅಜೇಯ 36 ರನ್ ಗಳಿಸಿ ತಂಡದ ಮೊತ್ತ 250ರ ಸನಿಹ ತಲುಪಲು ನೆರವಾದರು.
ಭಾರತೀಯ ಬೌಲರ್‌ಗಳ ಉತ್ತಮ ಪ್ರದರ್ಶನ
ಬೌಲಿಂಗ್ ವಿಭಾಗದಲ್ಲಿ ಭಾರತೀಯ ಯುವ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿ ಯುಎಇ ರನ್ ವೇಗಕ್ಕೆ ಕಡಿವಾಣ ಹಾಕಿದರು. ವೇಗಿ ಅರ್ಷದ್ ಖಾನ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಹರ್ಷಿತ್ ರಾಣಾ, ಸೂರ್ಯಾಂಶ್ ಶೆಡ್ಗೆ, ಹರ್ಷ್ ದುಬೆ ಹಾಗೂ ಶಹಬಾಜ್ ಅಹ್ಮದ್ ತಲಾ ಒಂದೊಂದು ವಿಕೆಟ್ ಕಬಳಿಸಿ ಯುಎಇ ತಂಡವನ್ನು 249 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ವೈಭವ್
ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ ಇದೀಗ ಕ್ರೀಡಾಭಿಮಾನಿಗಳ ನೆಚ್ಚಿನ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಹಿರಿಯ ಆಟಗಾರರ ಮಟ್ಟದಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯ ತೋರಿಸಿರುವ ವೈಭವ್, ತಮ್ಮ ನಿರ್ಭೀತ ಆಟದ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ವೇಗದ ಬೌಲರ್‌ಗಳ ಎದುರು ನಿರ್ಭೀತ ಬ್ಯಾಟ್ ಬೀಸುವುದು, ಸ್ಪಿನ್ನರ್‌ಗಳ ಎಸೆತಗಳನ್ನು ಕೂಡ ಬೌಂಡರಿ ಗೆರೆ ದಾಟಿಸುವುದು ಅವರ ಪ್ರಮುಖ ಸಾಮರ್ಥ್ಯವಾಗಿದೆ. ಒತ್ತಡದ ಸಂದರ್ಭಗಳಲ್ಲಿಯೂ ದೊಡ್ಡ ಹೊಡೆತಗಳನ್ನು ಬಾರಿಸುವ ಧೈರ್ಯ ಅವರ ಆಟದಲ್ಲಿ ಕಾಣಿಸುತ್ತದೆ. ಇದೇ ಕಾರಣಕ್ಕೆ ಐಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್ ವೇದಿಕೆಗಳಲ್ಲಿ ಅವರ ಪ್ರದರ್ಶನದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.
ಆದರೆ, ಪ್ರತಿಭೆಯ ಜೊತೆಗೆ ಸ್ಥಿರತೆ ತಾಂತ್ರಿಕ ಸುಧಾರಣೆ ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳುವುದು ಅವರ ಮುಂದಿರುವ ಪ್ರಮುಖ ಸವಾಲುಗಳು. ಸೂಕ್ತ ಮಾರ್ಗದರ್ಶನ ಹಾಗೂ ನಿರಂತರ ಪರಿಶ್ರಮ ಮುಂದುವರೆಸಿದರೆ, ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಸ್ಥಾನ ಪಡೆಯುವ ಸಾಮರ್ಥ್ಯ ವೈಭವ್ ಅವರಿಗಿದೆ. ಅವರ ಮುಂದಿನ ಹೆಜ್ಜೆಗಳ ಮೇಲೆ ಈಗ ಇಡೀ ವಿಶ್ವದ ಕಣ್ಣಿದೆ.


Click it and Unblock the Notifications
