ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಪ್ರತ್ಯಕ್ಷ! ಸ್ಪರ್ಧಿಗಳ ಕಥೆ ಹರೋಹರ, ಮನುಷ್ಯನಿಗೆ ನರಿಯಾಗೋದು ಕಷ್ಟವೇ?
'ಬಿಗ್ ಬಾಸ್ ಕನ್ನಡ ಸೀಸನ್ 13' (Bigg Boss Kannada 13) ಕಾರ್ಯಕ್ರಮ 12ನೇ ವಾರಕ್ಕೆ ಕಾಲಿಟ್ಟಿದೆ. ದಿನ ಕಳೆದಂತೆ ದೊಡ್ಮನೆಯ ಆಟ ಮತ್ತಷ್ಟು ರೋಚಕವಾಗುತ್ತಿದೆ. ಈ ಹಂತದಲ್ಲಿ ಪ್ರತಿಯೊಂದು ಟಾಸ್ಕ್ ಕೂಡ ಸ್ಪರ್ಧಿಗಳಿಗೆ ಬಹಳ ಮುಖ್ಯವಾಗಿದೆ. ಫಿನಾಲೆ ಹತ್ತಿರವಾಗುತ್ತಿರುವುದರಿಂದ ಗೆಲುವಿಗಾಗಿ ಎಲ್ಲರೂ ಪೈಪೋಟಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸದೊಂದು ಶಾಕ್ ನೀಡಿದ್ದಾರೆ. ಅದುವೇ ಗುಳ್ಳೆನರಿ ಆಟ!
ವಿಲನ್ ಬಗಲ್ ಮೇ ಹೈ
bigg boss ಮನೆಯಲ್ಲಿ ಈಗ ಗುಳ್ಳೆನರಿಯ ಪ್ರವೇಶವಾಗಿದೆ. ಆದರೆ ಇದು ಸಾಮಾನ್ಯ ಟಾಸ್ಕ್ ಅಲ್ಲ. ಇಲ್ಲಿ ಶಕ್ತಿ ಪ್ರದರ್ಶನಕ್ಕಿಂತ ಬುದ್ಧಿವಂತಿಕೆ, ತಂತ್ರಗಾರಿಕೆ ಮತ್ತು ಸಮಯಪ್ರಜ್ಞೆಗೆ ಹೆಚ್ಚಿನ ಮಹತ್ವವಿದೆ. ಅಷ್ಟೇ ಅಲ್ಲ, ತನ್ನದೇ ತಂಡದ ಸದಸ್ಯರಿಗೆ ಗೊತ್ತಾಗದಂತೆ ಅವರ ವಿರುದ್ಧವೇ ಆಟವಾಡುವುದು ಈ ಗುಳ್ಳೆನರಿಯ ಪ್ರಮುಖ ಕೆಲಸ.

ಏನಿದು ಗುಳ್ಳೆನರಿ ಆಟ?
ಟಾಸ್ಕ್ ಬಗ್ಗೆ ಮಾಹಿತಿ ನೀಡಿರುವ ಬಿಗ್ ಬಾಸ್, ಕಾಡಿನ ನಿಯಮವನ್ನು ಉದಾಹರಣೆಯಾಗಿ ನೀಡಿದ್ದಾರೆ. ಕಾಡಿನಲ್ಲಿ ಕೆಲವು ಪ್ರಾಣಿಗಳು ಕೇವಲ ಶಕ್ತಿಯಿಂದ ಅಧಿಕಾರ ಪಡೆಯುವುದಿಲ್ಲ. ಬದಲಿಗೆ ತಮ್ಮ ಚಾಣಾಕ್ಷತನ ಮತ್ತು ತಂತ್ರಗಾರಿಕೆಯಿಂದ ಎದುರಾಳಿಗಳನ್ನು ಮಣಿಸುತ್ತವೆ. ನಂಬಿಕೆಯ ಮುಖವಾಡ ಧರಿಸಿ, ಸಮಯ ನೋಡಿಕೊಂಡು ದ್ರೋಹ ಮಾಡುವ ಪ್ರಾಣಿಯೇ ಗುಳ್ಳೆನರಿ ಎಂದು ಬಿಗ್ ಬಾಸ್ ವಿವರಿಸಿದ್ದಾರೆ.
Bigg Boss Kannada 13 ಮನೆ ಒಳಗಿದ್ದೇ ಮನೆ ಮುರಿಯೋ ಕೆಲಸ
ಇದೇ ರೀತಿಯ ಆಟ ಈಗ ಬಿಗ್ ಬಾಸ್ ಮನೆಯಲ್ಲೂ ಶುರುವಾಗಿದೆ. ಮನೆಯಲ್ಲಿರುವ ಒಬ್ಬ ಸ್ಪರ್ಧಿಗೆ ಗುಳ್ಳೆನರಿಯ ಜವಾಬ್ದಾರಿ ನೀಡಲಾಗಿದೆ. ಈ ಸ್ಪರ್ಧಿ ತನ್ನ ತಂಡದ ಸದಸ್ಯರ ಜೊತೆ ಸಾಮಾನ್ಯವಾಗಿ ಬೆರೆಯಬೇಕು. ಆದರೆ ಒಳಗೊಳಗೆ ಮಾತ್ರ ತಂಡವನ್ನು ಸೋಲಿಸಲು ಬೇಕಾದ ತಂತ್ರ ರೂಪಿಸಬೇಕು. ಯಾರಿಗೂ ಅನುಮಾನ ಬಾರದಂತೆ ತನ್ನ ಕೆಲಸವನ್ನು ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿದೆ.
ಮೋಸ ಮಾಡಿ ಗೆದ್ದೋರೇ ವಿನ್ನರ್
ಗುಳ್ಳೆನರಿಗೆ ಬಿಗ್ ಬಾಸ್ ನೀಡಿರುವ ಮೊದಲ ಟಾಸ್ಕ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ತನ್ನದೇ ತಂಡವನ್ನು ಸೋಲಿಸುವುದೇ ಮೊದಲ ಜವಾಬ್ದಾರಿ. ಅಂದರೆ, ತಂಡದ ಸದಸ್ಯರ ಜೊತೆ ಸೇರಿಕೊಂಡೇ ಅವರಿಗೆ ಸೋಲುಣಿಸುವ ತಂತ್ರ ಹೆಣೆಯಬೇಕು. ಒಂದು ಕಡೆ ತಂಡದ ನಂಬಿಕೆಯನ್ನು ಉಳಿಸಿಕೊಳ್ಳಬೇಕು, ಮತ್ತೊಂದು ಕಡೆ ಬಿಗ್ ಬಾಸ್ ನೀಡಿರುವ ರಹಸ್ಯ ಜವಾಬ್ದಾರಿಯನ್ನೂ ನಿಭಾಯಿಸಬೇಕು.
ಅನುಮಾನ, ಆತಂಕ
ಈ game ನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಗುಳ್ಳೆನರಿಯ ಬಣ್ಣ ಬಯಲಾಗುವ ಸಾಧ್ಯತೆಯಿದೆ. ಹೀಗಾಗಿ ಮಾತು, ನಡವಳಿಕೆ ಮತ್ತು ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರಿಕೆ ಅಗತ್ಯ. ಉಳಿದ ಸ್ಪರ್ಧಿಗಳು ಕೂಡ ತಮ್ಮ ತಂಡದಲ್ಲಿ ಯಾರಾದರೂ ಗುಳ್ಳೆನರಿಯಾಗಿದ್ದಾರೆಯೇ ಎಂದು ಅನುಮಾನ ಪಡುವ ಸಾಧ್ಯತೆಯಿದೆ.
ನಾಮಿನೇಷನ್ ನಡುವೆ ಮತ್ತೊಂದು ಟ್ವಿಸ್ಟ್
ಇನ್ನು 12ನೇ ವಾರದ ನಾಮಿನೇಷನ್ ವಿಚಾರವೂ ಮನೆಯಲ್ಲಿ ಕುತೂಹಲ ಹೆಚ್ಚಿಸಿದೆ. ಮಹಾರಾಣಿ ಗಾನವಿ ಗೌಡ ಅವರು ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ, ಜಗದೀಶ್ ಮತ್ತು ಪ್ರಶಾಂತ್ ಅವರನ್ನು ನಾಮಿನೇಷನ್ ಜಾಗದಲ್ಲಿ ಇರಿಸಿದ್ದಾರೆ. ಈಗಾಗಲೇ ನೇರವಾಗಿ ನಾಮಿನೇಟ್ ಆಗಿರುವ ಯಶಸ್ ಕೃಷ್ಣ ಅವರನ್ನು ಹೊರತುಪಡಿಸಿ ಉಳಿದ ಸ್ಥಾನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಸದಾ ಗುಳ್ಳೆ ನರಿಯಂಥ ವ್ಯಕ್ತಿತ್ವ ಇರೋ ಮನುಷ್ಯನಿಗೆ ಆ ರೀತಿ ನಟಿಸೋದು ಕಷ್ಟವೇನಲ್ಲ. ಈ ಟಾಸ್ಕ್ ಮಾತ್ರ ನೀರಿಸವಾಗಿದ್ದ ಬಿಗ್ ಬಾಸ್ ಮನೆಯ ಮನೋರಂಜನೆ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.




Click it and Unblock the Notifications
