Tumakuru Hemavathi: ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ: ಡಾ.ಜಿ. ಪರಮೇಶ್ವರ್ ಭರವಸೆ!
ತುಮಕೂರು: ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಈ ಮೂಲಕ ಈ ಭಾಗದಲ್ಲಿ ಹಲವು ಕಾಲದಿಂದ ಇರುವ ಪ್ರಮುಖ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಅಮರಶಿಲ್ಪಿ ಜಕಣಾಚಾರಿ ಅವರ ಜನ್ಮಸ್ಥಳವಾದ ಕೈದಾಳದಲ್ಲಿ ಅವರ ಹೆಸರಿನಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ. ತುಮಕೂರು ಜಿಲ್ಲಾಡಳಿತದ ವತಿಯಿಂದ ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೈದಾಳದಲ್ಲಿ ನಿರ್ಮಿಸಲಾದ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನವನ್ನು ನವೆಂಬರ್ 24ರ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಬಿ.ಸುರೇಶ್‌ಗೌಡ ಅವರು ಜಿಲ್ಲಾಡಳಿತದಿಂದ 3 ಕೋಟಿ ರೂ. ಅನುದಾನ ಪಡೆದುಕೊಂಡು, ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸಿದ್ದಾರೆ. ಸುರೇಶ್‌ಗೌಡ ಅವರು ಬಿಜೆಪಿ ಶಾಸಕರು, ನಾನು ಕಾಂಗ್ರೆಸ್‌ನವನು. ಆದರೆ ಜನಪರ ಕೆಲಸ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಪ್ರಶಂಸೆ ವ್ಯಕ್ತಪಡಿಸುವುದು ನಮ್ಮ ಸಭ್ಯತೆ ಎಂದಿದ್ದಾರೆ.
ಕೈದಾಳ ಅಮರಶಿಲ್ಪಿ ಜಕಣಾಚಾರಿ ಅವರು ಜನಿಸಿದ ಊರು. ರಾಜ ವಿಷ್ಣುವರ್ಧನನ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಜಕಣಾಚಾರಿ ಅವರ ಶಿಲ್ಪಕಲಾ ಕೌಶಲ್ಯವನ್ನು ಗುರುತಿಸಿ, ಬೇಲೂರಿನ ಚೆನ್ನಕೇಶವ ದೇವಸ್ಥಾನ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ್ದನು. ಜಕಣಾಚಾರಿ ಅವರು ಕೆತ್ತಿದ ಚೆನ್ನಕೇಶವ ದೇವರ ಮೂರ್ತಿಯಂತಹ ಅದ್ಭುತ ಶಿಲ್ಪಕಲೆಯನ್ನು ಪ್ರಪಂಚದ ಬೇರೆ ಯಾವುದೇ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.
ಚೆನ್ನಕೇಶವ ದೇವರ ಮೂರ್ತಿಯನ್ನು ಕೆತ್ತನೆ ಮಾಡಿದ ಬಳಿಕ ಅದರ ಉದ್ಘಾಟನೆಗೆ ರಾಜ ವಿಷ್ಣುವರ್ಧನನನ್ನು ಜಕಣಾಚಾರಿ ಅವರು ಆಹ್ವಾನಿಸಿದ್ದರು. ಇನ್ನೇನು ಉದ್ಘಾಟನೆ ನಡೆಯಬೇಕು ಎನ್ನುವ ಸಂದರ್ಭದಲ್ಲಿ ಜನರ ಗುಂಪಿನಲ್ಲಿದ್ದ ಹುಡುಗನೊಬ್ಬ ಬಂದು, ಈ ಮೂರ್ತಿ ಕಲುಷಿತವಾಗಿದ್ದು, ಪೂಜೆಗೆ ಅರ್ಹವಲ್ಲ ಎಂದು ಹೇಳುತ್ತಾನೆ. ಮೂರ್ತಿ ಕಲುಷಿತವಾಗಿರುವುದು ಸಾಬೀತಾದರೆ ತಮ್ಮ ಕೈಯನ್ನೇ ಕತ್ತರಿಸಿಕೊಳ್ಳುವುದಾಗಿ ಜಕಣಾಚಾರಿ ಅವರು ಹೇಳುತ್ತಾರೆ.
ಮೂರ್ತಿಯನ್ನು ಉಳಿಯಿಂದ ಹೊಡೆದು ನೋಡಿದಾಗ ಅದರ ಒಳಗೆ ನೀರು, ಕಪ್ಪೆ ಮತ್ತು ಮರಳು ಇರುವುದು ಕಂಡುಬರುತ್ತದೆ. ತನ್ನ ತಂದೆಯನ್ನು ಹುಡುಕಿಕೊಂಡು ಬಂದಿದ್ದ ಆ ಹುಡುಗ ಜಕಣಾಚಾರಿ ಅವರ ಮಗ ಎಂಬುದು ನಂತರ ತಿಳಿಯುತ್ತದೆ. ಅಲ್ಲಿಂದ ಕೈದಾಳಕ್ಕೆ ಬಂದ ಜಕಣಾಚಾರಿ ಅವರು ರಾತ್ರೋರಾತ್ರಿ ಚೆನ್ನಕೇಶವ ದೇವರ ಮೂರ್ತಿಯನ್ನು ಕೆತ್ತನೆ ಮಾಡುತ್ತಾರೆ. ಬಳಿಕ ಅವರಿಗೆ ಕೈ ಮರಳಿ ಬರುತ್ತದೆ ಎಂಬ ಪ್ರತೀತಿಯಿದೆ. ಇಂತಹ ಐತಿಹಾಸಿಕ ಹಿನ್ನೆಲೆಯನ್ನು ಕೈದಾಳ ಹೊಂದಿದೆ ಎಂದು ಸ್ಮರಿಸಿದರು.
ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಿಕ್ಷಕರು ತುಮಕೂರಿನ ಗೊಲ್ಲಹಳ್ಳಿಯಿಂದ ಕೈದಾಳಕ್ಕೆ ನಡೆದುಕೊಂಡೇ ಕರೆತಂದಿದ್ದರು. ನಮ್ಮಲ್ಲಿರುವ ಇಂತಹ ಶ್ರೀಮಂತ ಇತಿಹಾಸವನ್ನು ಗುರುತಿಸುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. 'ಅಮರಶಿಲ್ಪಿ ಜಕಣಾಚಾರಿ' ಚಲನಚಿತ್ರ ನಿರ್ಮಾಣವಾದ ಬಳಿಕ ಕೈದಾಳ ಇಡೀ ನಾಡಿಗೆ ಪರಿಚಯವಾಯಿತು ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರದ ಆದ್ಯತೆ
ನಾನು ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಮ್ಮದು ತಾಯಂದಿರಿಗೆ ಪ್ರೋತ್ಸಾಹ ನೀಡುವ ಸರ್ಕಾರ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳಾ ಸಮಾವೇಶ ಆಯೋಜಿಸುವಂತೆ ನನಗೆ ಸೂಚಿಸಿದ್ದರು. ಅದರಂತೆ ಹೆಬ್ಬೂರಿನಲ್ಲಿ ಜಾಗ ಗುರುತಿಸಿ ಮಹಿಳಾ ಸಮಾವೇಶವನ್ನು ಆಯೋಜಿಸಿದ್ದೆ. ಸುಮಾರು 7 ಲಕ್ಷ ತಾಯಂದಿರು ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ನೆನಪಿಸಿಕೊಂಡರು.
ಅಂದು ಸಮಾವೇಶಕ್ಕೆ ಆಗಮಿಸಿದ್ದ ಶ್ರೀಮತಿ ಸೋನಿಯಾ ಗಾಂಧಿ ಅವರು ಸ್ತ್ರೀಶಕ್ತಿ ಕಾರ್ಯಕ್ರಮವನ್ನು ಘೋಷಿಸಿದ್ದರು. ಇಂದು ಸ್ತ್ರೀಶಕ್ತಿ ಕಾರ್ಯಕ್ರಮಗಳು ವಿವಿಧ ರೂಪಗಳಲ್ಲಿ ಅನುಷ್ಠಾನಗೊಂಡಿವೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ, ಶಕ್ತಿ ಸೇರಿದಂತೆ ಮಹಿಳಾ ಸಬಲೀಕರಣದ ಗ್ಯಾರಂಟಿ ಯೋಜನೆಗಳಿಗೆ ಅಂದು ಶ್ರೀಮತಿ ಸೋನಿಯಾ ಗಾಂಧಿ ಅವರು ಪರಿಚಯಿಸಿದ ಸ್ತ್ರೀಶಕ್ತಿ ಕಾರ್ಯಕ್ರಮವೇ ಮೂಲ ಪ್ರೇರಣೆಯಾಗಿದೆ.
ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ
ಇನ್ನು ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರನ್ನು ತರಲಾಗಿದೆ. ಈ ನೀರು ಕುಣಿಗಲ್‌ಗೂ ತಲುಪಬೇಕಿದೆ. ಗುಬ್ಬಿ ಬಳಿ ಸಣ್ಣ ಸಮಸ್ಯೆ ಎದುರಾಗಿದ್ದು, ಅದನ್ನು ಶೀಘ್ರದಲ್ಲಿಯೇ ಬಗೆಹರಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.




Click it and Unblock the Notifications
