ಶಿವಮೊಗ್ಗ ಏರ್‌ಪೋರ್ಟ್ ಭವಿಷ್ಯದ ಆತಂಕಕ್ಕೆ ತೆರೆ: 3 ತಿಂಗಳಲ್ಲಿ ಹಾರಾಟ ಶುರು, ಮಲೆನಾಡಿಗರಿಗೆ ಕೇಂದ್ರ ಗುಡ್‌ನ್ಯೂಸ್
ಶಿವಮೊಗ್ಗ: ಮಲೆನಾಡಿನ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೇಂದ್ರವು ಉಡಾನ್ 6.0 (UDAN 6.0) ಯೋಜನೆಯಲ್ಲಿ ಕರೆದ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಗೊಳಿಸಿದೆ. ಇದರಿಂದ ಮುಂದಿನ ಕೆಲವೇ ತಿಂಗಳಲ್ಲಿ ಸ್ಥಗಿತಗೊಂಡಿರುವ ವಿಮಾನ ಸೇವೆ ಮತ್ತೆ ಆರಂಭಗೊಳ್ಳಲಿದೆ. ಈ ಬಾರಿ ನೈಟ್‌ಲ್ಯಾಂಡಿಂಗ್ , ಕಾರ್ಗೋ ಸೇವೆ ಸಹ ಆರಂಭಿಸಲಾಗುತ್ತದೆ. ಟೆಂಟರ್‌ನಲ್ಲಿ ಪಾಲ್ಗೊಳ್ಳುವ ನಾಗರಿಕ ವಿಮಾನ ಸಂಸ್ಥೆಗಳಿಗೆ ಸಬ್ಸಿಡಿ ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಇಂದು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಭವಿಷ್ಯದ ಕುರಿತು ಮಲೆನಾಡಿನ ಜನತೆಯಲ್ಲಿದ್ದ ಆತಂಕಕ್ಕೆ ಈಗ ತೆರೆ ಬಿದ್ದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯ 'ಉಡಾನ್ 6.0' ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿ ಬಿಡ್ ಆಹ್ವಾನಿಸಿದೆ. ಇದಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರಿಗೆ ಶಿವಮೊಗ್ಗ ಜಿಲ್ಲೆ ಜನತೆಪರ ಕೃತಜ್ಞತೆ ತಿಳಿಸಿದ್ದಾರೆ.

ಈ ಟೆಂಡರ್ ಸಲ್ಲಿಸಲು ಸಂಸ್ಥೆಗಳಿಗೆ ಡಿಸೆಂಬರ್ 31ರವರೆಗೆ ಟೆಂಡರ್ ಸಲ್ಲಿಸಲು ಅವಕಾಶವಿದೆ. ಈ ಬಾರಿಯ ಟೆಂಡರ್‌ನಲ್ಲಿ ನಿರ್ದಿಷ್ಟ ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಶಿವಮೊಗ್ಗದಿಂದ ಹೈದರಾಬಾದ್, ಬೆಂಗಳೂರು ಸೇರಿದಂತೆ ಇತರ ಮಾರ್ಗಗಳ ಆಯ್ಕೆಯನ್ನು ಆಯಾ ಸಂಸ್ಥೆಗಳ ವಿವೇಚನೆಗೇ ಬಿಡಲಾಗಿದೆ. ಬಿಡ್‌ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಿಗೆ ಉಡಾನ್ ಸಬ್ಸಿ ಡಿ ಸೌಲಭ್ಯ ದೊರೆಯಲಿದೆ ಎಂದು ಅವರು ವಿವರಿಸಿದರು.
ಯಾವಾಗ ಶಿವಮೊಗ್ಗದಿಂದ ವಿಮಾನ ಸೇವೆ ಆರಂಭ?
ಸದ್ಯ ಕೇಂದ್ರವು ಉಡಾನ್ ಯೋಜನೆಯಡಿ ಟೆಂಡರ್ ಆಹ್ವಾನಿಸಿದೆ. ಅದು ಪೂರ್ಣಗೊಳ್ಳಲು ಮುಂದಿನ ವರ್ಷ 2027ರ ಮೊದಲ ಮೂರು ತಿಂಗಳು (ಮಾರ್ಚ್‌ವರೆಗೆ) ಸಮಯ ಹಿಡಿಯಬಹುದು. ಈ 34 ತಿಂಗಳ ಮಧ್ಯಂತರ ಅವಧಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರವು ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ಯೋಜನೆಯಡಿ ಶಿವಮೊಗ್ಗ ಬೆಂಗಳೂರು ಮತ್ತು ಶಿವಮೊಗ್ಗಹೈದರಾಬಾದ್ ಮಾರ್ಗಗಳಿಗೆ ಅಥವಾ ಕನಿಷ್ಠ ಒಂದು ಮಾರ್ಗಕ್ಕಾದರೂ ತಾತ್ಕಾಲಿಕ ಆರ್ಥಿಕ ನೆರವು ಒದಗಿಸಬೇಕು ಎಂದು ಅವರು ಸಂಸದರು ಕೋರಿದ್ದಾರೆ.
ಟೆಂಡರ್ ಬಳಿಕ ವಿಮಾನಯಾನ ಸಂಸ್ಥೆಗಳು ಈ ಮಾರ್ಗಗಳನ್ನು ಆಯ್ಕೆ ಮಾಡಿದ ಬಳಿಕ ಬೇಕಾದರೆ ರಾಜ್ಯವು ತನ್ನ ಆರ್ಥಿಕ ನೆರವು ಹಿಂಪಡೆಯಬಹುದು ಎಂದಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಮುಗಿಬಿದ್ದಿತ್ತು. ಉಡಾನ್ ಯೋಜನೆಯ ಕಾರಣದಿಂದಲೇ ರಾಜ್ಯದ ಶಿವಮೊಗ್ಗ ಜಿಲ್ಲೆ ವಿಮಾನಯಾನ ಸ್ಥಗಿತಗೊಂಡಿದೆ. ಇದಕ್ಕೆ ಕೇಂದ್ರವೇ ಕಾರಣ ಎಂದು ದೂರಿತ್ತು. ಮಧು ಬಂಗಾರಪ್ಪ ಅವರು ಯಾವುದೇ ಕಾರಣಕ್ಕೂ ಸೇವೆ ನಿಲ್ಲಿಸಲು ಬಿಡುವುದಿಲ್ಲ ಎಂದಿದ್ದರು.
ವಾಣಿಜ್ಯ ವಿರಾಮಕ್ಕೆ ಬ್ರೇಕ್
ಸಂಸದರು ಮುಂದುವರಿದು, ವಿಮಾನ ಸೇವೆಯಲ್ಲಿ ಐದು ವರ್ಷ ಅಥವಾ ಇಂತಿಷ್ಟು ವರ್ಷಗಳ ಟೆಂಡರ್ ಬಳಿಕ ಒಂದು ವರ್ಷದ ವಾಣಿಜ್ಯ ವಿರಾಮ (ಕಮರ್ಷಿಯಲ್ ಬ್ರೇಕ್ ) ಇರುತ್ತಿತ್ತು. ಆದರೆ, ಈ ಬಾರಿ ಯಾವುದೇ ವಿರಾಮವಿಲ್ಲದೆ ಮುಂದಿನ ಟೆಂಡರ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಬಿಜೆಪಿ ನಾಯಕರು ಕೇಂದ್ರದೊಂದಿಗೆ ಚರ್ಚಿಸಿದ್ದು, ವಿರಾಮ ಅವಧಿ ಕೈ ಬಿಡಲಾಗಿದೆ ಎಂದು ತಿಳಿಸಿದರು.
ಕಾರ್ಗೋ ಸೇವೆ, ನೈಟ್ ಲ್ಯಾಂಡಿಂಗ್, ರಫ್ತಿಗೆ ಉತ್ತೇಜನ
ಶಿವಮೊಗ್ಗ ವಿಮಾನ ಸೇವೆ ಪುನರ್ ಆರಂಭಗೊಂಡ ಬಳಿಕ ವಿಮಾನ ಸೇವೆ ಜೊತೆಗೆ ನೈಟ್ ಲ್ಯಾಂಡಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಕೃಷಿ ಉತ್ಪನ್ನಗಳು ಹಾಗೂ ರಫ್ತು ಅವಕಾಶಗಳ ಸಮೀಕ್ಷೆ ನಡೆಸಿ ನಿರ್ಧರಿಸಲಾಗುವುದು. ಈಗಾಗಲೇ ಮೂರು ವಿಮಾನಯಾನ ಸಂಸ್ಥೆಗಳೊಂದಿಗೆ ಟೆಂಡರ್‌ನಲ್ಲಿ ಭಾಗವಹಿಸುವ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದರು. ಟೆಂಡರ್ ಪ್ರಕ್ರಿಯೆ ಹಾಗೂ ಬೇರೆಲ್ಲ ಮಾತುಕತೆ ಪೂರ್ಣಗೊಳ್ಳುತ್ತಿದ್ದಂತೆ ವಿಮಾನ ಸೇವೆ ಕುರಿತು ಮತ್ತಷ್ಟು ಸ್ಪಷ್ಟತೆ ಸಿಗಲಿದೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸ್ಥಗಿತ ವಿಚಾರ ರಾಜ್ಯದ ಜನರಲ್ಲಿ, ಹೆಚ್ಚಾಗಿ ಮಲೆನಾಡಿಗರಲ್ಲಿ ತೀವ್ರ ಬೇಸರ ಮೂಡಿಸಿತ್ತು. ಇದೀಗ ಅದೆಲ್ಲ ಆತಂಕ ನಿವಾರಣೆ ಆದಂತಾಗಿದೆ.




Click it and Unblock the Notifications
