ಬೆಂಗಳೂರಿನ ಕಸ ಸಮಸ್ಯೆಗೆ ಜಪಾನ್ ಮಾದರಿ ಪರಿಹಾರ? ಡಿ.ಕೆ ಶಿವಕುಮಾರ್ ಕೊಟ್ಟ ಸುಳಿವೇನು?
ಬೆಂಗಳೂರು: ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆಯು ವಿಪರೀತವಾಗಿ ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆಯಿಂದ ಜನ ಸಂಕಷ್ಟ ಎದುರಿಸುವಂತೆ ಆಗಿದೆ. ಅಲ್ಲದೆ ಬೆಂಗಳೂರು ನಗರದಲ್ಲಿನ ಕಸ ನಿರ್ವಹಣೆ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮುಜುಗರವನ್ನು ಸಹ ಅನುಭವಿಸುತ್ತಿದೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಬೆಂಗಳೂರಲ್ಲಿ ತ್ಯಾಜ್ಯ ಸಂಸ್ಕರಣೆಗೆ ಜಪಾನ್ ಮಾದರಿ ಅನುಸರಿಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸುಳಿವು ಕೊಟ್ಟಿದ್ದಾರೆ. ಕಸ ವಿಲೇವಾರಿ, ನಿರ್ವಹಣೆ ಹಾಗೂ ತಂತ್ರಜ್ಞಾನದ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಯ ಮೂಲಕ ಜಪಾನ್ ನಗರ ತ್ಯಾಜ್ಯವನ್ನು ಹೇಗೆ ಇಂಧನವನ್ನಾಗಿ ಪರಿವರ್ತಿಸುತ್ತಿದೆ ಎಂಬುದನ್ನು ವೀಕ್ಷಿಸಲು ನವೆಂಬರ್ 24ರ ಮಂಗಳವಾರ ಕರ್ನಾಟಕದ ನಿಯೋಗದೊಂದಿಗೆ ಜಪಾನ್‌ನ ಒಸಾಕಾದ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿದೆ.
2001ರಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕವು, ಎರಡು ದಹನ ಯಂತ್ರಗಳ ಮೂಲಕ ಪ್ರತಿದಿನ 900 ಟನ್‌ಗಳಷ್ಟು ನಗರ ತ್ಯಾಜ್ಯವನ್ನು ಸಂಸ್ಕರಿಸುತ್ತದೆ ಮತ್ತು 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಇದು ತನ್ನದೇ ಆದ ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಪೂರೈಸುತ್ತದೆ. ಇದರೊಂದಿಗೆ, ಹೊರಸೂಸುವಿಕೆಯನ್ನು ನಿಯಂತ್ರಿಸಲು ಮತ್ತು ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮುಂದುವರಿದು ಖ್ಯಾತ ಆಸ್ಟ್ರಿಯನ್ ಕಲಾವಿದ ಫ್ರೈಡೆನ್ಸ್‌ರೀಚ್ ಹಂಡರ್ಟ್‌ವಾಸರ್ ಅವರ ವಾಸ್ತುಶಿಲ್ಪವು ಈ ಘಟಕವನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಇದರ ವರ್ಣರಂಜಿತ ಮುಂಭಾಗ, ವಿಶಿಷ್ಟ ವಿನ್ಯಾಸಗಳು ಮತ್ತು ವ್ಯಾಪಕವಾದ ಹಸಿರು ಪರಿಸರವು ಕಲೆ, ಪರಿಸರ ವಿಜ್ಞಾನ ಮತ್ತು ಕೈಗಾರಿಕಾ ಮೂಲಸೌಕರ್ಯವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಒಂದೆಡೆ ಬೆಸೆಯುತ್ತವೆ.
ನಗರ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು, ನಮ್ಮ ಮೂಲಸೌಕರ್ಯವನ್ನು ಬಲಪಡಿಸಲು ಹಾಗೂ ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ನಗರಗಳನ್ನು ನಿರ್ಮಿಸಲು ಉತ್ತಮ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಕರ್ನಾಟಕಕ್ಕೆ ಅಳವಡಿಸಿಕೊಳ್ಳಬಹುದಾದ ಹಲವು ಉತ್ತಮ ಅಂಶಗಳು ಇಲ್ಲಿವೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Bengaluru Waste Management: ಕಸ ನಿರ್ವಹಣೆಗೆ ಜಪಾನ್ ಮಾದರಿ ?
ನಗರದ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು, ನಮ್ಮ ಮೂಲಸೌಕರ್ಯವನ್ನು ಬಲಪಡಿಸಲು ಹಾಗೂ ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ನಗರಗಳನ್ನು ನಿರ್ಮಿಸಲು ಉತ್ತಮ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಕರ್ನಾಟಕಕ್ಕೆ ಅಳವಡಿಸಿಕೊಳ್ಳಬಹುದಾದ ಹಲವು ಉತ್ತಮ ಅಂಶಗಳು ಜಪಾನ್‌ನಲ್ಲಿ ಇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಕಸ ನಿರ್ವಹಣೆಯ ವಿಚಾರವು ಕಪ್ಪು ಚುಕ್ಕಿಯಾಗಿಯೇ ಉಳಿದಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಬೆಂಗಳೂರಲ್ಲಿ ಕಸ ಉತ್ಪಾದನೆಯ ಪ್ರಮಾಣವೂ ಸಹ ಹೆಚ್ಚಳವಾಗುತ್ತಿದೆ. ಹೀಗಾಗಿ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಜಪಾನ್ ಮಾದರಿಯನ್ನು ಕರ್ನಾಟಕ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.




Click it and Unblock the Notifications
