ಹಾಲು ಉತ್ಪಾದಕರಿಗೆ ಭರ್ಜರಿ ಗುಡ್‌ನ್ಯೂಸ್! ಲೀಟರ್‌ಗೆ ₹7 ನೇರ ಲಾಭ, ಹಾಲಿನ ದರ ₹8 ಹೆಚ್ಚಳ!
ಬೆಂಗಳೂರು: ಕರ್ನಾಟಕದ ಹೈನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲು ನಿರ್ಧರಿಸಿದ್ದು, ಇದರಲ್ಲಿ ₹7 ನೇರವಾಗಿ ಹಾಲು ಉತ್ಪಾದಕ ರೈತರಿಗೆ ತಲುಪಲಿದೆ. ಹೆಚ್ಚುತ್ತಿರುವ ಪಶು ಆಹಾರ, ನಿರ್ವಹಣೆ ಹಾಗೂ ಹಾಲು ಉತ್ಪಾದನಾ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಈ ನಿರ್ಧಾರ ನೆರವಾಗುವ ನಿರೀಕ್ಷೆಯಿದೆ. ಈ ಕುರಿತು ಮಾತನಾಡಿರುವ ಸಚಿವ ಕೆ.ಎಂ. ಶಿವಲಿಂಗೇಗೌಡ, ರೈತರ ಹಿತದೃಷ್ಟಿಯಿಂದ ಸರ್ಕಾರ ಈ ಐತಿಹಾಸಿಕ ಕ್ರಮ ಕೈಗೊಂಡಿದ್ದು, ಡಿಸೆಂಬರ್ 13ರಂದು ಹಾಸನದಲ್ಲಿ ಬೃಹತ್ ಹಾಲು ಉತ್ಪಾದಕರ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಕಾಸಸೌಧದ ಸಭಾಂಗಣದಲ್ಲಿ ರಾಜ್ಯದ 16 ಹಾಲು ಒಕ್ಕೂಟಗಳ ಅಧ್ಯಕ್ಷರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು, ರಾಜ್ಯದ ಹೈನುಗಾರಿಕೆ ಮತ್ತು ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ಕರ್ನಾಟಕದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸಿ, ಅದರಲ್ಲಿ ₹7 ನೇರವಾಗಿ ಹಾಲು ಉತ್ಪಾದಕ ರೈತರಿಗೆ ತಲುಪಿಸುವ ಐತಿಹಾಸಿಕ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದರು.

ಒಕ್ಕೂಟಗಳಿಗೆ ₹1 ನೀಡಿ ರೈತರಿಗೆ ನೇರವಾಗಿ ₹7 ರೂ.
ಒಕ್ಕೂಟದ ಅಧ್ಯಕ್ಷರು ಹೆಚ್ಚಿನ ಪಾಲು ಕೇಳಿದ್ದರೂ, ಒಕ್ಕೂಟಗಳಿಗೆ ₹1 ನೀಡಿ ರೈತರಿಗೆ ನೇರವಾಗಿ ₹7 ತಲುಪುವಂತಹ ವ್ಯವಸ್ಥೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸಿದೆ. ರಾಜ್ಯದಲ್ಲಿ ಹೈನುಗಾರಿಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣ ರೈತರಿಗೆ ಗಿಟ್ಟುತ್ತಿಲ್ಲ ಎಂಬುದನ್ನು ಮನಗಂಡು ಸರ್ಕಾರ ಈ ಪ್ರೋತ್ಸಾಹದಾಯಕ ಕ್ರಮ ಕೈಗೊಂಡಿದೆ. ಸರ್ಕಾರ ಮಾಡಿರುವ ಈ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಸನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದು, ಡಿಸೆಂಬರ್ 13ರಂದು ಸಮಾವೇಶದ ದಿನಾಂಕ ನಿಗದಿಪಡಿಸಲಾಗಿದೆ ಎಂದರು.
ನಮ್ಮ ಸರ್ಕಾರ ಹಾಲು ಉತ್ಪಾದಕರ ಪರವಾಗಿ
ಹಸುಗಳನ್ನು ಸಾಕುವ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ನಮ್ಮ ಸರ್ಕಾರ ಹಾಲು ಉತ್ಪಾದಕರ ಪರವಾಗಿ ನಿಂತಿದೆ. ಗ್ರಾಹಕರಿಂದಲೂ ಸಹಕಾರ ಸಿಗುತ್ತಿದೆ. ಆದರೆ ವಿರೋಧಿಸುತ್ತಿರುವವರು ಕೇವಲ ರಾಜಕೀಯ ವಿರೋಧಿಗಳು ಮಾತ್ರ. ಹಾಲಿನ ದರ ಏರಿಕೆಯನ್ನು ವಿರೋಧಿಸುತ್ತಿರುವವರು ರೈತ ವಿರೋಧಿಗಳು. ಪ್ರಸ್ತುತ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಆದರೆ ಬರ ಪರಿಹಾರ ಕೊಡುವಲ್ಲಿ ಒಕ್ಕೂಟ ಸರ್ಕಾರ ವಿಳಂಬ ಮಾಡುತ್ತಿದೆ. ನೆರವಿಗೆ ಬಾರದೆ ಸತಾಯಿಸುತ್ತಿದೆ.
15, 16ನೇ ಹಣಕಾಸು ಆಯೋಗದ ಶಿಫಾರಸ್ಸನ್ನು ಕಡೆಗಣಿಸಿದೆ. ಇದೀಗ ರಾಜ್ಯ ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಿದ್ದರಿಂದ ಹಾಲು ಉತ್ಪಾದಕರಿಗೆ ಒಂದು ಲೀಟರ್‌ಗೆ ಹೆಚ್ಚುವರಿ 7 ರೂ. ಹಣ ಸಿಗುತ್ತಿದೆ. ಈ ನಿರ್ಧಾರ ರಾಜ್ಯದ ರೈತರಿಗೆ ತುಸು ನಿರಾಳತೆಯನ್ನು ಒದಗಿಸಿದೆ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಹೇಳಿದರು.
16 ಒಕ್ಕೂಟಗಳಿಂದ ಹಾಸನದಲ್ಲಿ ಮೊದಲ ಸಮಾವೇಶ
ಸರ್ಕಾರದ ಈ ರೈತಪರ ನಿರ್ಧಾರಕ್ಕೆ ಹಾಲು ಉತ್ಪಾದಕರು ಹಾಗೂ ಒಕ್ಕೂಟಗಳ ಪರವಾಗಿ ಅಭಿನಂದನೆ ಸಲ್ಲಿಸಲು ರಾಜ್ಯದ ಎರಡು ಕಡೆಗಳಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ಎಲ್ಲಾ 16 ಒಕ್ಕೂಟಗಳು ಒಟ್ಟಾಗಿ ಸೇರಿ ಹಾಸನದಲ್ಲಿ ಮೊದಲ ಸಮಾವೇಶ ನಡೆಸಲು ತೀರ್ಮಾನಿಸಿವೆ ಎಂದು ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದರು.
ರಾಜಕೀಯ ಪಕ್ಷದ ಸಮಾವೇಶವಲ್ಲ: ಕೆ. ವೈ. ನಂಜೇಗೌಡ
ಇದೇ ವೇಳೆ ಮಾತನಾಡಿದ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಮಾಲೂರು ಶಾಸಕರಾದ ಕೆ. ವೈ. ನಂಜೇಗೌಡ ಅವರು, ಈ ಹಿಂದೆ ಯಡಿಯೂರಪ್ಪ ಅವರು ₹2 ಹಾಗೂ ಸಿದ್ದರಾಮಯ್ಯ ಅವರು ₹3 ಸೇರಿ ಒಟ್ಟು ₹5 ಪ್ರೋತ್ಸಾಹಧನ ನೀಡಿದ್ದರು. ಆದರೆ, ಹಾಲಿನ ದರದಲ್ಲಿ ₹8 ಹೆಚ್ಚಳ ಮಾಡಿ ₹1 ಒಕ್ಕೂಟಕ್ಕೆ ಮತ್ತು ₹7 ನೇರವಾಗಿ ಹಾಲು ಉತ್ಪಾದಕರಿಗೆ ನೀಡುವ ತೀರ್ಮಾನವನ್ನು ನನ್ನ 30-35 ವರ್ಷಗಳ ಸಹಕಾರಿ ಕ್ಷೇತ್ರದ ಅನುಭವದಲ್ಲಿಯೇ ಕಂಡಿರಲಿಲ್ಲ ಎಂದರು.
ಇದು ಯಾವುದೇ ರಾಜಕೀಯ ಪಕ್ಷದ ಸಮಾವೇಶವಲ್ಲ. ಸಂಪೂರ್ಣವಾಗಿ ಪಕ್ಷಾತೀತವಾಗಿ ನಡೆಯುವ ಹಾಲು ಉತ್ಪಾದಕರ ಸಮಾವೇಶವಾಗಿದೆ. ಹಾಸನ ಒಕ್ಕೂಟದ ಅಧ್ಯಕ್ಷರಾದ ರೇವಣ್ಣ ಸೇರಿದಂತೆ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಇದಕ್ಕೆ ಕೈಜೋಡಿಸಿದ್ದಾರೆ. ಗ್ರಾಮೀಣ ಭಾಗದ ರೈತರು ಅತ್ಯಂತ ಸಂತೋಷದಲ್ಲಿದ್ದು, ಸಮಾವೇಶದಲ್ಲಿ ಲಕ್ಷಾಂತರ ಹಾಲು ಉತ್ಪಾದಕರು ಸೇರುವ ನಿರೀಕ್ಷೆಯಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡರು ಸಮಾವೇಶಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕೆ. ವೈ. ನಂಜೇಗೌಡ ಹೇಳಿದರು.




Click it and Unblock the Notifications
