Nayana Motamma: ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ; ಈ ದಿಢೀರ್ ನಿರ್ಧಾರವೇಕೆ?, ಸರ್ಕಾರದ ಮುಂದಿರುವ ಸಲಾಲೇನು?
Nayana Motamma: ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕಿಯ ಈ ದಿಟ್ಟ ನಿರ್ಧಾರವು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಈಗಾಗಲೇ ಘೋಷಿಸಿದಂತೆ ಸೋಮವಾರ (ನವೆಂಬರ್ 23) ವಿಧಾನಸೌಧಕ್ಕೆ ಆಗಮಿಸಿದ ನಯನಾ ಮೋಟಮ್ಮ ಅವರು, ನೇರವಾಗಿ ವಿಧಾನಸಭಾಧ್ಯಕ್ಷರ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು. ಆದರೆ ಆ ವೇಳೆ ಸ್ಪೀಕರ್ ಅವರು ಕಚೇರಿಯಲ್ಲಿ ಇಲ್ಲದ ಕಾರಣ, ಅವರ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರ ಕೈಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.

ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಕೆ
ಈ ವೇಳೆ ಪ್ರತಿಕ್ರಿಯಿಸಿದ ಅಶೋಕ್ ಮಿರ್ಜಿ ಅವರು, ನಿಯಮಗಳ ಅನುಸಾರ ತಮಗೆ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸುವ ಅಧಿಕಾರವಿಲ್ಲ ಎಂಬುದನ್ನು ಶಾಸಕರಿಗೆ ಸ್ಪಷ್ಟಪಡಿಸಿದರು. ಬಳಿಕ ತಕ್ಷಣವೇ ದೂರವಾಣಿ ಮೂಲಕ ಸ್ಪೀಕರ್ ಅವರನ್ನು ಸಂಪರ್ಕಿಸಿ, ನಯನಾ ಮೋಟಮ್ಮ ಅವರು ರಾಜೀನಾಮೆ ಪತ್ರ ಸಲ್ಲಿಸಿರುವ ವಿಚಾರವನ್ನು ಅವರ ಗಮನಕ್ಕೆ ತಂದರು.
ನುಡಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ
ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ (ಮುತ್ತೋಡಿ) ಅಭಯಾರಣ್ಯದತ್ತ ಕಾಡಾನೆಗಳನ್ನು ಅಟ್ಟುವ ಅರಣ್ಯ ಇಲಾಖೆಯ ಕಾರ್ಯಾಚರಣೆಯು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಪ್ರಾಣ ಹಾಗೂ ಬೆಳೆಗಳಿಗೆ ಕುತ್ತು ಬರಲಿದೆ ಎಂದು ಆತಂಕಗೊಂಡಿರುವ ಕಾಡಂಚಿನ ಗ್ರಾಮಸ್ಥರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಶಾಸಕಿ
ಸ್ಥಳೀಯರ ಈ ಹೋರಾಟಕ್ಕೆ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ಎಚ್.ಡಿ. ತಮ್ಮಯ್ಯ ಹಾಗೂ ಟಿ.ಡಿ. ರಾಜೇಗೌಡ ಅವರು ಬೆಂಬಲ ಸೂಚಿಸಿ, ಸರ್ಕಾರದ ಧೋರಣೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಭಾನುವಾರ (ನವೆಂಬರ್ 22) ಸುದ್ದಿಗೋಷ್ಠಿ ನಡೆಸಿದ್ದ ನಯನಾ ಮೋಟಮ್ಮ ಅವರು, ಸಿದ್ಧಪಡಿಸಿದ್ದ ರಾಜೀನಾಮೆ ಪತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ ಸರ್ಕಾರಕ್ಕೆ ಗಡುವು ನೀಡಿದ್ದರು.
ತಮಗೆ ಅಧಿಕಾರಕ್ಕಿಂತ ಕ್ಷೇತ್ರದ ಜನರ ಪ್ರಾಣ ಮತ್ತು ರೈತರ ಕೃಷಿ ಬೆಳೆಗಳ ರಕ್ಷಣೆಯೇ ಮೊದಲ ಆದ್ಯತೆಯಾಗಿದೆ. ಇದೇ ವೇಳೆ ಅವರು ಮೂಡಿಗೆರೆ ಭಾಗಕ್ಕೆ ಈಗಾಗಲೇ ಓಡಿಸಲಾಗಿರುವ ಆನೆಗಳನ್ನು ತಕ್ಷಣವೇ ವಾಪಸ್ ಕಳುಹಿಸದಿದ್ದರೆ ಸೋಮವಾರ ಶಾಸಕ ಸ್ಥಾನ ತೊರೆಯುವುದಾಗಿ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದರು.
ಕುತೂಹಲ ಮೂಡಿಸಿದ ನಯನಾ ಮೋಟಮ್ಮ ನಡೆ
ಶಾಸಕಿಯ ಎಚ್ಚರಿಕೆಯ ಹೊರತಾಗಿಯೂ ಆನೆಗಳನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ, ನುಡಿದಂತೆ ನಡೆದಿರುವ ನಯನಾ ಮೋಟಮ್ಮ ಅವರು ಇಂದು ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆಡಳಿತ ಪಕ್ಷದ ಶಾಸಕಿಯೊಬ್ಬರು ತಮ್ಮದೇ ಸರ್ಕಾರದ ನೀತಿಯ ವಿರುದ್ಧ ಸಿಡಿದೆದ್ದು ರಾಜೀನಾಮೆ ನೀಡಿರುವುದು ಸರ್ಕಾರಕ್ಕೆ ದೊಡ್ಡ ಮುಜುಗರ ತಂದೊಡ್ಡಿದೆ ಅಂತಲೇ ಹೇಳಬಹುದು.
ಇದೀಗ ವಿಧಾನಸಭಾಧ್ಯಕ್ಷರು ಈ ರಾಜೀನಾಮೆ ಪತ್ರದ ಕುರಿತು ಯಾವ ಕ್ರಮ ಕೈಗೊಳ್ಳಲಿದ್ದಾರೆ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅರಣ್ಯ ಇಲಾಖೆ ಶಾಸಕಿಯ ಮನವೊಲಿಸಲು ಮುಂದಾಗಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ನಯನಾ ಮೋಟಮ್ಮ ಅವರ ನಡೆಯಂತೂ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.


Click it and Unblock the Notifications
