Nandini Price Hike: ಹಾಲು - ಮೊಸರು ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿ.ಕೆ. ಶಿವಕುಮಾರ್, ಹೇಳಿದ್ದೇನು ?
ಹಾಲು - ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಸಾರ್ವಜನಿಕರಿಂದ ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ, ಬೆಲೆ ಏರಿಕೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ.
ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್ ಅವರು, ನಮ್ಮ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ ನಂದಿನಿ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸದಾ ಬದ್ಧವಾಗಿದೆ. ನವೆಂಬರ್ 1ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿನ ದರವನ್ನು ₹8ರಷ್ಟು ಹೆಚ್ಚಿಸಲಾಗಿದೆ. ಜಾನುವಾರುಗಳ ಮೇವು ಮತ್ತು ಹಿಂಡಿ ದರದಲ್ಲಿನ ಹೆಚ್ಚಳ, ಇಂಧನ ಹಾಗೂ ಪ್ಯಾಕೇಜಿಂಗ್ ವೆಚ್ಚದ ಏರಿಕೆ ಮತ್ತು ಬರಗಾಲದ ಪರಿಣಾಮವಾಗಿ ದೈನಂದಿನ ಹಾಲಿನ ಸಂಗ್ರಹಣೆಯಲ್ಲಿ ಉಂಟಾಗಿರುವ ಕುಸಿತ ಈ ಅನಿವಾರ್ಯ ಪರಿಷ್ಕರಣೆಗೆ ಪ್ರಮುಖ ಕಾರಣಗಳಾಗಿವೆ.

ಈ ₹8ರ ಹೆಚ್ಚಳದಲ್ಲಿ ₹7 ನೇರವಾಗಿ ರೈತರಿಗೆ ತಲುಪಲಿದ್ದು, ಪ್ರತಿ ಲೀಟರ್‌ಗೆ ₹35ರಿಂದ ₹42ಕ್ಕೆ ಏರಿಕೆಯಾಗಲಿದೆ. ಸರ್ಕಾರ ನೀಡುವ ₹5 ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹47 ಕೈಸೇರಲಿದೆ. ಇದರಿಂದ ದಿನಕ್ಕೆ 10 ಲೀಟರ್ ಹಾಲು ಪೂರೈಸುವ ರೈತನಿಗೆ ತಿಂಗಳಿಗೆ ಸುಮಾರು ₹2,100 ಹೆಚ್ಚುವರಿ ಆದಾಯ ದೊರೆಯಲಿದೆ. ಅಲ್ಲದೆ, ಈ ದರ ಪರಿಷ್ಕರಣೆಯಿಂದ ರಾಜ್ಯದ ಗ್ರಾಮೀಣ ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು ₹1,850 ಕೋಟಿಯಿಂದ ₹2,100 ಕೋಟಿವರೆಗೆ ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಒಟ್ಟು 28.84 ಲಕ್ಷ ಹೈನುಗಾರರಿದ್ದು, ಕೆಎಂಎಫ್ ಸದಸ್ಯರಲ್ಲಿ ಶೇ.67ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. ಅವರ ಪರಿಶ್ರಮಕ್ಕೆ ನ್ಯಾಯಯುತ ಪ್ರತಿಫಲ ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ. ದರ ಪರಿಷ್ಕರಣೆಯ ನಂತರವೂ ನಂದಿನಿ ಟೋನ್ಡ್ ಹಾಲಿನ ದರ ಪ್ರತಿ ಲೀಟರ್‌ಗೆ ₹54 ಇದ್ದು, ದೇಶದ ಹಲವು ಪ್ರಮುಖ ಡೈರಿ ಬ್ರ್ಯಾಂಡ್‌ಗಳಿಗಿಂತ ಕಡಿಮೆಯಿದೆ.
ಅದೇ ರೀತಿ ನಂದಿನಿ ಶುಭಂ (4.5% ಕೊಬ್ಬಿನಾಂಶ) ಹಾಲಿನ ದರ ₹60 ಇದ್ದು, ಇತರೆ ಹತ್ತು ರಾಜ್ಯಗಳ ಸರಾಸರಿ ದರವಾದ ₹62.80ಕ್ಕಿಂತ ಕಡಿಮೆಯೇ ಇದೆ. ರೈತರ ಹಿತದ ರಕ್ಷಣೆ ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲಿನ ಪೂರೈಕೆ, ಇವೆರಡಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ
ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂದೆಂದೂ ಕಾಣದ ಭಾರಿ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ (KMF) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಲಾಗಿದೆ.
ಅರ್ಧ ಲೀಟರ್ ಮೊಸರು: ₹28 ರಿಂದ ₹34 ಕ್ಕೆ ಏರಿಕೆ (₹6 ಅಂದರೆ ಶೇ. 21.43% ಏರಿಕೆ)
ಒಂದು ಲೀಟರ್ ಮೊಸರು: ₹54 ರಿಂದ ₹68 ಕ್ಕೆ ಏರಿಕೆ (₹14 ಅಂದರೆ ಶೇ. 25.93% ಭಾರಿ ಏರಿಕೆ)
ಇತ್ತೀಚೆಗಷ್ಟೇ ಹಾಲಿನ ದರವನ್ನು ಲೀಟರ್‌ಗೆ ₹8 ರಷ್ಟು ಹೆಚ್ಚಿಸಿದ್ದ ಸರ್ಕಾರ, ಈಗ ಒಂದೇ ಬಾರಿಗೆ ಶೇ. 21% ರಿಂದ 26% ರಷ್ಟು ಮೊಸರಿನ ಬೆಲೆ ಏರಿಸಿ ಬಡ ಹಾಗೂ ಕೆಳ-ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ನೇರ ದಾಳಿ ಮಾಡಿದೆ. ಮೊಸರು ಐಷಾರಾಮಿ ವಸ್ತುವಲ್ಲ, ಅದು ದಿನನಿತ್ಯದ ಆಹಾರ. ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲದೆ, ಆಡಳಿತಾತ್ಮಕ ವೈಫಲ್ಯದಿಂದ ಬೊಕ್ಕಸ ಬರಿದಾಗಿಸಿಕೊಂಡಿರುವ ಸರ್ಕಾರ, ತನ್ನ ರಾಜಕೀಯ ತಪ್ಪುಗಳಿಗೆ ಬಡವರಿಂದ ದಂಡ ವಸೂಲಿ ಮಾಡುತ್ತಿದೆ. ಇದು ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ಸರ್ಕಾರದ ನೀತಿಗೆ ಹಿಡಿದ ಕೈಗನ್ನಡಿ ಎಂದು ಟೀಕೆ ಮಾಡಿದ್ದಾರೆ.


Click it and Unblock the Notifications
