Bengaluru Kannada: ಕನ್ನಡಿದ ಅಸ್ಮಿತೆ ಉಳಿದಿರುವ 15 ಪ್ರದೇಶಗಳಿವು, ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಏನು ?
ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಇಳಿಕೆ ಆಗುತ್ತಿದೆ. 2011ರ ಜನಗಣತಿಯ ಪ್ರಕಾರ, ಬೆಂಗಳೂರಿನಲ್ಲಿ ಮಾತೃಭಾಷೆಯಾಗಿ ಕನ್ನಡ ಮಾತನಾಡುವವರ ಪ್ರಮಾಣ ಸುಮಾರು 44.5% ರಷ್ಟಿದೆ.
ಇತರ ವರದಿಗಳು ಹಾಗೂ ಕೆಲವೊಂದು ಅಂದಾಜುಗಳಲ್ಲಿ ಈ ಪ್ರಮಾಣ ಸುಮಾರು 41% ರಿಂದ 45% ನಡುವೆ ಇದೆ ಎಂದೂ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಅತಿ ಹೆಚ್ಚು ಜನರು ಮಾತನಾಡುವ ಪ್ರಮುಖ ಭಾಷೆಯಾಗಿದೆ ಎನ್ನುವುದು ಸದ್ಯಕ್ಕೆ ಇರುವ ಸಮಾಧಾನಕರ ಸಂಗತಿ ಎನ್ನುವಂತಾಗಿದೆ.

ಇದೀಗ ಬೆಂಗಳೂರಿನಲ್ಲಿ ಯಾವ ಪ್ರದೇಶಗಳಲ್ಲಿ ಕನ್ನಡ ಇನ್ನೂ ಜೀವಂತವಾಗಿದೆ. ಯಾವ ಭಾಗದಲ್ಲಿ ಕನ್ನಡ ಇನ್ನೂ ಜೀವಂತವಾಗಿದೆ ಎನ್ನುವ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಬಲವಾದ ಕನ್ನಡ ಸಂಸ್ಕೃತಿಯನ್ನು ಹೊಂದಿರುವ ಬೆಂಗಳೂರು ಪ್ರದೇಶಗಳು ಮತ್ತು ಹಳೆಯ ಬೆಂಗಳೂರು ವೈಬ್ಸ್ ❤️ ಇರುವ ಪ್ರದೇಶಗಳು ಎನ್ನುವ ಸಾಲುಗಳೊಂದಿಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Aryan (@Just_Aryan_) ಎನ್ನುವವರು ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
1. ಬಸವನಗುಡಿ, 2. ಮಲ್ಲೇಶ್ವರ, 3. ಜಯನಗರ, 4. ರಾಜಾಜಿನಗರ, 5. ವಿಜಯನಗರ, 6. ಬನಶಂಕರಿ, 7. ಜೆ.ಪಿ.ನಗರ, 8. ರಾಜರಾಜೇಶ್ವರಿ ನಗರ, 9. ಚಾಮರಾಜಪೇಟೆ, 10. ಹನುಮಂತನಗರ, 11. ಗವಿಪುರ, 12. ಶ್ರೀರಾಂಪುರ, 13. ನಾಗರಭಾವಿ, 14. ಚಾಮರಾಜಪೇಟೆ ಹಾಗೂ 15. ಕೆಂಗೇರಿ ಪ್ರದೇಶಗಳನ್ನು ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿ ಕನ್ನಡ; ಕನ್ನಡಿಗರು ಹೇಳಿದ್ದೇನು ?
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಕನ್ನಡಿಗರಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಯಾವ ಪ್ರದೇಶದಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ತುಮಕೂರು ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ಪ್ರದೇಶಗಳನ್ನೂ ಈ ಪಟ್ಟಿಗೆ ಸೇರಿಸಬೇಕು. ಈ ಭಾಗಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದ್ದು, ಕನ್ನಡ ಸಂಸ್ಕೃತಿಯ ಪ್ರಭಾವವೂ ಹೆಚ್ಚಾಗಿದೆ.
ಕೃಷ್ಣರಾಜಪುರ, ಹೊಸೂರು ರಸ್ತೆ, ಕೋರಮಂಗಲ ಮತ್ತು ಎಚ್‌ಎಸ್‌ಆರ್ ಬಡಾವಣೆಗಳಲ್ಲಿ ಕನ್ನಡಿಗರ ಜೊತೆಗೆ ಬೇರೆ ರಾಜ್ಯಗಳಿಂದ ಬಂದವರ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಈ ಪ್ರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದೂ ಕನ್ನಡಿಗರು ಹೇಳಿದ್ದಾರೆ. ಸುಶುಪ್ತಿ ಎನ್ನುವವರು ವಲಸಿಗರು ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ, ದಯವಿಟ್ಟು ಈ ಪ್ರದೇಶಗಳಲ್ಲಿ ಕನ್ನಡಿಗರು ಶಾಂತಿಯುತವಾಗಿ ಬದುಕಲು ಬಿಡಿ ಅಂತಲೂ ಹೇಳಿದ್ದಾರೆ.
ಶ್ರೀರಾಂಪುರದಲ್ಲಿ ಕನ್ನಡಿಗರು ಹೆಚ್ಚಾಗಿಲ್ಲ; ತಮಿಳಿಗರಿದ್ದಾರೆ
ಇನ್ನು ಬೆಂಗಳೂರಲ್ಲಿ ಕನ್ನಡಿಗರು ಹೆಚ್ಚಾಗಿದ್ದಾರೆ ಎಂದು ಉಲ್ಲೇಖಿಸಿರುವ ಕೆಲವೊಂದು ಪ್ರದೇಶಗಳಲ್ಲಿ ಕನ್ನಡಿಗರಿಲ್ಲ ಅನ್ಯಭಾಷಿಕರಿದ್ದಾರೆ. ಮಲ್ಲೇಶ್ವರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಇಲ್ಲಿ ಹೆಚ್ಚು ತಮಿಳುಭಾಷಿಕರು ಇದ್ದಾರೆ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕೋರಮಂಗಲ ನಾರ್ಥ್ ಇಂಡಿಯಾದ ರೀತಿಯಲ್ಲಿ ಭಾಸವಾಗುತ್ತದೆ ಎಂದೂ ಹಲವರು ಹೇಳಿದ್ದಾರೆ. ಬೆಂಗಳೂರಿನ ಪೂರ್ವ ಭಾಗದ ಕೆಲವು ಐಟಿ ಪ್ರದೇಶಗಳನ್ನು ಹೊರತುಪಡಿಸಿ, ಎಲ್ಲರೂ ತಮ್ಮ ಮಾತೃಭಾಷೆಯನ್ನು ಲೆಕ್ಕಿಸದೆ ಕನ್ನಡ ಮಾತನಾಡುತ್ತಾರೆ, ಸುಮಾರು 90%+ ಇರಬಹುದು ಎಂದೂ ನೆಟ್ಟಿಗರು ಹೇಳಿದ್ದಾರೆ.
| 1. ಬಸವನಗುಡಿ | 2. ಮಲ್ಲೇಶ್ವರ | 3. ಜಯನಗರ |
| 4. ರಾಜಾಜಿನಗರ | 5. ವಿಜಯನಗರ | 6. ಬನಶಂಕರಿ |
| 7. ಜೆ.ಪಿ.ನಗರ | 8. ರಾಜರಾಜೇಶ್ವರಿ ನಗರ | 9. ಚಾಮರಾಜಪೇಟೆ |
| 10. ಹನುಮಂತನಗರ | 11. ಗವಿಪುರ | 12. ಶ್ರೀರಾಂಪುರ |
| 13. ನಾಗರಭಾವಿ | 14. ಚಾಮರಾಜಪೇಟೆ | 15. ಕೆಂಗೇರಿ |




Click it and Unblock the Notifications
