ಅದಾನಿ ಏರ್‌ಪೋರ್ಟ್ಸ್‌ಗೆ ₹2,790 ಕೋಟಿ ಭರ್ಜರಿ ಹೂಡಿಕೆ: ಒಟ್ಟು ಬಂಡವಾಳ ಸಂಗ್ರಹ 1.35 ಬಿಲಿಯನ್ ಡಾಲರ್‌ಗೆ ಏರಿಕೆ

ಮುಂಬೈ: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL), 360 ONE ಆಲ್ಟರ್ನೇಟ್ಸ್ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನಿಂದ ₹2,790 ಕೋಟಿ ಅಂದರೆ ಸುಮಾರು 300 ಮಿಲಿಯನ್ ಡಾಲರ್ ಹೊಸ ಬಂಡವಾಳ ಸಂಗ್ರಹಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಹೊಸ ಹೂಡಿಕೆಯೊಂದಿಗೆ ಅದಾನಿ ಏರ್‌ಪೋರ್ಟ್ಸ್‌ನ ಒಟ್ಟು ಈಕ್ವಿಟಿ ಬಂಡವಾಳ ಸಂಗ್ರಹವು ಸುಮಾರು 1.35 ಬಿಲಿಯನ್ ಡಾಲರ್‌ಗೆ ತಲುಪಿದೆ.

Adani Airports Raises 300 Million From 360 ONE Asset as Total Equity Fundraising Hits 1 35 Billion

ಇದಕ್ಕೂ ಮುನ್ನ ಕಂಪನಿಯು ಆಲ್ಫಾ ವೇವ್ ಗ್ಲೋಬಲ್, ಪ್ರೇಮ್‌ಜಿ ಇನ್ವೆಸ್ಟ್, ಟೆಮಾಸೆಕ್ ಮತ್ತು ಬ್ಲ್ಯಾಕ್‌ರಾಕ್ ನಿರ್ವಹಿಸುವ ನಿಧಿಗಳಂತಹ ಪ್ರಮುಖ ದೇಶೀಯ ಮತ್ತು ಜಾಗತಿಕ ಹೂಡಿಕೆದಾರರ ಒಕ್ಕೂಟದಿಂದ ಸುಮಾರು 1 ಬಿಲಿಯನ್ ಡಾಲರ್ ಅಂದರೆ ₹9,825 ಕೋಟಿ ಬಂಡವಾಳ ಸಂಗ್ರಹಿಸಿತ್ತು. ಇದೀಗ 360 ONE ಅಸೆಟ್ ಕೂಡ ಅದೇ ನಿಯಮಗಳು ಮತ್ತು ಮೌಲ್ಯಮಾಪನದ ಅಡಿಯಲ್ಲಿ ಹೊಸದಾಗಿ ವಿತರಿಸಲಾದ ಈಕ್ವಿಟಿ ಷೇರುಗಳನ್ನು ಖರೀದಿಸಲಿದೆ.

ಈ ಒಪ್ಪಂದದ ಪ್ರಕಾರ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ನ ಹೂಡಿಕೆ ಪೂರ್ವ ಮೌಲ್ಯಮಾಪನ (ಪ್ರಿ-ಮನಿ ಈಕ್ವಿಟಿ ವ್ಯಾಲ್ಯುಯೇಷನ್) ಸುಮಾರು 18 ಬಿಲಿಯನ್ ಡಾಲರ್ ಆಗಿದೆ. ಎರಡೂ ವಹಿವಾಟುಗಳು ಪೂರ್ಣಗೊಂಡ ನಂತರ, ಈ ಹೂಡಿಕೆದಾರರೆಲ್ಲರೂ ಸೇರಿ ಕಂಪನಿಯಲ್ಲಿ ಒಟ್ಟು ಶೇ. 7.01 ರಷ್ಟು ಪಾಲನ್ನ ಹೊಂದಲಿದ್ದಾರೆ. ಈ ಒಪ್ಪಂದವು ನಿಯಂತ್ರಕ ಮತ್ತು ಇತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಭಾರತೀಯ ವಿಮಾನಯಾನ ವಲಯದ ಬೆಳವಣಿಗೆ ಬಗ್ಗೆ ಜೀತ್ ಅದಾನಿ ಮಾತು

ಈ ಹೊಸ ಹೂಡಿಕೆಯ ಕುರಿತು ಪ್ರತಿಕ್ರಿಯಿಸಿರುವ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಜೀತ್ ಅದಾನಿ, "ಈ ಪಾಲುದಾರಿಕೆಯು ಅದಾನಿ ಏರ್‌ಪೋರ್ಟ್ಸ್ ವೇದಿಕೆಯ ಅಭಿವೃದ್ಧಿಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಪ್ರತಿಷ್ಠಿತ ದೀರ್ಘಕಾಲೀನ ಹೂಡಿಕೆದಾರರ ಭಾಗವಹಿಸುವಿಕೆಯು ಭಾರತದ ವಿಮಾನಯಾನ ವಲಯದ ಬೆಳವಣಿಗೆಯ ಮೇಲಿನ ಅವರ ನಂಬಿಕೆಯನ್ನು ತೋರಿಸುತ್ತದೆ" ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣಗಳನ್ನು ಕೇವಲ ಪ್ರಯಾಣಿಕರ ಸಂಚಾರ ಕೇಂದ್ರಗಳಾಗಿ ಉಳಿಸದೆ, ವಿಮಾನಯಾನ, ವಾಣಿಜ್ಯ, ಮನರಂಜನೆ ಮತ್ತು ಪ್ರಾದೇಶಿಕ ಲಾಜಿಸ್ಟಿಕ್ಸ್‌ಗಳನ್ನು ಒಳಗೊಂಡ ಸಮಗ್ರ 'ಏರ್‌ಪೋರ್ಟ್ ಸಿಟಿ'ಗಳಾಗಿ ಪರಿವರ್ತಿಸುವುದು ಕಂಪನಿಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

200 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಮತ್ತು ಅದಾನಿ ಏರ್‌ಪೋರ್ಟ್ ಸಿಟಿ ಯೋಜನೆ

ಈ ಹೊಸ ಬಂಡವಾಳವನ್ನು ಕಂಪನಿಯ ದೀರ್ಘಕಾಲೀನ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ ಬಳಸಲಾಗುವುದು. ಪ್ರಸ್ತುತ ಸುಮಾರು 96 ಮಿಲಿಯನ್ ಇರುವ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು 200 ಮಿಲಿಯನ್‌ಗೆ ಹೆಚ್ಚಿಸುವ, ಅಂದರೆ ದುಪ್ಪಟ್ಟಿಗಿಂತ ಹೆಚ್ಚು ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

ಇದರ ಭಾಗವಾಗಿ ಕಂಪನಿಯು ತನ್ನ ವಿಮಾನ ನಿಲ್ದಾಣಗಳ ಜಾಲದಲ್ಲಿ ಸಮಗ್ರ ಆಧುನೀಕರಣ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕಾರ್ಯಕ್ರಮವನ್ನು ಆರಂಭಿಸಿದೆ. ವಿಶ್ವದರ್ಜೆಯ ವಿಮಾನ ನಿಲ್ದಾಣದ ಜೊತೆಗೆ ರಿಟೇಲ್, ಹಾಸ್ಪಿಟಾಲಿಟಿ ಮತ್ತು ಇತರ ವಾಣಿಜ್ಯ ಸೌಲಭ್ಯಗಳನ್ನು ಒಳಗೊಂಡ 'ಅದಾನಿ ಏರ್‌ಪೋರ್ಟ್ ಸಿಟಿ'ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರೊಂದಿಗೆ ಪ್ರಯಾಣಿಕರ ಸೇವೆಗಳನ್ನು ಬಲಪಡಿಸಲು ಮತ್ತು ವಿಮಾನಯಾನೇತರ ವ್ಯಾಪಾರವನ್ನು ವಿಸ್ತರಿಸಲು ಯೋಜಿಸಲಾಗಿದೆ.

ದೇಶದ 8 ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಅದಾನಿ ಮುಂಚೂಣಿ

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಒಟ್ಟು ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಭಾರತದ ಒಟ್ಟು ವಿಮಾನ ಪ್ರಯಾಣಿಕರ ಸಂಚಾರದಲ್ಲಿ ಶೇ. 23 ಕ್ಕಿಂತ ಹೆಚ್ಚು ಪಾಲನ್ನು ಅದಾನಿ ವಿಮಾನ ನಿಲ್ದಾಣಗಳೇ ನಿಭಾಯಿಸುತ್ತಿವೆ. 360 ONE ಅಸೆಟ್ ಹಾಗೂ ಇತರ ಜಾಗತಿಕ ಹೂಡಿಕೆದಾರರ ಬೆಂಬಲವು ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಮೂಲಸೌಕರ್ಯ ವಲಯದಲ್ಲಿ ಕಂಪನಿಯ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+