ಮೈಸೂರ್ ಝೂನಲ್ಲೇ ಜಿರಾಫೆಗಳಿದ್ರೂ ಬನ್ನೇರುಘಟ್ಟದ ಗೌರಿಗೆ ಅಮೆರಿಕದ ಪಾರ್ಟ್ನರ್ ಯಾಕೆ? ಇಲ್ಲಿದೆ ಅಸಲಿ ಕಾರಣ
ಬೆಂಗಳೂರು: ನಗರದ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹೆಣ್ಣು ಜಿರಾಫೆ ಗೌರಿಗೆ ಸೂಕ್ತ ಗಂಡು ಸಂಗಾತಿಯನ್ನ ತರಲು ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ (ZAK) ಸಿದ್ಧತೆ ನಡೆಸಿವೆ.
ವಿಶೇಷವೆಂದರೆ, ಪಕ್ಕದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲೇ ಹಲವು ಜಿರಾಫೆಗಳಿದ್ದರೂ, ಬನ್ನೇರುಘಟ್ಟ ಗೌರಿ ಜಿರಾಫೆಗೆ ಅಮೆರಿಕ ಹಾಗೂ ಏಷ್ಯಾದ ಇತರ ದೇಶಗಳಿಂದ ಗಂಡು ಸಂಗಾತಿಯನ್ನ ತರಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಪಕ್ಕದ ಜಿಲ್ಲೆಯಲ್ಲೇ ಜಿರಾಫೆಗಳಿರುವಾಗ ವಿದೇಶದಿಂದಲೇ ಏಕೆ ತರಬೇಕು ಎಂಬ ಕುತೂಹಲ ಪ್ರಾಣಿಪ್ರಿಯರಲ್ಲಿ ಮೂಡಿದ್ದು, ಇಂತಹ ಪ್ರಶ್ನೆಗಳು ಸಾರ್ವಜನಿಕವಾಗಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅರಣ್ಯ ಇಲಾಖೆ ತೆಗೆದುಕೊಂಡ ಈ ನಿರ್ಧಾರದ ಹಿಂದೆ ಮಹತ್ವದ ವೈಜ್ಞಾನಿಕ ಕಾರಣವಿದೆ.

ಮೈಸೂರು ಜಿರಾಫೆ ಬೇಡ, ವಿದೇಶಿ ಜೋಡಿಯೇ ಬೇಕು
ಎಲ್ಲರಿಗೂ ಗೊತ್ತಿರುವ ಹಾಗೆ ಈ ಬನ್ನೇರುಘಟ್ಟದ ಗೌರಿ ಮೂಲತಃ ಮೈಸೂರು ಮೃಗಾಲಯದಲ್ಲೇ ಜನಿಸಿದ ಜಿರಾಫೆ. ಮೈಸೂರು ಜೂನಲ್ಲಿರುವ ಬಹುತೇಕ ಜಿರಾಫೆಗಳು ಒಂದೇ ವಂಶಾವಳಿಗೆ ಸೇರಿರುವುದರಿಂದ, ಅಲ್ಲಿನ ಗಂಡು ಜಿರಾಫೆಯೊಂದಿಗೆ ಗೌರಿಯನ್ನ ಜೊತೆ ಮಾಡಿದರೆ ಇನ್‌ಬ್ರೀಡಿಂಗ್ ಸಮಸ್ಯೆ ಅಥವಾ ಸ್ವಜಾತಿ ಸಂತಾನೋತ್ಪತ್ತಿಯ ಅಪಾಯ ಎದುರಾಗುತ್ತದೆ.
ಹೇಗೆ ಮನುಷ್ಯನಲ್ಲಿ ಇರುತ್ತದೋ ಹಾಗೆಯೇ, ಒಂದೇ ರಕ್ತಸಂಬಂಧದ ಪ್ರಾಣಿಗಳ ನಡುವೆ ಸಂತಾನೋತ್ಪತ್ತಿ ನಡೆದರೆ ಹುಟ್ಟುವ ಮರಿಗಳಲ್ಲಿ ಅನುವಂಶಿಕ ಕಾಯಿಲೆಗಳು, ದೈಹಿಕ ದೌರ್ಬಲ್ಯ ಹಾಗೂ ರೋಗನಿರೋಧಕ ಶಕ್ತಿ ಕುಂದುವ ಸಾಧ್ಯತೆ ಹೆಚ್ಚಿರುತ್ತದೆ.
ಆರೋಗ್ಯಕರ ಸಂತಾನೋತ್ಪತ್ತಿ ಹಾಗೂ ಜಿರಾಫೆಗಳ ವಂಶಾಭಿವೃದ್ಧಿಗಾಗಿ ಬೇರೆ ರಕ್ತಸಂಬಂಧದ (ವಿಭಿನ್ನ ವಂಶಾವಳಿಯ) ಗಂಡು ಜಿರಾಫೆಯ ಅಗತ್ಯವಿದೆ. ಅಲ್ಲದೆ, ಗೌರಿ ದಕ್ಷಿಣ ಆಫ್ರಿಕಾ ಮೂಲದ ಅಪರೂಪದ ತಳಿಯ ಜಿರಾಫೆಯಾಗಿರುವುದರಿಂದ, ವಿದೇಶದಿಂದಲೇ ಸೂಕ್ತ ಗಂಡು ಸಂಗಾತಿಯನ್ನ ತರಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯಕ್ಕೆ ಸಚಿವರ ಅಸ್ತು: ಎದುರಾಗಿರುವ ಸವಾಲೇನು?
ಗೌರಿಗೆ ವಿದೇಶದಿಂದ ಗಂಡು ಜಿರಾಫೆ ತರಿಸಿಕೊಳ್ಳುವ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, "ಈಗಾಗಲೇ ಅಮೆರಿಕ ಹಾಗೂ ಏಷ್ಯಾದ ಕೆಲವು ಮೃಗಾಲಯಗಳಿಗೆ ಪ್ರಸ್ತಾವನೆ ಸಲ್ಲಿಸಿ ಮಾತುಕತೆ ನಡೆಸಲಾಗುತ್ತಿದೆ. ಆದರೆ, ಗಂಡು ಜಿರಾಫೆಗೆ ಪ್ರತಿಯಾಗಿ ವಿದೇಶಿ ಮೃಗಾಲಯಗಳು ಕೇಳುತ್ತಿರುವ ನಿರ್ದಿಷ್ಟ ಭಾರತೀಯ ಪ್ರಾಣಿಗಳನ್ನ ಒದಗಿಸುವಲ್ಲಿ ಕೆಲವು ತಾಂತ್ರಿಕ ಸವಾಲುಗಳು ಎದುರಾಗಿವೆ. ಅವುಗಳನ್ನ ಬಗೆಹರಿಸಿಕೊಂಡು ಆದಷ್ಟು ಬೇಗ ಗಂಡು ಜಿರಾಫೆಯನ್ನ ಕರೆತರಲು ಪ್ರಯತ್ನಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗೌರಿಗೆ ಕಾಡುತ್ತಿದೆ ಒಂಟಿತನ
2018ರ ಏಪ್ರಿಲ್‌ನಲ್ಲಿ ಮೈಸೂರು ಮೃಗಾಲಯದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ಗೌರಿ, ಈ ಪಾರ್ಕ್‌ನ ಮೊದಲ ಜಿರಾಫೆಯಾಗಿದೆ. 2020ರ ಏಪ್ರಿಲ್‌ನಲ್ಲಿ ಆಕೆಯ ಒಂಟಿತನ ನೀಗಿಸಲು ಮೈಸೂರಿನಿಂದ ಯದುನಂದನ ಎಂಬ ಗಂಡು ಜಿರಾಫೆಯನ್ನ ತರಲಾಗಿತ್ತು. ಆದರೆ, ಅದೇ ವರ್ಷ ಚಿಕಿತ್ಸಾ ಆವರಣದಲ್ಲಿ ಸಿಲುಕಿ ಯದುನಂದನ ದುರಂತ ಸಾವನ್ನಪ್ಪಿದ್ದರಿಂದ ಗೌರಿ ಮತ್ತೆ ಒಂಟಿಯಾಗಿದ್ದಳು.
ಒಂಟಿತನದಿಂದಾಗಿ ಗೌರಿಯ ಆರೋಗ್ಯ ಹಾಗೂ ಹಸಿವಿನ ಮೇಲೆ ಪರಿಣಾಮ ಬೀರಿದ್ದನ್ನ ಗಮನಿಸಿದ ಆಡಳಿತ ಮಂಡಳಿ, 2024ರ ಫೆಬ್ರವರಿಯಲ್ಲಿ ಮೈಸೂರಿನಿಂದ ಶಿವಾನಿ ಎಂಬ ಪುಟ್ಟ ಹೆಣ್ಣು ಜಿರಾಫೆಯನ್ನ ಗೌರಿಗೆ ಗೆಳತಿಯಾಗಿ ತಂದಿತ್ತು. ಇದೀಗ ಶಿವಾನಿಯ ಜೊತೆಗಿರುವ ಗೌರಿಗೆ ಸಂತಾನೋತ್ಪತ್ತಿಗಾಗಿ ಸೂಕ್ತ ವಿದೇಶಿ ಗಂಡು ಸಂಗಾತಿಯನ್ನ ತರಲು ಸರ್ಕಾರ ಮುಂದಾಗಿದೆ.




Click it and Unblock the Notifications
