Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
ಮೈಸೂರಿನಲ್ಲಿ ತಾಪಮಾನ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಮನುಷ್ಯರು ಸೇರಿದಂತೆ ಪ್ರಾಣಿಪಕ್ಷಿಗಳು ಬಿಸಿಲಿನ ತಾಪಮಾನದಿಂದ ಬಳಲುವಂತಾಗಿದೆ. ಹೀಗಾಗಿ ಮೈಸೂರು ಮೃಗಾಲಯದ ಪ್ರಾಣಿಗಳಿಗೆ ಅಲ್ಲಿನ ಸಿಬ್ಬಂದಿ ತಂಪಾದ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಬೇಸಿಗೆ ಸಮಯದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀಡುವ ಆಹಾರದಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಸಾಧ್ಯವಾದಷ್ಟು ಪ್ರಾಣಿ - ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವ ಪದಾರ್ಥಗಳನ್ನೇ ಆಹಾರವಾಗಿ ನೀಡಲಾಗುತ್ತಿದೆ.

ಆನೆಗಳಿಗೆ ಶವರ್ ಬಾತ್, ಜಿರಾಫೆಗಳಿಗೆ ಸ್ಪಿಂಕ್ಲರ್ ನೀರು, ಸಿಂಹ-ಚಿರತೆಗೆ ಕೃತಕ ಮಳೆ, ಹಿಮಾಲಯನ್ ಕರಡಿಗಳಿಗೆ ಐಸ್ ಕ್ಯೂಬ್, ತಂಪಾದ ಎಳನೀರು ಸೇರಿದಂತೆ ವಿವಿಧ ಪ್ರಾಣಿಗಳಿಗೆ 'ಬೇಸಿಗೆ ಭಾಗ್ಯ' ಲಭಿಸಿದೆ.
ಹಣ್ಣು ಹಂಪಲು ಹಂಚಿಕೆ
ಪ್ರಾಣಿಗಳಿಗೆ ಎಲೆಕ್ಟ್ರೊಲೈಟ್ ಮಿಶ್ರಿತ ಹಾಗೂ ಗ್ಲೂಕೋಸ್ ನೀರನ್ನು ಒದಗಿಸಲಾಗುತ್ತಿದೆ. ಕಲ್ಲಂಗಡಿ, ಮೂಸಂಬಿ, ಬಾಳೆ ಹಣ್ಣು, ಕರ್ಬೂಜ, ದ್ರಾಕ್ಷಿ, ದಾಳಿಂಬೆ, ಕಿತ್ತಲೆ ಹಣ್ಣುಗಳನ್ನು ಪ್ರಾಣಿಗಳಿಗೆ ನೀಡಲಾಗುತ್ತಿದೆ.
ತಂಪು ವಾತಾವರಣ ನಿರ್ಮಿಸಲು ನೀರು ಸಿಂಪಡಿಸುವ ಯಂತ್ರಗಳನ್ನು ಪ್ರತಿ ಪ್ರಾಣಿಗಳ ಮನೆಗಳ ಮುಂದೆ ಅಳವಡಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಸ್ಪಿಂಕ್ಲರ್‌ಗಳನ್ನು ಬಳಸಲಾಗುತ್ತಿದೆ. ಆಯಾ ಪ್ರಾಣಿಗಳ ಮನೆ ಸಮೀಪ ನೀರು ಸಿಂಪಡಣೆ ಮಾಡುತ್ತಿದ್ದಾರೆ.

ಸದಾ ಒಂದೇ ಸ್ಥಳದಲ್ಲಿ ವಾಸಿಸುವ ಮೃಗಾಲಯದ ಪ್ರಾಣಿಪಕ್ಷಿಗಳಿಗೆ ಬೇಸಿಗೆ ಎಂದರೆ ಕೆಂಡದಂತಹ ಅನುಭವ. ಹಾಗಾಗಿ ಮೃಗಾಲಯ ಪ್ರಾಣಿಗಳಿಗೆ ತಂಪಾದ ವಾತಾವಾರಣ ನಿರ್ಮಾಣ ಮಾಡಲಾಗಿದೆ. ಜೊತೆಗೆ ಪ್ರವಾಸಿಗರ ಅನುಕೂಲಕ್ಕೆ ಪರಿಸರ ಸ್ನೇಹಿ ಸೌಲಭ್ಯ ಕಲ್ಪಿಸಲಾಗಿದೆ" ಎನ್ನುತ್ತಾರೆ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್.












Click it and Unblock the Notifications